Tuesday, December 4, 2012

ಪ್ರೀತಿಯ ನನ್ನವರಿಗೆ.......

       ನೀವಿರದ ಒಂದೊಂದು ಕ್ಷಣದಲ್ಲೂ ನನ್ನ ಮನದ ಪರದೆಯಲ್ಲೆಲ್ಲ ಬರೀ ನಿಮ್ಮ ರೂಪ... ಬೆಳಗ್ಗೆ ನಿಮ್ಮನ್ನು ರಮಿಸಿ ಎಬ್ಬಿಸಿ ಆಫೀಸಿಗೆ ಹೊರಟಾಗಿನಿಂದ ನಿಮ್ಮ ಧ್ಯಾನ ಶುರು ಆದರೆ  ಮತ್ತೆ ಸಂಜೆ ಮನೆಗೆ ಬಂದರೂ ನಿಮ್ಮದೇ ಗುಂಗು.... ಮನೆಗೆ ಬಂದು ಅಡುಗೆ  ಮಾಡುವಾಗಲೂ ನಿಮ್ಮ  ಮುದ್ದು ಮುಖ ಕಣ್ಣೆದುರೇ.... ಸ್ವಲ್ಪ ಹೊತ್ತೂ ಕೂಡ ನಿಮ್ಮನ್ನು ನನ್ನ ಸ್ಮೃತಿಯಿಂದ ಪಕ್ಕಕ್ಕಿರಿಸಲು ನನ್ನಿಂದಾಗದು.... ಅದೆಷ್ಟು ಸಲ ಗಡಿಯಾರ ನೋಡಿರುತ್ತೇನೆ ಗೊತ್ತಾ...? ನೀವು ಬರುವ ಸಮಯ ಮೀರಿ ಗಡಿಯಾರದ ದೊಡ್ಡ ಮುಳ್ಳು ಒಂದಂಕೆ ಮುಂದೆ ಹೋದರೂ ಅದೇನೋ ಅಸಹನೆ.... ಅಡುಗೆ ಮುಗಿಸಿ ಕುಳಿತವಳಿಗೆ ದಿನ ಪತ್ರಿಕೆ ಓದಲೂ ಸಾಧ್ಯವಾಗದೆ ಹೋಗುತ್ತದೆ.... ಕಂಗಳು ಕ್ಷಣಕ್ಕೊಮ್ಮೆ ಗಡಿಯಾರ ನೋಡುವುದ ಬಿಟ್ಟರೆ ತಾನೇ ಮತ್ತೇನಾದರೂ ಮಾಡಲಾಗುವುದು...! ಏಕೆ ಬರಲಿಲ್ಲವೋ, ಏನಾಯಿತೋ ಎಂಬ ಕಳವಳವಲ್ಲ ಅದು... ಈ ಸಮಯದೊಳಗೆ ಬರುತ್ತೀರೆಂದು ಮನಸ್ಸಿಗೆ ಗೊತ್ತಲ್ಲಾ, ಆ ಸಮಯವಾದೊಡನೆ ಮನ ನಿಮ್ಮ ಮುದ್ದು ಮುಖ ನೋಡಲು ತವಕಿಸುತ್ತದೆ... ಕುಳಿತಲ್ಲಿ ಕುಳಿತಿರಲಾಗದೆ ಬಂದ ಬೈಕ್ ಸದ್ದನ್ನೆಲ್ಲ ಆಲಿಸುತ್ತವೆ ಕಿವಿಗಳು...
 
       ಅದು ಹೇಗೆ ಒಂದು ಕ್ಷಣವೂ ಮನಸ್ಸಿನಿಂದ ಹೊರ ಹೋಗದೆ ಕುಳಿತಿರುತ್ತೀರೋ, ನಾ ಕಾಣೆ... ಗಂಡ-ಹೆಂಡತಿ ಎಂಬ ಅವಿನಾಭಾವ ಸಂಬಂಧ ನಿಜಕ್ಕೂ ಅದ್ಭುತ... ಬಂದ ಮುನಿಸು ತಣ್ಣಗಾಗಿ ಕಣ್ಣಂಚಿನಲ್ಲಿ ನೀರಾಡುತ್ತಲ್ಲಾ ಅದರಲ್ಲೆಲ್ಲಾ ನಿಮಗೆ ಪ್ರೀತಿಯ ಧಾರೆಯಿರುತ್ತೆ... ಆ ಕ್ಷಣದಲ್ಲಿ ಮೂಡುವ ಪ್ರೀತಿಯಿದೆಯಲ್ಲಾ........ಅದನ್ನು ಹೇಗೆ ಹೇಳಲಿ ನಿಮಗೆ.... !! ವರ್ಣಿಸಲಾಗದ, ಜಗತ್ತಿನ ಅತ್ಯಂತ ಅದ್ಭುತ ಭಾವನೆ ಅದು... ಹೊಟ್ಟೆಯಾಳದಿಂದ ಏನೋ ಪ್ರೀತಿಯ ಝಳಕು ಬಂದು ಮೈಯೆಲ್ಲಾ ಕಂಪನವೋ, ರೋಮಾಂಚನವೋ.... ಅದೇನೋ ಹೇಳಲಾಗದು.... ಅನುಭವಿಸಿಯೇ ತಿಳಿಯಬೇಕು...! ಅದಕ್ಕೇ ಏನೋ ನನ್ನ ಮನ ನನ್ನರಿವಿಗೆ ಬಾರದಂತೆಯೇ ಆಗಾಗ ಮುನಿಸಿಕೊಳ್ಳುವುದು, ಕಣ್ಣಾಲಿಗಳು ನೀರಾಗುವುದು.......

       ನಿಮ್ಮೊಡನೆ ಸಪ್ತಪದಿಯಿಟ್ಟು ಸಪ್ತ ಮಾಸಗಳು ಅದೆಷ್ಟು ಬೇಗ ಜಾರಿದವೋ...... ಸಪ್ತ ಜನ್ಮದಲ್ಲೂ ನನ್ನ ಪ್ರೀತಿಗೆ ನೀವೇ ಪ್ರತಿ ಪ್ರೀತಿ ಕೊಡುವಂತಾಗಲಿ, ನಮ್ಮಿಬ್ಬರ ನಡುವೆ ಪ್ರೀತಿಯ ಪ್ರವಾಹ ಎಂದೆಂದೂ ಹೀಗೆಯೇ ಪ್ರವಹಿಸುತ್ತಿರಲೆಂದು ಕಾಣದ ದೇವರಲ್ಲಿ ನನ್ನ ಭಕ್ತಿಪೂರ್ವಕ ಬಿನ್ನಹ....


ನಿಮ್ಮ ಕೆನ್ನೆಯ ಕೆಂಪಿನಲ್ಲಿದೆ 
                 ನನ್ನ ಪ್ರೀತಿ......
ನಿಮ್ಮ ಮೀಸೆಯಂಚಿನ ನಸು ನಗುವಿನಲ್ಲಿದೆ 
                 ನನ್ನ ಪ್ರೀತಿ......
ನಿಮಗೆ ಮುದ್ದಿನಿಂದ ಗದರುವಲ್ಲಿದೆ 
                 ನನ್ನ ಪ್ರೀತಿ.......
ನಿಮ್ಮ ಮುಂಜಾನೆಯ ಕನವರಿಕೆಯಲ್ಲಿದೆ 
                 ನನ್ನ ಪ್ರೀತಿ....... 
ನಿಮ್ಮ ಪ್ರತೀ ಹೆಜ್ಜೆ ಹೆಜ್ಜೆಯಲ್ಲೂ ಇದೆ 
                 ನನ್ನ ಪ್ರೀತಿ........


ಕಾವ್ಯಾ :)