ಇತ್ತೀಚಿನ ದಿನಗಳಲ್ಲಿ ಒಂದು ಯೋಚನೆ ಬಹುವಾಗಿ ತಲೆ ಕೊರೆಯುತ್ತಿದೆ. ಮನುಷ್ಯನ ಅಗತ್ಯತೆಗಳು ಅದೆಷ್ಟು ಬೆಳೆಯುತ್ತ ಹೋಗುತ್ತಿದೆಯಲ್ಲ ಎಂದು ಅಚ್ಚರಿಯಾಗುತ್ತಿದೆ. ಜೀವಿಸಲು ಅತ್ಯವಶ್ಯವಾದ ಗಾಳಿ, ನೀರು, ಬಟ್ಟೆ, ಆಹಾರ, ವಸತಿಗಳಿಂದ ಹೊರಟ ಯಾನ ಇದೀಗ ಎಲ್ಲಿ ಬಂದು ನಿಂತಿದೆ....! ಆಧುನಿಕತೆಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ ಹೆಸರಿನಲ್ಲಿ ಮನುಷ್ಯ ಬಹುವಾಗಿ ಬದಲಾಗಿದ್ದಾನೆ. ಅಗತ್ಯತೆಗಳು ಹೆಚ್ಚುತ್ತಿವೆ ಎನ್ನುವುದಕ್ಕಿಂತ ಲೋಭಿಯಾಗುತ್ತಿದ್ದಾನೆ ಎನ್ನಬಹುದೇನೋ.....
ಹಳ್ಳಿಗಳಲ್ಲಿ ಮೂರ್ಖರ ಪೆಟ್ಟಿಗೆ ಎಂದೇ ಕರೆಯಲ್ಪಡುತ್ತಿದ್ದ ಟಿವಿಗೆ ನಾವೆಷ್ಟು ಒಗ್ಗಿಕೊಂಡುಬಿಟ್ಟಿದ್ದೇವೆಂದರೆ ಪ್ರಸಾರ ವಾಹಿನಿಗಳ ಭೂಪರು ಮಿಲಿಯನೇರ್ ಗಳಾಗುತ್ತಿರುವ ಮಟ್ಟಿಗೆ...! ಇಂದಿನ ದಿನಗಳಲ್ಲಿ ಟಿವಿ ಇಲ್ಲ ಮನೆಯಲ್ಲಿ ಎಂದರೆ 'ಅಬ್ಬಾ! ಟಿವಿ ಇಲ್ಲದೆ ಅದು ಹೇಗೆ ಬದುಕುತ್ತಾರೋ!' ಎಂದು ಕೇಳಿದ ಜನ ಬಾಯ್ಬಿಡುತ್ತಾರೆ. ಸುದ್ದಿಗಾಗಿ ಟಿವಿ ಬೇಕೆಂದೇನು ಇಲ್ಲ. ಪತ್ರಿಕೆಗಳನ್ನು ಓದಿ ಸುದ್ದಿ ತಿಳಿಯಬಹುದು ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಮೂರ್ಖರಂತೆ ತೋರಿಸಿದ್ದನ್ನೆಲ್ಲಾ ನೋಡುವ ನಮ್ಮಂಥವರಿಂದ ವಾಹಿನಿಯವರು ದುಡ್ಡು ಸಂಪಾದಿಸಬಹುದೇ ವಿನಃ ಬೇರೇನೂ ಉಪಯೋಗವಿಲ್ಲ. ಮೂರು - ನಾಲ್ಕು ವರ್ಷದ ಹಸುಳೆಗಳ ಮೇಲೆ ಎರಗಿದ ಕಾಮಾಂಧರ ಸುದ್ದಿಗಳನ್ನೇ ವಾರಗಟ್ಟಲೆ ಬಿತ್ತರಿಸುವ ಮಾಧ್ಯಮಗಳಿಂದ ವಿಕೃತ ಮನಸ್ಸಿನವರ ಕುತೂಹಲ ಕೆರಳಿ ಅಂತಹ ಪ್ರಸಂಗಗಳು ಜಾಸ್ತಿಯಾಗುತ್ತಿವೆ ಎಂಬುದು ನನ್ನ ಅಭಿಮತ.ಇಲ್ಲದಿದ್ದರೆ ಹಸುಳೆಗಳ ಮೇಲಿನ ಇಂತಹ ಹೇಯ ಕೃತ್ಯಗಳನ್ನು ಊಹಿಸಲು ಸಾಧ್ಯವೇ..?! ಇರುವ ಕೆಲಸವನ್ನೆಲ್ಲಾ ಬಿಟ್ಟು ತನ್ನ ಮುಂದೆ ಕೂರಿಸಿಕೊಳ್ಳುವ ಈ ಟಿವಿ ಅಗತ್ಯವಲ್ಲ ನಿಜ....!
ಇಂದಿನ ದಿನಗಳಲ್ಲಿ ನಮ್ಮ ಕೆಲಸಗಳನ್ನು ತಗ್ಗಿಸಲು ಎಲ್ಲಾ ಕೆಲಸಗಳಿಗೂ ಮಶಿನ್ ಗಳು ಬಂದಿವೆ. ರುಬ್ಬುವ ಕಲ್ಲುಗಳು ಮೂಲೆ ಸೇರಿವೆ. ಅರೆದು ಮಾಡಿದ ಅಡುಗೆ ರುಚಿಯನ್ನು ಮಿಕ್ಸರ್ / ಗ್ರೈಂಡರ್ ಗಳು ಮುಚ್ಚಿ ಹಾಕಿವೆ. ಎಲ್ಲರ ಮನೆಯಲ್ಲೂ ಬಟ್ಟೆ ತೊಳೆಯಲು ಮಶಿನ್, ನೆಲ ಒರೆಸಲು ಕೋಲುಗಳು ಬಂದಿವೆ. ಪರಿಣಾಮ ನಾವು ಮೈ ಬೆಳೆಸುತ್ತಿದ್ದೇವೆ....! ಮನೆಯಲ್ಲೇ ಮೈ ಬಗ್ಗಿಸಿ ನೆಲ ಒರೆಸಿ, ಬಟ್ಟೆ ತೊಳೆಯುವುದೇ ಮುಂತಾದ ಕೆಲಸಗಳಿಂದ ತಾನೇ ತಾನಾಗಿ ಕರಗುತ್ತಿದ್ದ ಕೊಬ್ಬನ್ನು ಕರಗಿಸಲು ಮೇಲಿಂದ ದುಡ್ಡು ಕೊಟ್ಟು ಜಿಮ್ ಸೇರುವ ಕಾಲ ಬಂದಿದೆ.
'ಪ್ರತಿ ಮನೆಯಲ್ಲೂ ಎಷ್ಟು ಜನರಿದ್ದಾರೋ ಎಲ್ಲರಿಗೂ ಒಂದೊಂದು ಬೈಕ್ ಇರಲೇಬೇಕು. ಜೊತೆಗೆ ಸಂಬಂಧಿಕರೆಲ್ಲರೂ ಕಾರ್ ತೆಗೆದುಕೊಂಡು ಓಡಾಡುವಾಗ ನಮ್ಮ ಬಳಿ ಇಲ್ಲದಿದ್ದರೆ ಏನು ಚಂದ... ಅವರೆದುರು ಕೀಳಾಗುವುದಿಲ್ಲವೇ..?!' - ಇಂತಹ ಮನಸ್ಥಿತಿಗಳ ಜೊತೆ ಜೊತೆಗೆ ಟ್ರಾಫಿಕ್ ಕೂಡ ಬೆಳೆಯತೊಡಗಿತು. ಯಾವುದೇ ವಸ್ತುವನ್ನು ಕೊಳ್ಳುವಾಗ ಅವಶ್ಯಕವೇ ಎಂದು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲವಾಗಿದೆ. ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚುತ್ತಿದೆ. ಬೇರೊಬ್ಬರ ಮಾತಿಗೆ ತಲೆಕೆಡಿಸಿಕೊಳ್ಳದೆ ನಾವೇ ವಿವೇಚಿಸಿ ನೋಡಿದರೆ ನಮ್ಮ ಅಗತ್ಯತೆಗಳು ನಮಗೆ ತಿಳಿಯುತ್ತವೆ.
ನಾನು ಈ ವಿಚಾರದ ಕುರಿತು ಚಿಂತಿಸುತ್ತಿರಲು ಕಾರಣವಿದೆ. ಊರಿನಲ್ಲಿ ನಮ್ಮ ಮನೆಗೆ ಒಬ್ಬರು ಪುರೋಹಿತರು ಬರುತ್ತಾರೆ. ಒಳ್ಳೆಯ ಜ್ಞಾನವಂತರು, ಸಂಸ್ಕಾರವಂತರು ಜೊತೆಗೆ ಅಪ್ಪನಿಗೆ ಆತ್ಮೀಯರು, ಹಿತೈಷಿಗಳು. ನನ್ನನ್ನೂ ಸೇರಿ ನನ್ನ ಸೋದರತ್ತೆಯರ ಗುಂಪು ಸೇರಿದರೆ ಹರಟೆ, ಹಾಸ್ಯ, ನಗು ಮುಗಿಯುವುದೇ ಇಲ್ಲ. ಇದೆ ನಮ್ಮ ಹಾಸ್ಯ ನೋಡಿದ ಆ ಪುರೋಹಿತರು ನೀವೆಲ್ಲರೂ ಕೂಡಿ ನಮ್ಮ ಮನೆಗೆ ಒಮ್ಮೆ ಬನ್ನಿ, ಒಳ್ಳೆಯ ಮಾತು-ಕಥೆ ಆಡಿ ಸಮಯ ಕಳೆದು ಬರಬಹುದು ಎಂದು ಆತ್ಮೀಯವಾಗಿ ಆಮಂತ್ರಿಸಿದರು. 'ನಾವು ಬಂದೇ ಬಿಡುತ್ತೇವೆ, ಆಮೇಲೆ ನಿಮಗೇ ತಲೆಕೆಟ್ಟು ನಮ್ಮನ್ನು ಆದಷ್ಟು ಬೇಗ ಸಾಗಹಾಕುತ್ತೀರ' ಎಂದಾಗ... ಅವರು 'ಹಾಗೇನಿಲ್ಲ ಚೆನ್ನಾಗಿರುತ್ತದೆ ಬನ್ನಿ, ಆದರೆ ನಿಮಗೇ ಬೇಜಾರಾಗಿ ಬೇಗ ಹೊರಡಬಹುದು.... ಏಕೆಂದರೆ ನಮ್ಮ ಮನೆಯಲ್ಲಿ ಒಂದೂ ಕುರ್ಚಿಯಿಲ್ಲ.. ಭಾರತೀಯ ಆಸನ ಮಾತ್ರ.... ಟಿವಿ ಕೂಡ ಇಲ್ಲ, ನಮಗೆ ಅಗತ್ಯವಿಲ್ಲ ಎನಿಸುವ ಯಾವುದೇ ವಸ್ತುಗಳು ನಮ್ಮಲ್ಲಿಲ್ಲ' ಎಂದು ನಕ್ಕರು... ಅಗತ್ಯವೇ ಇಲ್ಲದ ವಸ್ತುಗಳಿಂದ ಏನು ಪ್ರಯೋಜನ ಎಂಬುದು ಅವರ ವಾದ. ಅವರ ವೈಚಾರಿಕತೆ ನನಗೆ ಇಷ್ಟವಾಯ್ತು. ಅವರ ಜೊತೆ ಮಡದಿ ಮತ್ತು ಮಕ್ಕಳೂ ಕೂಡ ಅವರ ವಿಚಾರಧಾರೆಗಳಿಗೆ ತಕ್ಕಂತೆಯೇ ಇರುವ ಪರಿ ಆಶ್ಚರ್ಯವನ್ನೂ ಮೂಡಿಸಿತು. ಯಾವುದೇ ಸಭೆ - ಸಮಾರಂಭಾಕ್ಕಾದರೂ ಆಡಂಬರವಿಲ್ಲದೆ ಸರಳ ಉಡುಗೆಯಲ್ಲೇ ಹೋಗುವ ಹೆಣ್ಣು ಅವರ ಮಡದಿ. ಮಕ್ಕಳು ಮನೆಯಲ್ಲೇ ಗುರುಕುಲ ಅಭ್ಯಾಸ ಮಾಡುತ್ತಿದ್ದಾರಂತೆ. ಶಾಲೆಗೆ ಹೋಗುವುದು ಜ್ಞಾನಾರ್ಜನೆಗೆ ಅಂದ ಮೇಲೆ ಮನೆಯಲ್ಲೇ ಕಲಿತರೇನು ಎಂಬುದು ಅವರ ಭಾವನೆ. ಶಾಲೆಯ ಪಠ್ಯಗಳ ಜೊತೆ ಭಾರತ, ರಾಮಾಯಣ, ಭಗವದ್ಗೀತೆಗಳೂ ಅವರಿಗೆ ನಿರರ್ಗಳ. ಈಗಿನ ಕಾಲದಲ್ಲಿ ಇಂಥಹ ವ್ಯಕ್ತಿತ್ವದವರು ಇದ್ದಾರಲ್ಲ ಎಂಬ ವಿಷಯ ನನಗೆ ಬಹುವಾಗಿ ಕಾಡಿತು.
ಈ ಕೊಳ್ಳುಬಾಕತೆಯನ್ನು ನಾವು ಅಳವಡಿಸಿಕೊಂಡಿದ್ದಲ್ಲದೆ ನಮ್ಮ ಮಕ್ಕಳಿಗೂ ಕಲಿಸುತ್ತಿದ್ದೇವೆ. ಚಿಕ್ಕವರಿರುವಾಗಲೇ ಅವರಿಗೆ ಕೇಳಿದ್ದೆಲ್ಲ ಕೊಡಿಸುವ ಬದಲು ಅಗತ್ಯ - ಅನಗತ್ಯಗಳ ತಿಳುವಳಿಕೆ ಕೊಡುವುದು ಸೂಕ್ತವಲ್ಲವೇ??
ಕಾವ್ಯಾ :)

