Wednesday, January 5, 2011

ನಗು

                                                                    
     'ಯಾಕೇ ಮಗಳೇ ಅಷ್ಟು ನಗ್ತೀಯಾ...?', 'ಯಾವಾಗ ನೋಡಿದರೂ ಮಾತು, ನಗು ಈ ಹುಡುಗಿಗೆ... ಯಾವಾಗ ಈ ಹುಡುಗಾಟ ಬಿಡ್ತಾಳೋ ನೋಡೇ ನಿನ್ನ ಮಗಳು ಮದುವೆಯಾಗೋ ವಯಸ್ಸು ಬಂದ್ರೂ ಹುಡುಗಾಟ ಮಾತ್ರ ಕಮ್ಮಿ ಆಗಿಲ್ಲ..' ಎಂದು ಹೆಂಡತಿಯೊಡನೆ ಗೊಣಗಿಕೊಳ್ಳುತ್ತಾ ಬೆಳಗಿನ ಪೂಜೆಗೆ ನಡೆದರು ರಾಯರು.  ಕವನಾ ಅಮ್ಮನ ಬಳಿ ಬಂದು 'ಅಮ್ಮಾ, ನಾನು ಅಷ್ಟೊಂದೆಲ್ಲ ಮಾತಡ್ತೀನಾ, ನಗ್ತೀನಾ? ಎಲ್ಲರೂ ಹಾಗೇ ಹೇಳ್ತಾರಲ್ಲ..' ಎಂದು ಕೇಳಿದಾಗ, 'ನೋಡು ಕವನಾ, ಹೆಣ್ಣು ಮಕ್ಕಳು ಮಾತು, ನಗು ಎಲ್ಲಾ ಕಮ್ಮಿ ಮಾಡಿ ಗಾಂಭೀರ್ಯತೆ ಕಲೀಬೇಕು. ಎಲ್ಲರ ದೃಷ್ಟಿ ಒಂದೇ ಥರ ಇರಲ್ಲ, ಹಾಗೆಲ್ಲ ಎಲ್ಲರ ಹತ್ತಿರ ನಗುತ್ತಾ ಮಾತಾಡ್ಬಾರ್ದು..' ಎಂದು ಅಮ್ಮನಿಂದ ಹಿತೋಪದೇಶ, ೨೨ ರ ಹರೆಯದ ಮಗಳಿಗೆ. 

      ರಾಯರು ಮಗಳಿಗೆ ವರಾನ್ವೇಷಣೆಯಲ್ಲಿದ್ದಾಗ ಪುರೋಹಿತರ ಮೂಲಕ ಒಳ್ಳೆಯ ಸಂಬಂಧ ಒಲಿದು ಬಂದಿತ್ತು. ಎಲ್ಲರಿಗೂ ಒಪ್ಪಿಗೆಯಾಗಿ ಕವನಾ ಕೂಡ ಸಂತಸದಿಂದ ತನ್ನ ಒಪ್ಪಿಗೆ ಸೂಚಿಸಿದ್ದಳು. ತಮ್ಮ ಕೈಲಾದ ಮಟ್ಟಿಗೆ ಅದ್ಧೂರಿಯಿಂದಲೇ ಮದುವೆ 
ಕಾರ್ಯವನ್ನು ನಿರ್ವಿಘ್ನವಾಗಿ ಶಶಾಂಕ್ ಜೊತೆ ನೆರವೇರಿಸಿದ್ದರು.



      ಶಶಾಂಕ್ ಗೆ ಪ್ರೀತಿಯ ಪತ್ನಿಯ ನಗು ಮೊಗ ಎಂದರೆ ಎಲ್ಲಿಲ್ಲದ ಸಂತೋಷ. ನಗು ನಗುತ್ತಾ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಕವನಾಳಂಥ ಹೆಂಡತಿಯ ಬಗ್ಗೆ ಹೆಮ್ಮೆ ಪಡುತ್ತಿದ್ದ. ಅವಳ ನಗು ಅವನ ಎಲ್ಲಾ ಆಯಾಸವನ್ನು ಮರೆಸುತ್ತಿತ್ತು. ಪ್ರತಿದಿನ ದುಡಿದು ಬರುವ ಮನಕ್ಕೆ ಪತ್ನಿಯ ವಟ ವಟ ಮಾತು, ಕಿಲ ಕಿಲ ನಗು ತಂಪು ಕೊಡುತ್ತಿತ್ತು.
       
ಆದರೆ ವಿಧಿಯ ಕರಾಳ ದೃಷ್ಟಿ ಯಾರನ್ನು ತಾನೇ ಬಿಟ್ಟೀತು...?! ಅದೊಂದು ದಿನ ಅತ್ತ ಕೆಲಸದಿಂದ ಮರಳುತ್ತಿದ್ದ ಶಶಾಂಕನ ಕಾರಿಗೆ ಭಾರಿ ಸರಕಿನ ಲಾರಿಯೊಂದು ಅಪ್ಪಳಿಸಿ ಶಶಾಂಕ್ ಸ್ಥಳದಲ್ಲೇ ಜೀವ ತೆತ್ತಿದ್ದ.
        
ಇತ್ತ ಕವನಾ ಗಂಡನಿಗಾಗಿ ವಿಶೇಷ ಅಡುಗೆಯ ತಯಾರಿಯಲ್ಲಿದ್ದಾಗ  ಅಚಾನಕ್ ಸಿಲಿಂಡರ್ ಅಪಘಾತದಲ್ಲಿ ಪೂರ್ತಿ ದೇಹ ಸುಟ್ಟು ಬೆಂದು ಹೋಗಿತ್ತು. ರಾಯರು ತಮ್ಮ ಮುದ್ದಿನ ಮಗಳ ಎಲ್ಲಾ ಸಂತೋಷ, ಅವಳ ಮುಕ್ತ ನಗು ಮದುವೆಯಾದ ಎರಡೇ ವರ್ಷಕ್ಕೆ ಕೊನೆಯುಸಿರೆಳೆದಿದ್ದಕ್ಕೆ ಹಳ-ಹಳಿಸುತ್ತ, ಪತ್ನಿಯೊಡನೆ ಇನ್ನಿಲ್ಲದಂತೆ ಕಣ್ಣೀರಾಗಿದ್ದರು......

                           

2 comments: