(ಮೇ ತಿಂಗಳಿನಲ್ಲಿ ಮಹಾಬಲಗಿರಿ ಭಟ್ಟರ ಕರಾವಳಿ ರೈಲು ಬ್ಲಾಗಿನಲ್ಲಿ (http://karavalirail.blogspot.com) ಈ ಚಿತ್ರಕ್ಕೆ ಹಲವಾರು ಕವನಗಳು ಬಂದವು... ಮೂಲ ಚಿತ್ರ ಕವಿ ಹೃದಯಿ ಪ್ರವೀಣ್ ಭಟ್ ಸಂಪ (http://nenapinasalu.blogspot.com )ಅವರದ್ದು. ಈ ಚಿತ್ರಕ್ಕೆ ನನ್ನದೊಂದು ಕವನ....)
ಒಂಟಿಯಾಗಿ ಕುಳಿತ ಆ ಮುದಿಯ ಜೀವ....
ಬಾಯ್ದೆರೆದು ನೋಡುತಿದೆ ಬಿಸಿಲ ಕಾವ...
ಪ್ರಾಯದಲ್ಲಿರಲಿಲ್ಲ ಇಷ್ಟು ಬಿಸಿಲು ಎಂಬ ಭಾವ....
ಅರಿಯದ ವಯಸಿಗೆ ಮದುವೆ-ಮಕ್ಕಳ ಜಂಜಾಟ...
ಎನಿತು ಸುಖವ ಕಂಡಿತು ಈ ಜೀವ ಪ್ರಾಯದಲಿ...
ಸಂಸಾರ ತೂಗಿಸುವ ಯೋಚನೆಯೊಂದೇ ತಲೆಯಲಿ...
ದುಡಿದು ಬಂದರೆ ಹಸಿವೆಂದು ಬಾಯ್ಬಿಡುವ ಮಕ್ಕಳು...
ಕಾಯಿಸಿದ ಒಂದಿಷ್ಟು ಅಂಬಲಿಯ, ಒಡಲ ಹಸಿವಿಲ್ಲದೆ ಬಡಿಸಿದ ಕೈಗಳು...
ಪತಿಯ ಊಟವ ಖುಷಿಯಲಿ ಕಂಡು, ನೀರು ಕುಡಿದು ನಿದ್ರಿಸಿದ್ದ ಕಂಗಳು....
ಕಷ್ಟ ಪಡುತ್ತ ಮಕ್ಕಳನು ದಡ ಹತ್ತಿಸುವ ಹಾದಿಯಲಿ...
ಪತಿಯ ಅಗಲಿಕೆಯ ನೋವನು ಮರೆಯುತ....
ಮಕ್ಕಳೊದಗಿಸುವ ಮುಂದಿನ ನೆಮ್ಮದಿಯ ಹಾದಿಯತ್ತ ದೃಷ್ಟಿ ಹರಿಸುತ....
ಕಂಡ ಕನಸುಗಳು ನನಸಾಗದಾದಾಗ...
ಮಕ್ಕಳು ಮುದಿ ಜೀವವ ತೊರೆದು ಹೋದಾಗ....
ನಮಗೆ ನಾವೇ... ಗೋಡೆಗೆ ಮಣ್ಣೇ ಎಂಬ ಭಾವದಿ....
ಬೊಚ್ಚು ಬಾಯಿ, ಗುಳಿ ಬಿದ್ದ ಕಂಗಳಿಂದ....
'ನಾ ಬೆಳೆಸಿದ ಹುಡುಗ ನೀನಾದರೂ
ನನ್ನ ನೋಡಾಕೆ ಬಂದೆಯಾ ಮಗಾ...'
ಎಂಬ ಸಂತಸವ ಮುಖದಲಿ ಹೊತ್ತ ನಾಗಿ.....
ಇವಳು ನನ್ನ ಬೆಳವಣಿಗೆಯಲ್ಲಿ ಭಾಗಿ....
ಕಾವ್ಯಾ :)