ಕಳೆದೇ ಹೋಯಿತು ಜೀವನದ ೨೩ ವಸಂತಗಳು.... ಮೊನ್ನೆ ಮೊನ್ನೆಯಷ್ಟೇ ಆಡಿಕೊಂಡು ಸಮಯ ಕಳೆಯುತ್ತಿದ್ದ ನೆನಪು... ಆಗಲೇ ಇಷ್ಟು ದೊಡ್ಡವರಾಗಿಬಿಟ್ಟೆವೆ?! 'ಅಪ್ಪಾ ಚಾಕಲೇಟ್ ಕೊಡ್ಸಪ್ಪ please' ಎಂದು ಹಠ ಮಾಡುತ್ತಿದ್ದವರು ನಮಗೆ ಬೇಕಾದ್ದನ್ನು ನಾವೇ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೇವೆ. ನಾವೆಷ್ಟೇ ದುಡಿದರೂ ಆಗ ಅಪ್ಪ-ಅಮ್ಮನಲ್ಲಿ ಹಠ ಮಾಡಿ ಕೊಡಿಸಿಕೊಂಡು ತಿಂದ ಚಾಕಲೇಟ್ ನ ಆ ಸಿಹಿ ಈಗ ನಾವೇ ಕೊಂಡು ತಿಂದದ್ದರಲ್ಲಿ ಇಲ್ಲವೇ ಇಲ್ಲಾ....! ನಿನ್ನೆಯೋ ಮೊನ್ನೆಯೋ ಮಣ್ಣಿನಲ್ಲಿ ಅಡುಗೆ ಆಟವಾಡುತ್ತ ಸಂಜೆಗತ್ತಲಾದರೂ ಆಟದಲ್ಲಿ ಮಗ್ನರಾಗಿ ಆಡುತ್ತಿದ್ದಂತಿಂದೆ.... ಆಟ ಮುಗಿಸಿ ಮನೆಗೆ ಬಂದರೆ ಮಣ್ಣು-ನೀರಿನಿಂದ ರಟ್ಟಾಗಿದ್ದ ಅಂಗಿಯನ್ನು ನೋಡಿ ಬಯ್ಯುತ್ತಿದ್ದ ಅಮ್ಮ, 'ಕತ್ತಲಾದರೂ ಮನೆಗೆ ಬರಬೇಕೆಂಬ ಬುದ್ದಿಯಿಲ್ಲವೇ ನಿಮಗೆ... ನಿಮ್ಮ ಆಟದ ಮನೆಯಲ್ಲಿಯೇ ಊಟ ಮಾಡಿ ಮಲಗಬೇಕಿತ್ತು, ಈಗೇಕೆ ಬಂದ್ರಿ' ಎಂದು ಗದರುತ್ತಿದ್ದ ಪ್ರೀತಿಯ ಕಾಕ, 'ಎಷ್ಟು ಹೇಳಿದರೂ ಕೇಳದೆ ಆ "ಭೂತನ ಕಟ್ಟೆ" ಯಲ್ಲೇ ಆಡುತ್ತೀರಲ್ಲ ಮಕ್ಕಳೇ ಅದು ಕತ್ತಲಾದ ಮೇಲೆ ಒಳ್ಳೆಯ ಜಾಗವಲ್ಲ, ನಾಳೆಯಿಂದ ಬೇಗ ಬಂದುಬಿಡಿ' ಎಂದು ಪ್ರೀತಿಯಿಂದ ಕೈ ಹಿಡಿದು ಎಲ್ಲರ ಬೈಗುಳದಿಂದ ಮುಕ್ತಗೊಳಿಸಿ ಕೈ-ಕಾಲು-ಮುಖ ತೊಳೆಸಲು ಬಚ್ಚಲಿಗೆ ಕರೆದೊಯ್ಯುತ್ತಿದ್ದ ಮುದ್ದಿನ ಅಮ್ಮೊಮ್ಮ...... ಎಲ್ಲಾ ಬರೀ ನೆನಪುಗಳೇ..... ಆ ವಯಸ್ಸೇ ಚೆನ್ನಾಗಿತ್ತು....
'ಈ ದೊಡ್ದವರೇ ಇಷ್ಟು, ಬರೀ ಬಯ್ಯುತ್ತಾರೆ, ಪ್ರೀತಿನೆ ಮಾಡಲ್ಲ' ಎಂದು ಓರಗೆಯವರೊಟ್ಟಿಗೆ ಗೊಣಗಿಕೊಳ್ಳುವುದಲ್ಲದೆ 'ಸಾಕಪ್ಪಾ ಸಣ್ಣವರಾಗಿ ಬೈಸಿಕೊಳ್ಳುವುದು.... ಬೇಗ ದೊಡ್ಡವರಾಗಿಬಿಡಬೇಕು...!' ಎಂದು ಕಾತರಿಸುತ್ತಿದ್ದ ಆ ದಿನಗಳನ್ನು ನೆನೆಸಿಕೊಂಡರೆ ಈಗ 'ಛೆ ಹಾಗೇಕೆ ಅಂದುಕೊಳ್ಳುತ್ತಿದ್ದೆವೋ' ಎನಿಸುತ್ತದೆ.... ಸುಂದರ ರಸಮಯ ಕ್ಷಣಗಳು ಅವು... ಜವಾಬ್ದಾರಿಯಿಲ್ಲದ ಆ ವಯಸ್ಸು, ತಿಳುವಳಿಕೆಯಿಲ್ಲದ ಆ ಮನಸ್ಸು, ಸದಾ ಆಡುವ ಹುಮ್ಮಸ್ಸು.... ಸಣ್ಣ ಪುಟ್ಟ ವಿಷಯಗಳಿಗೆ ಓರಗೆಯವರೊಡನೆ ಕಿತ್ತಾಡಿ ಮುಖ ಊದಿಸಿಕೊಂಡು ಅದೇ ವೇಗದಲ್ಲಿ ರಾಜಿ ಮಾಡಿಕೊಂಡು ಮತ್ತೆ ಆಡುತ್ತಿದ್ದ ಆ ಕ್ಷಣಗಳು... ಬೇಸಿಗೆ ರಜದಲ್ಲಿ ಮಧ್ಯಾಹ್ನದ ಊಟ ಮುಗಿಸಿ ಎಲ್ಲಾ ಮಕ್ಕಳನ್ನೂ ಗದರಿಸಿ ತನ್ನ ಎರಡೂ ಪಕ್ಕಕ್ಕೆ ಸಾಲಾಗಿ ಮಲಗಿಸಿಕೊಳ್ಳುತ್ತಿದ್ದ ಕಾಕನಿಗೆ ನಿದ್ದೆ ಬರುವುದೇ ತಡ, ಅಲ್ಲಿಂದ ಸದ್ದಿಲ್ಲದೇ ಜಾಗ ಖಾಲಿ ಮಾಡುತ್ತಿದ್ದ ಆ ದಿನಗಳು... ಅಮ್ಮೊಮ್ಮ ನಮ್ಮ ಅಡುಗೆ ಆಟಕ್ಕೆಂದು ಕಟ್ಟಿಕೊಡುತ್ತಿದ್ದ ತಿಂಡಿಗಳು, ಮನೆಯ ಪಾತ್ರೆಗಳು (ಯಾರಿಗೂ ಗೊತ್ತಾಗದಂತೆ) ಎಲ್ಲವನ್ನೂ ಅಂಗಿಯಲ್ಲಿ ಮುಚ್ಚಿಕೊಂಡು ಓಡುತ್ತಿದ್ದ ಆ ವಯಸ್ಸು..... ಯಾವುದೂ ಇನ್ನು ಮರಳಿ ಬರಲಾರದಂಥ ಅನರ್ಘ್ಯ ದಿನಗಳು!!
ಹುಟ್ಟು ಹಬ್ಬಕ್ಕೆ ಮಾವ ಹೊಸ ಅಂಗಿ ತಂದುಕೊಡುತ್ತಾನೆಂದು ವರ್ಷ ಪೂರ್ತಿ ಆ ದಿನಕ್ಕಾಗಿ ಕಾದು ಹೊಸ ಅಂಗಿ ಹಾಕಿಕೊಂಡು ಎಲ್ಲರಿಗೂ ನಮಸ್ಕಾರ ಮಾಡಿ ನಲಿಯುತ್ತಿದ್ದಾಗಿನ ಆ ಖುಷಿ, ಈಗ ಬೇಕೆಂದಾಗ ಚೆಂದ ಕಂಡ ಅಂಗಡಿಯಲ್ಲೆಲ್ಲ ನುಗ್ಗಿ ಇಷ್ಟ ಪಟ್ಟು ತಂದು ಹಾಕಿಕೊಳ್ಳುವ ಅಂಗಿಗಳಲ್ಲಿ ಹುಡುಕಲೂ ಸಿಗುತ್ತಿಲ್ಲ....! ಹೊಸ ಅಂಗಿಗಳಿಗೆ ಆಗಿನ 'ಬೆಲೆ'ಯೇ ಇಲ್ಲ!!! ನಮ್ಮೂರಿಗೆ ಟಾರ್ ರಸ್ತೆ ಮಾಡಿ ಹೊಸದಾಗಿ ಬಸ್ ಬಿಟ್ಟಾಗ, ಬೆಳಿಗ್ಗೆ ಬರಬೇಕಾದ ಬಸ್ ಮಧ್ಯಾಹ್ನ ಬಂದರೂ ಕಾಕನ ಜೊತೆ ಬಸ್ ಪೂಜೆ ಮಾಡಿ ಬರಮಾಡಿಕೊಳ್ಳಲು ಸ್ವಲ್ಪವೂ ಬೇಸರಿಸದೆ ಕಾಯುತ್ತಲೇ ಇದ್ದೆವು. ಆದರೆ ಈಗ ಬಸ್ಸಿಗೆ ನಿಂತರೆ ಹತ್ತೇ ನಿಮಿಷಕ್ಕೆ ನಮ್ಮ ತಾಳ್ಮೆ ಹದಗೆಡುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದ್ದೇವೆ.
ಊರಿಗೆ ಟಾರ್ ರಸ್ತೆ ಮಾಡುತ್ತಾರೆಂಬ ಸುದ್ದಿ ಕೇಳಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಯೋಚಿಸಿದ್ದೆವು.... 'ಅಯ್ಯೋ ದೇವರೇ...! ಇನ್ನು ನಮ್ಮ ಚಿನ್ನಿದಾಂಡು ಆಡುವ ಜಾಗವನ್ನು ಹೊಂಡ ತೋಡಲಾಗದಂತೆ ಮಾಡಿ ಟಾರ್ ಹಾಕಿಬಿಡುತ್ತರಲ್ಲಾ....ಎಲ್ಲಿ ಆಡೋದು? ಏನ್ಮಾಡೋದು..??' ಹಗಲಿರುಳೂ ಎಲ್ಲರಿಗೂ ಅದೇ ಯೋಚನೆ... ಅದೆಷ್ಟು ಅಲವತ್ತುಕೊಂಡಿದ್ದೆವೋ...!! ಅಂತೂ ಇಂತೂ ಅತೀವ ಬೇಸರದೊಡನೆಯೇ ಸಂತಸ ತುಂಬಿಸಿಕೊಂಡು ಹೊಸ ರಸ್ತೆಯನ್ನೂ ಹೊಸ ಬಸ್ಸನ್ನೂ ಊರೊಳಗೆ ಬರಮಾಡಿಕೊಂಡಿದ್ದೆವು. 'ಅಬ್ಬಾ! ಹೊಸ ರಸ್ತೆಯಾಯಿತು... ಇನ್ನು ಅಪ್ಪನೊಡನೆ ಬೈಕಿನಲ್ಲಿ ಹೋಗುವಾಗ ಕೆಸರು ತುಂಬಿ ಬೈಕ್ ಓಡಿಸಲಾಗಂತ ರಸ್ತೆಯಲ್ಲಿ ಬೈಕ್ ಇಳಿದು, ಅಪ್ಪ ದಾಟಿಸಿ ತರುವವರೆಗೆ ಮುಂದೆ ಓಡಿ ಹೋಗಿ ನಿಂತು ಮತ್ತೆ ಹತ್ತುವ ಕೆಲಸವಿಲ್ಲ... ಹತ್ತಿ ಕೂತರಾಯಿತು ಸುಂಯ್ಯನೆ ಹೋದರಾಯಿತು..' ಎಂಬ ಸಂತೋಷ ಒಂದೆಡೆಯಾದರೆ.... 'ಛೆ! ನಮಗೆ ಚಿನ್ನಿದಾಂಡು ಆಡಲು ಜಾಗವಿಲ್ಲದಂತೆ ಮಾಡಿಬಿಟ್ರಲ್ಲ ಈ ಸರ್ಕಾರದೋರು...!' ಎಂಬ ಖೇದ ಇನ್ನೊಂದೆಡೆ...
ಈ ಬೇಸರ-ಸಂತಸಗಳ ತುಮುಲ ಇನ್ನೂ ಮನಸ್ಸಿನಲ್ಲಿರುವಾಗಲೇ ಎಲ್ಲರ ಪ್ರೀತಿಯ ಕಾಕನ ಭೀಕರ ಅಗಲಿಕೆ ಊರಿಗೆ ಊರೇ ನೋವು ಪಡುವಂತೆ ಮಾಡಿತ್ತು. ಆಪ್ಪನಿಗಿಂತಲೂ ಹೆಚ್ಚು ಅವನ ಒಡನಾಟ ಜಾಸ್ತಿಯಿದ್ದ ನನ್ನನ್ನಂತೂ ಸಮಾಧಾನ ಮಾಡಲಾಗದೆ ಸೋತಿದ್ದರು....ಈ ಘಟನೆಯಿಂದ ದೇವರಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದ್ದೆ....ಯಾರು ಎಷ್ಟೇ ಹೇಳಿದರೂ ದೇವರಿಗೆ ಕೈ ಮುಗಿಯುತ್ತಿರಲಿಲ್ಲ. ಒಂದೇ ಒಂದು ದಿನ ದೇವರಿಗೆ ನಮಸ್ಕರಿಸದೆ ಬಂದು ತಿಂಡಿಗೆ ಕುಳಿತರೂ ಬೈಸಿಕೊಂಡು ಅಂಗಳದಲ್ಲಿದ್ದ ದೇವಸ್ಥಾನಕ್ಕೆ ಓಡಿ ಹೋಗುತ್ತಿದ್ದ ನೆನಪು ಬೇಡವೆಂದರೂ ಕಣ್ಣ ಮುಂದೆ ಬಂದು ಕಣ್ಣೀರಾಗುತ್ತಿದೆ. ಕೂತಲ್ಲಿ ನಿಂತಲ್ಲಿ ಅವನದೇ ನೆನಪು...ಇಬ್ಬರೂ ಅದೆಷ್ಟು ಹಚ್ಚಿಕೊಂಡಿದ್ದೆವೆಂದು ತಿಳಿದ ಎಲ್ಲರೂ ನಾನಾ ಬಗೆಯಲ್ಲಿ ಸಮಾಧಾನದ ಪ್ರಯತ್ನ ಮಾಡಿದ್ದರು. ಅವನ ಅಗಲಿಕೆಯ ನಂತರ ಯರು ಏನೇ ಬೈದರೂ ಸಮಾಧಾನ ಮಾಡಲು ಅವನಿಲ್ಲವಲ್ಲ ಎಂದು ನೆನೆ-ನೆನೆಸಿಕೊಂಡು ಕೋಣೆಗೆ ಓಡಿ ಹೋಗಿ ಬಿಕ್ಕುತ್ತಿದ್ದೆ. ತಾನು ಹೋಗುವಾಗ ತನ್ನೆಲ್ಲಾ ಸಿಟ್ಟು-ಮುಂಗೋಪವನ್ನು ಮಗಳಿಗೇ ಬಿಟ್ಟು ಹೋಗಿದ್ದಾನೆ ಎಂದು ಮನೆಯವರೆಲ್ಲ ಹಲುಬಿಕೊಳ್ಳುವಷ್ಟರ ಮಟ್ಟಿಗೆ ಸಿಟ್ಟಿನ ಖೋಡಿಯಾಗಿದ್ದೆ! ಅವನಿಲ್ಲ ಎಂಬ ಒಂದೇ ಯೋಚನೆ.. ಯಾರು ಏನೇ ಕೆಲಸ ಹೇಳಲಿ, ಬುದ್ದಿ ಹೇಳಲಿ ಬರೀ ಸಿಟ್ಟು.... ಕೇವಲ ಹನ್ನೊಂದು ವರ್ಷ ಅವನ ಜೊತೆ ಇರುವುದಕ್ಕಾಗಿ ನನ್ನನ್ನು ಈ ಭೂಮಿಗೆ ಕಳುಹಿಸಿದ ಆ ದೇವರನ್ನು ಮನಸಾರೆ ಬೈದುಕೊಂಡಿದ್ದೆ... ಅವನ ಜೊತೆ ಕಳೆದ ದಿನಗಳು, ಅವನು ನನ್ನನ್ನು ಪ್ರೀತಿಸುತ್ತಿದ್ದ ರೀತಿ, ಅವನ ಮಮತೆ, ನನ್ನ ಮೇಲಿನ ಅತೀವ ವಾತ್ಸಲ್ಯ..... ಇನ್ನು ಅವನಿಲ್ಲ, ನನಗೆ ಅವನ ಮಮಕಾರವೂ ಇಲ್ಲಾ ಎಂಬ ಕಹಿ ನೆನಪಿಂದ ಹೊರಬರಲು ಅಗಾಧ ೬ ವರ್ಷಗಳನ್ನೇ ತೆಗೆದುಕೊಂಡಿದ್ದೆ....
ಕಳೆದ ವಾರದಿಂದ ಅದೆಕೂ ಬಾಲ್ಯದ ನೆನಪುಗಳ ಬುತ್ತಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಅದೆಷ್ಟು ಬೇಗ ವರ್ಷಗಳು ಉರುಳಿ ಹೋದವು...!! ಓರಗೆಯವರೊಟ್ಟಿಗೆ ಬೆಟ್ಟ-ಗುಡ್ಡ ತಿರುಗಿ ಬಿಳಿ ಮುಳ್ಳ ಹಣ್ಣನ್ನು ಹೊಟ್ಟೆ ಬಿರಿ ತಿಂದು ಮೈ ನಂಜೇರಿ ಮನೆಯಲ್ಲಿ ಉಗಿಸಿಕೊಳ್ಳುತ್ತಿದ್ದುದು, ತಿರುಗಿ-ಕುಣಿದು ಬಂದು ಕಾಲು ನೋವೆಂದಾಗ ಅಮ್ಮೊಮ್ಮ ಕಾಲಿಗೆ ಎಣ್ಣೆ ಹಚ್ಚಿ ತಿಕ್ಕುತ್ತಿದ್ದುದು, ತೋಟದಲ್ಲಿ ಕೋಕೋ ಹಣ್ಣನ್ನು ಕಾಕನ ಕಣ್ಣು ತಪ್ಪಿಸಿ ೮-೧೦ ತಿಂದು ತೋಟದ ತುಂಬಾ ಕಸ ಹಾಕಿ ಸಿಕ್ಕಿಕೊಳ್ಳುತ್ತಿದ್ದುದು, ಎಲ್ಲರೂ ಸೇರಿ ಅಡುಗೆ ಆಟವಾಡಲು ಚಪ್ಪರ (ಅದೇ ನಮ್ಮ ಅಡುಗೆ ಆಟದ ಮನೆ) ಕಟ್ಟಿ ಒಳಗೇ ಕೂತು ಅಡುಗೆ ಶುರು ಮಾಡುತ್ತಿದ್ದಂತೆಯೇ ಗಟ್ಟಿಯಾಗಿ ಹುಗಿದೆವೆಂದುಕೊಂಡಿದ್ದ ಕಂಬ ಸೋಗೆಯ ಭಾರ ತಾಳಲಾಗದೆ ಮೈ ಮೇಲೆಯೇ ಮುರಿದು ಬೀಳುತ್ತಿದ್ದುದು, ಮನೆಯ ಮುಂದಿನ ಹುಳಿ ಮಾವಿನ ಮರದಲ್ಲಿ ಹಣ್ಣು ಉದುರುವುದನ್ನೇ ಕಾಯುತ್ತಿದ್ದುದು, ಎಲ್ಲೇ ಇದ್ದರು ಜೋರು ಗಾಳಿ ಬಂದಿದ್ದೇ ಮರದ ಬುಡಕ್ಕೆ ಓಡಿ ಹಣ್ಣು ಹುಡುಕುತ್ತಿದ್ದುದು, ಎರಡು ಹಣ್ಣು ಸಿಕ್ಕರೆ ಭಾವಯ್ಯ ನನಗೆ ಮಾತ್ರ ಒಂದನ್ನು ಕೊಟ್ಟು ಉಳಿದವರೆದುರಿಗೆ ಗರ್ವದಿಂದ ತಿನ್ನುತ್ತಿದ್ದುದು, ಕಣ್ಣಾ ಮುಚ್ಚಾಲೆ - ಪಗಡೆ - ಚಿನ್ನಿ ದಾಂಡುಗಳಲ್ಲಿ ಹೊತ್ತು ಹೋಗಿದ್ದೇ ತಿಳಿಯದೆ ಮುಳುಗುತ್ತಿದ್ದುದು, ಆಟದ ಮನೆಯ ಎದುರು ಎರಡು ಕಲ್ಲು ನಿಲ್ಲಿಸಿ ಒಲೆ ಮಾಡಿ ಅಲ್ಲೇ ಅನ್ನ ಮಾಡಿ ಮನೆಯಿಂದ ಹುಳಿ ತಂದು ನಾವು ಅನ್ನ ಮಾಡುವುದು ಕಲಿತೆವೆಂಬ ಖುಷಿಗೆ ನಾನು ತಂಗಿ ಅಲ್ಲೇ ಊಟ ಮಾಡಿ ಮತ್ತೆ ಕೇರಿ ಮನೆಯ ತಿಥಿ ಊಟಕ್ಕೆ ಹೋಗಿ ಅಲ್ಲೂ ಸರಿಯಾಗಿ ಊಟ ಬಾರಿಸಿದ್ದು..... ಪಕ್ಕದ ಮನೆಯ ಅಕ್ಕ ಕಾಡಿಗೆ ಕಟ್ಟಿಗೆ ತರಲು ಹೋಗುವಾಗ ನಮ್ಮನ್ನೂ ಕರೆಯುತ್ತಿದ್ದುದು, ನಾವು ಕಟ್ಟಿಗೆ ತರದಿದ್ದರೂ ಅವಳೊಡನೆ ಕಾಡು ಸುತ್ತಲು ಹೋಗುತ್ತಿದ್ದುದು, ಅಲ್ಲಿ ಮರ ಹತ್ತಿ ಕುಳಿತು ಅಂತ್ಯಾಕ್ಷರಿ ಆಡುತ್ತ ಜೋರಾಗಿ ಹಾಡು ಹೇಳುತ್ತಿದ್ದುದು, ಬೀಳಲು ಬಿಟ್ಟ ಮರಗಳನ್ನು ಹುಡುಕಿ ಜೋಕಾಲಿ ಆಡುತ್ತಿದ್ದುದು, ಒಂದು ದಿನ ಅಕ್ಕ ನಮ್ಮೊಡನೆ ಆಡುತ್ತಾಕಟ್ಟಿಗೆ ಹೊರೆ ಕಟ್ಟುವಷ್ಟರಲ್ಲಿ ಕತ್ತಲಾಗಿ ರಾತ್ರಿ ಎಂಟೂವರೆ ಗಂಟೆಗೆ ಮನೆ ಸೇರಿ ಕೆಳಗಿನ ಮನೆಯಲ್ಲಿ ಪಗಡೆ ಆಡುತ್ತಾ ಹೊತ್ತಾಯಿತೆಂದು ಸುಳ್ಳು ಹೇಳಿ ಸಿಕ್ಕು ಬಿದ್ದು ಹಿಗ್ಗ ಮುಗ್ಗ ಬೈಸಿಕೊಂಡು ಕಾಡಿನ ಪಯಣಕ್ಕೆ ತಿಲಾಂಜಲಿ ಬಿಟ್ಟಿದ್ದು...
ಚೌತಿ ಹಬ್ಬದ ದಿನಗಳಲ್ಲಿ ಬೆಟ್ಟ ತಿರುಗಿ ಬಿಕ್ಕೆ ಹಣ್ಣು ಹುಡುಕುತ್ತಿದ್ದುದು, ಹಬ್ಬಕ್ಕೆ ಫಲವಳಿಗೆ ಸಾಮಾನು ತರುತ್ತಿದ್ದುದು, ಮುರುಗಲ ಮರದ ಎಳೆಯ ಎಲೆಗಳನ್ನು ಕೊಯ್ದು ಉಪ್ಪು-ಮೆಣಸು ಹಾಕಿ ನಾವೇ ಕಂಡುಕೊಂಡ ಪೊಟರೆಗಳಲ್ಲಿ ಕಲ್ಲು ಹೇರಿ ಬಚ್ಚಿಟ್ಟು ಮರುದಿನ ಬಾಯಿ ಚಪ್ಪರಿಸಿ ತಿನ್ನುತ್ತಿದ್ದುದು, ಯಾರದೋ ಮನೆಯ ಪನ್ನೇರಳ ಮರಕ್ಕೆ ಕರೆದುಕೊಂಡು ಹೋಗಿ ಭಾವಯ್ಯಂದಿರು ಹಣ್ಣು ಕದ್ದು ನಮಗೂ ತಿನ್ನಿಸುತ್ತಿದ್ದುದು....
ಡಿಗ್ರಿ ಓದುತ್ತಿದ್ದಾಗ ರಜಕ್ಕೆಂದು ಊರಿಗೆ ಬಂದರೆ ತಂಗಿಯೊಡನೆ ಮಲೆನಾಡಿನ ಕುಂಭದ್ರೋಣ ಮಳೆಯಲ್ಲಿ ಛತ್ರಿ ಹಿಡಿದು ನಮ್ಮ ನೆಚ್ಚಿನ 'ಭೂತನ ಕಟ್ಟೆ'ಗೆ ಹೋಗುತ್ತಾ ಇದನ್ನೆಲ್ಲಾ ನೆನೆಸಿಕೊಳ್ಳುತ್ತಾ ಮಳೆಯ ಪರಿವೆಯೇ ಇಲ್ಲದೆ ಮಳೆಯಲ್ಲಿ ನೆಂದಿದ್ದು... ಉಫ್ ....... ಎಷ್ಟೊಂದು ಖುಷಿಯಿಂದ ಆಡಿದ್ದ, ಕುಣಿದಿದ್ದ, ನಲಿದಿದ್ದ ದಿನಗಳವು.... ನಿನ್ನೆಯೋ ಮೊನ್ನೆಯೋ ೮-೧೦ ವರ್ಷದವರಾಗಿ ಆಡುತ್ತಿರುವಂತೆ ಎಲ್ಲಾ ನೆನಪುಗಳು ಹಚ್ಚ ಹಸಿರಾಗಿವೆ....
ಈಗ ನೋಡಿದರೆ ಜೊತೆಗೆ ಆಡುತ್ತಿದ್ದ ತಂಗಿ-ಚಿಕ್ಕಪ್ಪನ ಮಗಳು ಮದುವೆಯಾಗಿ ಚಟ-ಪಟನೆ ಅರಳು ಹುರಿದಂತೆ ಮಾತಾಡುವ ಪುಟ್ಟ ಮಗಳನ್ನು ಕಂಕುಳಲ್ಲಿ ಎತ್ತಿಕೊಂಡು 'ಕಾವ್ಯಕ್ಕಾ ಎಷ್ಟು ಮಾತಾಡ್ತಾಳೆ ನೋಡು....' ಎಂದು ನನ್ನತ್ತ ಹೇಳುತ್ತಾ...'ಪುಟ್ಟೀ ಇವಳು ನಿನ್ನ ದೊಡ್ಡಮ್ಮ...' ಎಂದು ನನ್ನ ಪರಿಚಯ ಮಗಳಿಗೆ ಮಾಡಿಸುವಂತಗಿದ್ದಾಳೆ....! ಇನ್ನು ಅತ್ತಿಗೆ ಕೂಡ ಮದುವೆಯಾಗಿ ಎರಡೆರಡು ಮಕ್ಕಳ ಆರೈಕೆಯಲ್ಲಿ ಮುಳುಗಿದ್ದಾಳೆ... ಒಂದು ಭಾವಯ್ಯ ಆಗ ರಜದಲ್ಲಿ ಮಾತ್ರ ಸಿಗುತ್ತಿದ್ದವನು ಈಗ ಆತನ ದೊಡ್ಡ-ದೊಡ್ಡ ಓದಿನ ನಡುವೆಯೂ ಆಗಾಗ ಬಿಡುವು ಮಾಡಿಕೊಂಡು ಬಂದು ಹರಟಿ ಖುಷಿ ಪಡಿಸುತ್ತಾನೆ.... ಇನ್ನೊಂದು ಭಾವಯ್ಯ ತನ್ನ ಉದ್ಯೋಗವನ್ನು ಕಂಡುಕೊಂಡು ಉದ್ಯೋಗಸ್ಥನಾಗಿ ಮಾತನಾಡಲು ಸಮಯವಿಲ್ಲದಂತೆ ಕಳೆದು ಹೋಗಿದ್ದಾನೆ... ಮಗದೊಂದು ಭಾವಯ್ಯ ಊರಿನಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡದೆ ಉಂಡಾಡಿಯಾಗಿ ತಿರುಗಿಕೊಂಡು ಹಾಯಾಗಿದ್ದಾನೆ...!! ಪ್ರೀತಿಯ ತಮ್ಮ ಓದಿಗಾಗಿ ನನ್ನ ಬಿಟ್ಟು ದೂರದೂರಿಗೆ ತೆರಳಿದ್ದಾನೆ... ನಾನು ಮಾತ್ರ ಇವೆಲ್ಲ ಸಿಹಿ-ಕಹಿ ನೆನಪುಗಳ ಬುಟ್ಟಿಯೊಂದಿಗೆ, ಎಲ್ಲವನ್ನೂ ಮೆಲಕು ಹಾಕುತ್ತಾ ನನ್ನ ಜೀವದ ಗೆಳೆಯರಾದ ಲೇಖನಿ - ಕಾಗದದೊಂದಿಗೆ ನೆನಪುಗಳ ಬಕ್ಕಸಕ್ಕೆ ಅಕ್ಷರ ರೂಪ ಕೊಡುತ್ತಿದ್ದೇನೆ.... ಕಾಲನ ವೇಗಕ್ಕೆ-ಆವೇಗಕ್ಕೆ ಕೈಜೋಡಿಸಿ ಮುಂದಿನ ಹೆಜ್ಜೆಯತ್ತ ಗಮನ ಹರಿಸಿದ್ದೇನೆ.....
ಕಾವ್ಯಾ :)




Baalyada Nenapugalannu sundaravagi poonisidderi..tumbaa chennagide.. :)
ReplyDeleteidannu odida nantara nanaguu naana baalyada esto chestgalu savi savi nenapugalu manah pataladalli Teli hogide... :)
ಬಾಲ್ಯದ ನೆನಪುಗಳೇ ಹಾಗೆ... ನೆನೆದಷ್ಟು ಖುಷಿ ಕೊಡುತ್ತವೆ....
ReplyDeleteಆದರೆ ನನಗೆ ಒಂದು ತರಲೆ ಸಮಸ್ಯೆ ಕಾಡುತ್ತಿದೆ....
ಕೇಳ್ಬೇಕಾ ಬೇಡ್ವಾ ಅಂತ ವಿಚಾರ ಮಾಡ್ತಿದ್ದೇನೆ..
ಕೇಳ್ಲಾ?
ಅವನೇನೇ tension ನಲ್ಲಿದ್ರೂ ದೇವ ಬಾಲ್ಯವನ್ನು ಮಾತ್ರ ಸುಂದರವಾಗಿ ಬರೆದಿಟ್ಟಿರುತ್ತಾನೆ... ಚನ್ನಾಗಿದೆ.
ಸುಂದರವಾದ ಲೇಖನ
ReplyDeleteDhanyavadagalu Vinayaka... yarigoo mareyalaagadantaha jeevanada sundara kshangalu baalya embudu... :)
ReplyDeleteಧನ್ಯವಾದ ಕನಸು ಕಂಗಳ ಹುಡುಗನಿಗೆ... ;) ಏನು ತಮ್ಮ ತರಲೆ ಪ್ರಶ್ನೆ...?!
ReplyDeleteBhatrigu dhanyavaada.. :)
ReplyDeleteಭಾವಯ್ಯಾ ನಿನಗೊಬ್ಬಳಿಗೆ ಮಾತ್ರ ಯಾಕೆ ಮಾವಿನ ಕಾಯಿ ಕೊಡೋದು....?
ReplyDeleteಹಾಗೇ ಸುಮ್ನೆ....
ಅನ್ಸಿದ್ದು....
ನಿಜ ಹೇಳ್ಬೇಕು ಆದ್ರೆ......
ಎಂತಕ್ಕೆನ ಅವಂಗೆ ಗೊತ್ತು...!! ;) ಅವಾಗ್ ಎಂತಕ್ಕ್ ನಂಗ್ ಮಾತ್ರ ಕೊಡ್ತಾ ಹೇಳಿ ಯೋಚನೆ ಎಲ್ಲಾ ಮಾಡ ಅಷ್ಟ್ time ಇರ್ತಿತಿಲ್ಲೇ... ಕೊಟ್ಟಿದ್ದೆ ತಿಂಬದೊಂದೆಯಾ... !! :P ;)
ReplyDeleteಪ್ರತಿಯೊಬ್ಬರ ಬಾಲ್ಯವನ್ನು ನಿನಪಿಸಿರುವ ನಿಮಗೆ ಧನ್ಯವಾದಗಳು ..........ಪ್ರತಿಯೊಂದು ಸಿಹಿ ಘಟನೆಗಳನ್ನು ತಿರುವಿ ಹಾಕಿದಾಗ ಅದರಲ್ಲಿ ಸಿಗುವ ಸಂತೋಷ, ಮನಸ್ಸಿಗೆ ಆನಂದ ಇದೆಯಲ್ಲ ........ಅದನ್ನು ತುಂಬಲು ಬೇರೆ ಯಾವುದಕ್ಕೂ ಸಾಧ್ಯ ಇಲ್ಲ ಹಾಗಾಗಿ ತಮಗೆ ಮತ್ತೊಮ್ಮೆ ಧನ್ಯವಾದಗಳು........ಧನ್ಯವಾದಗಳು..........ತುಂಬಾ ಧನ್ಯವಾದಗಳು..............ತುಂಬಾ ತುಂಬಾಧನ್ಯವಾದಗಳು...........ಅನಂತ ಅನಂತ.. ಧನ್ಯವಾದಗಳು.
ReplyDelete..ಆ...ಇಲ್ಲಿ ಒಂದು ವಿಷಯ for ಕನಸು ಕಂಗಳ ಹುಡುಗನಿಗಿ........ see ಭಾವನ್ದಿರಿಗಿ ಸೋಸಿಯ್ನ್ದಿರಮೇಲಿ ಪ್ರೀತಿ ಸ್ವಲ್ಪ ಜಾಸ್ತಿನೇ ಇರುತ್ತೆ..........ಇದು ಪ್ರಕೃತಿ ದತ್ತ ಕೊಡುಗೆ.....Exa :- .......ಮನೆಯಲ್ಲಿ ಹೆಣ್ಣು ಹುಟ್ಟಿ ತೆಂದರೆ ಹೋ..ಹ್ಹೂ.. ನನ್ನ ತಮ್ಮನ or ಅಣ್ಣನ ಹೆಂಡ್ತಿ .........ಎನ್ನುವರು.ಅದೇ ಗಂಡು ಹುಟ್ಟಿದರೆ ಹೋ..ಹ್ಹೂ....ನನ್ನ ಅಕ್ಕನ or ತಂಗಿಯ ಗಂಡ.....ಎನ್ನುವರು. ಇದು ಲೋಕಾರುಡಿ ಮಾತು. ನೀವೇ ಹೇಳಿ Mr . ಕನಸು ಕಂಗಳ ಹುಡುಗ ನಿಮ್ಮಸೋಸಿಯಮೇಲೆ extra ಪ್ರೀತಿ ಇಲ್ಲವಾ...............
ಡಿಯರ್ ...............ಕಾವ್ಯಾ ಕಾಶ್ಯಪ್ i meansಕಾವ್ಯಾ :) ಎಲ್ಲಾ ok ......ಆದರೇ.....ಕೊನೆಯ ಪ್ಯಾರದಲ್ಲಿನ ನಿಮ್ಮ ಮನಸ್ಸಿನ ನೋವು ಮಾತ್ರ ನಂಗು ಕೂಡ ಸ್ವಲ್ಪ ನೋವುಂಟು ಮಾಡಿತು...... ಈ ಸಂದರ್ಭದಲ್ಲಿ ಅದು ನಿಮ್ಮ ಒ o ಟಿ ತ ನ ವ ನ್ನು .. ಕಾ ಡು ತ್ತಿ ದೇ.. ಅನಿಸುತ್ತಿದೆ...... ಪ್ರಪಂಚದಲ್ಲಿ ಕೆಲವೊಂದುಭಾರಿ ಮನುಷ್ಯರೀಗಿಂತ ನಿರ್ಜಿವ ವಸ್ತುಗಳು ಮನಸ್ಸಿಗೆ ನೆಮ್ಮದಿಯನ್ನು ತರುತ್ತವೆ..... (ಲೇಖನಿ - ಕಾಗದ)ಗಳನ್ನು ನೀವು ಗೆಳೆಯರನ್ನಾಗಿ ಸ್ವೀಕರಿಸಿದ್ದಿರೀ...
ನಂದೊಂದು ಕೋರಿಕೆ ಆ ದೇವರಲ್ಲಿ... ಆದಷ್ಟು ಬೇಗ ನಿಮ್ಮ ಕನಸನ್ನು ಹಾಗು,ಮನಸ್ಸನ್ನು ಅರಿತು ನಿಮಗೆ ಇಷ್ಟವಾಗುವ ನಿಮ್ಮನ್ನು ಸದಾ ಕುಷಿಯಾಗಿಡುವ ಒಂದು ನಿಷ್ಕಲ್ಮಶ ಸ ಹೃಧಯ ನಿಮಗೆ ಸಿಗಲಿ.....
ಮತ್ತೊಮ್ಮೆ ಧನ್ಯವಾದಗಳೊಂದಿಗೆ
ಇಂತಿ ನಿಮ್ಮ............
ನಾನು ನಗು ನಿಮ್ಮ ತುಟಿ ಮೇಲಿನ ನಗು.....
nagaraj adeko neevu ellavannu apaaravaada arthadondige oduttiddeeri...!! ashtu olleya baalyada nenapannu nishkalmashavaagi hanchikondiddeneye vinaha nange iduvaregoo ontitana yaavattoo kaadilla...!! 'm very happy with my parents, my sweetest friends, and my cousins.... :) :)nanage niskalmasha hrudaya bega sigalemba avasaravilla...
ReplyDeleteanyways thanks... :)