ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಮುತ್ತುಗರೆದವನೆಬ್ಬಿಸುವಾಗ, ಮತ್ತಿನ
ಮುಗುಳುನಗೆಯ ಸುಂದರಾಂಗನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಮುಸ್ಸಂಜೆಯ ದೇವರ ನಾಮದೊಳಿರೆ,
ಹಿಂದಿನಿಂದಪ್ಪಿದ ಮುದ್ದು ಕೃಷ್ಣನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಹಸಿದೊಡಲಿಗುಣಬಡಿಸುವಾಗಲೊಮ್ಮೆ,
ಮೆಚ್ಚುಗೆಯಿಂದ ನೋಡುವ ಪತಿ ದೇವನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಸಿಟ್ಟಿನಲಿ ರಚ್ಚೆ ಹಿಡಿದವಳ, ಪ್ರೀತಿಯಿಂ-
ದೋಲೈಸುವ ಚಿಗುರು ಬೆರಳವನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಸಹಚಾರಿಣಿಯ ಹುಡುಗಾಟವ ಸಹಿಸಿ,
ಗದರದೇ ನಗುವ ಮುಗ್ಧನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಮಡಿಲಲ್ಲಿ ಮಗುವಂತೆ ಮಲಗಿ, ನಿದ್ದೆಯಲಿ
ಕನವರಿಸಿ ಮುದ್ದಿಸುವ ಸುಕುಮಾರನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಬದುಕಿನ ಸೌಧ ಕಟ್ಟಲು, ಪ್ರೀತಿಯ
ನೌಕೆ ಹೊತ್ತು ತಂದ ಸರದಾರನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....
ಕಾವ್ಯಾ :)
.jpg)
