Tuesday, December 4, 2012

ಪ್ರೀತಿಯ ನನ್ನವರಿಗೆ.......

       ನೀವಿರದ ಒಂದೊಂದು ಕ್ಷಣದಲ್ಲೂ ನನ್ನ ಮನದ ಪರದೆಯಲ್ಲೆಲ್ಲ ಬರೀ ನಿಮ್ಮ ರೂಪ... ಬೆಳಗ್ಗೆ ನಿಮ್ಮನ್ನು ರಮಿಸಿ ಎಬ್ಬಿಸಿ ಆಫೀಸಿಗೆ ಹೊರಟಾಗಿನಿಂದ ನಿಮ್ಮ ಧ್ಯಾನ ಶುರು ಆದರೆ  ಮತ್ತೆ ಸಂಜೆ ಮನೆಗೆ ಬಂದರೂ ನಿಮ್ಮದೇ ಗುಂಗು.... ಮನೆಗೆ ಬಂದು ಅಡುಗೆ  ಮಾಡುವಾಗಲೂ ನಿಮ್ಮ  ಮುದ್ದು ಮುಖ ಕಣ್ಣೆದುರೇ.... ಸ್ವಲ್ಪ ಹೊತ್ತೂ ಕೂಡ ನಿಮ್ಮನ್ನು ನನ್ನ ಸ್ಮೃತಿಯಿಂದ ಪಕ್ಕಕ್ಕಿರಿಸಲು ನನ್ನಿಂದಾಗದು.... ಅದೆಷ್ಟು ಸಲ ಗಡಿಯಾರ ನೋಡಿರುತ್ತೇನೆ ಗೊತ್ತಾ...? ನೀವು ಬರುವ ಸಮಯ ಮೀರಿ ಗಡಿಯಾರದ ದೊಡ್ಡ ಮುಳ್ಳು ಒಂದಂಕೆ ಮುಂದೆ ಹೋದರೂ ಅದೇನೋ ಅಸಹನೆ.... ಅಡುಗೆ ಮುಗಿಸಿ ಕುಳಿತವಳಿಗೆ ದಿನ ಪತ್ರಿಕೆ ಓದಲೂ ಸಾಧ್ಯವಾಗದೆ ಹೋಗುತ್ತದೆ.... ಕಂಗಳು ಕ್ಷಣಕ್ಕೊಮ್ಮೆ ಗಡಿಯಾರ ನೋಡುವುದ ಬಿಟ್ಟರೆ ತಾನೇ ಮತ್ತೇನಾದರೂ ಮಾಡಲಾಗುವುದು...! ಏಕೆ ಬರಲಿಲ್ಲವೋ, ಏನಾಯಿತೋ ಎಂಬ ಕಳವಳವಲ್ಲ ಅದು... ಈ ಸಮಯದೊಳಗೆ ಬರುತ್ತೀರೆಂದು ಮನಸ್ಸಿಗೆ ಗೊತ್ತಲ್ಲಾ, ಆ ಸಮಯವಾದೊಡನೆ ಮನ ನಿಮ್ಮ ಮುದ್ದು ಮುಖ ನೋಡಲು ತವಕಿಸುತ್ತದೆ... ಕುಳಿತಲ್ಲಿ ಕುಳಿತಿರಲಾಗದೆ ಬಂದ ಬೈಕ್ ಸದ್ದನ್ನೆಲ್ಲ ಆಲಿಸುತ್ತವೆ ಕಿವಿಗಳು...
 
       ಅದು ಹೇಗೆ ಒಂದು ಕ್ಷಣವೂ ಮನಸ್ಸಿನಿಂದ ಹೊರ ಹೋಗದೆ ಕುಳಿತಿರುತ್ತೀರೋ, ನಾ ಕಾಣೆ... ಗಂಡ-ಹೆಂಡತಿ ಎಂಬ ಅವಿನಾಭಾವ ಸಂಬಂಧ ನಿಜಕ್ಕೂ ಅದ್ಭುತ... ಬಂದ ಮುನಿಸು ತಣ್ಣಗಾಗಿ ಕಣ್ಣಂಚಿನಲ್ಲಿ ನೀರಾಡುತ್ತಲ್ಲಾ ಅದರಲ್ಲೆಲ್ಲಾ ನಿಮಗೆ ಪ್ರೀತಿಯ ಧಾರೆಯಿರುತ್ತೆ... ಆ ಕ್ಷಣದಲ್ಲಿ ಮೂಡುವ ಪ್ರೀತಿಯಿದೆಯಲ್ಲಾ........ಅದನ್ನು ಹೇಗೆ ಹೇಳಲಿ ನಿಮಗೆ.... !! ವರ್ಣಿಸಲಾಗದ, ಜಗತ್ತಿನ ಅತ್ಯಂತ ಅದ್ಭುತ ಭಾವನೆ ಅದು... ಹೊಟ್ಟೆಯಾಳದಿಂದ ಏನೋ ಪ್ರೀತಿಯ ಝಳಕು ಬಂದು ಮೈಯೆಲ್ಲಾ ಕಂಪನವೋ, ರೋಮಾಂಚನವೋ.... ಅದೇನೋ ಹೇಳಲಾಗದು.... ಅನುಭವಿಸಿಯೇ ತಿಳಿಯಬೇಕು...! ಅದಕ್ಕೇ ಏನೋ ನನ್ನ ಮನ ನನ್ನರಿವಿಗೆ ಬಾರದಂತೆಯೇ ಆಗಾಗ ಮುನಿಸಿಕೊಳ್ಳುವುದು, ಕಣ್ಣಾಲಿಗಳು ನೀರಾಗುವುದು.......

       ನಿಮ್ಮೊಡನೆ ಸಪ್ತಪದಿಯಿಟ್ಟು ಸಪ್ತ ಮಾಸಗಳು ಅದೆಷ್ಟು ಬೇಗ ಜಾರಿದವೋ...... ಸಪ್ತ ಜನ್ಮದಲ್ಲೂ ನನ್ನ ಪ್ರೀತಿಗೆ ನೀವೇ ಪ್ರತಿ ಪ್ರೀತಿ ಕೊಡುವಂತಾಗಲಿ, ನಮ್ಮಿಬ್ಬರ ನಡುವೆ ಪ್ರೀತಿಯ ಪ್ರವಾಹ ಎಂದೆಂದೂ ಹೀಗೆಯೇ ಪ್ರವಹಿಸುತ್ತಿರಲೆಂದು ಕಾಣದ ದೇವರಲ್ಲಿ ನನ್ನ ಭಕ್ತಿಪೂರ್ವಕ ಬಿನ್ನಹ....


ನಿಮ್ಮ ಕೆನ್ನೆಯ ಕೆಂಪಿನಲ್ಲಿದೆ 
                 ನನ್ನ ಪ್ರೀತಿ......
ನಿಮ್ಮ ಮೀಸೆಯಂಚಿನ ನಸು ನಗುವಿನಲ್ಲಿದೆ 
                 ನನ್ನ ಪ್ರೀತಿ......
ನಿಮಗೆ ಮುದ್ದಿನಿಂದ ಗದರುವಲ್ಲಿದೆ 
                 ನನ್ನ ಪ್ರೀತಿ.......
ನಿಮ್ಮ ಮುಂಜಾನೆಯ ಕನವರಿಕೆಯಲ್ಲಿದೆ 
                 ನನ್ನ ಪ್ರೀತಿ....... 
ನಿಮ್ಮ ಪ್ರತೀ ಹೆಜ್ಜೆ ಹೆಜ್ಜೆಯಲ್ಲೂ ಇದೆ 
                 ನನ್ನ ಪ್ರೀತಿ........


ಕಾವ್ಯಾ :) 

Tuesday, June 5, 2012

ಸುಮ್-ಸುಮ್ನೆ ಯಾಕೋ....

















ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮುತ್ತುಗರೆದವನೆಬ್ಬಿಸುವಾಗ, ಮತ್ತಿನ
ಮುಗುಳುನಗೆಯ ಸುಂದರಾಂಗನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮುಸ್ಸಂಜೆಯ ದೇವರ ನಾಮದೊಳಿರೆ,
ಹಿಂದಿನಿಂದಪ್ಪಿದ ಮುದ್ದು ಕೃಷ್ಣನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಹಸಿದೊಡಲಿಗುಣಬಡಿಸುವಾಗಲೊಮ್ಮೆ,
ಮೆಚ್ಚುಗೆಯಿಂದ ನೋಡುವ ಪತಿ ದೇವನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಸಿಟ್ಟಿನಲಿ ರಚ್ಚೆ ಹಿಡಿದವಳ, ಪ್ರೀತಿಯಿಂ-
ದೋಲೈಸುವ ಚಿಗುರು ಬೆರಳವನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಸಹಚಾರಿಣಿಯ ಹುಡುಗಾಟವ ಸಹಿಸಿ,
ಗದರದೇ ನಗುವ ಮುಗ್ಧನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮಡಿಲಲ್ಲಿ ಮಗುವಂತೆ ಮಲಗಿ, ನಿದ್ದೆಯಲಿ
ಕನವರಿಸಿ ಮುದ್ದಿಸುವ ಸುಕುಮಾರನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಬದುಕಿನ ಸೌಧ ಕಟ್ಟಲು, ಪ್ರೀತಿಯ
ನೌಕೆ ಹೊತ್ತು ತಂದ ಸರದಾರನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....


























ಕಾವ್ಯಾ :) 

Wednesday, March 21, 2012

ಕಲೆ - ಕಲಿ...


















ಮನ ತುಡಿಯಬೇಕು...
   ಹೃದಯ ಮಿಡಿಯಬೇಕು.....
ಅನುರಾಗ ಅರಳಬೇಕು
    ಓ ಮನವೇ....
Learn to FEEL......

ಮನಕೆ ಮನ ಜೊತೆಯಾಗಿ  
    ಪ್ರೀತಿಯು ಒರತೆಯಾಗಿ....
ಭಾವ ಚಿಮ್ಮಬೇಕು...
    ಓ ಮನವೇ....
Learn to EXPRESS.....

ಹಂಚಿಕೋ ಮನವೇ ನಿನ್ನ ಸಂತಸ....
    ಹೊಮ್ಮುವುದಾಗ ಉಲ್ಲಾಸ...
ಅರಿತುಕೋ ನಿನ್ನೊಲವಿನ ಮನಸ.... 
    ಓ ಮನವೇ....
Learn to share the JOY.....

ಮನವೆಂಬ ತ್ರಿಜ್ಯಗಳೆರಡು ಬೆಸೆದಾಗ...
    ಪ್ರೀತಿಯ ವ್ಯಾಸವದು ವಿಶಾಲ...
ಹಂಚಿಕೋ ನಿನ್ನಾಳದ ಒಲವ....
    ಓ ಮನವೇ....
Learn to ENJOY....



ಕಾವ್ಯಾ :)


Wednesday, January 25, 2012

ಹೊಸ ಬಾಳಿಗೆ ನೀ ಜೊತೆಯಾದೆ.... ಹೊಸ ಆನಂದ ನೀನಿಂದು ತಂದೆ....


ನನ್ನ ಬಾಳಿಗೆ ಬಣ್ಣ ತುಂಬಲು ಬರುತ್ತಿರುವ ನಿನಗಾಗಿ..........
       ನಿನಗಾಗಿ ಬರೆದ ಕೆಲವಾರು ಲೇಖನಗಳು ಈಗಾಗಲೇ ನನ್ನ ಬ್ಲಾಗಿನಲ್ಲಿವೆ. ನನ್ನ ಬರವಣಿಗೆಗಳು ಬ್ಲಾಗ್ ರೂಪ ಪಡೆಯಲು ಕಾರಣ ನೀನು.... ಬ್ಲಾಗ್ ಬರೆಯಲು ಶುರು ಮಾಡು ಎಂಬ ನಿನ್ನ ಒತ್ತಾಯದಿಂದ ಬರವಣಿಗೆಯತ್ತ ಮುಖ ಮಾಡಿ ಒಂದು ವರ್ಷ ಪೂರೈಸುವುದರೊಳಗೇ ನೀನೇ ನನ್ನ ಬಾಳ ಸಂಗಾತಿಯಾಗಿ ಬರುವೆ ಎಂಬುದು ಕನಸಿನಲ್ಲಿಯೂ ಅನಿಸಿರಲಿಲ್ಲ... ಅತ್ಯಂತ ಆತ್ಮೀಯ ಸ್ನೇಹಿತರಾಗಿ ಎರಡೂವರೆ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ನಮ್ಮ ಸ್ನೇಹದ ಬಗ್ಗೆ ನಾನು ಈಗಾಗಲೇ ಬರೆದಾಗಿದೆ ಮತ್ತು ಅದನ್ನು ನನ್ನ ಓದುಗರೆಲ್ಲರೂ ಓದಿಯೂ ಇದ್ದಾರೆ. ಆದರೆ ಆ ಲೇಖನದ 'ಆತ್ಮ' ನೀನೆ ಎಂದು ತಿಳಿದಿದ್ದದ್ದು ನಮ್ಮಿಬ್ಬರಿಗೆ ಮಾತ್ರ...! ಅದೆಷ್ಟು ಜನ ಓದಿ ಪ್ರಶ್ನೆ ಮಾಡಿದ್ದರೋ ಯಾರ ಬಗ್ಗೆ ಬರೆದಿದ್ದೀಯ ಎಂದು..... ಅಂತಹ ಸ್ನೇಹ ಇಂದು ನಮ್ಮ ಸಹಜೀವನಕ್ಕೆ ಬುನಾದಿಯಾಗುತ್ತದೆ ಎಂದು ಮಾತ್ರ ಇಬ್ಬರೂ ತಿಳಿದಿರಲಿಲ್ಲ ಅಲ್ಲವೇ...?! ಹುಡುಗ ಹುಡುಗಿಯ ನಡುವೆ ಬರಿದೇ ಸ್ನೇಹ ಸಾಧ್ಯವಿದೆ ಎಂಬುದನ್ನು ಸಾಧಿಸ ಹೊರಟಿದ್ದೇನೋ ನಿಜ... ಆದರೆ ನಮ್ಮ ಕಥೆಯೂ ಒಂದೇ ತರಹದ ಕೊನೆ ತಲುಪಿತಲ್ಲ ಎಂಬ ಬೇಸರವಂತೂ ಖಂಡಿತಾ ಇಲ್ಲಾ...  ನಮ್ಮ ಸ್ನೇಹವನ್ನು ಬಲ್ಲ ಅದೆಷ್ಟು ಜನ ನೀವಿಬ್ಬರೇ ಯಾಕೇ ಮದುವೆಯಾಗಬಾರದು ಎಂದು ನನ್ನ ಬಳಿ ಹೇಳಿದ್ದಾರೆ ಗೊತ್ತಾ..!! ಆಗ ನಂಗೆ ಆಶ್ಚರ್ಯ ಆಗೋದು, ಇದೇನು ಎಲ್ಲರೂ ಹೀಗಂತಾರಲ್ಲ ಅಂತ.... ಇಂತಹ ಒಳ್ಳೆಯ ಸ್ನೇಹಿತನನ್ನೇ ನನ್ನ ಬಾಳ ಸಂಗಾತಿಯಾಗಿ ಕರುಣಿಸಿದ ದೇವರಿಗೆ ನನ್ನ ಕೋಟಿ ಕೋಟಿ ನಮನಗಳು... 
       ನಿನ್ನ ಸ್ನೇಹವನ್ನು ಬಯಸಿ ಬಂದವಳು ನಾನು.... ನಿನ್ನ ನಾಚಿಕೆಯ ಸ್ವಭಾವವೇ ನನಗೆ ಮೊದಲಿಂದಲೂ ಇಷ್ಟವಾಗಿದ್ದು... ಅದಕ್ಕಾಗೆ ಮೊದಲಿಂದಲೂ ನಾನು ನಿನ್ನನ್ನು ಕುಕ್ಕಿ ಕುಕ್ಕಿ ಮಾತಾಡಿಸುತ್ತಿದ್ದೆ.. ವರ್ಷಗಟ್ಟಲೆ ಪ್ರಯತ್ನ ಪಟ್ಟ ಮೇಲೆ ಅಂತೂ ಸರಾಗವಾಗಿ ಮಾತಾಡಲು ಶುರು ಮಾಡಿದೆ ನೀನು... ನಿಜವಾಗಿಯೂ ನಿನ್ನೊಡನೆ ಸವಿದ ಸ್ನೇಹದ ಸವಿ ನನಗೆಲ್ಲೂ ಸಿಕ್ಕಿಲ್ಲ... ನೀನು ಮಾತಾಡದಿದ್ದರೂ ನಿನ್ನಲ್ಲಿ ಅಗಾಧ ಸ್ನೇಹವನ್ನು ಕಂಡಿದ್ದೆ.... ಈಗ ಅದೇ ಮೌನದಲ್ಲಿ ಅಷ್ಟೇ ಪ್ರೀತಿಯನ್ನು ಕಾಣುತ್ತಿದ್ದೇನೆ... ಅದೆಷ್ಟು ಒಬ್ಬರಿಗೊಬ್ಬರು ಅನಿವಾರ್ಯವಾಗಿದ್ದೆವೆಂದರೆ ನನ್ನ ಮದುವೆಯಾದರೆ ನಾವಿಬ್ಬರೂ ಈ ಸ್ನೇಹದಿಂದ ಹೇಗೆ ದೂರಾಗುವುದು ಎಂದು ದುಃಖ ಪಡುವಷ್ಟರ ಮಟ್ಟಿಗೆ...! ಈಗ ಅದಾವ ತೊಂದರೆಯೂ ಇಲ್ಲದೆ ಇಬ್ಬರೂ ಪೂರ್ತಿ ಜೀವನದ ಸವಿಯನ್ನು ಒಟ್ಟಿಗೆ ಸವಿಯುವತ್ತ ಹೆಜ್ಜೆ ಇಡಲು ಕಾತರಿಸುತ್ತಿದ್ದೇವೆ.... 
       ಯಾವ ಕ್ಷಣದಲ್ಲಿ ನಮ್ಮ ಭಾವನೆಗಳು ತಿರುಗಿದವೋ...! ತಿಳಿಯಲಿಲ್ಲ.... 'ಮನೆಯಲ್ಲಿ ಒಪ್ಪಿದರೆ ಮಾತ್ರ' ಎಂಬ ನಿರ್ಧಾರಕ್ಕೆ ಬಂದಾಗಲಂತೂ ಒಂದು ಕ್ಷಣ ಕಳೆಯುವುದೂ ಕಷ್ಟವಾಗಿತ್ತು. ಒಮ್ಮೆ ಬಿಟ್ಟು ಬದುಕಬಹುದು ದೊಡ್ಡದಲ್ಲ ಎನಿಸಿದರೂ.... ಕ್ಷಣ ಮಾತ್ರದಲ್ಲಿ ಹೇಗೆ ಎಂಬ ಪ್ರಶ್ನೆ ಧುತ್ತನೆ ನಿಲ್ಲುತ್ತಿತ್ತು....!! ಅಂತೂ ಅತ್ತೆ, ಮಾವ, ಅಪ್ಪ, ಅಮ್ಮ ಪ್ರೀತಿಯಿಂದ ಮದುವೆ ಮಾಡಲು ಒಪ್ಪಿದಾಗ ನಿಜವೇ ಇದು ಎಂದು ನಂಬಲು ನನಗಂತೂ ಬಹಳ ದಿನಗಳೇ ಹಿಡಿಯಿತು....

       ನಿನ್ನ ನಾಚಿಕೆ, ಸಂಕೋಚದ ಸ್ವಭಾವ ನನಗೆ ತುಂಬಾ ಇಷ್ಟ.... (ಒಬ್ಬರಿಗಾದರೂ ಇದೆಯಲ್ಲ ಸಾಕು ಬಿಡು ಎಂಬುದು ನನ್ನ ಸ್ನೇಹಿತರ ಅಂಬೋಣ...!) ವಸ್ತು ಸ್ಥಿತಿಯನ್ನು ಮುಚ್ಚಿಡದೆ ಇದ್ದ ಹಾಗೇ ಹೇಳಿ ಬಿಡುವ ನಿನ್ನ ಗುಣ ಇಷ್ಟ.... ನಿನ್ನ ನಗು ಇಷ್ಟ... ನಿನ್ನ voice ಅಂತೂ ಸೂಪರ್ ಇಷ್ಟ... ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದೇ ಇರುವಂತೆ ಒಂಥರಾ decency ಯನ್ನು ಉಳಿಸಿಕೊಳ್ಳುತ್ತೀಯಲ್ಲ ಅದು ಮಾತ್ರ ಎಲ್ಲರಿಂದ ಸಾಧ್ಯವಿಲ್ಲ...! ಅದಕ್ಕೇ ನಾನು ಕ್ಲೀನ್ ಬೋಲ್ಡ್ ಆಗಿದ್ದು.... ಅದೆಷ್ಟು ಜನ ನಿನ್ನನ್ನು ಹೊಗಳುತ್ತಾರಲ್ಲ ಆಗ ಆಗುವ ಸಂತೋಷ ಕೈಗೆ ನಿಲುಕದ್ದು.... ನನ್ನ ಭಾವನೆಯ ಮಿಡಿತ ಸ್ವಲ್ಪ ವ್ಯತ್ಯಾಸವಾದರೂ ಬಾಯಿ ಬಿಡಿಸಿ ತಿಳಿದುಕೊಂಡು ನಿನ್ನ ತುಡಿತವನ್ನು ಮಾತ್ರ ನಿನ್ನ ಮೌನದಲ್ಲೇ ನಾನು ತಿಳಿದುಕೊಳ್ಳಲೆಂಬ ಹಂಬಲ ನಿನ್ನದು... ನಿನ್ನ ಮುಂದೆ ಮಾತ್ರವೇ ನನ್ನ ಸಿಟ್ಟು ಕೊಂಚ ಕೂಡ ನಿಲ್ಲದೆ ಕರಗಿ ಹೋಗುವುದು.... ನಿನ್ನನ್ನು ನನಗೆ ಕೊಟ್ಟ ದೇವರಿಗೆ ಮತ್ತೊಮ್ಮೆ ನನ್ನ ಕೋಟಿ ಕೋಟಿ ನಮನಗಳು.....


        ನನ್ನ ಪ್ರೀತಿಯನ್ನೆಲ್ಲ ನಿನಗೆ ಧಾರೆ ಎರೆಯಬೇಕೆಂಬ ಹಂಬಲವಿದೆ..... ಕಣ್ತುಂಬಾ ನಮ್ಮ ಮುಂದಿನ ಬದುಕಿನ ಕನಸಿದೆ.... ಕೊನೆವರೆಗಿನ ಸಹಬಾಳ್ವೆಯ ವಿಶ್ವಾಸವಿದೆ... ನನ್ನನ್ನು ಜತನದಿಂದ ಕಾಪಾಡುವೆಯೆಂಬ ನಂಬಿಕೆಯಿದೆ... ಬೊಗಸೆ ತುಂಬಾ ಪ್ರೀತಿಯಿದೆ... ಮನ ತುಂಬಾ ಮಮತೆಯಿದೆ.... ಒಟ್ಟಾರೆ ಕಾಯುವಿಕೆಯಲ್ಲೂ ಏನೋ ಸುಖವಿದೆ... 


ವಿವಾಹ ಯೋಗದ
ನಾದ ನುಡಿಸಿ
ಯಜುರ್ವೇದ ಘೋಷದೊಳು
ಕರಿಮಣಿ ಕುಂಕುಮ ಸೌಭಾಗ್ಯವ ದೊರಕಿಸಲಿರುವ 
                                ನಿನಗಿದು ಅರ್ಪಣೆ........



ಕಾವ್ಯಾ :) :)