Friday, March 25, 2011



ನಿನ್ನ ಮೊದಲಿನಂತಿನ ಪಟ ಪಟ ಮಾತು

ನನ್ನನ್ನು ಮರೆವಿನಿಂದ ನೆನಪಿನಾಳದತ್ತ ಸೆಳೆಯುತ್ತಿದೆ...

ಎಂದೋ ಹುದುಗಿ ಹೋದ ಮಧುರ ನೆನಪುಗಳು

ಮತ್ತೆ ಕೆದಕುತ್ತಿದೆ.....

ನಿನ್ನ ನಗು ಆ ಹಳೆಯ ನಗೆಯ 

ನೆನಪಿನಲ್ಲಿಗೆ ಎಳೆಯುತ್ತಿದೆ....

ದೂರಾಗುವೆ ಎಂದು ತಿಳಿದು ನೆನಪನ್ನೆಲ್ಲಾ

ಮರೆತು ಕುಳಿತರೂ......

ಮರೆಯಾಗಿಯೂ ನೆನಪಿಸುತ್ತಿರುವ 

ಮರೆತ ಆ ಹಳೆಯ ನೆನಪು....

ಮರೆತೆನೆಂದೇ ಕುಳಿತುಬಿಟ್ಟಾಗ 

ಒತ್ತರಿಸಿ ಬಂದ ಆ ನಿನ್ನ ನೆನಪು....

ಮನಸನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ !

ಇನ್ಯಾರಲ್ಲಿ ಹೇಳಲಿ ನನ್ನ ಒಡಲಾಳದ ನೋವ,

ನೀನೆ ತಿಳಿಯದಿದ್ದ ಮೇಲೆ..... 



ಕಾವ್ಯಾ 



Thursday, March 24, 2011

ನೆನಪುಗಳ ಮಾತು ಮಧುರ......


       ಕಳೆದೇ ಹೋಯಿತು ಜೀವನದ ೨೩ ವಸಂತಗಳು.... ಮೊನ್ನೆ ಮೊನ್ನೆಯಷ್ಟೇ ಆಡಿಕೊಂಡು ಸಮಯ ಕಳೆಯುತ್ತಿದ್ದ ನೆನಪು... ಆಗಲೇ ಇಷ್ಟು ದೊಡ್ಡವರಾಗಿಬಿಟ್ಟೆವೆ?! 'ಅಪ್ಪಾ ಚಾಕಲೇಟ್ ಕೊಡ್ಸಪ್ಪ please' ಎಂದು ಹಠ ಮಾಡುತ್ತಿದ್ದವರು ನಮಗೆ ಬೇಕಾದ್ದನ್ನು ನಾವೇ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೇವೆ. ನಾವೆಷ್ಟೇ ದುಡಿದರೂ ಆಗ ಅಪ್ಪ-ಅಮ್ಮನಲ್ಲಿ ಹಠ ಮಾಡಿ ಕೊಡಿಸಿಕೊಂಡು ತಿಂದ ಚಾಕಲೇಟ್ ನ  ಆ ಸಿಹಿ ಈಗ ನಾವೇ ಕೊಂಡು ತಿಂದದ್ದರಲ್ಲಿ ಇಲ್ಲವೇ ಇಲ್ಲಾ....! ನಿನ್ನೆಯೋ ಮೊನ್ನೆಯೋ ಮಣ್ಣಿನಲ್ಲಿ ಅಡುಗೆ ಆಟವಾಡುತ್ತ ಸಂಜೆಗತ್ತಲಾದರೂ ಆಟದಲ್ಲಿ ಮಗ್ನರಾಗಿ ಆಡುತ್ತಿದ್ದಂತಿಂದೆ.... ಆಟ  ಮುಗಿಸಿ ಮನೆಗೆ ಬಂದರೆ ಮಣ್ಣು-ನೀರಿನಿಂದ ರಟ್ಟಾಗಿದ್ದ ಅಂಗಿಯನ್ನು ನೋಡಿ ಬಯ್ಯುತ್ತಿದ್ದ ಅಮ್ಮ, 'ಕತ್ತಲಾದರೂ ಮನೆಗೆ ಬರಬೇಕೆಂಬ ಬುದ್ದಿಯಿಲ್ಲವೇ ನಿಮಗೆ... ನಿಮ್ಮ ಆಟದ ಮನೆಯಲ್ಲಿಯೇ ಊಟ ಮಾಡಿ ಮಲಗಬೇಕಿತ್ತು, ಈಗೇಕೆ ಬಂದ್ರಿ' ಎಂದು ಗದರುತ್ತಿದ್ದ ಪ್ರೀತಿಯ ಕಾಕ, 'ಎಷ್ಟು ಹೇಳಿದರೂ ಕೇಳದೆ ಆ "ಭೂತನ ಕಟ್ಟೆ" ಯಲ್ಲೇ ಆಡುತ್ತೀರಲ್ಲ ಮಕ್ಕಳೇ ಅದು ಕತ್ತಲಾದ ಮೇಲೆ ಒಳ್ಳೆಯ ಜಾಗವಲ್ಲ, ನಾಳೆಯಿಂದ ಬೇಗ ಬಂದುಬಿಡಿ' ಎಂದು ಪ್ರೀತಿಯಿಂದ ಕೈ ಹಿಡಿದು ಎಲ್ಲರ ಬೈಗುಳದಿಂದ ಮುಕ್ತಗೊಳಿಸಿ ಕೈ-ಕಾಲು-ಮುಖ ತೊಳೆಸಲು ಬಚ್ಚಲಿಗೆ ಕರೆದೊಯ್ಯುತ್ತಿದ್ದ ಮುದ್ದಿನ ಅಮ್ಮೊಮ್ಮ...... ಎಲ್ಲಾ ಬರೀ ನೆನಪುಗಳೇ..... ಆ ವಯಸ್ಸೇ ಚೆನ್ನಾಗಿತ್ತು....


       'ಈ ದೊಡ್ದವರೇ ಇಷ್ಟು, ಬರೀ ಬಯ್ಯುತ್ತಾರೆ, ಪ್ರೀತಿನೆ ಮಾಡಲ್ಲ' ಎಂದು ಓರಗೆಯವರೊಟ್ಟಿಗೆ ಗೊಣಗಿಕೊಳ್ಳುವುದಲ್ಲದೆ 'ಸಾಕಪ್ಪಾ ಸಣ್ಣವರಾಗಿ ಬೈಸಿಕೊಳ್ಳುವುದು.... ಬೇಗ ದೊಡ್ಡವರಾಗಿಬಿಡಬೇಕು...!' ಎಂದು ಕಾತರಿಸುತ್ತಿದ್ದ ಆ ದಿನಗಳನ್ನು ನೆನೆಸಿಕೊಂಡರೆ ಈಗ 'ಛೆ ಹಾಗೇಕೆ ಅಂದುಕೊಳ್ಳುತ್ತಿದ್ದೆವೋ' ಎನಿಸುತ್ತದೆ.... ಸುಂದರ ರಸಮಯ ಕ್ಷಣಗಳು ಅವು... ಜವಾಬ್ದಾರಿಯಿಲ್ಲದ ಆ ವಯಸ್ಸು, ತಿಳುವಳಿಕೆಯಿಲ್ಲದ ಆ ಮನಸ್ಸು, ಸದಾ ಆಡುವ ಹುಮ್ಮಸ್ಸು.... ಸಣ್ಣ ಪುಟ್ಟ ವಿಷಯಗಳಿಗೆ ಓರಗೆಯವರೊಡನೆ ಕಿತ್ತಾಡಿ ಮುಖ ಊದಿಸಿಕೊಂಡು ಅದೇ ವೇಗದಲ್ಲಿ ರಾಜಿ ಮಾಡಿಕೊಂಡು ಮತ್ತೆ ಆಡುತ್ತಿದ್ದ ಆ ಕ್ಷಣಗಳು... ಬೇಸಿಗೆ ರಜದಲ್ಲಿ ಮಧ್ಯಾಹ್ನದ ಊಟ ಮುಗಿಸಿ ಎಲ್ಲಾ ಮಕ್ಕಳನ್ನೂ ಗದರಿಸಿ ತನ್ನ ಎರಡೂ ಪಕ್ಕಕ್ಕೆ ಸಾಲಾಗಿ ಮಲಗಿಸಿಕೊಳ್ಳುತ್ತಿದ್ದ ಕಾಕನಿಗೆ ನಿದ್ದೆ ಬರುವುದೇ ತಡ, ಅಲ್ಲಿಂದ ಸದ್ದಿಲ್ಲದೇ ಜಾಗ ಖಾಲಿ ಮಾಡುತ್ತಿದ್ದ ಆ ದಿನಗಳು... ಅಮ್ಮೊಮ್ಮ ನಮ್ಮ ಅಡುಗೆ ಆಟಕ್ಕೆಂದು ಕಟ್ಟಿಕೊಡುತ್ತಿದ್ದ ತಿಂಡಿಗಳು, ಮನೆಯ ಪಾತ್ರೆಗಳು (ಯಾರಿಗೂ ಗೊತ್ತಾಗದಂತೆ) ಎಲ್ಲವನ್ನೂ ಅಂಗಿಯಲ್ಲಿ ಮುಚ್ಚಿಕೊಂಡು ಓಡುತ್ತಿದ್ದ ಆ ವಯಸ್ಸು..... ಯಾವುದೂ ಇನ್ನು ಮರಳಿ ಬರಲಾರದಂಥ ಅನರ್ಘ್ಯ ದಿನಗಳು!!


       ಹುಟ್ಟು ಹಬ್ಬಕ್ಕೆ ಮಾವ ಹೊಸ ಅಂಗಿ ತಂದುಕೊಡುತ್ತಾನೆಂದು  ವರ್ಷ ಪೂರ್ತಿ ಆ ದಿನಕ್ಕಾಗಿ ಕಾದು ಹೊಸ ಅಂಗಿ ಹಾಕಿಕೊಂಡು ಎಲ್ಲರಿಗೂ ನಮಸ್ಕಾರ ಮಾಡಿ ನಲಿಯುತ್ತಿದ್ದಾಗಿನ ಆ ಖುಷಿ, ಈಗ ಬೇಕೆಂದಾಗ ಚೆಂದ ಕಂಡ ಅಂಗಡಿಯಲ್ಲೆಲ್ಲ ನುಗ್ಗಿ ಇಷ್ಟ ಪಟ್ಟು ತಂದು ಹಾಕಿಕೊಳ್ಳುವ ಅಂಗಿಗಳಲ್ಲಿ ಹುಡುಕಲೂ ಸಿಗುತ್ತಿಲ್ಲ....! ಹೊಸ ಅಂಗಿಗಳಿಗೆ ಆಗಿನ 'ಬೆಲೆ'ಯೇ ಇಲ್ಲ!!! ನಮ್ಮೂರಿಗೆ ಟಾರ್ ರಸ್ತೆ ಮಾಡಿ ಹೊಸದಾಗಿ ಬಸ್ ಬಿಟ್ಟಾಗ, ಬೆಳಿಗ್ಗೆ ಬರಬೇಕಾದ ಬಸ್ ಮಧ್ಯಾಹ್ನ ಬಂದರೂ ಕಾಕನ ಜೊತೆ ಬಸ್ ಪೂಜೆ ಮಾಡಿ ಬರಮಾಡಿಕೊಳ್ಳಲು ಸ್ವಲ್ಪವೂ ಬೇಸರಿಸದೆ ಕಾಯುತ್ತಲೇ ಇದ್ದೆವು.  ಆದರೆ ಈಗ ಬಸ್ಸಿಗೆ ನಿಂತರೆ ಹತ್ತೇ ನಿಮಿಷಕ್ಕೆ ನಮ್ಮ ತಾಳ್ಮೆ ಹದಗೆಡುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದ್ದೇವೆ.

       ಊರಿಗೆ ಟಾರ್ ರಸ್ತೆ ಮಾಡುತ್ತಾರೆಂಬ ಸುದ್ದಿ ಕೇಳಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಯೋಚಿಸಿದ್ದೆವು.... 'ಅಯ್ಯೋ ದೇವರೇ...! ಇನ್ನು ನಮ್ಮ ಚಿನ್ನಿದಾಂಡು ಆಡುವ ಜಾಗವನ್ನು ಹೊಂಡ ತೋಡಲಾಗದಂತೆ ಮಾಡಿ ಟಾರ್ ಹಾಕಿಬಿಡುತ್ತರಲ್ಲಾ....ಎಲ್ಲಿ ಆಡೋದು? ಏನ್ಮಾಡೋದು..??' ಹಗಲಿರುಳೂ ಎಲ್ಲರಿಗೂ ಅದೇ ಯೋಚನೆ... ಅದೆಷ್ಟು ಅಲವತ್ತುಕೊಂಡಿದ್ದೆವೋ...!! ಅಂತೂ ಇಂತೂ ಅತೀವ ಬೇಸರದೊಡನೆಯೇ ಸಂತಸ ತುಂಬಿಸಿಕೊಂಡು ಹೊಸ ರಸ್ತೆಯನ್ನೂ ಹೊಸ ಬಸ್ಸನ್ನೂ ಊರೊಳಗೆ ಬರಮಾಡಿಕೊಂಡಿದ್ದೆವು. 'ಅಬ್ಬಾ! ಹೊಸ ರಸ್ತೆಯಾಯಿತು... ಇನ್ನು ಅಪ್ಪನೊಡನೆ ಬೈಕಿನಲ್ಲಿ ಹೋಗುವಾಗ ಕೆಸರು ತುಂಬಿ ಬೈಕ್ ಓಡಿಸಲಾಗಂತ ರಸ್ತೆಯಲ್ಲಿ ಬೈಕ್ ಇಳಿದು, ಅಪ್ಪ ದಾಟಿಸಿ ತರುವವರೆಗೆ ಮುಂದೆ ಓಡಿ ಹೋಗಿ ನಿಂತು ಮತ್ತೆ ಹತ್ತುವ ಕೆಲಸವಿಲ್ಲ... ಹತ್ತಿ ಕೂತರಾಯಿತು ಸುಂಯ್ಯನೆ ಹೋದರಾಯಿತು..' ಎಂಬ ಸಂತೋಷ ಒಂದೆಡೆಯಾದರೆ.... 'ಛೆ! ನಮಗೆ ಚಿನ್ನಿದಾಂಡು ಆಡಲು ಜಾಗವಿಲ್ಲದಂತೆ ಮಾಡಿಬಿಟ್ರಲ್ಲ ಈ ಸರ್ಕಾರದೋರು...!' ಎಂಬ ಖೇದ ಇನ್ನೊಂದೆಡೆ...


       ಈ ಬೇಸರ-ಸಂತಸಗಳ ತುಮುಲ ಇನ್ನೂ ಮನಸ್ಸಿನಲ್ಲಿರುವಾಗಲೇ ಎಲ್ಲರ ಪ್ರೀತಿಯ ಕಾಕನ ಭೀಕರ ಅಗಲಿಕೆ ಊರಿಗೆ ಊರೇ ನೋವು ಪಡುವಂತೆ ಮಾಡಿತ್ತು. ಆಪ್ಪನಿಗಿಂತಲೂ ಹೆಚ್ಚು ಅವನ ಒಡನಾಟ ಜಾಸ್ತಿಯಿದ್ದ ನನ್ನನ್ನಂತೂ ಸಮಾಧಾನ ಮಾಡಲಾಗದೆ ಸೋತಿದ್ದರು....ಈ ಘಟನೆಯಿಂದ ದೇವರಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದ್ದೆ....ಯಾರು ಎಷ್ಟೇ ಹೇಳಿದರೂ ದೇವರಿಗೆ ಕೈ ಮುಗಿಯುತ್ತಿರಲಿಲ್ಲ. ಒಂದೇ ಒಂದು ದಿನ ದೇವರಿಗೆ ನಮಸ್ಕರಿಸದೆ ಬಂದು ತಿಂಡಿಗೆ ಕುಳಿತರೂ ಬೈಸಿಕೊಂಡು ಅಂಗಳದಲ್ಲಿದ್ದ ದೇವಸ್ಥಾನಕ್ಕೆ ಓಡಿ ಹೋಗುತ್ತಿದ್ದ ನೆನಪು ಬೇಡವೆಂದರೂ ಕಣ್ಣ ಮುಂದೆ ಬಂದು ಕಣ್ಣೀರಾಗುತ್ತಿದೆ. ಕೂತಲ್ಲಿ ನಿಂತಲ್ಲಿ ಅವನದೇ ನೆನಪು...ಇಬ್ಬರೂ ಅದೆಷ್ಟು ಹಚ್ಚಿಕೊಂಡಿದ್ದೆವೆಂದು ತಿಳಿದ ಎಲ್ಲರೂ ನಾನಾ ಬಗೆಯಲ್ಲಿ ಸಮಾಧಾನದ ಪ್ರಯತ್ನ ಮಾಡಿದ್ದರು. ಅವನ ಅಗಲಿಕೆಯ ನಂತರ ಯರು ಏನೇ ಬೈದರೂ ಸಮಾಧಾನ ಮಾಡಲು ಅವನಿಲ್ಲವಲ್ಲ ಎಂದು ನೆನೆ-ನೆನೆಸಿಕೊಂಡು ಕೋಣೆಗೆ ಓಡಿ ಹೋಗಿ ಬಿಕ್ಕುತ್ತಿದ್ದೆ. ತಾನು ಹೋಗುವಾಗ ತನ್ನೆಲ್ಲಾ ಸಿಟ್ಟು-ಮುಂಗೋಪವನ್ನು ಮಗಳಿಗೇ ಬಿಟ್ಟು ಹೋಗಿದ್ದಾನೆ ಎಂದು ಮನೆಯವರೆಲ್ಲ ಹಲುಬಿಕೊಳ್ಳುವಷ್ಟರ ಮಟ್ಟಿಗೆ ಸಿಟ್ಟಿನ ಖೋಡಿಯಾಗಿದ್ದೆ! ಅವನಿಲ್ಲ ಎಂಬ ಒಂದೇ ಯೋಚನೆ.. ಯಾರು ಏನೇ ಕೆಲಸ ಹೇಳಲಿ, ಬುದ್ದಿ ಹೇಳಲಿ ಬರೀ ಸಿಟ್ಟು.... ಕೇವಲ ಹನ್ನೊಂದು ವರ್ಷ ಅವನ ಜೊತೆ ಇರುವುದಕ್ಕಾಗಿ ನನ್ನನ್ನು ಈ ಭೂಮಿಗೆ ಕಳುಹಿಸಿದ ಆ ದೇವರನ್ನು ಮನಸಾರೆ ಬೈದುಕೊಂಡಿದ್ದೆ... ಅವನ ಜೊತೆ ಕಳೆದ ದಿನಗಳು, ಅವನು ನನ್ನನ್ನು ಪ್ರೀತಿಸುತ್ತಿದ್ದ ರೀತಿ, ಅವನ ಮಮತೆ, ನನ್ನ ಮೇಲಿನ ಅತೀವ ವಾತ್ಸಲ್ಯ..... ಇನ್ನು ಅವನಿಲ್ಲ, ನನಗೆ ಅವನ ಮಮಕಾರವೂ ಇಲ್ಲಾ ಎಂಬ ಕಹಿ ನೆನಪಿಂದ ಹೊರಬರಲು ಅಗಾಧ ೬ ವರ್ಷಗಳನ್ನೇ ತೆಗೆದುಕೊಂಡಿದ್ದೆ....

       ಕಳೆದ ವಾರದಿಂದ ಅದೆಕೂ ಬಾಲ್ಯದ ನೆನಪುಗಳ ಬುತ್ತಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಅದೆಷ್ಟು ಬೇಗ ವರ್ಷಗಳು ಉರುಳಿ ಹೋದವು...!! ಓರಗೆಯವರೊಟ್ಟಿಗೆ ಬೆಟ್ಟ-ಗುಡ್ಡ ತಿರುಗಿ ಬಿಳಿ ಮುಳ್ಳ ಹಣ್ಣನ್ನು ಹೊಟ್ಟೆ ಬಿರಿ ತಿಂದು ಮೈ ನಂಜೇರಿ ಮನೆಯಲ್ಲಿ ಉಗಿಸಿಕೊಳ್ಳುತ್ತಿದ್ದುದು, ತಿರುಗಿ-ಕುಣಿದು ಬಂದು ಕಾಲು ನೋವೆಂದಾಗ ಅಮ್ಮೊಮ್ಮ ಕಾಲಿಗೆ ಎಣ್ಣೆ ಹಚ್ಚಿ ತಿಕ್ಕುತ್ತಿದ್ದುದು, ತೋಟದಲ್ಲಿ ಕೋಕೋ ಹಣ್ಣನ್ನು ಕಾಕನ ಕಣ್ಣು ತಪ್ಪಿಸಿ ೮-೧೦ ತಿಂದು ತೋಟದ ತುಂಬಾ ಕಸ ಹಾಕಿ ಸಿಕ್ಕಿಕೊಳ್ಳುತ್ತಿದ್ದುದು, ಎಲ್ಲರೂ ಸೇರಿ ಅಡುಗೆ ಆಟವಾಡಲು ಚಪ್ಪರ (ಅದೇ ನಮ್ಮ ಅಡುಗೆ ಆಟದ ಮನೆ) ಕಟ್ಟಿ ಒಳಗೇ ಕೂತು ಅಡುಗೆ ಶುರು ಮಾಡುತ್ತಿದ್ದಂತೆಯೇ ಗಟ್ಟಿಯಾಗಿ ಹುಗಿದೆವೆಂದುಕೊಂಡಿದ್ದ ಕಂಬ ಸೋಗೆಯ ಭಾರ ತಾಳಲಾಗದೆ ಮೈ ಮೇಲೆಯೇ ಮುರಿದು ಬೀಳುತ್ತಿದ್ದುದು, ಮನೆಯ ಮುಂದಿನ ಹುಳಿ ಮಾವಿನ ಮರದಲ್ಲಿ ಹಣ್ಣು ಉದುರುವುದನ್ನೇ ಕಾಯುತ್ತಿದ್ದುದು, ಎಲ್ಲೇ ಇದ್ದರು ಜೋರು ಗಾಳಿ ಬಂದಿದ್ದೇ ಮರದ ಬುಡಕ್ಕೆ ಓಡಿ ಹಣ್ಣು ಹುಡುಕುತ್ತಿದ್ದುದು, ಎರಡು ಹಣ್ಣು ಸಿಕ್ಕರೆ ಭಾವಯ್ಯ ನನಗೆ ಮಾತ್ರ ಒಂದನ್ನು ಕೊಟ್ಟು ಉಳಿದವರೆದುರಿಗೆ ಗರ್ವದಿಂದ ತಿನ್ನುತ್ತಿದ್ದುದು, ಕಣ್ಣಾ ಮುಚ್ಚಾಲೆ - ಪಗಡೆ - ಚಿನ್ನಿ ದಾಂಡುಗಳಲ್ಲಿ ಹೊತ್ತು ಹೋಗಿದ್ದೇ ತಿಳಿಯದೆ ಮುಳುಗುತ್ತಿದ್ದುದು, ಆಟದ ಮನೆಯ ಎದುರು ಎರಡು ಕಲ್ಲು ನಿಲ್ಲಿಸಿ ಒಲೆ ಮಾಡಿ ಅಲ್ಲೇ ಅನ್ನ ಮಾಡಿ ಮನೆಯಿಂದ ಹುಳಿ ತಂದು ನಾವು ಅನ್ನ ಮಾಡುವುದು ಕಲಿತೆವೆಂಬ ಖುಷಿಗೆ ನಾನು ತಂಗಿ ಅಲ್ಲೇ ಊಟ ಮಾಡಿ ಮತ್ತೆ ಕೇರಿ ಮನೆಯ ತಿಥಿ ಊಟಕ್ಕೆ ಹೋಗಿ ಅಲ್ಲೂ ಸರಿಯಾಗಿ ಊಟ ಬಾರಿಸಿದ್ದು..... ಪಕ್ಕದ ಮನೆಯ ಅಕ್ಕ ಕಾಡಿಗೆ ಕಟ್ಟಿಗೆ ತರಲು ಹೋಗುವಾಗ ನಮ್ಮನ್ನೂ ಕರೆಯುತ್ತಿದ್ದುದು, ನಾವು ಕಟ್ಟಿಗೆ ತರದಿದ್ದರೂ ಅವಳೊಡನೆ ಕಾಡು ಸುತ್ತಲು ಹೋಗುತ್ತಿದ್ದುದು, ಅಲ್ಲಿ ಮರ ಹತ್ತಿ ಕುಳಿತು ಅಂತ್ಯಾಕ್ಷರಿ ಆಡುತ್ತ ಜೋರಾಗಿ ಹಾಡು ಹೇಳುತ್ತಿದ್ದುದು, ಬೀಳಲು ಬಿಟ್ಟ ಮರಗಳನ್ನು ಹುಡುಕಿ ಜೋಕಾಲಿ ಆಡುತ್ತಿದ್ದುದು, ಒಂದು ದಿನ ಅಕ್ಕ ನಮ್ಮೊಡನೆ ಆಡುತ್ತಾಕಟ್ಟಿಗೆ ಹೊರೆ ಕಟ್ಟುವಷ್ಟರಲ್ಲಿ ಕತ್ತಲಾಗಿ ರಾತ್ರಿ ಎಂಟೂವರೆ ಗಂಟೆಗೆ ಮನೆ ಸೇರಿ ಕೆಳಗಿನ ಮನೆಯಲ್ಲಿ ಪಗಡೆ ಆಡುತ್ತಾ ಹೊತ್ತಾಯಿತೆಂದು ಸುಳ್ಳು ಹೇಳಿ ಸಿಕ್ಕು ಬಿದ್ದು ಹಿಗ್ಗ ಮುಗ್ಗ ಬೈಸಿಕೊಂಡು ಕಾಡಿನ ಪಯಣಕ್ಕೆ ತಿಲಾಂಜಲಿ ಬಿಟ್ಟಿದ್ದು...


       ಚೌತಿ ಹಬ್ಬದ ದಿನಗಳಲ್ಲಿ ಬೆಟ್ಟ ತಿರುಗಿ ಬಿಕ್ಕೆ ಹಣ್ಣು ಹುಡುಕುತ್ತಿದ್ದುದು, ಹಬ್ಬಕ್ಕೆ ಫಲವಳಿಗೆ ಸಾಮಾನು ತರುತ್ತಿದ್ದುದು, ಮುರುಗಲ  ಮರದ ಎಳೆಯ ಎಲೆಗಳನ್ನು ಕೊಯ್ದು ಉಪ್ಪು-ಮೆಣಸು ಹಾಕಿ ನಾವೇ ಕಂಡುಕೊಂಡ ಪೊಟರೆಗಳಲ್ಲಿ ಕಲ್ಲು ಹೇರಿ ಬಚ್ಚಿಟ್ಟು ಮರುದಿನ ಬಾಯಿ ಚಪ್ಪರಿಸಿ ತಿನ್ನುತ್ತಿದ್ದುದು, ಯಾರದೋ ಮನೆಯ ಪನ್ನೇರಳ ಮರಕ್ಕೆ ಕರೆದುಕೊಂಡು ಹೋಗಿ ಭಾವಯ್ಯಂದಿರು ಹಣ್ಣು ಕದ್ದು ನಮಗೂ ತಿನ್ನಿಸುತ್ತಿದ್ದುದು....


       ಡಿಗ್ರಿ ಓದುತ್ತಿದ್ದಾಗ ರಜಕ್ಕೆಂದು ಊರಿಗೆ ಬಂದರೆ ತಂಗಿಯೊಡನೆ ಮಲೆನಾಡಿನ ಕುಂಭದ್ರೋಣ ಮಳೆಯಲ್ಲಿ ಛತ್ರಿ ಹಿಡಿದು ನಮ್ಮ ನೆಚ್ಚಿನ 'ಭೂತನ ಕಟ್ಟೆ'ಗೆ ಹೋಗುತ್ತಾ ಇದನ್ನೆಲ್ಲಾ ನೆನೆಸಿಕೊಳ್ಳುತ್ತಾ ಮಳೆಯ ಪರಿವೆಯೇ ಇಲ್ಲದೆ ಮಳೆಯಲ್ಲಿ ನೆಂದಿದ್ದು... ಉಫ್ ....... ಎಷ್ಟೊಂದು ಖುಷಿಯಿಂದ ಆಡಿದ್ದ, ಕುಣಿದಿದ್ದ, ನಲಿದಿದ್ದ ದಿನಗಳವು.... ನಿನ್ನೆಯೋ ಮೊನ್ನೆಯೋ ೮-೧೦ ವರ್ಷದವರಾಗಿ ಆಡುತ್ತಿರುವಂತೆ ಎಲ್ಲಾ ನೆನಪುಗಳು ಹಚ್ಚ ಹಸಿರಾಗಿವೆ....

       ಈಗ ನೋಡಿದರೆ ಜೊತೆಗೆ ಆಡುತ್ತಿದ್ದ ತಂಗಿ-ಚಿಕ್ಕಪ್ಪನ ಮಗಳು ಮದುವೆಯಾಗಿ ಚಟ-ಪಟನೆ ಅರಳು ಹುರಿದಂತೆ ಮಾತಾಡುವ ಪುಟ್ಟ ಮಗಳನ್ನು ಕಂಕುಳಲ್ಲಿ ಎತ್ತಿಕೊಂಡು 'ಕಾವ್ಯಕ್ಕಾ ಎಷ್ಟು ಮಾತಾಡ್ತಾಳೆ ನೋಡು....' ಎಂದು ನನ್ನತ್ತ ಹೇಳುತ್ತಾ...'ಪುಟ್ಟೀ ಇವಳು ನಿನ್ನ ದೊಡ್ಡಮ್ಮ...' ಎಂದು ನನ್ನ ಪರಿಚಯ ಮಗಳಿಗೆ ಮಾಡಿಸುವಂತಗಿದ್ದಾಳೆ....! ಇನ್ನು ಅತ್ತಿಗೆ ಕೂಡ ಮದುವೆಯಾಗಿ ಎರಡೆರಡು ಮಕ್ಕಳ ಆರೈಕೆಯಲ್ಲಿ ಮುಳುಗಿದ್ದಾಳೆ... ಒಂದು ಭಾವಯ್ಯ ಆಗ ರಜದಲ್ಲಿ ಮಾತ್ರ ಸಿಗುತ್ತಿದ್ದವನು  ಈಗ ಆತನ ದೊಡ್ಡ-ದೊಡ್ಡ ಓದಿನ ನಡುವೆಯೂ ಆಗಾಗ ಬಿಡುವು ಮಾಡಿಕೊಂಡು ಬಂದು ಹರಟಿ ಖುಷಿ ಪಡಿಸುತ್ತಾನೆ.... ಇನ್ನೊಂದು ಭಾವಯ್ಯ ತನ್ನ ಉದ್ಯೋಗವನ್ನು ಕಂಡುಕೊಂಡು ಉದ್ಯೋಗಸ್ಥನಾಗಿ ಮಾತನಾಡಲು ಸಮಯವಿಲ್ಲದಂತೆ ಕಳೆದು ಹೋಗಿದ್ದಾನೆ... ಮಗದೊಂದು ಭಾವಯ್ಯ ಊರಿನಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡದೆ ಉಂಡಾಡಿಯಾಗಿ ತಿರುಗಿಕೊಂಡು ಹಾಯಾಗಿದ್ದಾನೆ...!! ಪ್ರೀತಿಯ ತಮ್ಮ ಓದಿಗಾಗಿ ನನ್ನ ಬಿಟ್ಟು ದೂರದೂರಿಗೆ ತೆರಳಿದ್ದಾನೆ... ನಾನು ಮಾತ್ರ ಇವೆಲ್ಲ ಸಿಹಿ-ಕಹಿ ನೆನಪುಗಳ ಬುಟ್ಟಿಯೊಂದಿಗೆ, ಎಲ್ಲವನ್ನೂ ಮೆಲಕು ಹಾಕುತ್ತಾ ನನ್ನ ಜೀವದ ಗೆಳೆಯರಾದ ಲೇಖನಿ - ಕಾಗದದೊಂದಿಗೆ ನೆನಪುಗಳ ಬಕ್ಕಸಕ್ಕೆ ಅಕ್ಷರ ರೂಪ ಕೊಡುತ್ತಿದ್ದೇನೆ.... ಕಾಲನ ವೇಗಕ್ಕೆ-ಆವೇಗಕ್ಕೆ ಕೈಜೋಡಿಸಿ ಮುಂದಿನ ಹೆಜ್ಜೆಯತ್ತ ಗಮನ ಹರಿಸಿದ್ದೇನೆ.....



ಕಾವ್ಯಾ :) 

Thursday, March 10, 2011

ಗೆಳೆಯಾ, 
     ಅಂದಿನ ನಮ್ಮ ಮೊದಲ ಭೇಟಿ 
ಸೋನೆ ಮಳೆ ಬಂದು ನಿಂತ 
     ತಂಪಿನಂತಿತ್ತು........
ತರುಲತೆಗಳಿಂದುದುರುವ ಮಳೆ ಹನಿಗಳು 
     ನಿನ್ನ ಮುದ ನೀಡುವ ಮಂದಹಾಸವನ್ನು 
ನೆನಪಿಸುವಂತಿತ್ತು........
     ಆದರೆ, 
ಇಂದೇಕೆ ತನ್ನ ಸರ್ವಸ್ವವನ್ನೂ ಕಳೆದುಕೊಂಡ 
     ವೃಕ್ಷದಂತಾಯ್ತು  ನಮ್ಮ ಪ್ರೇಮ....?!?
ಬರಿದಾದ ಮರಗಳು ನನ್ನ ನೋಡಿ
     ಕುಹುಕದಿ ನಗುತಿವೆ.......
ವಸಂತದ ಬರುವಿಕೆಗಾಗಿ ಕಾಯುತ್ತಿರುವ 
     ಮರಗಳನ್ನು ಕಣ್ಣಂಚಿನ ನೀರಿನೊಂದಿಗೆ 
ನೋಡುತ್ತಾ ಕುಳಿತಿದ್ದೇನೆ.......
     ಮನಸು ಸಾವಿರ ಬಾರಿ ಪ್ರಶ್ನಿಸುತ್ತಿದೆ
ಮುಂದಾದರು ಬರಬಹುದೇ ನಿಮ್ಮ ಬಾಳಿನಲ್ಲಿ 
     ಈ ವಸಂತದ ಸಂಭ್ರಮ....?!!
ಮತ್ತೆ ಚಿಗುರಬಹುದೇ ನಿಮ್ಮೆಲ್ಲಾ 
     ಸುಂದರ ಕನಸು....??!


ಮಂಜಿನ ಮುಂಜಾವಿನಲಿ 
       ನೀ ಜೊತೆಗಿರಲು.....
ಬೆಳ್ಳಗಿನ ಬೆಳದಿಂಗಳಿನಿರುಳಲಿ 
       ನೀ ಬಿಗಿದಪ್ಪಲು......
ಹುಣ್ಣಿಮೆಯ ಕತ್ತಲಲಿ 
       ನಿ ಮುದ ನೀಡಲು.....
ಮಾಗಿಯ ಚಳಿ ಗಾಳಿಯಲಿ 
       ನಾವ್ ತೇಲಿ ಹೋಗಲು.....
ಭೋರ್ಗರೆವ ಸಾಗರ ಗರ್ಭದಲಿ
       ನಾವ್ ಕರಗಿ ಹೋಗಲು.....
ಸುಂದರ ಪ್ರಕೃತಿಯೊಳು
       ನಾವೈಕ್ಯವಾಗಲು.......
ಈ ಜೀವನಕ್ಕೆ ಇನ್ನೇನು ಬೇಕು ಗೆಳೆಯಾ......
ಸತ್ತು ಕಾಣುತ್ತೇವೆಂಬ  ಸ್ವರ್ಗಕ್ಕಿಂತ
ನಿನ್ನ ಒಂದು ಭಾಗವಾಗಿ ಪಡೆಯುವ ಆನಂದವೇ 
ನನಗೆ ಜನ್ಮಜನ್ಮಾಂತರದ ಸ್ವರ್ಗ......



ನನ್ನಿನಿಯ ಬಳಿ ಬಂದ
     ಪಡೆಯಲೆಂದು ಕರುಳಿನ ಕುಡಿ,
ತಕ್ಷಣವೇ ಕೂಗುತ ಸರಿದೆ - 
     'ಮುಟ್ಟಬೇಡ ನಾನಿನ್ನು ಮೂರು ದಿನ ಮಡಿ....!!!




ನಿನ್ನ ವದನದೊಳೀಗ 
     ಚಿಮ್ಮುತಿರುವ ಆ ನಗೆಗೆ,
ನಾಚಿಕೆ ಧೈರ್ಯವಾಗಿ 
     ಬದಲಾಗುತ್ತಿರುವ ಆ ಬಗೆಗೆ, 
ನೀ ನೋಡುವ ಆ ಪರಿಗೆ...
     ಉಪಮೆಯೆಲ್ಲಿದೆ...?!
ನಯನದೊಳು ನಯನ
     ಬೆರೆತಾಗಿನ ಆ ಮೂಕ 
ಭಾವನೆಗೆ ಕೊನೆಯೆಲ್ಲಿದೆ...?!
     ಅನು ದಿನವೂ ಉದ್ಭವಿಸುವ 
ಸಹಸ್ರಾರು ಪ್ರಶ್ನೆಗಳಿಗೆ 
     ಉತ್ತರವೆಲ್ಲಿದೆ...?!
ನಿ ಇದಕ್ಕೆಲ್ಲ ಉತ್ತರಿಸುವೆಯೆಂದು 
      ಕಾಯುತ್ತಿರುವ ನನ್ನ ತಾಳ್ಮೆ 
ಮುಗಿಯುವುದೆಂದಿಗೆ....?!

Wednesday, February 9, 2011

ಆಂಟಿ ಎನ್ನುವ ತುಂಟಿಯ ಬಗ್ಗೆ..........


        ಈ  ಆಂಟಿ ಅನ್ನೋ ಪದ ಕೇಳಿದ್ರೆ ಏನೋ ಮುಜುಗರ ಕಣ್ರೀ... ಈ ನಮ್ ಬೆಂಗಳೂರಲ್ಲಿ ಯಾರ್ ನೋಡಿದ್ರೂ ಆಂಟಿ ಅಂತಾನೆ ಸಂಭೋದನೆ ಮಾಡ್ತಾರಲ್ಲಾ, ಇವ್ರಿಗೇನ್ ಅಷ್ಟೂ ಗೊತಾಗಲ್ವೇನ್ರೀ ನಾವಿನ್ನು ಹುಡ್ಗೀರು ಅಂತ...!! ನಮ್ಕಿಂತ ಎಷ್ಟೋ ದೊಡ್ಡ ಮಂದಿ ನಮ್ಮನ್ನ ಆಂಟಿ ಅಂತ ಕರೆದ್ರೆ ನಮ್ಮ ಪರಿಸ್ಥಿತಿ ಹೇಗಾಗಿರಬೇಡ....! 
        ಬಿಡಿ ಈಗ ವಿಷಯಕ್ಕೆ ಬರೋಣ... ಈ ದೊಡ್ಡ ಸಿಟಿಗಳಲ್ಲಿ ಆಂಟಿಯರಂಥ ಆಂಟಿಯರು ಹೇಗಿರ್ತಾರೆ...? ಕೇಳ್ತಿದ್ದ ಹಾಗೇ ನಿಮ್ಗೆ ಕಣ್ಣ್ಮುಂದೆ ಒಂದು ಆಂಟಿಯರ ದಂಡೇ ಬಂದಿರುತ್ತೆ ಅಲ್ವೇ...?! ಮನೆಯಲ್ಲಿ ಮಾಡಿ ತಿನ್ನಲಾರದೆ ಹೋಟೆಲ್ ಗಳಲ್ಲಿ ಮೆಲಕು ಹಾಕುತ್ತಿರುವ ಶ್ರೀಮಂತ ಆಂಟೀರು (ನಮ್ಮ ಊರಿನ ಎಮ್ಮೆಗಳಂತೆ...!), ಸಂಜೆ ಆಯಿತೆಂದರೆ ಒಂದೇ ಒಂದು ಚಾಟ್ಸ್ ಅಂಗಡಿಯನ್ನೂ ಬಿಡದಂತೆ ಮೇಯುತ್ತಿರುವ (ಪತಿ, ಮಕ್ಕಳನ್ನೊಡಗೂಡಿ) ಗಜಗಾಮಿನಿಯರು ಹೊತ್ತು ಗೊತ್ತಿಲ್ಲದೇ ಅಕ್ಕ-ಪಕ್ಕದವರೊಡನೆ ಕಟ್ಟೆ ಪುರಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಲಲನೆಯರು, ತಮ್ಮ ಪತಿಯನ್ನು ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡ ಹಿಡಿಂಬೆಯರು...... ಹೀಗೇ ನಿಮ್ಮ ಯೋಚನಾಲಹರಿ ಹರಿಯುತ್ತಿದೆ ಅಲ್ಲವೇ....!?
        ಈ ಹೋಂ ಮೇಕರ್ ಎಂದು ಕರೆಸಿಕೊಂಡು ಮನೆಯಲ್ಲೇ ಇರುವ ಆಂಟಿಯರ ಹಾಡು-ಪಾಡು ಇದಾದರೆ, ಇನ್ನು ವರ್ಕಿಂಗ್ ವುಮನ್ ಎನಿಸಿಕೊಂಡವರದು ಬೇರೆಯದೇ ಥಿಯರಿ. ಬೆಳಿಗ್ಗೆ ಎದ್ದು ಮನೆಯಲ್ಲೂ ಕೆಲಸ ಮುಗಿಸಿ, ಆಫೀಸಿನಲ್ಲಿ ಕುಳಿತು ಅಲ್ಲಿಯೂ ಗೇಯ್ದು, ಸಂಜೆ ಮನೆಗೆ ಬಂದೂ ಕೂಡ 'ನಾನೇಕೆ ಕೆಲಸ ಮಾಡಲಿ.... ನಮಗಾಗೆ ಅಲ್ವೇ ಈ ತಿಂಡಿ-ಪಂಡಿ ಅಂತ ಜನ ಮಾರ್ಕೊಂಡಿರೋದು... ಅವರಿಗೂ ಹೊಟ್ಟೆ ಪಾಡಾಗಬೇಕಲ್ಲವೇ ಪಾಪ... ಬನ್ನಿ ಹೋಗೋಣ ತಿನ್ನೋಕೆ..' ಇದು ಇವರ ಅಂಬೋಣ! ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ತಿಂಬೋಣ ಖಾಯಿಲೆಯೆಂಬುದು ವಿಶ್ವವ್ಯಾಪಿಯಾಗಿಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ಯಾವನೋ ಒಬ್ಬ ಒಂದು ಕಡೆ ಸಗಣಿಯನ್ನು (ಗೊತ್ತಿಲ್ಲದಂತೆ!) ಉಪ್ಪು, ಖಾರ ಹಾಕಿ ಕರಿದು ಮಾರಿದರೂ ಸಹ ಅರಿಯದೆ ಚೆನ್ನಾಗಿದೆಯಪ್ಪ ಎಂದು ತಿಂದು ಬಿಡುವಷ್ಟರ ಮಟ್ಟಿಗೆ....!! ತಮಗೆ ಏನೆಂದೇ ತಿಳಿಯದೆ ಹೊಸ ರುಚಿ ಎಂದು ತಿಂದು ಬಂದ ಆಂಟಿ ಸುಮ್ಮನಿರುತ್ತಾಳೆಯೇ..!? ಖಂಡಿತ ಇಲ್ಲಾ.... ತಕ್ಷಣ ಪಕ್ಕದ ಮನೆಯ ಆಂಟಿಗೆ ಫೋನಾಯಿಸಿ "ಏನ್ರೀ ಲಕ್ಷ್ಮೀ ನಿಮ್ಗೆ ಗೊತ್ತೇನ್ರೀ, ನಮ್ ಬೀದಿ ಕೊನೇಲಿ ಒಂದು ಹುಡ್ಗ ಅದೇನೋ ಚಾಟ್ ಅಂಗಡಿ ಹಾಕಿದಾನೆ ಕಣ್ರೀ ಹೊಸ್ದಾಗಿ.... ಎಷ್ಟ್ ಚೆನ್ನಾಗಿ ಕೊಡ್ತಾನೆ ಅಂತೀರಾ...!! ಇವಾಗ ತಾನೇ ನಾನು ನಮ್ಮೆಜಮಾನ್ರು ತಿನ್ಕೋ ಬಂದ್ವಿ....ನೀವು ಟೇಸ್ಟ್ ನೋಡಿ ಒಂದ್ಸಲ... ಅದೆನನೋ ಕರ್ದು ಮಸಾಲೆ ಹಾಕ್ಕೊಡ್ತಾನ್ರೀ... ಎಲ್ಲೂ ತಿಂದೊರೋಲ್ಲ ನೀವು A1 ಕಣ್ರೀ...." ಹೇಗಿದೆ ವರಸೆ...!!! ಇದನ್ನು ಕೇಳಿದ್ದೆ ಪಕ್ಕದ ಆಂಟಿ ಬಿಟ್ಟಾರೆಯೇ... ತಕ್ಷಣವೇ ಗಂಡನಿಗೆ ದುಂಬಾಲು ಹೋಗಿ ಬರೋಣ ನಡೀರ್ರಿ ಎಂದು....! ಕೆಲವೇ ದಿನಗಳಲ್ಲಿ ಆ ಬೀದಿಯ ಮಂದಿಯೆಲ್ಲಾ ಅಲ್ಲಿ ಹಾಜರಿ ಗುಜರಾಯಿಸಲು ಶುರುವಿಟ್ಟುಕೊಂಡೆ ಬಿಡುತ್ತಾರೆ. ಹೀಗೇ ಆ ಹುಡುಗನ special masaala (!) ಬೀದಿಯಲ್ಲೆಲ್ಲಾ famous ಆಗಿಯೇ ಬಿಡುತ್ತೆ......

       ಇಷ್ಟೇ ಅಲ್ಲಾರೀ, ಈ ತಿಂಬೋಣವನ್ನು ಬಿಟ್ಟು ಇನ್ನೊಂದು ಖಯಾಲಿ ಇದೆ ಈ ಆಂಟಿಯರಲ್ಲಿ... ಏನೂ ಅಂತೀರಾ? ಅದೇ ನಿಮಗೆಲ್ಲ ತಿಳ್ದಿರೋ beauty parlor ಫೋಬಿಯಾ ಬಗ್ಗೆ ಕಣ್ರೀ ನಾ  ಹೇಳೋಕೆ ಹೊರ್ಟಿರೋದು...! ಗಂಡಂದಿರು ಏನೇ ಅನ್ನಲಿ ಈ ಆಂಟಿಯರಿಂದ ತಾನೇ ನಮ್ಮ beauty parlor ನಡೆಸ್ತಿರೋ ಎಷ್ಟೋ ಆಂಟಿಯರ ಮತ್ತು ಹುಡುಗಿಯರ ಜೀವನ ನಡೀತಿರೋದು. ನೀವು ಒಮ್ಮೆ beauty parlor ಗೆ ಹೋಗಿ ನೋಡಬೇಕು. ನಮ್ಮಂತ ಪ್ರಪಂಚ ಕಂಡಿರದ ಹುಡುಗಿಯರಿಗಿಂತ ಹೆಚ್ಚಾಗಿ ಎಲ್ಲವನ್ನೂ ಕಂಡು, ವಯಸ್ಸಾದರೂ ಒಪ್ಪಿಕೊಳ್ಳಲಾರದ ಆಂಟಿಯರ ದಂಡೇ ಅಲ್ಲಿ ಠಳಾಯಿಸಿರುತ್ತದೆ. ಒಬ್ಬೊಬ್ಬರ ವೇಷ ನೋಡಬೇಕು ಅಲ್ಲಿ... ಆಹಾ ಇದೇನಪ್ಪ ಇದು ಅವರ ಗಂಡಂದಿರಿಗೆ ಪ್ರೀತಿ ಎನಿಸಿಬಿಡುತ್ತದೆ....! ನಮಗೆ ಗಟ್ಟಿಯಾಗಿ ನೋಡಲು ನಾಚಿಕೆಯಾಗುತ್ತದೆ ಕೂಡ...!! ಪಾಪ ಆ ಗಂಡನೆಂಬ ಮಂಕುದಿಣ್ಣೆಯಾದರೂ ಏನೂ ಮಾಡುತ್ತೆ ಕಟ್ಟಿಕೊಂಡ ತಪ್ಪಿಗೆ ಇರಲೇ ಬೇಕಲ್ಲ ಜೊತೆಗೆ...! 
         ಇಂತಹ ತರಹೇವಾರಿಗಳಲ್ಲಿ ಕೆಲಸವಿಲ್ಲದೆಯೇ busy ಯಾಗಿರುವ ನಮ್ಮ ಆಂಟಿಯರು ಅದೆಷ್ಟು ಚೆನ್ನಾಗಿ ಮೈ ಬೆಳೆಸಿಕೊಂಡಿರುತ್ತಾರೆ ಅಂತೀರಾ...?! ಇದಕ್ಕೆ ಉತ್ತರವೆಂಬಂತೆ ಬಹುಪಾಲು ಅಂಕಲ್ ಗಳು ತಮ್ಮ ಹೆಂಡತಿಯ ಗಜಕಟಿಗಳನ್ನು ಎರಡು ಕಣ್ಣುಗಳಲ್ಲಿ ತುಂಬಿಸಿಕೊಳ್ಳಲಾರದೆ ನಾಲ್ಕು ಕಣ್ಣುಗಳ ಮೊರೆ ಹೋಗಿರುವುದು... !!
        ಅಂದ ಹಾಗೇ ಇನ್ನೊಂದು ವಿಷ್ಯ ಮರ್ತಿದ್ದೆ. ಏನೂ ಅಂತೀರಾ... ಅದೇ ಕಣ್ರೀ ಈ ಟಿವಿ ಧಾರಾವಾಹಿಗಳಿಗೂ ಆಂಟಿಗಳಿಗೂ  ಇರುವ  link ಬಗ್ಗೆ.... ಬೆಳಿಗ್ಗೆಯಿಂದ ರಾತ್ರಿಯವರೆಗೆ ಒಂದನ್ನೂ ಬಿಡದೆ ಅಷ್ಟೂ ಧಾರಾವಾಹಿಯ ವೀಕ್ಷಣೆಯಲ್ಲಿ busy ಅಗೊಗಿದ್ದಾರೆ ಪಾಪ ನಮ್ಮ ನಿಮ್ಮೆಲ್ಲರ ಪ್ರೀತಿಯ ಆಂಟೀರು! ಈಗಿನ ಧಾರಾವಾಹಿಗಳೋ  ಅದರ ಕಥೆಯೋ..ಬರೀ ಮನೆ ಮುರಿಯುವ ಅಥವಾ ಎರಡೋ ಮೂರೋ  ಮದುವೆಯಾಗುವ ಗಂಡಸಿನ ಕಥಾ ಹಂದರವನ್ನು ಬಿಟ್ಟರೆ ಒಳ್ಳೆಯ ಕಥೆಗಳೇ ಅಪರೂಪ... ಅದರೂ ಇಂಥ ದಾರಾವಾಹಿಗಳೆಂದರೆ ನಮ್ಮ ಆಂಟಿಯರಿಗೆ ಅಚ್ಚು - ಮೆಚ್ಚು. ಮನೆಯವರಿಗೆ ಬೇರೆ channel ಹಾಕಲೂ ಕೊಡದೆ ಅಡಿಗೆ ಕೆಲಸವನ್ನೂ ಬದಿಗೊತ್ತಿ, ಇಂಥಹ ಕಥೆಗಳಲ್ಲಿ ತಲ್ಲೀನರಾಗಿ ಟಿವಿಯ ಮುಂದೆ ಅಳುತ್ತಾ ಕುಳಿತರೆಂದರೆ ಮುಗಿಯಿತು... ಅಂದು ಗಂಡ ಮಕ್ಕಳಿಗೆ ಅಳಿದುಳಿದ ಚೂರು ಪಾರು ಊಟವೇ ಗತಿ. ಹೇಗೆ ನೋಡಿದರೂ ultimate sufferers ಅಂದ್ರೆ ನಮ್ಮ uncle ಗಳು ಪಾಪ...!!
        ಅಲ್ಲ ಕಣ್ರೀ, ನಂಗೆ ಅರ್ಥ ಆಗದೆ ಇರೋ ಇನ್ನೊಂದು ವಿಷ್ಯ ಅಂದ್ರೆ .... ಈ ಅಂಕಲ್ ಗಳಿಗೆನೋ ಆಂಟಿಗಳು ಅನಿವಾರ್ಯ, ಕಟ್ಟಿಕೊಂಡಿದ್ದಾರಲ್ಲ ಇರಲೇಬೇಕು.... ಆದರೆ ಈ ನಮ್ಮ ಹುಡುಗರಿಗೆ ಅದೇನೋ ಆಂಟಿಗಳ ದಾಹ ಕಣ್ರೀ. ಅದ್ಯಾಕೋ ಆಂಟಿಯರ ಮೋಹ ಸ್ವಲ್ಪ ಜಾಸ್ತಿಯೇ ಇರುತ್ತದಲ್ಲ ಹುಡುಗರಿಗೆ ಅದ್ಯಾಕೆ ಅಂತಾ....!?! ಅದ್ಕೆ ಇರ್ಬೇಕು ನಮ್ಮ ಸಿನಿಮಾ ಕ್ಷೇತ್ರ ಆಂಟಿ ಪ್ರೀತ್ಸೇ, ಆಂಟಿ ತುಂಬಾ ತುಂಟಿ - ಯಂಥ ಸಿನಿಮಾಗಳನ್ನು ತೆಗೆದಿದ್ದು....!!

    ನಮ್ಮ ಕರೀನಾ ಕಪೂರ್ ಳಂಥ 'zero size' ಪ್ರಸಿದ್ಧಿಯಾಗುತ್ತಿರುವ ಕಾಲದಲ್ಲೂ ನಮ್ಮ ಹುಡುಗರು ಕನಸಿನಲ್ಲೂ ಆಂಟಿ-ಆಂಟಿ ಎಂದು ಕನವರಿಸುತ್ತಿದ್ದಾರೆಂದರೆ, ಅದು ಹುಡುಗರ 'ಆಂಟಿ ಮೋಹ'ವೋ ಇಲ್ಲಾ ಆಂಟಿಯರಿಗೆ ಇರುವ ದಾಹವೋ....!!!? 
          ನಮಗೇನ್ ಗೊತ್ತು ಸ್ವಾಮೀ........!!!!



ಕಾವ್ಯಾ ಕಶ್ಯಪ್.....
(ಸೀರಿಯಸ್ ಬರಹಗಳ ಹೊರತಾಗಿ ಬರೆಯುವ ಒಂದು ಸಣ್ಣ ಪ್ರಯತ್ನ... ) 

Thursday, February 3, 2011

ಯಾಂತ್ರಿಕ ಬದುಕಿನ ನಡುವೆ ...... ಸಂಬಂಧಗಳು....

(ಭಾಗ 2)
         
        ಮೊನ್ನೆ ಅತ್ತಿಗೆ ಮೇಘಾ ಜೊತೆ ಒಂದು ಪಾವತಿಸಿ ಉಳಿಯುವ ಮನೆ (paying guest home) ಗೆ ಹೋಗಿದ್ದೆ, ಒಬ್ಬ ಸ್ನೇಹಿತೆಯನ್ನು ಭೇಟಿ ಮಾಡಲು. ಅಲ್ಲಿರುವ ಹುಡುಗಿಯರು ಕೆಲವರನ್ನು ನೋಡಿ ದಂಗಾಗಿ ಹೋದೆವು ನಾವಿಬ್ಬರು.... ಯಾವುದೇ ಅಂಕೆ ಶಂಕೆಯಿಲ್ಲದೆ ಬೀದಿ ಬಸವಿಯರಂತೆ ಇದ್ದಾರೆ....!! ನಮ್ಮ ಕಡೆ ಹೇಳುತ್ತಾರಲ್ಲ 'ಸುಳಿದು ಬಿಟ್ಟ ಬಸವನ ಹಾಗೆ' ಎಂದು.... ಅವರು 'ಎಲ್ಲರೊ'ಡನೆಯೂ friendly ಯಂತೆ...! ನಮ್ಮೊಡನೆಯೂ ಚೆನ್ನಾಗಿ ಮಾತಾಡಿದರು. ಅವರಲ್ಲಿ ಇಬ್ಬರು ತುಂಬಾ modern ಹುಡುಗಿಯರು, ಅವರು ನಮಗೆ ಸ್ವಲ್ಪ ಪರಿಚಯವಿದ್ದಿದ್ದರಿಂದ ನಮ್ಮ ಜೊತೆಯೇ ಮಾತನಾಡುತ್ತ ಕುಳಿತರು. ಎಷ್ಟೆಂದರೂ friendly nature ಅಲ್ಲವೇ ಅವರದ್ದು.... ಅಂದಿನ ಸಂಭಾಷಣೆಯ ಒಂದು ತುಣುಕನ್ನು ಮಾತ್ರ ಹೇಳುತ್ತೇನೆ:

 ಅವಳು: ಎಲ್ಲಿದ್ದೀಯ ಮೇಘಾ ನೀನು...? hostel .....? 
ಮೇಘಾ: ಅಲ್ಲಪ್ಪ ಸಧ್ಯ 'm lucky.... ನಾನು ಅಪ್ಪ-ಅಮ್ಮನ ಜೊತೆ ಆರಾಮಾಗಿ ಮನೆಯಲ್ಲೇ ಇರೋದು....
ಅವಳು: ಓಹ್...ಹೌದಾ... ಅದ್ಹೇಗೆ ಇರ್ತೀರಾ family ಜೊತೆ, ಅಪ್ಪ-ಅಮ್ಮನ ಜೊತೆ...!! ಕಷ್ಟಾಪ್ಪ... so many restrictions......!!
ಮೇಘಾ: ಹೌದಾ....?!!! ನನಗೇನು ಹಾಗನ್ಸಲ್ಲಪ್ಪ... ಖುಷಿ ಆಗುತ್ತೆ....
ಅವರಿಬ್ಬರಲ್ಲಿ ಒಬ್ಬಳು: (ಇನ್ನೊಬ್ಬಳಿಗೆ) ಹೇಗಿರ್ತಾರೋ ಅಲ್ವೇನೆ ... ಅಲ್ಲಿ ಹೋಗ್ಬೇಡ..ಇಲ್ಲಿ ಬರ್ಬೇಡ...ಹೀಗಿರು...ಹಾಗಿರು... ಅಯ್ಯಪ್ಪಾ... ಬರೀ ಇದೇ ಗೋಳು ಅಪ್ಪ ಅಮ್ಮನದು....
ಇನ್ನೊಬ್ಬಳು: ಹುಂ ಕಣೆ..ಅಪ್ಪ ಅಮ್ಮನ ಜೊತೆ ಮನೇಲಿದ್ರೆ ಅದೊಂಥರ Jail ಅಲ್ಲಿ ಇದ್ದಂಗೆ ಇರತ್ತೆ... ಇಲ್ಲಿ ನಾವು ಎಷ್ಟು ಆರಾsssssಮಾಗಿ ಇದೀವಪ್ಪ... freeeee birds.... ಹೇಳೋರಿಲ್ಲ ಕೇಳೋರಿಲ್ಲ....!!

        ಉಫ್... ಎಂದು ನಿಟ್ಟುಸಿರು ಬಿಡುತ್ತ ಅಲ್ಲಿಂದ ಹೊರ ಬಂದೆವು ನಾನು ಮೇಘಾ....! "ಅದೇನು ಹುಡ್ಗೀರಪ್ಪ ಇವ್ರೆಲ್ಲಾ...." ಇಬ್ಬರಿಂದಲೂ ಒಂದೇ ಸಮನೆ ಉದ್ಘಾರ...!! ಹೆತ್ತ ಅಮ್ಮ-ಅಪ್ಪನೊಡನೆ ಇರುವುದಕ್ಕೇ ಇವರಿಗೆ ಕಷ್ಟವಾದರೆ ಇನ್ನು ಯಾರೊಡನೆ ಇವರೆಲ್ಲ ಬದುಕಿ ಬಾಳಿಯಾರು....?! ಇಷ್ಟು ವರ್ಷ ತಮ್ಮ ಸುಖವನ್ನು ಬದಿಗಿಟ್ಟು ನಮ್ಮನ್ನು  ಸಾಕಿ ಸಲುಹಿದ ತಂದೆ-ತಾಯಿಯೇ ಬೇಡವೆಂದಾದಲ್ಲಿ ಇವರೆಲ್ಲಾ ಮದುವೆಯಾಗಿ ಅತ್ತೆ-ಮಾವನೊಡನೆ ಬಾಳಿಯಾರೆ... ಇಂಥವರೇ  ಅತ್ತೆ-ಮಾವ, ಮೈದುನ -ನಾದಿನಿ ಯಾರ ತಂಟೆಯೂ ಇಲ್ಲದ ಮನೆ ಹುಡುಗ ಬೇಕು ಹೇಳುವುದು ಎಂಬುದರ ಅರಿವು ನಮಗೆ ಅವೊತ್ತು ಆಯಿತು.


        ಮೊದಲಿನ ಕಾಲದ ಹೆಣ್ಣಿಗೂ, ಈಗಿನ ಕಾಲದ ಹೆಣ್ಣಿಗೂ ಇಷ್ಟೊಂದು ಅಜಗಜಾಂತರ ಹೇಗೆ ಬಂತು....? ಈ ಪರಿವರ್ತನೆಗೆ ಕಾರಣವೇನು...? ಮನೆಯಲ್ಲಿ ಅವರನ್ನು ಬೆಳೆಸುವ ಸಂಸ್ಕಾರವೇ...? ಅಥವಾ ಈಗಿನ modernization ಎನ್ನುವುದರ ಪರಿಣಾಮವೇ...? ಇಲ್ಲಾ generation gap ಎನ್ನುವ ವಾದವೇ...?

         ಕಾರಣ ಏನೇ ಇದ್ದರೂ ಮೊದಲಿನ ಕೂಡು ಕುಟುಂಬದಲ್ಲಿದ್ದ ಸಂತಸ, ಹಬ್ಬ-ಹರಿದಿನಗಳಲ್ಲಿ ಎಲ್ಲರ ಜೊತೆ ಪೂಜೆ, ಸಿಹಿ ಮಾಡಿ ತಿನ್ನುತ್ತಿದ್ದ ಸಂಭ್ರಮ, ಹೊಸ ಬಟ್ಟೆ ಹಾಕಿದಾಗ ಮಕ್ಕಳ ಮುಖದಲ್ಲಿನ ಖುಷಿ ಇವೆಲ್ಲ ಈ modernization ನಲ್ಲಿ ನಿಜವಾಗಿಯೂ ಕಣ್ಮರೆಯಾಗುತ್ತಿದೆ.ಯಾಂತ್ರಿಕ ಬದುಕಿಗೆ ನಾವೆಲ್ಲಾ ಎಷ್ಟೊಂದು ಒಗ್ಗಿ ಹೋಗುತ್ತಿದ್ದೇವೆ ಎಂದು ನೆನೆಸಿಕೊಂಡರೆ ಬೇಜಾರಾಗುತ್ತದೆ. ಹಳೆ ಖುಷಿ-ಸಂಭ್ರಮವನ್ನು ನೆನೆಸಿಕೊಂಡರೆ ಈಗಿನ ಪರಿಸ್ಥಿತಿಗೆ ಪಿಚ್ಚೆನಿಸುತ್ತದೆ...

        ಆಗಿನ ಮದುವೆಗಳು ಯಾರೋ ಗೊತ್ತಿಲ್ಲದವನ ಜೊತೆ ನಡೆದರೂ ಸಂಸಾರದಲ್ಲಿ ಹೊಂದಾಣಿಕೆಯಿರುತ್ತಿತ್ತು... ಮನಸ್ತಾಪಗಳು ನಾಲ್ಕು ಗೋಡೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ಆಗಿನ ಸ್ಥಿತಿಯಲ್ಲಿ ಹೆಂಗಸರೇ ಪೂರ್ತಿಯಾಗಿ ಹೊಂದಿಕೊಂಡು ಬಿಡುತ್ತಿದ್ದರು. ಈಗಲೂ ಅದೇ ನಿರಿಕ್ಷೆಯಿಂದಲೇ ಹಲವಾರು ಸಂಬಂಧಗಳು ನಾಶವಾಗುತ್ತಿವೆ. ಸ್ತ್ರೀಯರು ಈಗ ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ. ಹೊರಗಿನ ಪ್ರಪಂಚದ ಜೊತೆ ಸ್ಪರ್ಧಿಸುವಂತಾಗಿದ್ದಾರೆ. ಆದ್ದರಿಂದ ಈಗಿನ ಜೀವನದಲ್ಲಿ ಗಂಡು-ಹೆಣ್ಣು ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳುವುದು ಬಹು ಮುಖ್ಯ. ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರನ್ನೆಲ್ಲ ನೋಯಿಸಿ ವೇಗದಲ್ಲಿ ಮದುವೆಯಾದವರು ಅದೇ ವೇಗದಲ್ಲಿ ಬೇರೆ-ಬೇರೆಯಾಗುತ್ತಿರುವುದು ದುಃಖಕರ ಸಂಗತಿ. ಮದುವೆಗೆ ಮೊದಲು ಇದ್ದ ಪ್ರೀತಿ-ಪ್ರೇಮ ಅದೆಷ್ಟು ಬೇಗ ಅದೆಲ್ಲಿ ಮಾಯವಾಗುತ್ತದೋ.. ಎಲ್ಲವೂ ಎಂದಲ್ಲ, ಆದರೆ ಬಹುತೇಕ ಪ್ರೇಮ ವಿವಾಹಗಳು ಕುಸಿದು ಬೀಳುತ್ತಿವೆ. ಪ್ರೀತಿಸುವಾಗ ಹುಡುಗನಾದವನು ಯಾವಾಗಲೂ ತನ್ನ ಹುಡುಗಿಯನ್ನು ಒಲಿಸಿಕೊಳ್ಳಬೇಕು ಎನ್ನುವುದರಲ್ಲಿ ಅವಳಿಗಿಷ್ಟವಾದ ಕೆಲಸಗಳನ್ನೇ ಮಾಡುತ್ತಾನೆ ಮತ್ತು ಪ್ರೀತಿಯ ಗಾಢತೆ ಹೆಚ್ಚಿರುತ್ತದೆ. ಮದುವೆಯಾದ ಮೇಲೇ ಹೇಗಿದ್ದರೂ ಹೆಂಡತಿಯಲ್ಲವೇ ಜೊತೆಗಿದ್ದೆ ಇರುತ್ತಾಳೆ ಎನ್ನುವ ಭಾವನೆಯಿಂದ ಹಕ್ಕು-ಅಧಿಕಾರಗಳ ಸ್ವರ ಜೊತೆಯಾಗಿಬಿಡುತ್ತದೆ. ಹುಡುಗಿಯಾದವಳು ಮೊದಲು ಕಂಡಿದ್ದ ಪ್ರೇಮವನ್ನು ಹೆಂಡತಿಯಾಗಿ ಪಡೆಯಲು ಆಗದಾದಾಗ ಅವಳಲ್ಲಿನ ಪ್ರೀತಿ ಕೂಡ ಕಡಿಮೆಯಾಗಿ ಹೊಂದಾಣಿಕೆಯ ಮನೋಭಾವ ಕುಗ್ಗಲಾರಂಭಿಸುತ್ತದೆ.  ಇಂತಹ ಸಂದರ್ಭಗಳು ಜಾಸ್ತಿಯಾದಾಗ ಸದ್ದಿಲ್ಲದೇ ದಾಂಪತ್ಯದ ಕೊಂಡಿ ಕಳಚಿಕೊಳ್ಳಲಾರಂಭಿಸುತ್ತದೆ.....
   
        ಪ್ರೀತಿಸುವಾಗ ಒಲಿಸಿಕೊಳ್ಳಬೇಕೆಂಬ ಪ್ರಯತ್ನಗಳನ್ನು ಬಿಟ್ಟು ತಾನಿರುವುದೇ ಹೀಗೆ ಎಂಬಂತೆ ನೈಜ ರೂಪದಲ್ಲೇ ಅಂತರಾಳದಿಂದ ಪ್ರೀತಿಸಿದರೆ ಮಾತ್ರ ಅಂತಹ ಪ್ರೀತಿ ಶಾಶ್ವತವಾಗಿರುತ್ತದೆ. ಹೀಗಿದ್ದಾಗ ಪ್ರೇಯಸಿಗೆ ತನ್ನ ಹುಡುಗ ಹೇಗೆ ಎಂಬುದರ ಸಂಪೂರ್ಣ ಅರಿವಿರುವುದರಿಂದ ನಂತರವೂ ಅದೇ ಸ್ವಭಾವ ಅವನಲ್ಲಿ ಕಾಣುವುದರಿಂದ ಪ್ರೀತಿ ಎಂಬುದು ಸಿಹಿ ನೀರಿನ ಒರತೆಯಂತೆ ಸದಾ ಬಾಳಿನಲ್ಲಿ ಹರಿಯುತ್ತಿರುತ್ತದೆ. ಬದಲಿಗೆ 'ಅವಳಿಗಾಗಿ' ನೈಜ ಸ್ವಭಾವದ ಮೇಲೇ ಪೊರೆ ಬೆಳೆಸಿಕೊಂಡರೆ ಮದುವೆ ನಂತರ ಪೊರೆ ಕಳಚಿದಾಗ, 'ನನ್ನವನು ಮೊದಲು ಹೀಗಿರಲಿಲ್ಲ ಈಗ ಹೀಗೆಕಾದ' ಎಂದು ಹೆಂಡತಿಯಾದವಳಿಗೆ ಕಾಡಲಾರಂಭಿಸಿದರೆ, ತಿಳಿಯಾದ ನೀರಿಗೆ ಕಲ್ಲೆಸೆದಂತೆ ಪ್ರೀತಿಯ ಸಂಸಾರದಲ್ಲಿ ತರಂಗಗಳು ಏಳಲಾರಂಭಿಸುತ್ತದೆ. ಅವನು ಬದಲಾದವನು ಅವನೇ ಹೊಂದಿಕೊಳ್ಳಲಿ ಎಂದು ಇವಳು, ಅವಳು ನನ್ನ ಹೆಂಡತಿ ಅವಳೇ ಹೊಂದಿಕೊಳ್ಳಬೇಕು ಎಂದು ಇವನು... ತಾನೇಕೆ ಹೊಂದಿಕೊಳ್ಳಬೇಕೆಂಬ ಭಾವನೆ ಇಬ್ಬರಲ್ಲೂ ಬಂತೆಂದರೆ ಸಂಸಾರವನ್ನು ಹಿಡಿದು ನಿಲ್ಲಿಸುವುದು ದುಃಸ್ತರ. 

        ಒಟ್ಟಿನಲ್ಲಿ ಸಂಬಂಧಗಳನ್ನು ಮೊದಲಿನವರಂತೆ ನಿಭಾಯಿಸಲು ನಮ್ಮಿಂದಾಗುತ್ತಿಲ್ಲ ಎಂಬುದಂತೂ ಕಟು ಸತ್ಯ... ಇದಕ್ಕೆ ಏಕ ವ್ಯಕ್ತಿ  ಪರಿಹಾರವನ್ನು ಅವರವರೇ ಕಂಡುಕೊಳ್ಳಬಹುದೇ ವಿನಃ ಸಾಮಾಜಿಕವಾಗಿ ಏನೋ ಸಲಹೆ ನೀಡಲಾಗುವುದಿಲ್ಲ.........!! 


ಕಾವ್ಯಾ.....


Tuesday, February 1, 2011

ನೆನಪಿನಂಗಳದಿಂದ... ನೈಜ ಬದುಕಿಗೆ....

  
    
          ಸುಮ್ಮನೆ ಬೇಜಾರಾಗಿ ಕುಳಿತಿದ್ದೆ. ಮನಸ್ಸು ಹಳೆಯದನ್ನೆಲ್ಲಾ ಮೆಲಕು ಹಾಕುತ್ತಿತ್ತು. ಕಾಲೇಜಿಗೆ ರಜೆ ಬಂತೆಂದರೆ ಓಡುತ್ತಿದ್ದ ಅತ್ತೆ ಮನೆಯ ನೆನಪಾಯ್ತು. ಅಲ್ಲಿ ಕಳೆದ ದಿನಗಳು, ಎಷ್ಟು ದಿನವಾದರೂ ಬೇಸರವೇ ಆಗದಿದ್ದ ಆ ಮನೆ, ಅತ್ತೆ, ಮಾವ, ಮಕ್ಕಳು, ಅವರ ಮನೆಯ ಅಜ್ಜ ಎಲ್ಲರೂ ನೆನಪಾದರು. ಅವರ ಮನೆಯ ಎದುರಿಗೆ ಇದ್ದ ಅಘನಾಶಿನಿ ನದಿಯಲ್ಲಿ ೩-೪ ಗಂಟೆಗಳ ಕಾಲ ಸಮಯದ ಪರಿವೆಯೇ ಇಲ್ಲದೆ ಮುಳುಗಿರುತ್ತಿದ್ದ ಆ ದಿನಗಳು.......... ಆಹಾ ನಿಜಕ್ಕೂ ಮನ ಹಗುರಾಗಿದ್ದ ದಿನಗಳವು. ಯಾವ ಜಂಜಾಟವಿಲ್ಲದೆ  ಮಕ್ಕಳೊಡನೆ ಆಡಿಕೊಂಡು, ಅತ್ತೆ - ಮಾವನೊಡನೆ ಹರಟೆ ಹೊಡೆದುಕೊಂಡು ಅಘನಾಶಿನಿ - ಪಾಪನಾಶಿನಿ ಎನ್ನುತ್ತಾ ನೀರಿನಲ್ಲಿ ಮುಳುಗೇಳುತ್ತಿದ್ದ ಸುಂದರ ದಿನಗಳು... ನೀರೆಂದರೆ ಅತೀವ ಹುಚ್ಚಿದ್ದ ನಾನು ಮತ್ತು ನನ್ನ ಭಾವಯ್ಯನನ್ನು ನದಿ ತೀರದಿಂದ ಹೊರಡಿಸಲು ಅತ್ತೆಯಂತೂ ಕಮ್ಮಿ ಎಂದರೂ ಒಂದು ಘಂಟೆ 'ಸಾಕ್ರೋ ಬನ್ನಿ ಮನೆಗೆ ಹೋಗೋಣ' ಎಂದು ಗೋಗರೆಯುತ್ತಿದ್ದರು. 
      
        ಶಾಲೆಗೆ ಹೋಗುತ್ತಿದ್ದ ಕಾಲದಿಂದಲೂ ಪ್ರತಿ ಬೇಸಿಗೆ ರಜೆಯಲ್ಲಿ ತಪ್ಪದೆ ಪಯಣ ಬೆಳೆಸುತ್ತಿದ್ದ ತಾಣವದು. ಅತ್ತೆ ಮಾವ ಜಗಳವಾಡಿ ಮಾತು ಬಿಟ್ಟರೆ ಆ ದಿನ ಅವರನ್ನು ನದಿ ಸ್ನಾನಕ್ಕೆ ಕರೆದುಕೊಂಡು ಹೋದರೆ ಅವರು ಮತ್ತೆ ಒಂದಾದರು ಎಂಬುದು ಶತಸಿದ್ಧವಾಗಿತ್ತು. 'ನಾನು ಬರುವುದಿಲ್ಲ, ನೀವು ಹೋಗಿ ಬನ್ನಿ' ಎಂದು ಒಣ ಹುಳಿ ಮಾಡುತ್ತಿದ್ದ ಮಾವ ನಾವು ಸಪ್ಪೆ ಮುಖ ಹಾಕಿ ನದಿ ಕಡೆ ನಡೆದಿದ್ದೇ ನಮ್ಮ ಹಿಂದೆಯೇ ಹಾಜರ್...! ನಾವು ಆ ನೀರಿನಲ್ಲಿ ಅವರಿಬ್ಬರೂ ನಗುತ್ತಾ ಮಾತನಾಡುವುದನ್ನು ನೋಡಿ ಖುಷಿಯಿಂದ ಕುಣಿಯುತ್ತಿದ್ದೆವು, ಏನೋ ನಾವೇ ಅವರ ಜಗಳವನ್ನು ಕೊನೆಗಾಣಿಸಿದೆವೆಂಬ ಹೆಮ್ಮೆಯಿಂದ.... ಗಂಡ  ಹೆಂಡಿರ ಮನಸ್ತಾಪ, ಜಗಳಗಳ ಅರಿವಿಲ್ಲದ ಕಾಲದಿಂದಲೂ ಅವರನ್ನು ನೋಡುತ್ತಾ ಬಂದಿದ್ದಕ್ಕೆ ಅದು ಒಂಥರಾ ಮನಸ್ಸಿಗೆ ಒಗ್ಗಿ ಹೋಗಿತ್ತು.ಈಗಲೂ ಸಹ ಅವರ ಮನೆಗೆ ಹೋಗಿ ಆ ಜೋಡಿಯ ಜೊತೆ ನದಿ ತೀರಕ್ಕೆ ಹೋದಾಗ ಎಲ್ಲವನ್ನೂ ಮರೆತು ನೀರಿನಲ್ಲಿ ಸ್ವಚ್ಚಂದವಾಗಿ ವಿಹರಿಸುವ ಅವರನ್ನು  ನೋಡಿದರೆ ನನಗೆ  ನೆನಪಾಗುವುದು ಅದೇ ಅತ್ತೆ ಹೇಳಿದ ಒಂದು ನೈಜ ಕಥೆ...
      
        ಆ ಊರಿನಲ್ಲಿ ಸುಬ್ಬಜ್ಜಿ ಎಂಬ ಒಂದು ಅಜ್ಜಿಯಿದ್ದಾಳೆ. ಪಾಪ ಅವಳಿಗೆ ಏನೂ ಅರಿಯದ ವಯಸ್ಸಿನಲ್ಲಿ ಮದುವೆ ಮಾಡಿ ಗಂಡನ ಮನೆಗೆ ಕಳಿಸಿದರಂತೆ. ತುಂಬಾ ಮುಗ್ಧ ಜೀವ ಅದು. ಮದುವೆ-ಗಂಡ-ಸಂಸಾರ ಎಂದರೆ ಏನು, ಅವುಗಳನ್ನು ಜವಾಬ್ದಾರಿಯಿಂದ ನಿಭಾಯಿಸುವುದು ಹೇಗೆ, ತಾನು ಹೇಗಿರಬೇಕು ಗಂಡನೊಡನೆ ಹೇಗೆ ಬಾಳಬೇಕು ಎಂಬ ಜ್ಞಾನ ಕೂಡ ಇಲ್ಲದ ವಯಸ್ಸು. ಬಂದ ಮನೆಯಲ್ಲೋ ಕೂಡು ಕುಟುಂಬ. ಮನೆ ತುಂಬಾ ಜನ, ಮಕ್ಕಳು. ಎಲ್ಲರನ್ನೂ ನಿಭಾಯಿಸಬೇಕು. ಓರಗಿತ್ತಿಯರು ಸ್ವಭಾವದಲ್ಲಿ ಒಳ್ಳೆಯವಳಾದ ಸುಬ್ಬಜ್ಜಿಯನ್ನು ಪ್ರೀತಿಯಿಂದ ನೋಡಿಕೊಂಡರು. ಅವಳೂ ಸಹ ಅವರೆಲ್ಲರೊಡನೆ ಹೊಂದಿಕೊಂಡಳು. 
     
        ಆಗಿನ ಕಾಲದ ಮದುವೆ ಮಾತ್ರ ನಿಜವಾಗಿಯೂ ಭಯಂಕರ. ಯಾರೆಂದೇ ತಿಳಿಯದ ವ್ಯಕ್ತಿಯೊಡನೆ ಮದುವೆ... ತನ್ನ ಗಂಡ-ಯಜಮಾನ, ಮುಂದೆ ತನ್ನ ಸರ್ವಸ್ವವೇ ಆಗಿಬಿಡುವ ಆ ವ್ಯಕ್ತಿಯ ಭೇಟಿಯೇ ಮದುವೆ ಮಂಟಪದಲ್ಲಿ...!! ಅವನ ಕತ್ತಿಗೆ ಹಾರ ಹಾಕುವಾಗಲೇ ಅವನ ಮುಖದರ್ಶನ... ಯಾರೀತ, ನಾನೇಕೆ ಇವನೊಡನೆ ಬಾಳಬೇಕು ಎಂದು ಯೋಚಿಸುವಷ್ಟು ಸ್ವಾತಂತ್ರ್ಯವಾಗಲೀ ಬುದ್ದಿಮತ್ತೆಯಾಗಲೀ ಹೆಣ್ಣಿಗಿಲ್ಲ  ಆ ದಿನಗಳಲ್ಲಿ. 'ಏನೇ ಆಗಲಿ ಅವನೊಡನೆ ಬಾಳನ್ನು ಸವೆಸಬೇಕು. ಕಷ್ಟವೋ-ಸುಖವೋ ಅದು ಇನ್ನು ಮುಂದೆ ನಿನ್ನ ಮನೆ ಅಲ್ಲಿ ಏನಾದರೂ ಹೊಟ್ಟೆಗೆ ಹಾಕಿಕೊಂಡು, ಹೊರಗಡೆ ಹೇಳದೆ ನಗು ಮುಖ ಹೊತ್ತು ಬದುಕು ಎಂಬುದು ಹಿರಿಯರ ಆಜ್ಞಾ ಭರಿತ ಉಪದೇಶ.
      
        ಸುಬ್ಬಜ್ಜಿಯೂ ಸಹ ಈ ಕಟ್ಟಳೆಯಲ್ಲೇ ಮದುವೆಯಾದವಳು. ಹದಿನಾರರ ವಯಸ್ಸಿಗೆ ಚೆಂದವಾಗಿ ಬೆಳೆದು ನಿಂತ ಹುಡುಗಿಯನ್ನು ಇಪ್ಪತ್ತೇಳರ ಹುಡುಗ (!) ನಿಗೆ ಕೊಟ್ಟು ಮದುವೆ...! ಮೊದಲನೇ ರಾತ್ರಿ ಗಂಡನ ಒರಟುತನಕ್ಕೆ ಹೆದರಿ ಮೂಲೆಯಲ್ಲಿ ಹೋಗಿ ಕುಳಿತ ಆ ಸುಂದರ ಮುಗ್ಧ ಹುಡುಗಿ ಭಯದಿಂದ ತತ್ತರಿಸಿದ್ದಳು. ಆ ಭಯಕ್ಕೆ ಪಾಪ ಅವಳು ಉಚ್ಚೆ ಹೊಯ್ದುಕೊಂಡಳಂತೆ..! ಅದನ್ನು ನೋಡಿ ಆ ಮನುಷ್ಯ ಮೈಲಿಗೆ ಆಗಿಹೋಯಿತು ಎಂದು ಅವಳನ್ನು ಮುಟ್ಟುವುದಕ್ಕೆ ಹೋಗಲಿಲ್ಲ.  ಏನೂ ಅರಿಯದ ಬಾಲೆಯನ್ನು ಮದುವೆಯಾದ ಅವನಿಗೆ ತಿಳಿಸಿ ಹೇಳುವ ವ್ಯವಧಾನವಿಲ್ಲ... ಸಿಟ್ಟು, ಒರಟುತನ, ಮಡಿ-ಮೈಲಿಗೆ ಎಂಬುದೇ ಅವನ ಆಕಾರ ರೂಪ. ತನ್ನನ್ನು ನಂಬಿ ಬಂದಿದ್ದಾಳೆ ತಿಳಿಯದ ವಿಷಯಗಳನ್ನು  ತಾನು ನಯವಾಗಿ ತಿಳಿಸಿ ಹೇಳಿ ಒಲಿಸಿಕೊಳ್ಳಬೇಕು ಎಂಬ ಮೃದು ಮನಸ್ಸಿಲ್ಲ... ಬದಲಿಗೆ ಅವಳ ತಿರಸ್ಕಾರ ತನಗೆ ಆದ ಅವಮಾನ ಎಂದು ಭಾವಿಸಿ ಹೊರನೆಡೆದೆ ಬಿಟ್ಟ ಆ ಮನುಷ್ಯ. ಅಂದಿನಿಂದ ಹೆಂಡತಿಯನ್ನು ಮುಟ್ಟುವುದಿರಲಿ ಪ್ರೀತಿಯಿಂದ ಮಾತನಾಡಿಸಲೂ ಇಲ್ಲ ಆ ಮಹಾನುಭಾವ..!! 
      
        ರಾತ್ರಿ ಮನೆ ಬಿಟ್ಟು 'ಮಾಳ' ಕಾಯುವ ನೆಪ ಹೇಳಿ ಮಾಳದಲ್ಲೇ ಮಲಗಲು ಶುರುಮಾಡಿಬಿಟ್ಟ. ಇವನ್ನೆಲ್ಲ ಸೂಕ್ಷ್ಮವಾಗಿ ಅರಿತ ಸುಬ್ಬಜ್ಜಿಯ ಓರಗಿತ್ತಿಯರು ಅವಳನ್ನು ಸಹ ಗಂಡನ ಜೊತೆ ಅಲ್ಲಿಯೇ ಹೋಗು ಎಂದು ಕಳಿಸಿದರು. ಅಲ್ಲೂ ಸಹ ಅವಳನ್ನು ಮೈಲಿಗೆ ಎಂದು ಮುಟ್ಟದ ಆ ಮನುಷ್ಯ ತನ್ನ ಪಾಡಿಗೆ ತಾನು ಹೊದ್ದು ಮಲಗಿದ... ಯಾವ ಚಳಿ, ಮಳೆ ಕೊನೆಗೆ ಯವ್ವನ ಕೂಡ ಅವನ ಮನಸ್ಸನ್ನು ಕರಗಿಸಲಾಗಲಿಲ್ಲ. ಎಲ್ಲವೂ ವ್ಯರ್ಥ ಪ್ರಯತ್ನವಾಯಿತು. ನಂತರ ಆ ಕೂಡು ಕುಟುಂಬದ ಸದಸ್ಯರು ಹಿಸೆ ಆಗಿದ್ದರು. ಅಲ್ಲಿಗೆ ಸುಬ್ಬಜ್ಜಿಯದು ಬೇರೆಯದೇ ಮನೆ-ಸಂಸಾರವಾಯಿತು. ಎಷ್ಟೆಂದರೂ ಗಂಡ ಮಾತ್ರ ಒಲಿಯಲೇ ಇಲ್ಲ.  ಕನ್ಯೆಯಾಗಿಯೇ ಬರೋಬ್ಬರಿ ೩೦ ವರ್ಷ ಸಂಸಾರ (!) ಮಾಡಿದಳು ಸುಬ್ಬಜ್ಜಿ. ಇಷ್ಟಕ್ಕೂ ಪಾಪ ಅವಳಿಗೆ ಸಂಸಾರದಲ್ಲಿನ ಸ-ನಿ-ದ-ಪ ಎಂಬುದರ ಅರಿವಿದ್ದರೆ ತಾನೇ...! ಅಷ್ಟರಲ್ಲಿ ಆ ಮಹಾಪುರುಷನ ಆಯಸ್ಸು ತೀರಿ ಸುಬ್ಬಜ್ಜಿಗೆ ವಿದಾಯ ಹೇಳಿದ್ದನವ. ಈಗಂತೂ ಸುಬ್ಬಜ್ಜಿ ಅಕ್ಷರಶಃ ಅನಾಥೆ... ಇಷ್ಟು ವರ್ಷ ಪ್ರೀತಿ-ಮೋಹವಿಲ್ಲದ ಯಾಂತ್ರಿಕವಾಗಿ ಮುಗ್ಧತೆ, ಹೊಂದಾಣಿಕೆಯ ಮೇಲೇ ನಿಂತ ಬದುಕು ಮತ್ತಷ್ಟು ಮೂರಾಬಟ್ಟೆಯಾಗಿ ಹೋಯಿತು.. 
     
        ಇಂತಹ ಸಮಯದಲ್ಲಿ ಅವಳ ದೂರದ ಸಂಬಂಧಿಯೊಬ್ಬರು ತಮ್ಮ ಜೊತೆ ಬಂದು ಇರು ಎಂದಾಗ ಬೇರೆ ವಿಧಿಯಿಲ್ಲದೇ ಅವರೊಡನೆ ಹೊರಟದ್ದಾಯಿತು. ಎರಡು ಮಕ್ಕಳಿರುವ ಆ ಜೋಡಿಯ ಪ್ರೀತಿ, ಪ್ರೇಮ ಸಲ್ಲಾಪಗಳು ಸುಬ್ಬಜ್ಜಿಗೆ ಏನೋ ಉತ್ತರ ಹೇಳಿದಂತೆ ಭಾಸವಾಗತೊಡಗಿತು. 'ತನಗೇಕೆ ಮಕ್ಕಳಾಗಿಲ್ಲ ದೇವರೇ ...' ಎಂದುಕೊಳ್ಳುತ್ತಿದ್ದ ಮುಗುದೆ 'ಓಹೋ ನಾನೂ ಸಹ ಹೀಗೆ ಗಂಡನೊಟ್ಟಿಗೆ ಒಂದೇ ಕೋಣೆಯಲ್ಲಿ ಮಲಗಿದ್ದರೆ ನನಗೂ ಮಕ್ಕಳಾಗುತ್ತಿತ್ತು...' ಎಂದು ಮನದಲ್ಲಿಯೇ ಹೇಳಿಕೊಂಡು ಅದನ್ನು ಅತ್ತೆಯ ಬಳಿಯೂ ಕೇಳಿದ್ದರಂತೆ...!! 
      
        ಅಬ್ಬಾ..! ನನಗಂತೂ ಈಗಲೂ ಸಹ ಸುಬ್ಬಜ್ಜಿಯನ್ನು ನೋಡಿದರೆ ಸೂಜಿ ಚುಚ್ಚಿದ ಅನುಭವವಾಗುತ್ತದೆ.. ಎಂಭತ್ತು ವರ್ಷವಾದರೂ ಇನ್ನೂ ಕನ್ಯೆಯಾಗಿಯೇ ಉಳಿದ ಆ ಜೀವ ಸಂಸಾರದಲ್ಲಿ ಅದೇನು ಸುಖ ಕಂಡಿತು..!! ಅದರೂ ತುಟಿಪಿಟಿಕ್ಕೆನ್ನದೆ ಗಂಡನೆಂಬ ಗಂಡನೊಡನೆ ಪೂರ್ತಿ ಜೀವನ ಸವೆಸಿತು. ಸುಂದರ ಯವ್ವನ ಗಂಡನ ಸ್ವಾಭಿಮಾನ, ಅಸಂಬದ್ಧ ಕಟ್ಟುಪಾಡಿನ ತುಳಿತಕ್ಕೆ ಸಿಕ್ಕು ನುಚ್ಚು ನೂರಾಯಿತು.... ಅದರೂ ಏನನ್ನೂ ಅರಿಯದೆ ಗಂಡನ ಸೇವೆಯೇ ತನ್ನ ಕೆಲಸ ಎಂದು ನಂಬಿಕೊಂಡು ಬದುಕಿ ವಿಧವೆಯಾದಳು ಸುಬ್ಬಜ್ಜಿ.
    
       ಆಗಿನ ಕಾಲದ ದಾಂಪತ್ಯ ಗಟ್ಟಿಯಾಗಿರಲು ಕಾರಣ ಹೆಂಗಸರು ಎಲ್ಲವನ್ನೂ ಸಹಿಸಿಕೊಂಡು ಹೊಂದಿಕೊಳ್ಳುತ್ತಿದ್ದಿದ್ದರಿಂದಲೇ...!? ಇಂದಿನ ದಿನಗಳಲ್ಲಿ ಯಾಕೆ ಅಷ್ಟೊಂದು ವಿಚ್ಛೇದನಗಳು, ಕಲಹಗಳು ಹೆಚ್ಚುತ್ತಿವೆ...? ನಿಜಕ್ಕೂ ಹೊಂದಾಣಿಕೆಯೆಂಬುದು ಗಂಡ-ಹೆಂಡತಿ ಇಬ್ಬರಲ್ಲೂ ಇರಬೇಕಾದ ಅಂಶ. ಆದರೆ ಇತ್ತೀಚಿಗೆ ಅದು ಯಾರೊಬ್ಬರಲ್ಲೂ ಕಾಣಸಿಗುತ್ತಿಲ್ಲ. ಪ್ರೀತಿಸಿ ಮದುವೆಯಾದವರೂ ಸಹ ಸಣ್ಣ ಪುಟ್ಟ ಕಿತ್ತಾಟಗಳನ್ನೇ ದೊಡ್ಡದು ಮಾಡಿಕೊಂಡು ಬೇರಾಗಿಬಿಡುತ್ತಾರೆ. ಕ್ಷುಲ್ಲಕ ವಿಷಯಗಳು ಭೀಕರ ರೂಪ ತಾಳಿ ಸಂಬಂಧಗಳ ಹರಣಕ್ಕೆ ಕಾರಣವಾಗುತ್ತಿದೆ. ಸಂಬಂಧಗಳ ಸವಿ-ಸಿಹಿ ಮಾಯವಾಗುತ್ತಿದೆ. ಯಾಕೆ ಮೊದಲಿನ ಹೊಂದಾಣಿಕೆ ಮಾಯವಾಗಿದೆ..?! ಅವರಂತೆಯೇ ಎಲ್ಲಾ ಕಷ್ಟಗಳನ್ನು ಹೆಣ್ಣು ಮಾತ್ರ ಸಹಿಸಿಕೊಂಡರೆ ಮೊದಲಿಂತಾಗುತ್ತದೆಯೇ...? ಸ್ತ್ರೀಯರಿಗೆ ಸಮಾನ ಹಕ್ಕು ನೀಡುತ್ತಿರುವುದೋ ಅಥವಾ ಸಮಾನ ವಿದ್ಯರ್ಹತೆಗಳೇ ಇದಕ್ಕೆ ಕಾರಣವೇ...?! ಸ್ತ್ರೀ ಸಬಲೀಕರಣವೆಂಬುದೆ ಸಂಬಂಧಗಳ ಆಹುತಿಗೆ ಎಡೆ ಮಾಡಿಕೊಟ್ಟುಬಿಟ್ಟಿತೆ ...!!? ಕಾರಣ ಏನೇ ಇದ್ದರೂ ಇದರಿಂದ ಮಾನವ ಬದುಕಿನ ಸುಂದರ ಸಂಬಂಧಗಳಿಗೆ ತಿಲಾಂಜಲಿ ಕೊಡುವಂತಾಗಿದೆ... ಸಮಾಜ ಬೆಳೆದಂತೆ ವ್ಯಕ್ತಿ-ವ್ಯಕ್ತಿಗಳ ನಡುವಿನ ಪ್ರೀತಿ-ವಿಶ್ವಾಸಗಳು ಕಡಿಮೆ ಆಗುತ್ತಿದೆ ಎಂಬುದಂತೂ ಕಟು ಸತ್ಯ ಅಲ್ಲವೇ...!!?? 

(ಮುಂದಿನ ಭಾಗವನ್ನು ಮತ್ತೆ ಬರೆದಿದ್ದೇನೆ ದಯವಿಟ್ಟು ನೋಡಿ..)

ಕಾವ್ಯಾ..... 


Wednesday, January 5, 2011

ನಗು

                                                                    
     'ಯಾಕೇ ಮಗಳೇ ಅಷ್ಟು ನಗ್ತೀಯಾ...?', 'ಯಾವಾಗ ನೋಡಿದರೂ ಮಾತು, ನಗು ಈ ಹುಡುಗಿಗೆ... ಯಾವಾಗ ಈ ಹುಡುಗಾಟ ಬಿಡ್ತಾಳೋ ನೋಡೇ ನಿನ್ನ ಮಗಳು ಮದುವೆಯಾಗೋ ವಯಸ್ಸು ಬಂದ್ರೂ ಹುಡುಗಾಟ ಮಾತ್ರ ಕಮ್ಮಿ ಆಗಿಲ್ಲ..' ಎಂದು ಹೆಂಡತಿಯೊಡನೆ ಗೊಣಗಿಕೊಳ್ಳುತ್ತಾ ಬೆಳಗಿನ ಪೂಜೆಗೆ ನಡೆದರು ರಾಯರು.  ಕವನಾ ಅಮ್ಮನ ಬಳಿ ಬಂದು 'ಅಮ್ಮಾ, ನಾನು ಅಷ್ಟೊಂದೆಲ್ಲ ಮಾತಡ್ತೀನಾ, ನಗ್ತೀನಾ? ಎಲ್ಲರೂ ಹಾಗೇ ಹೇಳ್ತಾರಲ್ಲ..' ಎಂದು ಕೇಳಿದಾಗ, 'ನೋಡು ಕವನಾ, ಹೆಣ್ಣು ಮಕ್ಕಳು ಮಾತು, ನಗು ಎಲ್ಲಾ ಕಮ್ಮಿ ಮಾಡಿ ಗಾಂಭೀರ್ಯತೆ ಕಲೀಬೇಕು. ಎಲ್ಲರ ದೃಷ್ಟಿ ಒಂದೇ ಥರ ಇರಲ್ಲ, ಹಾಗೆಲ್ಲ ಎಲ್ಲರ ಹತ್ತಿರ ನಗುತ್ತಾ ಮಾತಾಡ್ಬಾರ್ದು..' ಎಂದು ಅಮ್ಮನಿಂದ ಹಿತೋಪದೇಶ, ೨೨ ರ ಹರೆಯದ ಮಗಳಿಗೆ. 

      ರಾಯರು ಮಗಳಿಗೆ ವರಾನ್ವೇಷಣೆಯಲ್ಲಿದ್ದಾಗ ಪುರೋಹಿತರ ಮೂಲಕ ಒಳ್ಳೆಯ ಸಂಬಂಧ ಒಲಿದು ಬಂದಿತ್ತು. ಎಲ್ಲರಿಗೂ ಒಪ್ಪಿಗೆಯಾಗಿ ಕವನಾ ಕೂಡ ಸಂತಸದಿಂದ ತನ್ನ ಒಪ್ಪಿಗೆ ಸೂಚಿಸಿದ್ದಳು. ತಮ್ಮ ಕೈಲಾದ ಮಟ್ಟಿಗೆ ಅದ್ಧೂರಿಯಿಂದಲೇ ಮದುವೆ 
ಕಾರ್ಯವನ್ನು ನಿರ್ವಿಘ್ನವಾಗಿ ಶಶಾಂಕ್ ಜೊತೆ ನೆರವೇರಿಸಿದ್ದರು.



      ಶಶಾಂಕ್ ಗೆ ಪ್ರೀತಿಯ ಪತ್ನಿಯ ನಗು ಮೊಗ ಎಂದರೆ ಎಲ್ಲಿಲ್ಲದ ಸಂತೋಷ. ನಗು ನಗುತ್ತಾ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಕವನಾಳಂಥ ಹೆಂಡತಿಯ ಬಗ್ಗೆ ಹೆಮ್ಮೆ ಪಡುತ್ತಿದ್ದ. ಅವಳ ನಗು ಅವನ ಎಲ್ಲಾ ಆಯಾಸವನ್ನು ಮರೆಸುತ್ತಿತ್ತು. ಪ್ರತಿದಿನ ದುಡಿದು ಬರುವ ಮನಕ್ಕೆ ಪತ್ನಿಯ ವಟ ವಟ ಮಾತು, ಕಿಲ ಕಿಲ ನಗು ತಂಪು ಕೊಡುತ್ತಿತ್ತು.
       
ಆದರೆ ವಿಧಿಯ ಕರಾಳ ದೃಷ್ಟಿ ಯಾರನ್ನು ತಾನೇ ಬಿಟ್ಟೀತು...?! ಅದೊಂದು ದಿನ ಅತ್ತ ಕೆಲಸದಿಂದ ಮರಳುತ್ತಿದ್ದ ಶಶಾಂಕನ ಕಾರಿಗೆ ಭಾರಿ ಸರಕಿನ ಲಾರಿಯೊಂದು ಅಪ್ಪಳಿಸಿ ಶಶಾಂಕ್ ಸ್ಥಳದಲ್ಲೇ ಜೀವ ತೆತ್ತಿದ್ದ.
        
ಇತ್ತ ಕವನಾ ಗಂಡನಿಗಾಗಿ ವಿಶೇಷ ಅಡುಗೆಯ ತಯಾರಿಯಲ್ಲಿದ್ದಾಗ  ಅಚಾನಕ್ ಸಿಲಿಂಡರ್ ಅಪಘಾತದಲ್ಲಿ ಪೂರ್ತಿ ದೇಹ ಸುಟ್ಟು ಬೆಂದು ಹೋಗಿತ್ತು. ರಾಯರು ತಮ್ಮ ಮುದ್ದಿನ ಮಗಳ ಎಲ್ಲಾ ಸಂತೋಷ, ಅವಳ ಮುಕ್ತ ನಗು ಮದುವೆಯಾದ ಎರಡೇ ವರ್ಷಕ್ಕೆ ಕೊನೆಯುಸಿರೆಳೆದಿದ್ದಕ್ಕೆ ಹಳ-ಹಳಿಸುತ್ತ, ಪತ್ನಿಯೊಡನೆ ಇನ್ನಿಲ್ಲದಂತೆ ಕಣ್ಣೀರಾಗಿದ್ದರು......