Friday, September 30, 2011


 ಅವನು ತಂದೆ ತಾಯಿಯನ್ನು ಕಡೆಗಣಿಸಿ ತನ್ನ ಹೆಂಡತಿ, ಮಗನೊಡನೆ ಐಷಾರಾಮಿಯಾಗಿ ಬೇರೆಡೆ ವಾಸಿಸುತ್ತಿದ್ದ, ಅದೂ ಸತ್ತು ಹೋದ ತನ್ನ ಅಣ್ಣನ ಆಸ್ತಿಯಲ್ಲಿ... ಅಗಲಿದ ಮಗನ ಆಸ್ತಿ ತನ್ನದೆಂದು ತಿಳಿದೂ ಹೆತ್ತೊಡಲು ಉಳಿದೊಬ್ಬ ಮಗನ ಸಂತೋಷವನ್ನು ಕಿತ್ತುಕೊಳ್ಳದೆ ಕಷ್ಟವನ್ನು ತುಟಿ ಕಚ್ಚಿ ಸಹಿಸಿತ್ತು... 
       ಭಯಂಕರ ಅರ್ಬುದ ರೋಗದಿಂದ ಕೆಲವೇ ದಿನಗಳಲ್ಲಿ ತಾನು ಸಾಯಲಿರುವೆನೆಂದು ತಿಳಿದ ತಂದೆ ತನ್ನೆಲ್ಲ "ಸ್ವಯಾರ್ಜಿತ ಆಸ್ತಿ", ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಹೆಂಡತಿಯ ಹೆಸರಿಗೆ ಬರೆದು, ಅವಳ ಕೊನೆಕಾಲದಲ್ಲಿ ಅದನ್ನು ತನ್ನಿಷ್ಟದವರಿಗೆ ಕೊಡಬಹುದೆಂದು ಬರೆದು ಇಹ ಲೋಕ ತ್ಯಜಿಸಿದ್ದ.. ಜೀವವಿದ್ದಾಗ ನೋಡಿಕೊಳ್ಳದ ಮಗ ವಿಷಯ ತಿಳಿದು ಓಡೋಡಿ ಬಂದು 'ಕಣ್ಣೀರು' ಸುರಿಸಿ ತಂದೆಯ ಕಾರ್ಯ ಮುಗಿಸಿ ತಾಯಿಯನ್ನು ಇನ್ನಿಲ್ಲದ ಆಸ್ಥೆಯಿಂದ 'ಇನ್ನು ಒಬ್ಬಳೇ ಇರಬೇಡ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ನಮ್ಮೊಡನೆಯೇ ಇರುವಂತೆ ಬಾ...' ಎಂದು ಕರೆದೊಯ್ದ.... 

***********


  ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಏನೇ ಮಾಡಿದರೂ ಒಟ್ಟಿಗೆ ಆಗಬೇಕು. ಅವರ ಮಧ್ಯೆ ಪ್ರೀತಿ ಎಂಬುದರ ಅರಿವೇ ಇಲ್ಲದ ಒಡನಾಟ. ಅದೊಂದು ದಿನ ಅವಳಿಗೆ ಹುಡುಗ ನೋಡಲು ಬರುವುದಾಗಿ ತಿಳಿಸಿದರು. ಅವಳು ಬೇಸರದಿಂದಲೇ ಅವನಿಗೆ ಹೇಳಿದ್ದಳು. ಅವನು, ತನ್ನನ್ನು ಯಾವುದೊ ಹುಡುಗಿ ನೋಡಲು ಒತ್ತಾಯ ಮಾಡುತ್ತಿದ್ದಾರೆ ಅಮ್ಮ ಎಂದು ಹೇಳಿದ್ದ. ಇಬ್ಬರೂ ಇಷ್ಟವಿರದ ಕಾರಣ ಯಾರು ನೋಡಲು ಬರುವವರು ಯಾರೆಂದೂ ಕೇಳಿರಲಿಲ್ಲ..
     'ಆ ದಿನ' ಅನ್ಯಮಸ್ಕರಾಗಿಯೇ ತಲೆಯೆತ್ತಿ ನೋಡಿದರೆ.... ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ... ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಣದ ದೇವರಿಗೆ ಮನದಲ್ಲೇ ವಂದಿಸುತ್ತಿದ್ದಾರೆ....

**********

ಕಾವ್ಯಾ 

Monday, September 12, 2011


(ಭಾಗ ೨)

ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರಲೇಬೇಕಲ್ಲ...!

       ಮಾನಸಿಕ ತುಮುಲಗಳಿಂದ ಕೂಡಿದ ಮನಸ್ಸು ಎಷ್ಟು ದಿನ ತಾನೇ ಸ್ಫೋಟಗೊಳ್ಳದೆ ಇರಲು ಸಾಧ್ಯ.... ಆ ದಿನ ಶೀಘ್ರದಲ್ಲೇ ಬಂತು. ಮನಸ್ಸಿನ ಭಾವನೆಗಳು ಕಟ್ಟೊಡೆದ ನದಿಯ ಪ್ರವಾಹದಂತೆ ಹರಿಯಲಾರಂಭಿಸಿತು. ಭಾವನೆಗಳು ಮಾತಾದವು. ಮನಸ್ಸಿನಲ್ಲಿ ಅರಿವಿಲ್ಲದೇ ಮೊಳೆತ ಪ್ರೀತಿ ಬೆಳೆದು ಗಟ್ಟಿಯಾಗಿ ಬೇರೂರಿಯೇ ಬಿಟ್ಟಿತ್ತು. ಅಂತರಂಗದಳಲು ಬಹಿರಂಗವಾಗತೊಡಗಿತು. 
       ಇಬ್ಬರೂ ಕುಳಿತು ಚರ್ಚಿಸಿದರು. ಅದೆಲ್ಲಿ ಪ್ರೀತಿ ಮೂಡಿತು... ಅದೇಕೆ ನಮ್ಮ ಮನ ತಿರುಗಿತು.. ಅದು ಹೇಗೆ ಸ್ನೇಹ ಪ್ರೀತಿಯಾಯಿತು... ಇದು ಕೇವಲ ಸ್ನೇಹದ ಪ್ರೀತಿಯೋ ಅಥವಾ ಪ್ರೇಮದ ಪ್ರೀತಿಯೋ...! ಮನ ಗೊಂದಲದ ಗೂಡಾಯಿತು. ಮುಂದಿನ ದಾರಿ ಕಾಣದಾಯಿತು. ಹುಡುಗ-ಹುಡುಗಿಯ ಮಧ್ಯ ಸ್ನೇಹ, ಮಮತೆ, ಅವಲಂಬನೆ, ಪರಸ್ಪರ ಕಾಳಜಿ ಗಾಢವಾದಂತೆ ಅಲ್ಲಿ ಸ್ನೇಹವನ್ನು ಮಾತ್ರವೇ ಉಳಿಸಿಕೊಳ್ಳಲು ಅಸಾಧ್ಯ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಯಿತು. ಗಾಢ ಸ್ನೇಹದಲ್ಲಿ ಪ್ರೀತಿಯ ಅಂಕುರ ಸಹಜವೆಂಬುದು ಇಬ್ಬರಿಗೂ ಮನವರಿಕೆಯಾಯಿತು.
       ಮುಂದೇನು ಎಂದು ಬಹುವಾಗಿ ಯೋಚಿಸಿದರು.  ಮನೆಯವರನ್ನು ಒಪ್ಪಿಸಲು ಸಾಧ್ಯವಿಲ್ಲ ತಾವು ಬೇರೆಯಾಗುವುದೇ ಸರಿ ಎಂದುಕೊಂಡರು. ಸುಮ್ಮನೆ ಮಾನಸಿಕ ತುಮುಲಗಳಿಗೆ ಒತ್ತು ನೀಡಿದರೆ ಅವು ಬಹು ಬೇಗ ಸ್ಫೋಟಗೊಳ್ಳುತ್ತವೆ. ಗೊಂದಲದ ಗೂಡಾದ  ಮನಸ್ಸಿಗೆ ಮೊದಲಿನ ಮಾತು, ನಗು, ಹಾಸ್ಯ ಅಸಾಧ್ಯವೆನಿಸತೊಡಗಿತು. ಇಬ್ಬರಲ್ಲೂ ಮೌನವೇ ಮಾತಾಯಿತು. ಸ್ನೇಹದಲ್ಲಿದ್ದ ಖುಷಿ ಪ್ರೀತಿಯಲ್ಲಿ ಸಿಗುತ್ತಿಲ್ಲ ಎಂದುಕೊಂಡರು. ಕೊನೆಗೆ ಇಬ್ಬರೂ ಮೊದಲಿನಂತಾಗೋಣ ಎಂದು ಸಂಕಲ್ಪಿಸಿದರು.... ಆದರೆ ನಾವು ಅಂದುಕೊಂಡಂತೆಲ್ಲ ಮನಸ್ಸು ಕೇಳುತ್ತದೆಯೇ...?! ಬರ ಬರುತ್ತಾ ಇಬ್ಬರಿಗೂ ತಮ್ಮ ನಗು, ಮಾತು ಕೃತಕವೆನಿಸತೊಡಗಿತು. ಪ್ರೀತಿಯನ್ನು ಬಿಡುವುದು ಅಸಾಧ್ಯವೆನಿಸತೊಡಗಿತು. ದೂರಾಗುತ್ತಿದ್ದೇವೆ ಎನ್ನುತ್ತಲೇ ಮನಸ್ಸು ಮತ್ತಷ್ಟು ಹತ್ತಿರವಾಗುತ್ತಿತ್ತು.... 


       ಅನುರಾಗವೆಂಬುದು ಎಲ್ಲಿ, ಯಾವಾಗ, ಯಾರಲ್ಲಿ, ಹೇಗೆ ಮೂಡುತ್ತದೆ ಎಂದು ತಿಳಿಯುವುದು ಅಸಾಧ್ಯ. ಎಷ್ಟೋ ಪ್ರೇಮ ಅದೆಷ್ಟೋ ರೀತಿಯಲ್ಲಿ ಕೊನೆಯಾಗುತ್ತದೆ. ನಾವೇಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು, ಹಣೆಬರಹವನ್ನು ಬಲ್ಲವರಾರು... ಎಂದು ನಿರ್ಧರಿಸಿ, ಊರಿಗೆ ಹೋದಾಗ ಅವನು ಮನೆಯಲ್ಲಿ ಹೇಳಿಯೂ ಬಿಟ್ಟನು... ಇತ್ತ ಏನಾಗುತ್ತದೋ ಎಂದು ಉಸಿರು ಬಿಗಿ ಹಿಡಿದು ಕಾದಿದ್ದ ಅವಳಿಗೆ ಸಿಹಿ ಸುದ್ದಿ ಕಾದಿತ್ತು. ಅವಳು ಖುಷಿಯಿಂದ ಕುಣಿದೇ ಬಿಟ್ಟಿದ್ದಳು... ದಿನಗಳೆದಂತೆ ಅವಳೂ ಕೂಡ ಮನೆಯಲ್ಲಿ ಒಪ್ಪಿಸುವಲ್ಲಿ ಯಶಸ್ವಿಯಾದಳು.. 
       ಅಂತೂ ಸ್ನೇಹ ಪ್ರೀತಿಯಾಗಿ ಮುಂದುವರೆದು ನಮ್ಮ ಕಥಾನಾಯಕನಿಗೆ ಈಗ ಅವಳಿ - ಜವಳಿ ಮಕ್ಕಳು... 



ಕಾವ್ಯಾ :)