ಅವಳಿಗಾಗ 21 ವರ್ಷ. ಅದೆಷ್ಟೋ ಹುಡುಗರು ಅವಳನ್ನು ಕದ್ದು ನೋಡುವುದು ಅವಳಿಗೆ ತಿಳಿದೇ ಇತ್ತು... ಅಷ್ಟೇ ಏಕೆ 2-3 ಪ್ರಪೋಸಲ್ ಗಳು ಬಂದು ಅವುಗಳನ್ನು ತಿರಸ್ಕರಿಸಿಯೂ ಆಗಿತ್ತು. ಅವಳೇನು ಅಷ್ಟೊಂದು ಸುಂದರಿಯಲ್ಲ... ಆದರೂ ಹುಡುಗರೇಕೆ ಅವಳ ಹಿಂದೆ ಬೀಳುತ್ತಿದ್ದರೆಂಬುದು ಅವಳಿಗೂ ತಿಳಿಯದ ವಿಷಯ. ಪ್ರೀತಿ ಪ್ರೇಮವೆಂದರೆ ಮಾರು ದೂರವಿದ್ದವಳು ಅವಳು. ಅದೊಂದು ಕೆಟ್ಟ ದಿನ ಒಬ್ಬ ನಿನ್ನನ್ನು ತುಂಬಾ ಪ್ರೀತಿಸುತ್ತೇನೆಂದ. ಮೊದಲು ತಮಾಷೆ ಮಾಡುತ್ತಿದ್ದನೆಂದುಕೊಂಡಳು. ಆಮೇಲೆ ನಿಜವೆಂದು ಗೊತ್ತಾದ ಮೇಲೆ ಎಲ್ಲರಿಗೂ ತಿಳಿ ಹೇಳಿ ನಯವಾಗಿ ತಿರಸ್ಕರಿಸಿದಂತೆ ಅವನಿಗೂ ಹೇಳಿ ಬೇಡವೆಂದಳು. ಅವನು ಆದರೂ ತುಂಬಾ ಪ್ರೀತಿ ನಿವೇದಿಸಿಕೊಂಡ. ಎರಡು ದಿನ ಸುಮ್ಮನಿದ್ದವಳಿಗೆ ಅವನ ನಯ-ವಿನಯ ನಿಧಾನವಾಗಿ ಇಷ್ಟವಾಗತೊಡಗಿತು.... ಒಪ್ಪಿಕೊಂಡೇಬಿಟ್ಟಳು..... ಮನೆಯಲ್ಲಿ ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಗೊಂದಲದ ನಡುವೆಯೇ ಪ್ರೀತಿ ಮೊಳೆತು, ಬೆಳೆಯಿತು. ಇಬ್ಬರೂ ಬೇರೆ ಬೇರೆ ಊರಿನಲ್ಲಿದ್ದರು. ಅದೊಂದು ದಿನ ಅವನು ಅವಳಿದ್ದ ಊರಿಗೆ ಬಂದು ನಾವಿಬ್ಬರೂ ದೂರಾಗೋಣ ಎಂದುಬಿಟ್ಟ. ಇವಳು ತಬ್ಬಿಬ್ಬಾದಳು. ಏಕೆ, ಏನು ಎಂದು ಕೇಳಿದರೆ ಸರಿಯಾದ ಉತ್ತರ ಕೊಡಲಿಲ್ಲ. ಒಮ್ಮೊಮ್ಮೆ ಕೇಳಿದಾಗ ಒಂದೊಂದು ಹಾರಿಕೆಯ ಉತ್ತರ ಕೊಟ್ಟ. ಅವನಾಗೇ ಅವಳ ಜೀವನದಲ್ಲಿ ಬಂದು, ಅವನಾಗೇ ಅವಳ ಕಡೆ ಬೆನ್ನು ಹಾಕಿ ಹೊರಟುಬಿಟ್ಟ..... ಜೀವನದಲ್ಲಿ ಮಾಡಿದ ದೊಡ್ಡ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಡಬೇಕೋ, ಮನಸ್ಸಿನಲ್ಲಿನ ಪ್ರೀತಿಯನ್ನು ತೆಗೆದೊಗೆಯಬೇಕೋ ಎಂಬ ಗೊಂದಲ.... ಅವನನ್ನು ಮರೆಯಲು ಅವಳು ತೀರಾ ಕಷ್ಟ ಪಟ್ಟಳು... ಒಳ್ಳೆಯ ಹುಡುಗ ಅದೇಕೆ ಹೀಗೆ ಮಾಡಿದನೋ ಎಂಬುದು ಅವಳಿಗೆ ತಿಳಿಯಲೇ ಇಲ್ಲ...
ಅಂತಹ ದುರ್ಬಲ ಮನಸ್ಸಿನಲ್ಲಿರುವಾಗಲೇ ಇನ್ನೊಬ್ಬನ ಆಗಮನ .....! ಪ್ರೀತಿಸುತ್ತೇನೆಂದ... ಇವಳು ಬೇಡವೆಂದಳು... ಅವನು ಬಿಡಲಿಲ್ಲ.. ನಾನೀಗ ಅದನ್ನೆಲ್ಲ ವಿಚಾರ ಮಾಡುವುದಾಗಲೀ, ನಿರ್ಧಾರ ತೆಗೆದುಕೊಳ್ಳುವುದಾಗಲೀ ಮಾಡುವ ಪರಿಸ್ಥಿತಿಯಲ್ಲಿಲ್ಲ ದಯವಿಟ್ಟೂ ಬಿಟ್ಟು ಬಿಡೆಂದಳು. ಅವನು ಬಿಡಲಿಲ್ಲ .... ತನ್ನ ಟೈಮ್ ಚೆನ್ನಾಗಿಲ್ಲ ನನಗೆ ಪ್ರೀತಿ ಪ್ರೇಮದಲ್ಲಿ ಆಸಕ್ತಿಯಿಲ್ಲ ಬಿಡು ಎಂದಳು... 'ಏನೆಂದರು ಮಗ ಹರಿಯೆಂಬುದ ಬಿಡ' ಎಂಬಂತಾದ ಅವ .... ಕೊನೆಗೊಂದು ಅತೀ ಕೆಟ್ಟ ಘಳಿಗೆಯಲ್ಲಿ 'ನೋಡೋಣ ಮನೆಯಲ್ಲಿ ವಿಷಯ ತಿಳಿಸುತ್ತೇನೆ, ಒಪ್ಪಿದರೆ ವಿಚಾರ ಮಾಡುತ್ತೇನೆ'ಎಂದಳು. ಅವಳ ಅಷ್ಟು ಮಾತ್ರ ಉತ್ತರಕ್ಕೆಂದೇ ಕಾಯುತ್ತಿದ್ದಂತೆ ಅವನು ಪ್ರೀತಿ ಪ್ರೇಮವೆಂದು ಅವನು ತುಂಬಾ ಮಾತಾಡತೊಡಗಿದ. ಅವಳಿಗೆ ಒಳಗೊಳಗೇ ಕಸಿವಿಸಿಯಾಗತೊಡಗಿತು.. ಇದೆಲ್ಲದಕ್ಕೂ ಮುಂದೆ ಸಮಯವಿದೆ ದಯವಿಟ್ಟೂ ಸುಮ್ಮನಿದ್ದುಬಿಡು, ಹೀಗೆಲ್ಲ ಮಾತನಾಡಬೇಡ, ಕೆಲವು ದಿನಗಳಲ್ಲಿ ಅಪ್ಪನೊಡನೆ ಮಾತನಾಡುವೆ ಎಂದಳು'... ಅದೆಷ್ಟೇ ಹೇಳಿದರೂ ಅವನು ಸುಮ್ಮನಾಗಲಿಲ್ಲ... ಇವಳಿಗೆ ಮಾತ್ರ ಮನಸ್ಸೇಕೋ ಅವನನ್ನು ಒಪ್ಪುತ್ತಲೇ ಇರಲಿಲ್ಲ. ಉಡಲೂ ಆರದ, ತೊಡಲೂ ಆರದ ಕಷ್ಟದಲ್ಲಿದ್ದಳು. ಕೊನೆಗೂ ಮನೆಯವರೊಡನೆ ಮಾತಾಡಿ ಅವರು ಈ ಮದುವೆಗೆ ಸುತಾರಾಂ ಒಪ್ಪುವುದಿಲ್ಲವೆಂದಾಗ, ಅವಳಿಗಿದ್ದ ಅರ್ಧ ಮನಸ್ಸೂ ಸಹ ಅವನೆಡೆಗೆ ಬೆನ್ನು ಹಾಕಿತು. ಆದರೂ ಅವನನ್ನು ಸಂತೈಸಲು ಯತ್ನಿಸಿದ್ದಳು. ಏನೇ ಮಾಡಿದರೂ ಅವಳ ಜೀವನದ ಅತೀ ಕೆಟ್ಟ ದಿನಗಳು ಆಗಲೇ ಶುರುವಾಗಿದ್ದವು ಅವಳಿಗೆ...!
ಅವಳಿಗೆ ತನ್ನ ಮದುವೆಯಲ್ಲಿ ಮನೆಯವರೆಲ್ಲಾ ನಗು-ನಗುತ್ತಾ ಸಂಭ್ರಮದಲ್ಲಿ ಓಡಾಡಬೇಕು, ತಾನದನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಬುದ್ದಿ ಬಂದಾಗಿನಿಂದ ಬೆಳೆಯುತ್ತಾ ಬಂದ ಮಹಾದಾಸೆಯಗಿತ್ತು. ಮನೆಗೊಬ್ಬಳೇ ಮಗಳು... ಎಲ್ಲರಿಗೂ ಅವಳನ್ನು ಕಂಡರೆ ತುಂಬಾ ಅಕ್ಕರೆ, ಪ್ರೀತಿ... ಅದೆಷ್ಟು ಕಾಡಿ ಬೇಡಿದರೂ , ಬೈದರೂ ಅವನು ತೊಂದರೆ ಕೊಡುವುದನ್ನು ಬಿಡಲಿಲ್ಲ. ಕೇವಲ 1 - 2 ಸಲ ಸಿಕ್ಕಿ ಕೆಲವೇ ನಿಮಿಷಗಳ ಕಾಲ ಸುಮ್ಮನೆ ಮಾತಾಡಿದ್ದನ್ನು ಅವನು ತನ್ನ ಗೆಳೆಯರೊಡಗೂಡಿ ಏನೇನೋ ಕಾಲು ಬಾಲ ಸೇರಿಸಿ ಕಂಡವರಿಗೆಲ್ಲಾ ಹೇಳತೊಡಗಿದ. ಇವಳು ತೀರ ಮಾನಸಿಕ ವೇದನೆ ಅನುಭವಿಸಬೇಕಾಯಿತು. ತಪ್ಪಲ್ಲದ ತಪ್ಪಿಗೆ ಬಹು ದೊಡ್ಡ ಮೊತ್ತದ ನೋವನ್ನು ಅನುಭವಿಸಬೇಕಾಯ್ತು. ಏನೂ ನಡೆಯದೆಯೇ ಜನರಿಂದ ಕಪ್ಪು ಚುಕ್ಕಿ ಪಡೆಯಬೇಕಾಯ್ತು. ಪಾಪ... ದಿನಂಪ್ರತಿ ಅಳುವುದನ್ನು ಬಿಟ್ಟರೆ, ನನ್ನೊಡನೆ 'ನೀನು ಮಾತ್ರ ಈ ತಪ್ಪು ಮಾಡಬೇಡ, ಅದ್ಯಾರೆ ಬಂದು ಪ್ರೀತಿಸುತ್ತೇನೆಂದರೂ ಒಪ್ಪಿಕೊಳ್ಳಬೇಡ ... ಅನುಕಂಪ ಪಡಬೇಡ.. ಈ ಹಾಳು ಅನುಕಂಪದಿಂದಲೇ ನಾನು ಹೀಗಾಗಿದ್ದು... ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸು ಅವರ ಪ್ರೀತಿಯನ್ನ...' ಎನ್ನುತ್ತಿದ್ದಳು. ಅವಳ ರೋಧನೆಯನ್ನು ನನ್ನಿಂದ ನೋಡಲಾಗದೆ ಅದೆಷ್ಟು ಸಂತೈಸಿದ್ದೇನೋ.... ನೆನಪಾದಾಗಲೆಲ್ಲ ನನ್ನ ಮಡಿಲಲ್ಲಿ ಮಲಗಿ ರೋಧಿಸುತ್ತಿದ್ದಳು... ಅವಳು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಆ ಹುಡುಗನಿಂದ ಬ್ಲಾಕ್ ಮೇಲ್ ಕರೆಗಳು....!ಯಾವುದಕ್ಕೂ ತುಟಿ-ಪಿಟಿಕ್ಕೆನದೇ ಹಲ್ಲು ಕಚ್ಚಿಕೊಂಡಳು...'ಅಬ್ಬಾ ಇವಳ ಹಣೆಬರವೇ' ಎನ್ನುತ್ತಾ ಅವಳನ್ನು ತಬ್ಬಿ ಸಂತೈಸುತ್ತಿದ್ದೆ. ಬರ ಬರುತ್ತಾ ಅವಳು ತೀರ ಕೃಶವಾಗುತ್ತಿದ್ದಳು. ನೋಡಿದವರೆಲ್ಲ ಯಾಕೆ ಹೀಗಾಗಿದ್ದೀಯ ಎಂದು ಕೇಳುವವರೇ.... 'ಇವಳ ಬಾಳ ದೀಪ ಎಲ್ಲಿದೆಯಪ್ಪ'ಎಂದು ದೇವರಲ್ಲಿ ಕೇಳುತ್ತಿದ್ದೆ....ಅವನಿಗೆ ಇವಳ ಕೆಲವು ವೈಯಕ್ತಿಕ ವಿಷಯಗಳನ್ನು ಇವಳ ತೀರ ಹತ್ತಿರದವರಾರೋ ಹೇಳುತ್ತಿದ್ದರಂತೆ. ಅದನ್ನು ಅವನೇ ಹೇಳಿದ್ದನಂತೆ. ಅದು ಯಾರೆಂದು ನಮಗೆ ಕೊನೆಗೂ ತಿಳಿಯಲೇ ಇಲ್ಲ. ಆದರೆ ಅವರು ಮಾತ್ರ ಚೆನ್ನಾಗಿರಲಾರು. ಇವಳು ಕಂಡ ನೋವು, ಇವಳ ಆ ಕ್ಷಣದ ಬಿಸಿಯುಸಿರು ಅವರನ್ನು ಮಾತ್ರ ಚೆನ್ನಾಗಿರಲು ಬಿಡಲಾರದು...!
ಅಂತೂ ಇಂತೂ ದೇವರು ಕಣ್ಣು ತೆರೆದ ಎನಿಸುತ್ತದೆ. ಕ್ರಮೇಣ ಆ ಹುಡುಗನ ಕರೆಗಳು ಕಮ್ಮಿಯಾದವು. ಇವಳೂ ಅದರಿಂದ ಹೊರಗೆ ಬರತೊಡಗಿದಳು. ಅಷ್ಟರಲ್ಲಿ ನನ್ನ ಮದುವೆ ನಿಶ್ಚಯವಾಗಿ ನಾನವಳನ್ನು ಬಿಟ್ಟು ಬರುವ ಕಾಲ ಬಂದಿತ್ತು.. ಇಬ್ಬರೂ ಬೇರೆಯಗುವಾಗ ಅದೆಷ್ಟು ಬೇಸರಿಸಿಕೊಂಡಿದ್ದೆವೋ. ಆದರೆ ಸ್ನೇಹ ಸಾಗರದಿಂದ ಪ್ರೀತಿ ಸಾಗರಕ್ಕೆ ಇಳಿಯಲೇ ಬೇಕಿತ್ತಲ್ಲ... ಆದರೆ ಅವಳೀಗ ಸಂತೋಷವಗಿದ್ದಾಳಲ್ಲ ಎಂಬ ಖುಷಿ ಅವಳನ್ನು ಬಿಡುವ ಬೇಸರಕ್ಕಿಂತ ಹೆಚ್ಚಿತ್ತು. ಅದರೂ ಕೆಲವೊಮ್ಮೆ ನೆನಪಾದಾಗಲೆಲ್ಲ 'ಹಿಂಗಾಯ್ತಲ್ಲೇ ನನ್ನ ಬಾಳಲ್ಲಿ, ಏನೂ ಮಾಡದೆ ಎಲ್ಲರಿಂದ ಮಾತು ಕೇಳಬೇಕಾಯ್ತಲ್ಲೇ' ಎನ್ನುತ್ತಿರುತ್ತಿದ್ದಳು.
ನಾನು ಮದುವೆಯಾಗಿ ಇತ್ತ ಬಂದಮೇಲೆ ಅವಳಿಗೂ ಅನುರೂಪನಾದ ಹುಡುಗ ಸಿಕ್ಕಿದ. ಅವನಲ್ಲಿ ತನ್ನೆಲ್ಲ ಕಥೆಯನ್ನು ಹೇಳಿಕೊಂಡು, 'ಇದೆಲ್ಲಾ ತಿಳಿದೂ ನನ್ನ ತಪ್ಪಿಲ್ಲ ಎಂಬ ನಂಬಿಕೆಯಿದ್ದರೆ, ಕೊನೆಗೊಂದು ದಿನ ನಮ್ಮ ಜೀವನದಲ್ಲಿ ಅನುಮಾನದ ಅಲೆ ಸುಳಿಯದಿದ್ದರೆ ಮಾತ್ರ'......... ಎಂದಳಂತೆ..... ಅವನು ತುಂಬಾ ಒಳ್ಳೆಯ ಹುಡುಗ. ಇವಳ ಗುಣವನ್ನು ಮೆಚ್ಚಿ ಮದುವೆಯಾದ.
ಈಗ ಗಂಡ ಹೆಂಡತಿ ತುಂಬಾ ಚೆನ್ನಾಗಿದ್ದಾರೆ. ಅವನಿಗೆ ಇವಳ ನಗು ಇಷ್ಟವಂತೆ, ಇವಳ ಕಣ್ಣು ಚೆಂದವಂತೆ. ಅವಳ ಬಾಯಲ್ಲಿ ನೆಮ್ಮದಿಯ ನುಡಿಗಳು, ತುಟಿಯಲ್ಲಿ ನಗು ಕಂಡಾಗ ಅದೇನೋ ನೆಮ್ಮದಿ ನನಗೂ.. ಅವರಿಬ್ಬರೂ ನೂರ್ಕಾಲ ಹೀಗೆಯೇ ಬದುಕಿ ಬಾಳಲಿ.. ಹೊಸ ಸಂವತ್ಸರ ಅವರಿಗೆ ಮತ್ತಷ್ಟು ಸಂತಸ ತರಲಿ..... ಲವ್ ಯು ಕಣೆ......
ಕಾವ್ಯಾ :)