ಸುಮ್ಮನೆ ಬೇಜಾರಾಗಿ ಕುಳಿತಿದ್ದೆ. ಮನಸ್ಸು ಹಳೆಯದನ್ನೆಲ್ಲಾ ಮೆಲಕು ಹಾಕುತ್ತಿತ್ತು. ಕಾಲೇಜಿಗೆ ರಜೆ ಬಂತೆಂದರೆ ಓಡುತ್ತಿದ್ದ ಅತ್ತೆ ಮನೆಯ ನೆನಪಾಯ್ತು. ಅಲ್ಲಿ ಕಳೆದ ದಿನಗಳು, ಎಷ್ಟು ದಿನವಾದರೂ ಬೇಸರವೇ ಆಗದಿದ್ದ ಆ ಮನೆ, ಅತ್ತೆ, ಮಾವ, ಮಕ್ಕಳು, ಅವರ ಮನೆಯ ಅಜ್ಜ ಎಲ್ಲರೂ ನೆನಪಾದರು. ಅವರ ಮನೆಯ ಎದುರಿಗೆ ಇದ್ದ ಅಘನಾಶಿನಿ ನದಿಯಲ್ಲಿ ೩-೪ ಗಂಟೆಗಳ ಕಾಲ ಸಮಯದ ಪರಿವೆಯೇ ಇಲ್ಲದೆ ಮುಳುಗಿರುತ್ತಿದ್ದ ಆ ದಿನಗಳು.......... ಆಹಾ ನಿಜಕ್ಕೂ ಮನ ಹಗುರಾಗಿದ್ದ ದಿನಗಳವು. ಯಾವ ಜಂಜಾಟವಿಲ್ಲದೆ ಮಕ್ಕಳೊಡನೆ ಆಡಿಕೊಂಡು, ಅತ್ತೆ - ಮಾವನೊಡನೆ ಹರಟೆ ಹೊಡೆದುಕೊಂಡು ಅಘನಾಶಿನಿ - ಪಾಪನಾಶಿನಿ ಎನ್ನುತ್ತಾ ನೀರಿನಲ್ಲಿ ಮುಳುಗೇಳುತ್ತಿದ್ದ ಸುಂದರ ದಿನಗಳು... ನೀರೆಂದರೆ ಅತೀವ ಹುಚ್ಚಿದ್ದ ನಾನು ಮತ್ತು ನನ್ನ ಭಾವಯ್ಯನನ್ನು ನದಿ ತೀರದಿಂದ ಹೊರಡಿಸಲು ಅತ್ತೆಯಂತೂ ಕಮ್ಮಿ ಎಂದರೂ ಒಂದು ಘಂಟೆ 'ಸಾಕ್ರೋ ಬನ್ನಿ ಮನೆಗೆ ಹೋಗೋಣ' ಎಂದು ಗೋಗರೆಯುತ್ತಿದ್ದರು.
ಶಾಲೆಗೆ ಹೋಗುತ್ತಿದ್ದ ಕಾಲದಿಂದಲೂ ಪ್ರತಿ ಬೇಸಿಗೆ ರಜೆಯಲ್ಲಿ ತಪ್ಪದೆ ಪಯಣ ಬೆಳೆಸುತ್ತಿದ್ದ ತಾಣವದು. ಅತ್ತೆ ಮಾವ ಜಗಳವಾಡಿ ಮಾತು ಬಿಟ್ಟರೆ ಆ ದಿನ ಅವರನ್ನು ನದಿ ಸ್ನಾನಕ್ಕೆ ಕರೆದುಕೊಂಡು ಹೋದರೆ ಅವರು ಮತ್ತೆ ಒಂದಾದರು ಎಂಬುದು ಶತಸಿದ್ಧವಾಗಿತ್ತು. 'ನಾನು ಬರುವುದಿಲ್ಲ, ನೀವು ಹೋಗಿ ಬನ್ನಿ' ಎಂದು ಒಣ ಹುಳಿ ಮಾಡುತ್ತಿದ್ದ ಮಾವ ನಾವು ಸಪ್ಪೆ ಮುಖ ಹಾಕಿ ನದಿ ಕಡೆ ನಡೆದಿದ್ದೇ ನಮ್ಮ ಹಿಂದೆಯೇ ಹಾಜರ್...! ನಾವು ಆ ನೀರಿನಲ್ಲಿ ಅವರಿಬ್ಬರೂ ನಗುತ್ತಾ ಮಾತನಾಡುವುದನ್ನು ನೋಡಿ ಖುಷಿಯಿಂದ ಕುಣಿಯುತ್ತಿದ್ದೆವು, ಏನೋ ನಾವೇ ಅವರ ಜಗಳವನ್ನು ಕೊನೆಗಾಣಿಸಿದೆವೆಂಬ ಹೆಮ್ಮೆಯಿಂದ.... ಗಂಡ ಹೆಂಡಿರ ಮನಸ್ತಾಪ, ಜಗಳಗಳ ಅರಿವಿಲ್ಲದ ಕಾಲದಿಂದಲೂ ಅವರನ್ನು ನೋಡುತ್ತಾ ಬಂದಿದ್ದಕ್ಕೆ ಅದು ಒಂಥರಾ ಮನಸ್ಸಿಗೆ ಒಗ್ಗಿ ಹೋಗಿತ್ತು.ಈಗಲೂ ಸಹ ಅವರ ಮನೆಗೆ ಹೋಗಿ ಆ ಜೋಡಿಯ ಜೊತೆ ನದಿ ತೀರಕ್ಕೆ ಹೋದಾಗ ಎಲ್ಲವನ್ನೂ ಮರೆತು ನೀರಿನಲ್ಲಿ ಸ್ವಚ್ಚಂದವಾಗಿ ವಿಹರಿಸುವ ಅವರನ್ನು ನೋಡಿದರೆ ನನಗೆ ನೆನಪಾಗುವುದು ಅದೇ ಅತ್ತೆ ಹೇಳಿದ ಒಂದು ನೈಜ ಕಥೆ...
ಆ ಊರಿನಲ್ಲಿ ಸುಬ್ಬಜ್ಜಿ ಎಂಬ ಒಂದು ಅಜ್ಜಿಯಿದ್ದಾಳೆ. ಪಾಪ ಅವಳಿಗೆ ಏನೂ ಅರಿಯದ ವಯಸ್ಸಿನಲ್ಲಿ ಮದುವೆ ಮಾಡಿ ಗಂಡನ ಮನೆಗೆ ಕಳಿಸಿದರಂತೆ. ತುಂಬಾ ಮುಗ್ಧ ಜೀವ ಅದು. ಮದುವೆ-ಗಂಡ-ಸಂಸಾರ ಎಂದರೆ ಏನು, ಅವುಗಳನ್ನು ಜವಾಬ್ದಾರಿಯಿಂದ ನಿಭಾಯಿಸುವುದು ಹೇಗೆ, ತಾನು ಹೇಗಿರಬೇಕು ಗಂಡನೊಡನೆ ಹೇಗೆ ಬಾಳಬೇಕು ಎಂಬ ಜ್ಞಾನ ಕೂಡ ಇಲ್ಲದ ವಯಸ್ಸು. ಬಂದ ಮನೆಯಲ್ಲೋ ಕೂಡು ಕುಟುಂಬ. ಮನೆ ತುಂಬಾ ಜನ, ಮಕ್ಕಳು. ಎಲ್ಲರನ್ನೂ ನಿಭಾಯಿಸಬೇಕು. ಓರಗಿತ್ತಿಯರು ಸ್ವಭಾವದಲ್ಲಿ ಒಳ್ಳೆಯವಳಾದ ಸುಬ್ಬಜ್ಜಿಯನ್ನು ಪ್ರೀತಿಯಿಂದ ನೋಡಿಕೊಂಡರು. ಅವಳೂ ಸಹ ಅವರೆಲ್ಲರೊಡನೆ ಹೊಂದಿಕೊಂಡಳು.
ಆಗಿನ ಕಾಲದ ಮದುವೆ ಮಾತ್ರ ನಿಜವಾಗಿಯೂ ಭಯಂಕರ. ಯಾರೆಂದೇ ತಿಳಿಯದ ವ್ಯಕ್ತಿಯೊಡನೆ ಮದುವೆ... ತನ್ನ ಗಂಡ-ಯಜಮಾನ, ಮುಂದೆ ತನ್ನ ಸರ್ವಸ್ವವೇ ಆಗಿಬಿಡುವ ಆ ವ್ಯಕ್ತಿಯ ಭೇಟಿಯೇ ಮದುವೆ ಮಂಟಪದಲ್ಲಿ...!! ಅವನ ಕತ್ತಿಗೆ ಹಾರ ಹಾಕುವಾಗಲೇ ಅವನ ಮುಖದರ್ಶನ... ಯಾರೀತ, ನಾನೇಕೆ ಇವನೊಡನೆ ಬಾಳಬೇಕು ಎಂದು ಯೋಚಿಸುವಷ್ಟು ಸ್ವಾತಂತ್ರ್ಯವಾಗಲೀ ಬುದ್ದಿಮತ್ತೆಯಾಗಲೀ ಹೆಣ್ಣಿಗಿಲ್ಲ ಆ ದಿನಗಳಲ್ಲಿ. 'ಏನೇ ಆಗಲಿ ಅವನೊಡನೆ ಬಾಳನ್ನು ಸವೆಸಬೇಕು. ಕಷ್ಟವೋ-ಸುಖವೋ ಅದು ಇನ್ನು ಮುಂದೆ ನಿನ್ನ ಮನೆ ಅಲ್ಲಿ ಏನಾದರೂ ಹೊಟ್ಟೆಗೆ ಹಾಕಿಕೊಂಡು, ಹೊರಗಡೆ ಹೇಳದೆ ನಗು ಮುಖ ಹೊತ್ತು ಬದುಕು ಎಂಬುದು ಹಿರಿಯರ ಆಜ್ಞಾ ಭರಿತ ಉಪದೇಶ.
ಸುಬ್ಬಜ್ಜಿಯೂ ಸಹ ಈ ಕಟ್ಟಳೆಯಲ್ಲೇ ಮದುವೆಯಾದವಳು. ಹದಿನಾರರ ವಯಸ್ಸಿಗೆ ಚೆಂದವಾಗಿ ಬೆಳೆದು ನಿಂತ ಹುಡುಗಿಯನ್ನು ಇಪ್ಪತ್ತೇಳರ ಹುಡುಗ (!) ನಿಗೆ ಕೊಟ್ಟು ಮದುವೆ...! ಮೊದಲನೇ ರಾತ್ರಿ ಗಂಡನ ಒರಟುತನಕ್ಕೆ ಹೆದರಿ ಮೂಲೆಯಲ್ಲಿ ಹೋಗಿ ಕುಳಿತ ಆ ಸುಂದರ ಮುಗ್ಧ ಹುಡುಗಿ ಭಯದಿಂದ ತತ್ತರಿಸಿದ್ದಳು. ಆ ಭಯಕ್ಕೆ ಪಾಪ ಅವಳು ಉಚ್ಚೆ ಹೊಯ್ದುಕೊಂಡಳಂತೆ..! ಅದನ್ನು ನೋಡಿ ಆ ಮನುಷ್ಯ ಮೈಲಿಗೆ ಆಗಿಹೋಯಿತು ಎಂದು ಅವಳನ್ನು ಮುಟ್ಟುವುದಕ್ಕೆ ಹೋಗಲಿಲ್ಲ. ಏನೂ ಅರಿಯದ ಬಾಲೆಯನ್ನು ಮದುವೆಯಾದ ಅವನಿಗೆ ತಿಳಿಸಿ ಹೇಳುವ ವ್ಯವಧಾನವಿಲ್ಲ... ಸಿಟ್ಟು, ಒರಟುತನ, ಮಡಿ-ಮೈಲಿಗೆ ಎಂಬುದೇ ಅವನ ಆಕಾರ ರೂಪ. ತನ್ನನ್ನು ನಂಬಿ ಬಂದಿದ್ದಾಳೆ ತಿಳಿಯದ ವಿಷಯಗಳನ್ನು ತಾನು ನಯವಾಗಿ ತಿಳಿಸಿ ಹೇಳಿ ಒಲಿಸಿಕೊಳ್ಳಬೇಕು ಎಂಬ ಮೃದು ಮನಸ್ಸಿಲ್ಲ... ಬದಲಿಗೆ ಅವಳ ತಿರಸ್ಕಾರ ತನಗೆ ಆದ ಅವಮಾನ ಎಂದು ಭಾವಿಸಿ ಹೊರನೆಡೆದೆ ಬಿಟ್ಟ ಆ ಮನುಷ್ಯ. ಅಂದಿನಿಂದ ಹೆಂಡತಿಯನ್ನು ಮುಟ್ಟುವುದಿರಲಿ ಪ್ರೀತಿಯಿಂದ ಮಾತನಾಡಿಸಲೂ ಇಲ್ಲ ಆ ಮಹಾನುಭಾವ..!!
ರಾತ್ರಿ ಮನೆ ಬಿಟ್ಟು 'ಮಾಳ' ಕಾಯುವ ನೆಪ ಹೇಳಿ ಮಾಳದಲ್ಲೇ ಮಲಗಲು ಶುರುಮಾಡಿಬಿಟ್ಟ. ಇವನ್ನೆಲ್ಲ ಸೂಕ್ಷ್ಮವಾಗಿ ಅರಿತ ಸುಬ್ಬಜ್ಜಿಯ ಓರಗಿತ್ತಿಯರು ಅವಳನ್ನು ಸಹ ಗಂಡನ ಜೊತೆ ಅಲ್ಲಿಯೇ ಹೋಗು ಎಂದು ಕಳಿಸಿದರು. ಅಲ್ಲೂ ಸಹ ಅವಳನ್ನು ಮೈಲಿಗೆ ಎಂದು ಮುಟ್ಟದ ಆ ಮನುಷ್ಯ ತನ್ನ ಪಾಡಿಗೆ ತಾನು ಹೊದ್ದು ಮಲಗಿದ... ಯಾವ ಚಳಿ, ಮಳೆ ಕೊನೆಗೆ ಯವ್ವನ ಕೂಡ ಅವನ ಮನಸ್ಸನ್ನು ಕರಗಿಸಲಾಗಲಿಲ್ಲ. ಎಲ್ಲವೂ ವ್ಯರ್ಥ ಪ್ರಯತ್ನವಾಯಿತು. ನಂತರ ಆ ಕೂಡು ಕುಟುಂಬದ ಸದಸ್ಯರು ಹಿಸೆ ಆಗಿದ್ದರು. ಅಲ್ಲಿಗೆ ಸುಬ್ಬಜ್ಜಿಯದು ಬೇರೆಯದೇ ಮನೆ-ಸಂಸಾರವಾಯಿತು. ಎಷ್ಟೆಂದರೂ ಗಂಡ ಮಾತ್ರ ಒಲಿಯಲೇ ಇಲ್ಲ. ಕನ್ಯೆಯಾಗಿಯೇ ಬರೋಬ್ಬರಿ ೩೦ ವರ್ಷ ಸಂಸಾರ (!) ಮಾಡಿದಳು ಸುಬ್ಬಜ್ಜಿ. ಇಷ್ಟಕ್ಕೂ ಪಾಪ ಅವಳಿಗೆ ಸಂಸಾರದಲ್ಲಿನ ಸ-ನಿ-ದ-ಪ ಎಂಬುದರ ಅರಿವಿದ್ದರೆ ತಾನೇ...! ಅಷ್ಟರಲ್ಲಿ ಆ ಮಹಾಪುರುಷನ ಆಯಸ್ಸು ತೀರಿ ಸುಬ್ಬಜ್ಜಿಗೆ ವಿದಾಯ ಹೇಳಿದ್ದನವ. ಈಗಂತೂ ಸುಬ್ಬಜ್ಜಿ ಅಕ್ಷರಶಃ ಅನಾಥೆ... ಇಷ್ಟು ವರ್ಷ ಪ್ರೀತಿ-ಮೋಹವಿಲ್ಲದ ಯಾಂತ್ರಿಕವಾಗಿ ಮುಗ್ಧತೆ, ಹೊಂದಾಣಿಕೆಯ ಮೇಲೇ ನಿಂತ ಬದುಕು ಮತ್ತಷ್ಟು ಮೂರಾಬಟ್ಟೆಯಾಗಿ ಹೋಯಿತು..
ಇಂತಹ ಸಮಯದಲ್ಲಿ ಅವಳ ದೂರದ ಸಂಬಂಧಿಯೊಬ್ಬರು ತಮ್ಮ ಜೊತೆ ಬಂದು ಇರು ಎಂದಾಗ ಬೇರೆ ವಿಧಿಯಿಲ್ಲದೇ ಅವರೊಡನೆ ಹೊರಟದ್ದಾಯಿತು. ಎರಡು ಮಕ್ಕಳಿರುವ ಆ ಜೋಡಿಯ ಪ್ರೀತಿ, ಪ್ರೇಮ ಸಲ್ಲಾಪಗಳು ಸುಬ್ಬಜ್ಜಿಗೆ ಏನೋ ಉತ್ತರ ಹೇಳಿದಂತೆ ಭಾಸವಾಗತೊಡಗಿತು. 'ತನಗೇಕೆ ಮಕ್ಕಳಾಗಿಲ್ಲ ದೇವರೇ ...' ಎಂದುಕೊಳ್ಳುತ್ತಿದ್ದ ಮುಗುದೆ 'ಓಹೋ ನಾನೂ ಸಹ ಹೀಗೆ ಗಂಡನೊಟ್ಟಿಗೆ ಒಂದೇ ಕೋಣೆಯಲ್ಲಿ ಮಲಗಿದ್ದರೆ ನನಗೂ ಮಕ್ಕಳಾಗುತ್ತಿತ್ತು...' ಎಂದು ಮನದಲ್ಲಿಯೇ ಹೇಳಿಕೊಂಡು ಅದನ್ನು ಅತ್ತೆಯ ಬಳಿಯೂ ಕೇಳಿದ್ದರಂತೆ...!!
ಅಬ್ಬಾ..! ನನಗಂತೂ ಈಗಲೂ ಸಹ ಸುಬ್ಬಜ್ಜಿಯನ್ನು ನೋಡಿದರೆ ಸೂಜಿ ಚುಚ್ಚಿದ ಅನುಭವವಾಗುತ್ತದೆ.. ಎಂಭತ್ತು ವರ್ಷವಾದರೂ ಇನ್ನೂ ಕನ್ಯೆಯಾಗಿಯೇ ಉಳಿದ ಆ ಜೀವ ಸಂಸಾರದಲ್ಲಿ ಅದೇನು ಸುಖ ಕಂಡಿತು..!! ಅದರೂ ತುಟಿಪಿಟಿಕ್ಕೆನ್ನದೆ ಗಂಡನೆಂಬ ಗಂಡನೊಡನೆ ಪೂರ್ತಿ ಜೀವನ ಸವೆಸಿತು. ಸುಂದರ ಯವ್ವನ ಗಂಡನ ಸ್ವಾಭಿಮಾನ, ಅಸಂಬದ್ಧ ಕಟ್ಟುಪಾಡಿನ ತುಳಿತಕ್ಕೆ ಸಿಕ್ಕು ನುಚ್ಚು ನೂರಾಯಿತು.... ಅದರೂ ಏನನ್ನೂ ಅರಿಯದೆ ಗಂಡನ ಸೇವೆಯೇ ತನ್ನ ಕೆಲಸ ಎಂದು ನಂಬಿಕೊಂಡು ಬದುಕಿ ವಿಧವೆಯಾದಳು ಸುಬ್ಬಜ್ಜಿ.
ಆಗಿನ ಕಾಲದ ದಾಂಪತ್ಯ ಗಟ್ಟಿಯಾಗಿರಲು ಕಾರಣ ಹೆಂಗಸರು ಎಲ್ಲವನ್ನೂ ಸಹಿಸಿಕೊಂಡು ಹೊಂದಿಕೊಳ್ಳುತ್ತಿದ್ದಿದ್ದರಿಂದಲೇ.. .!? ಇಂದಿನ ದಿನಗಳಲ್ಲಿ ಯಾಕೆ ಅಷ್ಟೊಂದು ವಿಚ್ಛೇದನಗಳು, ಕಲಹಗಳು ಹೆಚ್ಚುತ್ತಿವೆ...? ನಿಜಕ್ಕೂ ಹೊಂದಾಣಿಕೆಯೆಂಬುದು ಗಂಡ-ಹೆಂಡತಿ ಇಬ್ಬರಲ್ಲೂ ಇರಬೇಕಾದ ಅಂಶ. ಆದರೆ ಇತ್ತೀಚಿಗೆ ಅದು ಯಾರೊಬ್ಬರಲ್ಲೂ ಕಾಣಸಿಗುತ್ತಿಲ್ಲ. ಪ್ರೀತಿಸಿ ಮದುವೆಯಾದವರೂ ಸಹ ಸಣ್ಣ ಪುಟ್ಟ ಕಿತ್ತಾಟಗಳನ್ನೇ ದೊಡ್ಡದು ಮಾಡಿಕೊಂಡು ಬೇರಾಗಿಬಿಡುತ್ತಾರೆ. ಕ್ಷುಲ್ಲಕ ವಿಷಯಗಳು ಭೀಕರ ರೂಪ ತಾಳಿ ಸಂಬಂಧಗಳ ಹರಣಕ್ಕೆ ಕಾರಣವಾಗುತ್ತಿದೆ. ಸಂಬಂಧಗಳ ಸವಿ-ಸಿಹಿ ಮಾಯವಾಗುತ್ತಿದೆ. ಯಾಕೆ ಮೊದಲಿನ ಹೊಂದಾಣಿಕೆ ಮಾಯವಾಗಿದೆ..?! ಅವರಂತೆಯೇ ಎಲ್ಲಾ ಕಷ್ಟಗಳನ್ನು ಹೆಣ್ಣು ಮಾತ್ರ ಸಹಿಸಿಕೊಂಡರೆ ಮೊದಲಿಂತಾಗುತ್ತದೆಯೇ...? ಸ್ತ್ರೀಯರಿಗೆ ಸಮಾನ ಹಕ್ಕು ನೀಡುತ್ತಿರುವುದೋ ಅಥವಾ ಸಮಾನ ವಿದ್ಯರ್ಹತೆಗಳೇ ಇದಕ್ಕೆ ಕಾರಣವೇ...?! ಸ್ತ್ರೀ ಸಬಲೀಕರಣವೆಂಬುದೆ ಸಂಬಂಧಗಳ ಆಹುತಿಗೆ ಎಡೆ ಮಾಡಿಕೊಟ್ಟುಬಿಟ್ಟಿತೆ ...!!? ಕಾರಣ ಏನೇ ಇದ್ದರೂ ಇದರಿಂದ ಮಾನವ ಬದುಕಿನ ಸುಂದರ ಸಂಬಂಧಗಳಿಗೆ ತಿಲಾಂಜಲಿ ಕೊಡುವಂತಾಗಿದೆ... ಸಮಾಜ ಬೆಳೆದಂತೆ ವ್ಯಕ್ತಿ-ವ್ಯಕ್ತಿಗಳ ನಡುವಿನ ಪ್ರೀತಿ-ವಿಶ್ವಾಸಗಳು ಕಡಿಮೆ ಆಗುತ್ತಿದೆ ಎಂಬುದಂತೂ ಕಟು ಸತ್ಯ ಅಲ್ಲವೇ...!!??
(ಮುಂದಿನ ಭಾಗವನ್ನು ಮತ್ತೆ ಬರೆದಿದ್ದೇನೆ ದಯವಿಟ್ಟು ನೋಡಿ..)
ಕಾವ್ಯಾ.....


आप सच खूबसूरती से प्रस्तुत किया है.
ReplyDeletethank u Vinay.. 'll write 2nd part of the same soon.. plz read... :)
ReplyDeleteThis comment has been removed by the author.
ReplyDeletekavya... so nice. hondaanike erdu kade bekaagatte.. yaakendre eradu kai seridre maatra chappaale,haage hondaanike annodu erdu kadeyindaa iddare mtraa jeevanaa sukamayavaagiralu sadya. ibbarallu hondanike illade,ganda eno helida anta hendatiyoo,hendati eno helidalu anta gandanoo sittagidre suka annuva shabda da arthavanna mareyale beku.........
ReplyDeletethanks a lot... :) nijavaada maatu... hondanikeya savi gottilladiddare sambandhagala vinashakke hechu samaya bekagilla...!
ReplyDeleteThis comment has been removed by the author.
ReplyDeletekaavya, ninna manadalliruva bhaavanegalige ninna padagalinda jeeva neediruve, adbuta :) :) bhavane yellarallu iruvudu,aadare kelavaru maatra adannu heege padagalli haakuva moolaka jeeva tumbuttare kelavaru vektigalu maatra, a vektigalalli obbalada ninage nanna abinandanegalu :) :) all the best :)
ReplyDeleteThank you Chetan... :)
ReplyDelete