(ಭಾಗ ೧)
ಅವರಿಬ್ಬರ ನಡುವೆ ಅಗಾಧ ಸ್ನೇಹ... ಅವಳು ತುಂಬಾ ಮಾತಿನ ಹುಡುಗಿ. ಅವನದು ಮಾತು ಕಮ್ಮಿ. ಅವಳು ಮಾತ್ರ ಸದಾ ಮಾತು...ಮಾತು...ಮಾತು... ಅವನೂ ಕೂಡ ಎಂದೂ ಬೇಸರಿಸದೇ ಅವಳ ಮಾತನ್ನು ಕೇಳುತ್ತಿದ್ದ. ಅವಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದ. ಅವಳಿಗೋ ಅವನ ಮಾತೇ ಕೊನೆಯದು. ಅವನು ತನ್ನ ಅಳಲನ್ನು ಅವಳಷ್ಟು ತೋಡಿಕೊಳ್ಳದಿದ್ದರೂ, ಅವಳು ಅವನ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಿದ್ದಳು. ಮಾತನಾಡಿಸಿ ಅದೂ ಇದೂ ಪ್ರಶ್ನೆ ಕೇಳಿ ಅವನ ಮನಸಿನ ಮಾತನ್ನು ಹೊರಗೆಡವುತ್ತಿದ್ದಳು. ಅವನಿಗೂ ಅವಳ ಮಾತು, ನಗು ಎಂದರೆ ಅದೇನೋ ಸಂತೋಷ.... ಒಂದೇ ಒಂದು ದಿನ ಅವಳು ಸ್ವಲ್ಪ ಮಾತು ಕಮ್ಮಿ ಮಾಡಿದ್ದಾಳೆ ಎನಿಸಿದರೂ ಸಾಕು ಅವನಿಗೇನೋ ಕಸಿವಿಸಿ. 'ಏನಾಯ್ತೆ... ಮಾತಾಡೇ... ಸ್ವಲ್ಪ ನಗೇ... ನಿನ್ನ ನೋಡೋಕಾಗ್ತಿಲ್ಲ...' ಎನ್ನುತ್ತಿದ್ದ.
ಬರ ಬರುತ್ತಾ ಅವನೂ ಕೂಡ ತುಂಬಾ ಮಾತನಾಡಲು ಕಲಿತ. ಅವಳೊಡನೆ ಮಾತ್ರವೇ ಎನ್ನುವಂತೆ ಮಾತನಾಡತೊಡಗಿದ. ತನ್ನ ಮನದ ನೋವನ್ನು ತೋಡಿಕೊಳ್ಳಲು ಕಲಿಯತೊಡಗಿದ. ಇಬ್ಬರೂ ಮಾತಿಗೆ ಕುಳಿತರೆ ಎಲ್ಲಾ ಆಗು-ಹೋಗುಗಳ ಬಗ್ಗೆ, ಅವಳ ಆಫೀಸಿನ ಬಗ್ಗೆ, ಅವನ ಆಫೀಸಿನ ಬಗ್ಗೆ, ರಾಜಕೀಯ, ಮನೆ ಸಮಸ್ಯೆಗಳು.... ಹೀಗೇ ಎಲ್ಲವೂ ಅವರ ಬಾಯಿಗೆ ಸಿಲುಕುತ್ತಿದ್ದವು. ಒಮ್ಮೊಮ್ಮೆ ರಾಜಕೀಯದ ವಿಷಯಕ್ಕೆ ವಾದ ಮಾಡಿ, ಜಗಳವಾಡಿ ಅತ್ತ-ಇತ್ತ ಮುಖ ಮಾಡಿ ಕುಳಿತುಬಿಡುತ್ತಿದ್ದರು. ಹೆಚ್ಚಿನ ವಿಷಯಗಳಲ್ಲಿ ಅವಳೇ 'ಹೋಗ್ಲಿ ಬಿಡೋ.. ನೀನೆ ಸರಿ.. ಖುಶೀನಾ... ಸುಮ್ಮನೆ ವಾದ ಬೇಡಾ..' ಎಂದು ರಾಜಿಯಾಗುತ್ತಿದ್ದಳು. ಅದೆಷ್ಟೋ ಸಾರಿ ನೀ ನನಗೆ ಆ ವಿಷಯ ಹೇಳಿಲ್ಲ, ಈ ವಿಷ್ಯ ಹೇಳಿಲ್ಲ ಎಂದು ಇದೊಂದು ವಿಷಯಾನ ಹೇಳೋಕೆ ಅನ್ನುವಷ್ಟು ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ಮೂತಿ ಊದಿಸಿಕೊಂಡು ಕುಳಿತು ಬಿಡುತ್ತಿದ್ದರು. ಅದೆಷ್ಟು ಬೇಗ ಬೇಗ ಜಗಳವದಿದ್ದರೋ ಅಷ್ಟೇ ಬೇಗ ರಾಜಿಯಾಗಿ ನಗುತ್ತಿದ್ದರು. ಒಬ್ಬರಿಗೊಬ್ಬರು ಒಂದು ದಿನ ಮಾತಾಡಲು ಸಿಗದಿದ್ದರೂ ದಿನ ಕಳೆಯುವುದು ಕಷ್ಟ ಎನ್ನುವಷ್ಟು ಸ್ನೇಹ.... ಬರಿದೇ ಸ್ನೇಹ... ನಿಷ್ಕಲ್ಮಷ ಸ್ನೇಹ....ಬಿಟ್ಟಿರಲಾರದ ಸ್ನೇಹ...
ಅವಳೇ ಎಷ್ಟೋ ಬಾರಿ ಕೇಳಿದ್ದಳು ಅವನಲ್ಲಿ... 'ಎಲ್ರೂ ಹೇಳ್ತಾರೆ, ಹುಡ್ಗಾ ಹುಡ್ಗಿ ಕೊನೆ ತನಕ ಬರೀ friends ಆಗಿರೋಕೆ ಆಗಲ್ವಂತೆ ಹೌದೇನೋ...? ನಾವು ಇದ್ದು ತೋರ್ಸೋಣ ಅಲ್ವ...'
ಅವನು 'ಹ್ಞೂ ಎಲ್ರೋ ಹೇಳ್ತಾರೆ.. ಆದ್ರೆ ಅದೆಲ್ಲ ಅವರವರ ಮನಸಿಗೆ ಸಂಬಂಧ ಪಟ್ಟಿದ್ದು ಕಣೆ... ಮನಸಲ್ಲಿ ಬೇರೆ ಆಲೋಚನೆ ಬರದೆ ಇರೋ ಥರ ಇದ್ರೆ, ಕೇವಲ friends ಅನ್ಕೊಂಡ್ರೆ, ಅದನ್ನೇ ತಲೇಲಿ ಇಟ್ಕೊಂಡ್ರೆ ಖಂಡಿತ ಇರ್ಬೋದು....'
ಅವಳು ಪದೇ ಪದೇ ಅವನ ಬಳಿ ಅದನ್ನ ಕೊಡ್ಸು, ಇದನ್ನ ಕೊಡ್ಸು, ನಂಗೆ ಅದನ್ನ ತಿನ್ನಬೇಕು ಕೊಡ್ಸು ಎಂದು ಹಠ ಮಾಡುತ್ತಿದ್ದಳು... ಅವನೂ ಎಂದೂ ಬೇಸರಿಸದೇ ಕುಶಿಯಿಂದ ಕೊಡಿಸುತ್ತಿದ್ದ. ಅವಳು ಪ್ರೀತಿಯಿಂದ ತಿನ್ನುವುದನ್ನು ನೋಡಿ ಖುಷಿ ಪಡುತ್ತಿದ್ದ. ಪ್ರತಿ ದಿನ ಅದೆಷ್ಟು ಹೊತ್ತು ಏನು ಮಾತಾಡ್ತಾರೋ ಎಂದು ಬೇರೆಯವರು ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಮಾತಾಡುತ್ತಿದ್ದರು. ಎಷ್ಟೋ ಬಾರಿ ಅವರಿಗೇ ಅನ್ನಿಸಿದ್ದುಂಟು, 'ಅದೇನೋ ಮಾತಡ್ತೀವೋ ಏನೋ.. ಈ ಹಾಳಾದ ಮಾತು ಮುಗಿಯೋದೇ ಇಲ್ಲಾ...!!' ಎಂದು. ಅಷ್ಟಾದರೂ ಒಮ್ಮೆಯೂ ಕೂಡ ಅವರ ಮಧ್ಯೆ ಸ್ನೇಹಕ್ಕೆ ಹೊರತಾದ, ಸ್ನೇಹವನ್ನು ದಾಟಿದ ಯಾವುದೇ ವಿಷಯ ಸುಳಿಯಲೇ ಇಲ್ಲಾ... ಏನೇ ಆಗಲಿ ಹೋಗಲಿ ಅವಳು ಮೊದಲು ಹೇಳುತ್ತಿದ್ದುದು ಅವನಿಗೆ....
ಬರ ಬರುತ್ತಾ ಅದೆಷ್ಟು ಹಚ್ಚಿಕೊಂಡುಬಿಟ್ಟರೆಂದರೆ ಅವಳು ಬೇರೊಬ್ಬ ಗೆಳತಿ-ಗೆಳೆಯರೊಡನೆ ಜಾಸ್ತಿ ಮಾತಾಡಿದರೆ ಅವನಿಗೆ ಸಿಟ್ಟು, ಅವನು ಯಾರೋ ಹುಡುಗಿಯ ಬಳಿ ಹರಟಿದನೆಂದರೆ ಇವಳಿಗೆ ಸಿಟ್ಟು ಬರುವಷ್ಟರ ಮಟ್ಟಿಗೆ...!
ಅವಳ ಮನೆಯಲ್ಲಿ ವರಾನ್ವೇಷಣೆ ಪ್ರಾರಂಭವಾಯಿತು. ಪ್ರತೀ ಹಂತದಲ್ಲೂ ಅವಳು ಅವನಿಗೆ ತಿಳಿಸುತ್ತಿದ್ದಳು. ಅವನ ಅಭಿಪ್ರಾಯಕ್ಕೂ ಮನ್ನಣೆ ಕೊಡುತ್ತಿದ್ದಳು. ಮದುವೆಯಾದ ಮೇಲೆ ಈ ಸ್ನೇಹದ ಗಾಢತೆಯನ್ನು ಉಳಿಸಿಕೊಳ್ಳಲಾಗದಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದರು ಆಗಾಗ.
ಇದ್ದಕ್ಕಿದ್ದಂತೆ ಯಾರಿಗೆ ಏನಾಯಿತೋ.. ಪದೇ ಪದೇ ಜಗಳ, ಮನಸ್ತಾಪಗಳು.... possessiveness ಇಬ್ಬರಿಂದಲೂ ಹೊರ ಹೊಮ್ಮತೊಡಗಿತು.... ಮನ ಗೊಂದಲದ ಗೂಡಾಯಿತು... 'ಏಕೆ ಹೀಗಾಗ್ತಾ ಇದೀವಿ' ಅಂತ ಒಬ್ಬರಿಗೊಬ್ಬರು ಹಲವಾರು ಬಾರಿ ಪ್ರಶ್ನಿಸಿಕೊಂದರೂ 'no use'..... ಒಬ್ಬರಿಗೊಬ್ಬರು ಉತ್ತರಿಸಲು ಅಸಮರ್ಥರಾದರು, ಅಷ್ಟೇ ಏಕೆ ಅವರ ಮನಸ್ಥಿತಿ ಸ್ವತಃ ಅವರಿಗೇ ತಿಳಿಯದಾಯಿತು...
ಏನಿದರ ಅರ್ಥ....? ಯಾಕೇ ಹೀಗೇ...? ಸಂಬಂಧಗಳೇ ಹೀಗಾ...? ಸಂಬಂಧಗಳೇಕೆ ಇಷ್ಟು ಕ್ಲಿಷ್ಟ....? ಇದನ್ನೆಲ್ಲಾ ನಿಭಾಯಿಸುವುದು ಹೇಗೆ...? ಏನಿದಕ್ಕೆ ಪರಿಹಾರ....? ಹೇಗೆ ಮೊದಲಿನಂತಾಗುವುದು....? ಮೊದಲಿಂತಾಗುವುದೆಂದರೆ ಈಗೇನಾಗಿದೆ...???
ಕಾವ್ಯಾ :)
