Friday, December 31, 2010

ಕೊನೆಯಲ್ಲೊಮ್ಮೆ ಹಿಂದಿರುಗಿ ಅವಲೋಕಿಸಿದಾಗ.....



       ಮುಗಿದೇ ಹೋಯಿತು 2010. ಜೀವನದ ಮತ್ತೊಂದು ವರ್ಷ ಕಳೆದು ಹೋಯಿತು. ವರ್ಷದ ಕೊನೆಯಲ್ಲಿ ಒಮ್ಮೆ ಹಿಂದಿರುಗಿ ಹಳೆಯದನ್ನು ಮೆಲಕು ಹಾಕಿದರೆ ನನಗಂತೂ ಸಿಹಿಯನ್ನು ಹಿಮ್ಮೆಟ್ಟಿ ಕಹಿ ಅನುಭವಗಳೇ ನೆನಪಿನಾಳದಿಂದ ಹೊರ ಬರುತ್ತಿವೆ.... ಹೌದು, ಈ ವರ್ಷ ಪೂರ್ತಿ ಬರೀ ಕಹಿ ಅನುಭವಗಳೇ... ಬೆರಳೆಣಿಕೆಯಷ್ಟು ಮಾತ್ರ ಸಿಹಿ.......
      ನನ್ನ ಸ್ವಭಾವ, ನಿರ್ಧಾರಗಳಿಗೆ ಭೇಷ್ ಎನ್ನುತ್ತಿದ್ದವರ ಬಾಯಿಂದಲೇ ಹೀಗೇಕೆ ಮಾಡಿದಳು ಎಂಬಂತಹ ನಿರ್ಧಾರ ಮಾಡಿದ ವರ್ಷ... ಆ ನಿರ್ಧಾವನ್ನು ಹಿಮ್ಮೆಟ್ಟಲು ಒದ್ದಾಡಿದ, ಪ್ರಯಾಸ ಪಟ್ಟ ವರ್ಷ... ಮೊದಲ ಬಾರಿ ನನ್ನ ನಿರ್ಧಾರಕ್ಕೆ ಅಪ್ಪ-ಅಮ್ಮನ ನಕಾರ... ಅಪ್ಪ ಕೂರಿಸಿಕೊಂಡು ತಿಳಿ ಹೇಳಿ ನನ್ನನ್ನು ಸರಿ ದಾರಿಯಲ್ಲಿ ನಡೆಸಿದ ಮಹತ್ತರ ವರ್ಷ... ಆದ ತಪ್ಪನ್ನು ತಿದ್ದಿಕೊಳ್ಳಲು ಸಾಕಷ್ಟು ಪಾಡು ಪಟ್ಟಿದ್ದೇನೆ, ನೋವುಂಡಿದ್ದೇನೆ, ಅವರಿವರ ಬಾಯಲ್ಲಿ ಹೇಳಿಸಿಕೊಂಡಿದ್ದೇನೆ ... ಯಾರಲ್ಲೂ ಹೇಳಿಕೊಳ್ಳದ ಮಾನಸಿಕ ತುಮುಲಗಳಿಂದ ತತ್ತರಿಸಿದ್ದೇನೆ.ಒಂಟಿಯಾಗಿ ಬಿಕ್ಕಿದ್ದೇನೆ. ತಿದ್ದಿಕೊಳ್ಳುವಲ್ಲಿ ಹೆಣಗಾಡಿದ್ದೇನೆ. ಆತ್ಮೀಯರ ಸಾಂತ್ವನದಲ್ಲಿ ದುಃಖವನ್ನು ಮರೆತು ನಕ್ಕಿದ್ದೇನೆ. ಏನೇ ಆದರೂ ನನ್ನ ನಗುವನ್ನು ಮರೆಯಾಗಿಸಿಕೊಳ್ಳುವುದಿಲ್ಲ ಎಂಬ ಛಲದಿಂದ ಸದಾ ನಗುವನ್ನು ಉಳಿಸಿಕೊಂಡಿದ್ದೇನೆ. ಎಂದೋ ಒಮ್ಮೊಮ್ಮೆ ಕುಳಿತು ಮನ ಬಿಚ್ಚಿ ಅತ್ತಿದ್ದೇನೆ. ಅತ್ತೂ ಅತ್ತೂ ಸಮಾಧಾನವಾದಾಗ ಮನಸಾರೆ ನಕ್ಕಿದ್ದೇನೆ. ಪರಿಸ್ಥಿತಿಗೆ ತಲೆಬಾಗಿದ್ದೇನೆ. ಏನಾಗಲೀ...ಮುಂದೆ ಸಾಗು ನೀ... ಎಂದು ಹಾಡನ್ನು ಗುನು ಗುನಿಸುತ್ತಾ ಗಟ್ಟಿಯಾಗಿದ್ದೇನೆ. ಹಳೆ ಸ್ನೇಹವನ್ನು, ಸ್ನೇಹಿತರನ್ನು ಕಳೆದುಕೊಂಡು ಪ್ರತಿದಿನ ಆ ಹಳೆಯ ಸ್ನೇಹದ ಸವಿಯನ್ನು, ನಾವು ಕಳೆದ ಆ ಕಾಲೇಜಿನ ದಿನಗಳನ್ನು ನೆನೆಸಿಕೊಂಡಿದ್ದೇನೆ. ವರ್ಷದ ಕೊನೆಯಲ್ಲಿ ಮತ್ತೆ ಒಂದೆರಡು ಆತ್ಮೀಯ ಗೆಳತಿಯರನ್ನು ಹಿಂದಿರುಗಿ ಪಡೆದಾಗ, ಹಳೆಯ ಖುಷಿ ಮತ್ತೆ ಸಿಕ್ಕಂತಾಗಿ ಕುಣಿದಾಡಿದ್ದೇನೆ. ಅತಿಯಾದ ಆತ್ಮೀಯರು ಎನ್ನುವ ಇಬ್ಬರೋ ಮೂವರನ್ನೋ ಬಿಟ್ಟು ಎಲ್ಲರಿಂದ ನೋವು ಕಂಡಿದ್ದೇನೆ..
      ಉದ್ಯಾನ ನಗರಿಗೆ ಹೋಗಿ ನಿನ್ನ ಕಾಲ ಮೇಲೇ ನಿಂತು ಜೀವನ ಕಟ್ಟಿಕೊಂಡು ಭರ್ತಿ ಎರಡು ವರ್ಷಗಳೇ ಕಳೆದು ಹೋದವಲ್ಲ ಮಗಳೇ ... ಎಂದು ಅಪ್ಪ ಬೆನ್ನು ನೇವರಿಸಿದಾಗ ಅವರ ಕಣ್ಣಿನಾಳದಲ್ಲಿದ್ದ ಪ್ರೀತಿ, ಹೆಮ್ಮೆ ಮಿಶ್ರಿತ ಅಸಹಾಯಕತೆಯನ್ನು ಕಂಡು ಮರುಗಿದ್ದೇನೆ. ಅಮ್ಮನ ಮೌನದ ಮುಖದ ಹಿಂದಿರುವ ಒಡಲಾಳದ ಕಳಕಳಿಯನ್ನು ಅರ್ಥೈಸಿಕೊಂಡಿದ್ದೇನೆ... ನಾಳೆಯೇ ನಾನು ಹುಟ್ಟಿದ ದಿನವಲ್ಲವೇ ಎಂದುಕೊಳ್ಳುತ್ತಿದ್ದಂತೆಯೇ ಪ್ರೀತಿಯ ಅಜ್ಜನ ಭಯಂಕರ ಅಗಲಿಕೆಯ ಸುದ್ದಿ ಕೇಳಿ ನಲುಗಿದ್ದೇನೆ, ಬಿಕ್ಕಿದ್ದೇನೆ. ನಾನು ಚಿಕ್ಕ ಮಗುವಾದಾಗಿಂದ ತನ್ನ ಮಡಿಲಲ್ಲಿ ಪ್ರೀತಿಯಿಂದ ಸಾಕಿದ ಅಜ್ಜಿಯ ಮುಖ, ಅವಳ ಮುಂದಿನ ದಿನಗಳನ್ನು ನೆನೆ-ನೆನೆಸಿಕೊಂಡು ಕೊರಗಿದ್ದೇನೆ. ಪೂರ್ತಿ ಇಪ್ಪತ್ತು ವರ್ಷ ನಾನಿದ್ದು ಶಾಲೆಗೆ ಹೋಗಿ, ನನ್ನ ಭವಿಷ್ಯ ಕಟ್ಟಿಕೊಂಡ ಆ ಸುಂದರ ಮನೆಯಲ್ಲಿ ಪ್ರೀತಿಯ ಅಜ್ಜ ಇನ್ನಿಲ್ಲ ಎಂಬುದನ್ನು ನಂಬಲಾಗದೇ ಅರಗಿಸಿಕೊಂಡಿದ್ದೇನೆ. ಮನೆಯಲ್ಲಿ ಅಡುಗೆ ಮಾಡುವಾಗ 'ಓಹ್ ಇದು ಅಜ್ಜನಿಗೆ ಪ್ರಿಯವಾಗಿತ್ತು, ಈ ತಿನಿಸು ಮಾಡಿದರೆ ರೇಗುತ್ತಿದ್ದರು' ಎಂದು ಪದೇ ಪದೇ ನೆನೆಸಿಕೊಂಡಿದ್ದೇನೆ..
      ನಿನ್ನೆ ತಾನೇ ಅಜ್ಜ ಹೋದರೆಂಬ ದುಃಖದಲ್ಲಿದ್ದ ನನ್ನನ್ನು ಪ್ರೀತಿಯ ಭಾವಯ್ಯ, ಪುಟ್ಟ ಅತ್ತಿಗೆ ಹುಟ್ಟಿದ ದಿನದ ಕೇಕ್ ನೊಂದಿಗೆ ಗೊತ್ತಿಲ್ಲದಂತೆಯೇ ಬಂದು ನನ್ನನ್ನು ಮನಸಾರೆ ನಗಿಸಿದ್ದಾರೆ, ಖುಷಿ ಪಡಿಸಿದ್ದಾರೆ. ಈ ಇಬ್ಬರ ಜೊತೆ ಮಾತ್ರ ನಾ ಕಳೆದ ಪ್ರತಿ ಕ್ಷಣಗಳೂ ಸುಂದರ. ಬಿಡುವಿದ್ದಾಗೆಲ್ಲ ಸೇರಿದ್ದೇವೆ, ಕಾಡು ಹರಟೆಯಲ್ಲಿ ಸಮಯ ಕಳೆದಿದ್ದೇವೆ, ಏನೋ ಸಿಲ್ಲಿ ಜೋಕುಗಳಿಗೆ ಮನೆ ನಡುಗುವಂತೆ ನಕ್ಕಿದ್ದೇವೆ.... ದೂರದ ಐಸ್ ಕ್ರೀಂ ಅಂಗಡಿಗೆ ಕೈ-ಕೈ ಹಿಡಿದು ನಡೆದುಕೊಂಡೇ ಹೋಗಿ, ರಸ್ತೆಯಲ್ಲಿ ಹೋಗಿ ಬರುವವರೆಲ್ಲ ನಮ್ಮನ್ನೇ ನೋಡುವಂತೆ ಕೂಗಿ-ನಕ್ಕಿದ್ದೇವೆ. ನಾವು ಮೂವರು ಕಳೆಯುವ ಕ್ಷಣಗಳು ಮಾತ್ರ ನೆನಪಿನ ಪುಸ್ತಕಕ್ಕೆ ಸೇರಿಸುವಂಥವು... ಆತ್ಮೀಯ ಸ್ನೇಹದ ಸವಿಯಲ್ಲಿ ಸ್ನೇಹದ ಮಧುರತೆಯನ್ನು ಕಂಡಿದ್ದೇನೆ... 
      ಏನೇ ಆಗಲಿ ಈ ವರ್ಷಕ್ಕೆ ಅಂತಿಮ ವಿದಾಯ ಹೇಳುತ್ತಾ ಬರುವ ವರ್ಷದಲ್ಲಿ ಸಂತಸದ ಸವಿ ಕ್ಷಣಗಳು ಬಂದೆ ಬರುತ್ತವೆ ಎಂದು ಎದಿರು ನೋಡುತ್ತಿದ್ದೇನೆ... ನಿಮ್ಮೆಲ್ಲರಿಗೂ ಕೂಡ ಹೊಸ ವರ್ಷ ಹೊಸ ಸಂತೋಷ, ಆನಂದದ ಕ್ಷಣಗಳನ್ನು ಹೊತ್ತು ತರಲಿ ಎಂದು ಮನಸಾರೆ ಆಶಿಸುತ್ತೇನೆ. ನಿಮ್ಮೆಲ್ಲರ ಮುಖದಲ್ಲಿನ ಆ ಸುಂದರ ನಗು ಎಂದೆಂದಿಗೂ ಮಾಸದಿರಲಿ...............
       ಹೊಸ ವರ್ಷದ ಹೊಸ ನಿರೀಕ್ಷೆಯೊಂದಿಗೆ......................


Friday, December 24, 2010

ಪ್ರೀತಿಯಿಂದ ಪ್ರೀತಿಸಿ ಬೇರಾದವರಿಗೆ ನನ್ನ ಪ್ರೀತಿಯ ಕಿವಿಮಾತು..........

(ಯಾರದೇ ವಯಕ್ತಿಕ ಬದುಕಿಗೆ ಸಂಬಧಪಟ್ಟಿಲ್ಲ... ಸಂದಿಗ್ದತೆಯಲ್ಲಿರುವವರಿಗೆ ಸಣ್ಣ ಸಾಂತ್ವನ ಅಷ್ಟೇ....)

      ಪ್ರೀತಿ ಎಂದರೆ ಒಬ್ಬರನ್ನು ಅತಿಯಾಗಿ ಇಷ್ಟಪಡುವುದು. ಇಷ್ಟದ ಇನ್ನೊಂದು ಮುಖವೇ ಪ್ರೀತಿ. ಆದ್ದರಿಂದ ಪ್ರೀತಿಯೆಂಬುದು ಯಾರ ಮೇಲಾದರೂ ಉಂಟಾಗಬಹುದು. ಅಪ್ಪ-ಅಮ್ಮ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಗೆಳೆಯ-ಗೆಳತಿಯರು, ಹೀಗೆ ಪ್ರೀತಿಗೆ ನಾನಾ ಮುಖಗಳು. ಇದರಲ್ಲಿ ಒಂದೊಂದೂ ಸಹ ಬೇರೆಯದೇ ಆದ ಪ್ರೀತಿ. ಆದ್ದರಿಂದ ಪ್ರೀತಿ ಒಂದು ಸಾಗರವಿದ್ದಂತೆ. ಪ್ರೀತಿಯ ಇನ್ನೊಂದು ಮಹಾಮುಖಗಳೆಂದರೆ  ಮೋಹ, ಕಾಮ, ಆಕರ್ಷಣೆ. ಪ್ರತಿಯೊಂದಕ್ಕೂ ತನ್ನದೇ ಆದ ಅರ್ಥವಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವ ಪ್ರೇಮಿಗಳೇ ಹಾದಿ ತಪ್ಪುವುದು. ಬಹುತೇಕ ಮಂದಿ ಆಕರ್ಷಣೆಯನ್ನೇ ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಂಡಿರುತ್ತಾರೆ. ಅಂತಹ ಪ್ರೀತಿ ಬಹಳಷ್ಟು ಕಾಲ ಬಾಳುವಂಥದ್ದಲ್ಲ. ಕಾಮ-ಮೋಹದ ಹಾದಿಯಲ್ಲಿರುವುದಂತೂ ಪ್ರೀತಿಯೇ ಅಲ್ಲ. ಅದೂ ಕೂಡ ಬಹು ಬೇಗ ಹಳ್ಳ ಸೇರುತ್ತದೆ. ಇನ್ನು ಕೆಲವರಿಗೆ ಮನೆಯವರಿಂದ ನಕಾರ ಕೇಳಿಬಂದಾಗ ಒಪ್ಪಿಸಲಾಗದೆ ಬಿಡಬಹುದು. ಇಲ್ಲವೇ ಅವರನ್ನು ಬಿಟ್ಟು ಬೇಕಾದರೂ ಬದುಕೇನು, ಆದರೆ ಪ್ರೇಮಿಯನ್ನು ತೊರೆದು ಮಾತ್ರ ಬದುಕಲಾರೆ ಎನ್ನುವಂತಹವರು ಹೆತ್ತು ಸಾಕಿ, ಸಲಹಿದ ತಂದೆ ತಾಯಿಯ ವಿರುದ್ಧವಾಗಿ ಮದುವೆಯಾಗಲೂಬಹುದು. ಪ್ರೇಮವೆಂಬುದು ಹೇಳಿ ಕೇಳಿ ಬರುವುದಲ್ಲ. ಪ್ರೀತಿ-ಪ್ರೇಮವೆಂಬುದಕ್ಕೆ ನಾನೆಂದಿಗೂ ಹೋಗಲಾರೆ ಎಂಬಂತಹವರೇ ಅದರ ಜಾಲದಲ್ಲಿ ಬಿದ್ದ ಬಹಳಷ್ಟು ಉದಾಹರಣೆಗಳಿವೆ...!
      ಒಂದು ಸಲ ನೀವು commit ಆದಿರೆಂದರೆ ಅದರಿಂದ ಹೊರ ಬರುವುದು ಬಹಳ ಕಷ್ಟ. ಅದನ್ನು ಒಪ್ಪಿಕೊಳ್ಳೋಣ. ಆದರೆ ವಿಧಿ ವಿಪರ್ಯಾಸದಿಂದಲೋ, ಸಾಂದರ್ಭಿಕವಾಗಿಯೋ, ಮನೆಯವರ ಒತ್ತಾಯಕ್ಕೋ, ದೂರವಾದಂತಹವರಿಗೆ ಹಳೆಯದನ್ನು ಮರೆತು ಮನಸ್ಸನ್ನು ಕಲ್ಲು ಮಾಡಿಕೊಳ್ಳುವ ಅವಶ್ಯಕತೆಯಿದೆ.ಯೋಚಿಸಿ ನೋಡಿ, ನಿಮ್ಮ ಮದುವೆಯಿಂದ ಆಗುವ ಅನುಕೂಲಕ್ಕಿಂತ, ಎಲ್ಲರಿಗೂ ಆಗುವ ಸಂತೋಷಕ್ಕಿಂತ, ಅನಾನುಕೂಲಗಳು, ಎಲ್ಲರ ಮುಖದಲ್ಲೂ ಪ್ರೇತ ಕಳೆ, ಹೀಗೆ ಮಾಡಿಬಿಟ್ಟರು ನಮ್ಮ ಮಕ್ಕಳು ಎಂಬ ತಂದೆ ತಾಯಿಯ ಬಿಸಿಯುಸಿರು, ಇವುಗಳೇ ಜಾಸ್ತಿ ಎಂದಾದಾಗ ಬೇರೆಯಾಗುವುದೇ ಒಳಿತು ಎನಿಸಿಬಿಡುತ್ತದೆ. ಎಷ್ಟೋ ಜನ ಇದೆಲ್ಲದನ್ನೂ ಧಿಕ್ಕರಿಸಿ ಮದುವೆಯಾಗಬಹುದು. ಅವರು ಮುಂದೆ ಸಂತೋಷವಾಗಿ ಇರಲೂಬಹುದು, ಇರದಿರಲೂಬಹುದು, ಮನೆಯವರೆಲ್ಲ ಮತ್ತೆ ಮಕ್ಕಳನ್ನು ಮನ್ನಿಸಿ ಸೇರಲೂಬಹುದು ಅಥವಾ ಕೊನೆಯವರೆಗೂ ಮುಖವನ್ನೂ ಸಹ ನೋಡದೆ ಇದ್ದುಬಿಡಲೂಬಹುದು.ಆದರೆ ನೆನಪಿಟ್ಟುಕೊಳ್ಳಿ, ಅಪ್ಪ-ಅಮ್ಮ ತಮ್ಮ ಮಕ್ಕಳ ಮೇಲಿಟ್ಟ ನಂಬಿಕೆಯೆನ್ನುವ ಮಹಾಸೌಧ ಮಾತ್ರ ಮತ್ತೆ ಕಟ್ಟಲಾಗದು ಎಂಬಂತೆ ಕುಸಿದಿರುತ್ತದೆ...! ಕೊನೆಯವರೆಗೂ ನಿಮ್ಮ ಮೇಲಿನ ಆ ಕಲೆಯನ್ನು ಅಳಿಸಲಾಗದು. 
      ಹಲವಾರು ಮಂದಿ ತಮ್ಮ ಹೆಜ್ಜೆಯನ್ನು ಹಿಂತೆಗೆಯುವಾಗ ಇವೆಲ್ಲವನ್ನೂ ಗಾಢವಾಗಿ ಯೋಚಿಸಿರುತ್ತಾರೆ. ತಮ್ಮ ಮದುವೆಯಲ್ಲಿ ಎಲ್ಲರೂ ನಗು ನಗುತ್ತ ಇರಬೇಕೆನ್ನುವ, ಖುಷಿಯಿಂದ ಮನಃಪೂರ್ವಕವಾಗಿ ಆಶೀರ್ವದಿಸಬೇಕೆನ್ನುವ ಆಸೆ ಚಿಕ್ಕಂದಿನಿಂದ ಅಲ್ಲಿ ಇಲ್ಲಿ ಮದುವೆಗಳನ್ನು ನೋಡುತ್ತಾ ಬೆಳೆದವರ ಮನದಲ್ಲಿ ಬೇರೂರಿರುತ್ತದೆ. ಮನೆಯವರ ನಿರ್ಧಾರಕ್ಕೆ ಬೆಲೆ ಕೊಡಲೇ ಬೇಕಾಗುತ್ತದೆ. ಇಷ್ಟು ವರ್ಷ ನಮ್ಮ ಇಷ್ಟ-ಕಷ್ಟಗಳನ್ನು ಅರಿತು, ನಾವು ಈಗಿನ ಸ್ಥಿತಿಯಲ್ಲಿರಲು ಕಾರಣೀಭೂತರದವರು  ನಮ್ಮ ಅಪ್ಪ-ಅಮ್ಮ. ಅವರ ಮನಸ್ಸನ್ನು ಘಾಸಿಗೊಳಿಸುವುದು  ಯಾವ ಸಂದರ್ಭದಲ್ಲಿಯೂ ಒಳ್ಳೆಯದಲ್ಲ. ಅದರಲ್ಲೂ ಮದುವೆಯಂಥ ಮಹತ್ವದ ನಿರ್ಧಾರದಲ್ಲಿ! ಯೋಚಿಸದೆ ನಿರ್ಧಾರ ತೆಗೆದುಕೊಂಡಿದ್ದು, ಒಬ್ಬರನ್ನು ಒಬ್ಬರು ಬಲವಂತಪಡಿಸುವುದು ಎಲ್ಲಾ ಇಬ್ಬರದೂ ತಪ್ಪೇ. ಯಾವುದೋ ಸಂದರ್ಭದಲ್ಲಿ commit ಆಗಿರಬಹುದು. ಆಗ ಯೋಚಿಸದಿದ್ದದ್ದು ಇಬ್ಬರದೂ ತಪ್ಪೇ. ಆದರೆ ತಪ್ಪೆಂದು ಬೇಗನೆ ಅರಿತು ಮುಂದಿಟ್ಟ ಹೆಜ್ಜೆಯನ್ನು ಹಿಂತೆಗೆದಾಗ, ಅಂತಹ ಪರಿಸ್ಥಿತಿಯನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಹಗೆ ಸಾಧನೆ, ಅವರಿವರ ಬಳಿ ಹುಡುಗಿಯರು/ಹುಡುಗರು ಸರಿ ಇಲ್ಲ ಕೈ ಕೊಡುತ್ತಾರೆ ಎಂದು ಹೇಳಿಕೊಂಡು ತಿರುಗುವುದು, ಇದನ್ನೆಲ್ಲಾ ಮಾಡುತ್ತಾ ಕುಳಿತುಬಿಡುತ್ತಾರೆ. ಅವರಲ್ಲಿರುವ ನೋವು ಇದಕ್ಕೆಲ್ಲ ಕಾರಣ ಎಂದು ಹೇಳುವುದಾದರೆ ನನ್ನದೊಂದು ಮಾತು - ಸ್ವಲ್ಪ ಶಾಂತವಾಗಿ ಕುಳಿತು ಯೋಚಿಸಿ ನೋಡಿ. ಹಾಗೆ ಯೋಚಿಸುವಾಗ ನಿಮ್ಮ ಪ್ರೀತಿಯಿಂದ ಹೊರ ಬಂದು, ಯಾವುದೇ ಪೂರ್ವಾಗ್ರಹ ಪೀಡಿತರಾಗದೆ, ಬೇರೊಂದು ಸ್ಥಾನದಲ್ಲಿ ನಿಂತು ಯೋಚಿಸಿ. ನೀವು ಮಾಡುತ್ತಿರುವ ಈಗಿನ ಕೆಲಸದಲ್ಲಿ ಹಾಕಿದ ಶ್ರಮವನ್ನು ಇಷ್ಟಪಟ್ಟವರನ್ನು  ಮರೆಯುವಲ್ಲಿ ಹಾಕಿದ್ದರೆ ಇಷ್ಟೊತ್ತಿಗೆ ನೀವು ನಿಮ್ಮ ನೋವಿನಿಂದ ಹೊರಬರುತ್ತಿರಲಿಲ್ಲವೇ...?!? 
       ಎಲ್ಲರ ಬಳಗದಲ್ಲಿ, ಸಮಾನರೊಟ್ಟಿಗೆ ಪ್ರೇಮಿಸಿ  ಹೀಗಾಗಿದ್ದಾರಂತೆ ಎಂದು ಹೇಳಿಸಿಕೊಳ್ಳುವಲ್ಲಿ, ಅವರಿಂದ ಸಿಂಪಥಿ ಗಿಟ್ಟಿಸಿಕೊಳ್ಳುವಲ್ಲಿ ನಿಮ್ಮ ದುಃಖ ಶಮನವಾಗುತ್ತದೆ ಎಂದು ದಯವಿಟ್ಟು ಅರ್ಥೈಸಿಕೊಳ್ಳಬೇಡಿ. ಅದನ್ನೆಲ್ಲ ಬದಿಗೊತ್ತಿ ಇನ್ನು ನನ್ನ ಬಗ್ಗೆ ಯಾರೂ ಮಾತಾಡದಂತೆ ಬದುಕಿ ತೋರಿಸುತ್ತೇನೆ ಎಂಬ ನಿರ್ಧಾರಕ್ಕೆ ಬನ್ನಿ. ಪಣ ತೊಟ್ಟರೆ ಜೀವನದಲ್ಲಿ ಆಗದಿರುವುದು ಯಾವುದೂ ಇಲ್ಲ. ಏನೋ ವಿಧಿ ಬರಹ ಹೀಗಿತ್ತು ಆಯಿತು-ಮುಗಿಯಿತು, ಇನ್ನು ನಾನು ಅದನ್ನೆಂದಿಗೂ ಮನಸ್ಸಿಗೆ ತೆಗೆದುಕೊಳ್ಳಲಾರೆ ಎಂಬ ಧೃಡ ನಿರ್ಧಾರ ನಿಮ್ಮದಾಗಲಿ.... ಇಷ್ಟು ವರ್ಷಗಳಿಂದ ನಮ್ಮೊಂದಿಗಿದ್ದ ಅಪ್ಪ-ಅಮ್ಮ, ಸ್ನೇಹಿತರು ಅಥವಾ ನಾವು ತೀರಾಹಚ್ಚಿಕೊಂಡವರೆ ಏಕಾ-ಏಕಿ ಇಲ್ಲವಾದರೇ ನಾವು ಸ್ವಲ್ಪ ದಿನ ಅತ್ತು ನಂತರ ಚೇತರಿಸಿಕೊಂಡು ಬಂದ ಬದುಕಿಗೆ ಹೊಂದಿಕೊಳ್ಳುವುದಿಲ್ಲವೇ?? ಅಂತಹುದರಲ್ಲಿ ತಿಂಗಳೋ ವರ್ಷವೋ ನಮಗೆ ಸಾಥ್ ನೀಡಿದ್ದ ಒಂದು ಜೀವ ದೂರದಾಗ ಯಾಕೀ ಜಿಗುಪ್ಸೆ!!! ಎಲ್ಲವನ್ನೂ ತೊರೆದು  ಮೇಲೇಳಿ, ಬದುಕನ್ನು ಎದುರಿಸಿ. ದುಃಖ ಶಮನಕ್ಕೆಂದು ಅವರಿವರ ಬಳಿ ಹೇಳಿಕೊಂಡು ಅವರ ಮುಂದೆ ಸಣ್ಣವರಾಗುವ  ಬದಲು, ಎಲ್ಲರೆದುರು ದೊಡ್ಡ ಸ್ಥಾನಕ್ಕೇರಿ ಬದುಕಿ ತೋರಿಸಬಹುದಲ್ಲ. ಕೈ ಕೊಟ್ಟವರ ಯೋಚನೆಯಲ್ಲಿ ದಿನಗಳೆಯುವ ಬದಲು ಆ ಸಮಯವನ್ನು ನಿಮ್ಮ ಮುಂದಿನ ಕಾರ್ಯಕ್ಕೆ ಬಳಸಿ, ನಿಮ್ಮನಿಷ್ಟಪಡುವವರನ್ನು ಸಂಗಾತಿಯಾಗಿ ಮಾಡಿಕೊಂಡು ಜೀವನಕ್ಕೊಂದು ಅರ್ಥ ಕೊಡಬಹುದಲ್ಲ! ಅವರಲ್ಲದಿದ್ದರೆ ಇನ್ನೊಬ್ಬರು ನಿಮಗಾಗಿ ಕಾದೇ ಇರುತ್ತಾರೆ. ಅವರಿಲ್ಲದೆ ಬಾಳಲಾರೆ ಎನ್ನುವುದು ಶುದ್ಧ ಸುಳ್ಳು. ಯಾರಿರಲಿ ಬಿಡಲಿ ನಮ್ಮ ಜೀವನ ತನ್ನ ಪಾಡಿಗೆ ತಾನು ಮುಂದೆ ಹೋಗುತ್ತಲೇ ಇರುತ್ತದೆ. ಅಂಥ ಜೀವನವನ್ನು ಹೂವಾಗಿಸುವುದೋ, ಹಾವಾಗಿಸುವುದೋ ಎನ್ನುವುದು ನಿಮ್ಮ ಕೈಲಿದೆ. ಮನಸ್ಸನ್ನು ತಿಳಿಯಾಗಿಸಿಕೊಂಡರೆ ಎಲ್ಲವೂ ಸಾಧ್ಯವಿದೆ. Be bindas in life.... ಬೆಳಗಾಗಲು ಕೋಳಿ ಕೂಗಲೇ ಬೇಕೆಂದೆನು ಇಲ್ಲ....!!
      ಮನಸ್ಸು ಮರ್ಕಟ, ನೀವು ಹರಿಬಿಟ್ಟಂತೆ ಹರಿದಾಡುತ್ತದೆ. ಅದನ್ನು ತಹಬಂದಿಗೆ ತರುವ ಕಾರ್ಯವನ್ನು ನೀವೇ ಮಾಡಬೇಕು. ಅದು ನಿಮ್ಮಂಥ ನಿಮ್ಮಿಂದ ಮಾತ್ರ ಸಾಧ್ಯ...!! ಅಮೂಲ್ಯವಾದ ಜೀವನವನ್ನು ಹಾಳುಗೆಡವಿಕೊಳ್ಳಬೇಡಿ. ಮುಂದೊಂದು ದಿನ ನಾನೇಕೆ ಹೀಗಾಗಿದ್ದೆ, ಇಷ್ಟು ದಿನಗಳನ್ನು ವೃಥಾ ಬೇಡದ ಯೋಚನೆಯಿಂದ ವ್ಯರ್ಥ ಮಾಡಿದೆ ಎಂದು ನಿಮಗನ್ನಿಸಿತೆಂದರೆ, ಕಳೆದು ಹೋದ ಸಮಯವನ್ನೂ, ನಿಮ್ಮ ವಯಸ್ಸನ್ನೂ ಮತ್ತೆ ಹಿಂದಿರುಗಿಸಲಾಗದು. ಆದ್ದರಿಂದ ಮನಸ್ಸನ್ನು ಬೇರೆಡೆ ತಿರುಗಿಸಿ, ಆಗಿದ್ದೆಲ್ಲ ಆಯಿತು ಇನ್ನೂ ಒಳ್ಳೆಯ ಭವಿಷ್ಯಕ್ಕಾಗಿ ನನಗೆ ಈಗ ಹೀಗಾಯಿತು ಎಂದುಕೊಂಡು ಮೊದಲಿದ್ದಂತೆ ಆಗಿಬಿಡಿ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಹೊಸ ಜೀವನ ನಿಮಗಾಗಿ ಕಾದಿದೆ. Go ahead... All the very best.....
      
      ಈ ನನ್ನ ಬರಹ ನಾನು ಮೊದಲೇ ಹೇಳಿದಂತೆ ಆ ಎರಡು category ಯನ್ನು ಹೊರತು ಪಡಿಸಿ, ಪ್ರೀತಿಯಿಂದ ದೂರಾಗಿ ಕಂಗೆಟ್ಟವರಿಗೆ ಸಾಂತ್ವನದ ಮಾತು ಮಾತ್ರ. ಮೊದಲಿನ category  ಯವರಿಗೆ ನನ್ನದು NO COMMENTS..... 



ಕಾವ್ಯಾ 

Wednesday, December 15, 2010

ನಿನ್ನಾ ಸ್ನೇಹ...... ಮನಸಲಡಗಿ......



ಸ್ನೇಹವೆಂಬುದು ಒಂದು ಮಧುರಾನುಭೂತಿ. ಸುಂದರ ಬದುಕಿಗೆ ಜೀವ ಸೆಲೆ. ಪರಿಶುದ್ಧ, ನಿಷ್ಕಲ್ಮಷ ಸ್ನೇಹವೆಂಬುದು ಎಲ್ಲರಿಗೂ ಸಿಗುವಂಥದ್ದಲ್ಲ! ದುರದೃಷ್ಟಗಳ ಬೆನ್ನಟ್ಟಿ ಹೋಗುತ್ತಿದ್ದ ನನಗೆ ಎಡವಿಕೊಂಡ ಅದೃಷ್ಟದ ಹುಲ್ಲುಕಡ್ಡಿಯೆಂದರೆ ಇಂಥದೇ ಒಂದು ಸಹೃದಯಿ ಸ್ನೇಹ......
      ನೀ ಕೊಟ್ಟ ಈ ಸುಂದರ, ಸ್ವಚ್ಛಂದ ಸ್ನೇಹಕ್ಕೆ ನಾನೆಂದಿಗೂ ನಿನಗೆ ಋಣಿ. ನನ್ನೆಲ್ಲ ಸುಂದರ ಕ್ಷಣಗಳಿಗೆ ನೀ ಜೊತೆಯಾಗುತ್ತೀಯ. ನನ್ನ ಸಂತಸದ ನಗುವನ್ನು ಕಂಡು ಖುಷಿ ಪಡುತ್ತೀಯ. ಪ್ರಫುಲ್ಲ ಮನಸ್ಸಿನಿಂದ ನನ್ನೊಡನೆ ನಗುತ್ತೀಯ. ನನ್ನ ಪ್ರತಿಯೊಂದು ದುಃಖಕ್ಕೂ ಸಾಥ್ ಕೊಟ್ಟಿದ್ದೀಯ. ನನ್ನ ನಗುವಿನಲ್ಲಿ ಸಣ್ಣ ಬದಲಾವಣೆಯಾದರೂ ಅದನ್ನು ಗುರುತಿಸಿ ನನ್ನ ನೋವನ್ನು ಹಂಚಿಕೊಳ್ಳುತ್ತೀಯ. ನೀನು ಏನಾಯ್ತು ಎಂದು ಕೇಳುವುದೇ ತಡ ನಾನೂ ಸಹ ದುಃಖದ ಖೋಡಿ ಒಡೆಯಿತೆಂಬಂತೆ ನನ್ನಾಳವನ್ನು ನಿನ್ನ ಮುಂದೆ ನಿಸ್ಸಂಕೋಚವಾಗಿ ತೆರೆದಿಡುತ್ತೇನೆ. ಆಗ ನೀನು ಸಹ ಎಂದಿನಂತೆ ನನ್ನ ಮನಸ್ಸನ್ನು ಸಂತೈಸುತ್ತೀಯ. ನಿನ್ನ ಎರಡೇ ಎರಡು ಸಾಂತ್ವನದ ಮಾತು ನನಗೆ ಸಿಕ್ಕರೆ ಸಾಕು, ನನ್ನ ದುಃಖತಪ್ತ ಮನ ಅದೆಷ್ಟೋ ಹಗುರಾದಂತೆ ಭಾಸವಾಗುತ್ತದೆ. ಇದೇನಾ ಸ್ನೇಹ ಅಂದ್ರೆ....?
     ನಮ್ಮ ಎಲ್ಲಾ ಭಾವನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಸಿಗುವ ಆ ತೃಪ್ತಿ ಇದೆಯಲ್ಲಾ ಅದೊಂದು ಸುಂದರ ಅನುಭೂತಿ. ಅದಕ್ಕೆ ಏನೋ ನಮ್ಮಿಬ್ಬರಲ್ಲಿ ಒಬ್ಬರು ಊರಿಗೆ ಹೋದರೂ ಮತ್ತೆ ಬರುವಲ್ಲಿವರೆವಿಗೂ ಎಲ್ಲಾ ಸೇರಿಸಿ ಎಷ್ಟೊಂದು ಮಾತನಾಡುವುದು ಉಳಿದು ಹೋಗಿದೆ ಎನ್ನಿಸಲು ಶುರುವಿಟ್ಟುಕೊಳ್ಳುವುದು.....! ಆದರೆ ಹಿಂದಿರುಗಿ ಬಂದು ಏನ್ಮಾಡ್ತಾ ಇದೀಯ? ಹೇಗಿದೀಯ? ಮತ್ತೆ ಏನು ಸುದ್ದಿ ಇಷ್ಟು ದಿನಗಳದ್ದು? ಎಂದೆಲ್ಲ ಕೇಳಿದಾಗ ಉಭಯ ಕುಶಲೋಪರಿಯ ಹೊರತು ಉಳಿದ ಮಾತುಗಳು ಹೊರಬರಲು ಕೊಂಚ ಸಮಯ ಬೇಡುತ್ತದಲ್ಲ, ಇದೇಕೆ? ಇದೇನಾ ಸ್ನೇಹ....?
      ನನಗೆ ಸ್ನೇಹದ ಬಗ್ಗೆ ಹಿಂದಾದ ಎಲ್ಲಾ ಕಹಿ ಅನುಭವಗಳು ತಿರುಗಿ ಕಾಡದಂತೆ ಅಗಾಧ ಸ್ನೇಹ-ಹಸ್ತ ಚಾಚಿದ್ದೀಯಲ್ಲ ನನ್ನೆಡೆಗೆ.... ಇದು ಯಾವ ಜನ್ಮದ ನಂಟು ನಮ್ಮಿಬ್ಬರಿಗೆ....? ಇಬ್ಬರಲ್ಲಿ ಒಬ್ಬರು ಏನೇ ಚಿಕ್ಕ ಪುಟ್ಟ ವಿಷಯವನ್ನೂ ಸಹ ಹೇಳದೇ ಮಾಡಲಾರದ ಈ ಬಂಧವೇ ಸ್ನೇಹವಲ್ಲವೇ?! 
     ದಿನಕ್ಕೆ ಸಾವಿರ ಬಾರಿ ನೆನಪಗುತ್ತದಲ್ಲಾ, ಇದೇ ಸ್ನೇಹದ ಶಕ್ತಿ ಇರಬೇಕು ಅಲ್ವಾ? ಏನೇ ಆದರೂ ಮೊದಲು ನೆನಪಾಗುವುದೇ ನೀನು, ಹೇಳಬೇಕೆನಿಸುವುದೇ ನಿಂಗೆ! ಅದಕ್ಕೇ ಇರಬೇಕು ಅದೆಷ್ಟೋ ವಿಷಯಗಳು ನಮ್ಮಿಬ್ಬರ ಹೊರತು ಬೇರಾರಿಗೂ ತಿಳಿಯದೆ ನಮ್ಮಲ್ಲೇ ಹುದುಗಿರುವುದು...!
     ನನ್ನೆಷ್ಟೋ ನೋವನ್ನು ಮರೆಯಲು ಕಾರಣ ನೀನು, ನಿನ್ನ ಸಾಂತ್ವನ. ಅದೇನೋ ನನಗೂ ನನ್ನ ಮನಸ್ಸೆಂಬ ಪುಸ್ತಕವನ್ನು ನಿನ್ನಲ್ಲಿ ತೆರೆದಿಟ್ಟರೆ ಅದೆಷ್ಟೋ ನಿರಾಳ. ನಿನ್ನ ಬಳಿ ಹಠ ಮಾಡುವುದೆಂದರೆ ಏನೋ ಸಂತಸ. ನೀನು ಹುಸಿ ಮುನಿಸಿನಿಂದ ಬಯ್ಯುತ್ತೀಯಲ್ಲ ಅದೇನೋ ಆನಂದ. ಒಂದೇ ಒಂದು ದಿನ ನಿನಗೆ ಸರಿಯಾಗಿ ಮಾತಾಡಲು ಸಾಧ್ಯವಾಗಿಲ್ಲ, ಏನೋ ಕೆಲಸದ ಒತ್ತಡ ಎಂದರೂ ಅದೇನೋ ಅಸಮಾಧಾನ. 
      ನಿಜ ಹೇಳ್ತೀನಿ ಕೇಳು, ಇತ್ತೀಚಿನ ದಿನಗಳಲ್ಲಿ ನಾನು ಬಹುತೇಕ ನಗುತ್ತಿರುವುದು ನಿನ್ನಿಂದ, ನಿನ್ನ ನಿಷ್ಕಲ್ಮಷ ಸ್ನೇಹ-ಹಸ್ತದಿಂದ. ಸ್ನೇಹದ ಅನನ್ಯತೆ, ಅಗಾಧತೆ ತಿಳಿಸಿಕೊಟ್ಟಿದ್ದು ನೀನು, ಸ್ನೇಹದ ಆಳದ ಪರಿಚಯವಾಗಿದ್ದು ನಿನ್ನಿಂದ, ಪಾರದರ್ಶಕ ಸ್ನೇಹದ ಅರಿವಾಗಿದ್ದು ನಿನ್ನಿಂದ, ಕೊನೆಯವರೆಗೂ ಸ್ನೇಹ ಸ್ನೇಹವಾಗಿಯೇ ಇರುತ್ತದೆಂಬ ಪರಿಶುದ್ಧತೆ ಮೂಡಲು ಕಾರಣ ನೀನು. 
     ನನಗೆ ಗೊತ್ತು ನೀನೆಂದಿಗೂ ನಿನ್ನ ಮನದ ಭಾವನೆ ವ್ಯಕ್ತಪಡಿಸಲಾರೆ. ಆದರೆ ನಿನ್ನ ಮಾತಿನ ಧಾಟಿ, ನಡವಳಿಕೆಗಳಿಂದ ನಾನದನ್ನು ಸ್ವಲ್ಪ-ಸ್ವಲ್ಪವಾದರೂ ಅರಿಯಬಲ್ಲೆ. ಅದಕ್ಕೇ ನಿನ್ನ ಮನಸ್ಸನ್ನೂ ಅರಿತು ಅದನ್ನೂ ಸೇರಿಸಿ ಬರೆಯುವ ಪ್ರಯತ್ನ ಮಾಡಿದ್ದೇನೆ. 
      ಇಷ್ಟವಾದರೆ ಗೊತ್ತಲ್ಲ ನನ್ನ ಬೇಡಿಕೆಯ ಪಟ್ಟಿ ನಿನ್ನ ಮುಂದೆ..... ಇಲ್ಲವೆನ್ನುವುದಿಲ್ಲವೆನ್ನುವ ನಂಬಿಕೆ ನನ್ನ ಕಣ್ಣ ಮುಂದೆ..!!
         
                             ಯಥೇಛ್ಛವಾದ  ಸ್ನೇಹದೊಂದಿಗೆ,
                                                   ಕಾವ್ಯಾ.........

Tuesday, December 14, 2010

ಮರೆತೂ ನೆನಪಾದ ಕ್ಷಣ.....




ಗೆಳೆಯಾ,
      ಕಳೆದ ಕೆಲ ದಿನಗಳಿಂದ ನಿನ್ನ ನೆನಪು ಬಹುವಾಗಿ ಕೆದಕುತ್ತಿದೆ. ನನಗೆ ನಿನ್ನನ್ನು ಮರೆಯುವುದು ದುಸ್ಥರವೆನುಸುತ್ತಿದೆ. ಹೇಗೆ ಖುಷಿ ಪಡಲಿ ನೀನಿಲ್ಲದ ಬಾಳಿನಲ್ಲಿ? ಹೇಗೆ ತಾನೇ ಸಂಭ್ರಮಿಸಲಿ ಪ್ರತಿ ಕ್ಷಣದ ರೋಮಾಂಚನವ, ನಿನ್ನದಲ್ಲದ ಬೇರೊಂದು ಬಾಹು ಬಂಧನದಲ್ಲಿ??
      ನೀನು ತಾನೇ ನಿನ್ನ ವಿಶಾಲ ಎದೆಯಾಳಕ್ಕೆ ಬೇರೊಬ್ಬಳನ್ನು ಸಂತಸದಿಂದ ಬರಮಾಡಿಕೊಳ್ಳುವೆಯಾ?! ನಿಜವಾಗಿಯೂ ನಿನ್ನಂತರಾಳದಿಂದ ನೀ ನನ್ನ ಪ್ರೀತಿಸಿದ್ದೆ ಎಂಬುದರಲ್ಲಿ ಯಾವ ದ್ವಂದ್ವವೂ ಇಲ್ಲ ಎಂದಾದಲ್ಲಿ, ಏನೋ ಚುಚ್ಚಿದಂಥ ಅನುಭವವಾಗುತ್ತಿಲ್ಲವೇ ನಿನ್ನೊಳಗಿನ ಆ ನನ್ನ ಹೃದಯಕ್ಕೆ?
      ಎಲ್ಲಿ ಹೋಯಿತು, ಜನ ಮಾತಾಡದಂತೆ ಬದುಕಿ ತೋರಿಸಬೇಕೆಂಬ ಆ ನಮ್ಮ ಕನಸು? ಎಲ್ಲಿ ಹುದುಗಿತು, ಗಂಡ ಹೆಂಡತಿ ಎಂದರೆ ಹೇಗಿರಬೇಕೆಂದುಕೊಳ್ಳುವಂತೆ ಬಾಳುವ ಆ ನಮ್ಮ ಅಭಿಲಾಷೆ? ಎಲ್ಲಿ ಲೀನವಾಯಿತು, ನನ್ನನ್ನು ಮನಸಾರೆ ಹೆಂಡತಿಯೆಂದು ಪಿಸುಗುಟ್ಟಿದ್ದ ಆ ನಿನ್ನ ಮಧುರ ದನಿ? ಎಲ್ಲಿ ಮಸುಕಾಯಿತು, ನಮ್ಮ ಮಧುಚಂದ್ರದ ಸಿಮ್ಲಾ, ಸಿಂಗಾಪುರ? ಎಲ್ಲಿ ಮರೆಯಾಯಿತು, ಮಕ್ಕಳನ್ನು ನಾವು ಕಂಡ ಕೊರತೆಗಳಿಂದ ವಿಮುಕ್ತವಾಗಿ ಬೆಳೆಸುವ ಆ ಸುಂದರ ಸ್ವಪ್ನ?
      ಇಷ್ಟೆಲ್ಲಾ ಕನಸುಗಳನ್ನು ಒಮ್ಮಿಂದೊಮ್ಮೆಗೇ ಮರೆತು ಕುಳಿತುಬಿಟ್ಟ ನಮಗೆ ಕಾಡುತ್ತಿಲ್ಲವೇ ಎಲ್ಲವೂ ಪ್ರಶ್ನೆಗಳಾಗಿ? ಸಾಕಾಗಿ ಹೋಗಿದೆ ಗೆಳೆಯಾ, ಮತ್ತದೇ ಪ್ರಶ್ನೆಗಳ ಸುಳಿಗೆ ಸಿಲು-ಸಿಲುಕಿ, ಅದೇ ಕತ್ತಲ ಏಕಾಂತದಲ್ಲಿ ಕಣ್ಣೀರಾಗಿ......!! ಮರೆತೇ ಬಿಟ್ಟೆವೆಂದು ಮರೆತು ಕುಳಿತಾಗ ಒತ್ತರಿಸಿ ಬರುವ ಆ ಮರೆಯಾಗದ ನೆನಪಿದೆಯಲ್ಲಾ ಅದು ಅಗಾಧ ನೋವಿನ ಅಂಗಳ.....
      ಎಲ್ಲವನ್ನೂ ಬದಿಗೊತ್ತಿ, ಎಲ್ಲದಕ್ಕೂ ಉತ್ತರವಾಗಿ ಬರಲಾರೆಯಾ ಬಾಳಿನಲ್ಲಿ ವಸಂತವಾಗಿ?? ಚಿಗುರಿಸಲಾರೆಯಾ ಪ್ರೀತಿಯ ಚಿಗುರನ್ನು......????



ಕಾವ್ಯಾ .....
(ವಿರಹಿಯಾದವರ ಸ್ಥಿತಿಯ ಊಹೆಯೇ ವಿನಃ ಯಾವುದೇ ವ್ಯಕ್ತಿಗೆ ಸಂಬಂಧಿಸಿಲ್ಲ...)
                                                      

Friday, December 3, 2010

ದೃಷ್ಟಿ ಪುರಾಣ



ಕಳ್ಳ ದೃಷ್ಟಿಗೆ ಆ ದೃಷ್ಟಿ ನೆಟ್ಟಿದ್ದೆ ಬದಲಾಗುತ್ತಿದ್ದ ದೃಷ್ಟಿ ಇಂದು ನೇರ ದೃಷ್ಟಿಯಾಗಿ ಈ ದೃಷ್ಟಿಯನ್ನೇ ಬದಲಾಯಿಸುತ್ತಿದೆ. ಯಾಕೀ ಬದಲಾವಣೆ...?!
     ಕಳ್ಳ ದೃಷ್ಟಿಯಲ್ಲಿದ್ದ ನಾಚಿಕೆ ಮರೆಯಾಗಿ ನೇರ ದೃಷ್ಟಿಯಲ್ಲಿನ ಆ ಧೈರ್ಯ ಈ ದೃಷ್ಟಿಯಲ್ಲಿ ನಾಚಿಕೆ ತುಂಬಿ, ಈ ದೃಷ್ಟಿಯನ್ನೇ ಬದಲಿಸುತ್ತಿದೆ. ಅಧೈರ್ಯದ ಜಾಗದಲ್ಲಿ ಧೈರ್ಯ, ಧೈರ್ಯದ ಜಾಗದಲ್ಲಿ ಅಧೈರ್ಯ, ನಾಚಿಕೆಯ ದೃಷ್ಟಿಯಿದ್ದಲ್ಲಿ ಮಂದಹಾಸ, ಮಂದಹಾಸದ ದೃಷ್ಟಿಯಿದ್ದಲಿ ನಾಚಿಕೆ ಮೂಡಿ ದೃಷ್ಟಿ-ದೃಷ್ಟಿಗಳ ಬದಲಾವಣೆಯಾಗುತ್ತಿದೆ. ಯಾಕೀ ಬದಲಾವಣೆ....?!
     ಯಾವುದೇ ಬದಲಾವಣೆಯಾಗಲಿ, ಎರಡೂ ದೃಷ್ಟಿಗಳ ವಿದ್ಯಾಭ್ಯಾಸ ಮಾತ್ರ ನೇರ ಮತ್ತು ನಿರಂತರವಾಗಿರಬೇಕು. ಆ ದೃಷ್ಟಿಯದು ನೊಂದಿರುವ ಮನಸ್ಸು. ಅದು ಗುರಿ ತಲುಪಲೇಬೇಕು. ಯಾವುದೇ ವಕ್ರದೃಷ್ಟಿಯಿಲ್ಲದೆ ಅದರ ಛಲ ಸಾಧನೆಯಾಗಬೇಕು. ಆ ದೃಷ್ಟಿಯ ಗುರಿಗೆ ಈ ದೃಷ್ಟಿ ಕವಲುದಾರಿಯನ್ನು ತೋರಿಸುವಂತಾಗಬಾರದು. ಆ ದೃಷ್ಟಿ ಗುರಿ ತಲುಪಿದ್ದೇ ಆದಲ್ಲಿ ಈ ದೃಷ್ಟಿಯಲ್ಲಿ ಸಂತಸದ ಮಿನುಗು ಹೊರಹೊಮ್ಮೀತು. ಅದರಂತೆಯೇ ಅದರ ಹೆತ್ತಮ್ಮನಿಗೂ ಅಕ್ಕರೆಯ ಮಮತೆಯ ಸಿಂಚನವಾದೀತು. ಆ  ತಂಪಿನನುಭವವನ್ನು ಆ ದೃಷ್ಟಿ ಪಡೆದರೆ, ದೃಷ್ಟಿ-ದೃಷ್ಟಿಗಳಿಂದಾರಂಭವಾದ ದೃಷ್ಟಿ ಯುದ್ಧಕ್ಕೆ ಒಂದು ಹಂತದ ಬೆಳವಣಿಗೆಯಾದಂತೆ...!!
     ಇನ್ನು ಆ ದೃಷ್ಟಿಗೆ  ಹೊಂದುವ ಇನ್ನೊಂದು ದೃಷ್ಟಿ ಜೊತೆಯಾದಲ್ಲಿ ಮಮತೆಯ ದೃಷ್ಟಿಯೊಂದಿಗೆ ಪ್ರೀತಿಯ ದೃಷ್ಟಿಯ ಮಿಳಿತವಾಗಿ ದಾಂಪತ್ಯ ದೃಷ್ಟಿಕೋನಕ್ಕೆ ನಾಂದಿಯಾಗಿ ತಂಪಾದ ಹೊಸ ದೃಷ್ಟಿಯಾಗಿ ಅದಕ್ಕೆ 'ಈ ದೃಷ್ಟಿಯ' ಹೆಸರನ್ನಿಟ್ಟು, 'ಆ ದೃಷ್ಟಿ' ಪುಟ್ಟ ದೃಷ್ಟಿಯ ಕಣ್ಣಲ್ಲಿ ಕಣ್ಣಿಟ್ಟು 'ಈ ದೃಷ್ಟಿ' ಯನ್ನು ಹುಡುಕಲು ತವಕಿಸಿದಾಗ, ಕೇವಲ ಆಕರ್ಷಣೆಯಿಂದ ಆರಂಭವಾದ ಶೀತಲ ದೃಷ್ಟಿ ಸಮರ ಒಂದು ಕಡೆಯಿಂದ ತಂಪಾಗಿ ದಡ ಮುಟ್ಟಿದಂತೆ...! 
     ಈ ಎಲ್ಲದರ ನಡುವೆ 'ಈ ದೃಷ್ಟಿ'ಗೂ ಈ ಎಲ್ಲಾ ಸುಖಾನುಭಾವವಾಗಿ, ಸಹಜೀವಿಯ ದೃಷ್ಟಿಯಲ್ಲಿ ದೃಷ್ಟಿ ನೆಟ್ಟಾಗ ಆಳದಲ್ಲೆಲ್ಲೋ 'ಆ ದೃಷ್ಟಿ'ಯನ್ನು ಕಂಡಂತಾಗಿ ಮನದಲ್ಲೇ ನಕ್ಕು, ಜೀವನ ಸಾಗರದಲ್ಲಿ ಸಂತಸದಿಂದ ಈಜುತ್ತಿರಲು, ಒಡಲಾಳದಲ್ಲೆಲ್ಲೋ ನೂತನ ಪುಟ್ಟ ದೃಷ್ಟಿಯ ಅಂಕುರವಾಗುತ್ತಿರುವ ಅನುಭವವಾಗಿ, ತ್ರಿಕೋನ ದೃಷ್ಟಿಗೆ ನಾಂದಿಯಾದಲ್ಲಿ ಸುಂದರ ದೃಷ್ಟಿ ಸಮರಕ್ಕೆ ಎರಡೂ ಕಡೆಯಿಂದ ತೆರೆ ಬಿದ್ದಂತೆ...!! 
     ಅಲ್ಲಿಗೆ ಆ ದೃಷ್ಟಿ - ಈ ದೃಷ್ಟಿ ಇಬ್ಬರೂ ತಮ್ಮ ಸಂಗಾತಿಗಳೊಡನೆ ಸುಖ ಸಂಸಾರದಲ್ಲಿ ಲೀನವಾಗಿ ಹಳೆಯ ದೃಷ್ಟಿಕೋನಗಳನ್ನೆಲ್ಲಾ ಮರೆತು ಸಹಜೀವನ ಸಾಗಿಸುವಂತಾಗುತ್ತದೆ.
     ಅಬ್ಬಾ...!! ಇದೇನು ಬರೀ ದೃಷ್ಟಿ ಯುದ್ಧ, ಸಾಕಪ್ಪಾ ಎನ್ನುತ್ತೀರಾ...? ಹಾಗಾದರೆ ಈ ದೃಷ್ಟಿ-ದೃಷ್ಟಿಗಳ ಬಹುಮುಖ ದೃಷ್ಟಿಕೋನಕ್ಕೆ ಅಂತಿಮ ದೃಷ್ಟಿ ಬೀರೋಣವೇ...!?!



                                                "ಈ ದೃಷ್ಟಿ"

Tuesday, November 30, 2010

ಅನುಕ್ಷಣವೂ ಜಪಿಸುತಿದೆ
        ನನ್ನೀ ಮನ ನಿನ್ನ.....
ಯೋಚಿಸದೆ ಹಾಕಿ ಹೋದೆಯಲ್ಲ
        ನೀ ನನಗೆ ಬೆನ್ನ.....
ಮತ್ತದೇ ಪ್ರೀತಿಯಲ್ಲಿ ತಿರುಗಿ
        ನೋಡಬಾರದೇ ಎನ್ನ....
ಇಬ್ಬರೂ ಸೇರಿ ತುಂಬೋಣ ಬಾಳ
        ರಂಗೋಲಿಗೆ ಬಣ್ಣ.....