ಜತನದಿಂದ ನೋಡಿಕೊಳ್ಳುವೆ ನಿನ್ನನ್ನ, ನಿನ್ನ ಮನಸನ್ನ ನಾ ಸಾಯುವವರೆಗೂ.... ಅದೇಕೆ ನಾ ಅಷ್ಟು ಕಾಡಿದರೂ ನೀ ತಿರುಗಿ ನೋಡುತ್ತಿಲ್ಲ...? ಇಂದಿಗೆ ನೀ ನನ್ನ ಮನಸೂರೆಗೊಂಡು ಎರಡು ವರ್ಷಗಳು ಕಣೇ... ನನ್ನ ಮೇಲೆ ಇನ್ನೂ ಕರುಣೆ ಬಂದಿಲ್ಲ ಅಲ್ವಾ ನಿಂಗೆ...?? ನನ್ನ ಮನಸಿನ ಮಾತು ನಿನಗೆ ಕೇಳುತ್ತಲೇ ಇಲ್ಲವಲ್ಲೇ.... ಅದೆಷ್ಟು ಬಾರಿ ನಿನ್ನ ಬಳಿ ಮನ ತೆರೆಯಬೇಕೆಂದುಕೊಂಡೆ ಗೊತ್ತಾ..? ನಿನ್ನೆದುರಲ್ಲಿ ನಿಂತು ಹೇಳಲಾಗದೇ ಹೋದ ನನ್ನೀ ಭಾವನೆಗಳನ್ನು ಓದಿ ಬಯ್ಯಬೇಡ. ನಿನಗೆ ವರಾನ್ವೇಷಣೆ ನಡೆಯುತ್ತಿರುವ ಸುದ್ದಿ ಕೇಳಿ ತಲ್ಲಣಗೊಂಡು ನನ್ನ ಭಾವನೆಗಳನ್ನು ಬಿಚ್ಚಿಡುತ್ತಿದ್ದೇನೆ. ಒಂದು ಕ್ಷಣವಾದರೂ ನೀ ನನ್ನ ಕಣ್ಣುಗಳನ್ನು ನೋಡಿದ್ದರೆ ನಿನಗೇ ನನ್ನಾಳದ ಭಾವನೆಗಳು ತಿಳಿದುಬಿಡುತ್ತಿತ್ತು. ಒಮ್ಮೆ ನಿನ್ನ ಪುಟ್ಟ ಕಂಗಳನ್ನೆತ್ತಿ ನನ್ನ ಕಣ್ಗಳಲ್ಲಿಡು...
ಯಾವಾಗಲೂ ತಲೆ ಕೆಳಗೆ ಹಾಕಿ ನಿನ್ನಷ್ಟಕ್ಕೆ ನೀನಿದ್ದುಬಿಡುವ, ಗೆಳತಿಯರಿಲ್ಲದೇ ಒಂಟಿಯಾಗಿ ಓಡಾಡಲೇ ತಿಳಿಯದ ನಿನಗೆ ನಾನು ಹೇಗೆ ತಾನೆ ಕಣ್ಣಿಗೆ ಬೀಳಬಲ್ಲೆ ಹೇಳು ?! ನಿನ್ನ ಗೆಳತಿಯರೊಡನೆ ಹರಟುತ್ತಾ ನೀನು ನಗುವಾಗಲೆಲ್ಲಾ ನಾ ನಿನ್ನ ನೋಡುತ್ತೇನೆ. ನಿನ್ನ ಸುಂದರ ದಂತ ಪಂಕ್ತಿಗಳಲ್ಲಿ, ತುಟಿಯಂಚಿನ ಇಳಿಜಾರಿನಲ್ಲಿ ಇಳಿದು ಬಿಡುತ್ತೇನೆ. ಮಳೆಗಾಲದಲ್ಲಿ ನೀ ದಿನವೂ ಮುಡಿವ ಆ ಸೂಜಿ ಮಲ್ಲಿಗೆ ಹೂವಿನ ಘಮ, ಚಳಿಗಾಲದಲ್ಲಿ ನಿನ್ನ ಉದ್ದನೆಯ ಜಡೆಯನ್ನಲಂಕರಿಸುವ ಮಾಗಿ ಮಲ್ಲಿಗೆಯ ಕೆಂಪು-ಬಿಳುಪಿನ ಮಾಲೆ, ಬೇಸಿಗೆಯ ಬೆಳ್ಳಗಿನ ದುಂಡು ಮಲ್ಲಿಗೆ ದಂಡೆ.... ಅಬ್ಬಾ! ಮಲ್ಲಿಗೆಯೊಡನೆ ಪ್ರತಿ ದಿನ ನನ್ನ ನೀ ಹಾದು ಹೋದಾಗಲೆಲ್ಲ ನನ್ನ ನಾ ಮರೆತು ನೀನೇ ನಾನಾಗುತ್ತೇನೆ. ಆ ಹೂಮಾಲೆ ನಿನ್ನ ತಲೆಯನ್ನಲಂಕರಿಸಿದರೆ ನೀನು ನನ್ನ ಹೃದಯವನ್ನಲಂಕರಿಸುತ್ತೀಯ. ಹೂವಿನಂದ ನಿನ್ನ ಮೊಗದ ಲಕ್ಷಣಕ್ಕೆ ಮೆರಗು ನೀಡಿದರೆ, ಅದರ ಘಮ ಮತ್ತು ನಿನ್ನ ಆ ನಗು ನನ್ನ ತನು-ಮನವನ್ನು ಮುದಗೊಳಿಸಿ ನವೋಲ್ಲಾಸ ತುಂಬುತ್ತವೆ. ಒಂದು ದಿನ ನಿನ್ನ ಕಾಣದಿದ್ದರೆ ನಾನು ನಾನಾಗಿರುವುದಿಲ್ಲ ಗೊತ್ತೇನೇ... ದಿನ ಪೂರ್ತಿ ನನ್ನಲ್ಲಿ ಸ್ಮಶಾನ ಮೌನ.....ಎಂದೋ ಒಮ್ಮೊಮ್ಮೆ ನಿನ್ನ ಮಲ್ಲಿಗೆಯಿಲ್ಲದ ಜಡೆಯನ್ನು ಸಹ..!
ನಾ ಬರೀ ನಿನ್ನ ಚೆಂದಕ್ಕೆ ಮರುಳಾಗಿಲ್ಲ ಕಣೇ ಹುಡುಗೀ. ನಿನ್ನ ಶಾಂತ ಸ್ವಭಾವ, ಸಿಟ್ಟನ್ನು ಹತ್ತಿರವೂ ಸೇರಿಸದ ಸ್ನಿಗ್ಧ ಮಂದಹಾಸ, ಎಲ್ಲರೊಡನೆ ಹೊಂದಿಕೊಂಡು ಬೆರೆಯುವ ರೀತಿ, ಯಾರು ಏನೇ ಹೇಳಿದರೂ ನಿನ್ನ ತಣ್ಣನೆಯ ಸ್ವರದ, ನಯವಾದ ಪ್ರತಿಕ್ರಿಯೆ, ಎಲ್ಲವನ್ನೂ ನಾನು ಗಮನಿಸಿದ್ದೇನೆ. ನನಗೊಂದೇ ಅಲ್ಲ ನನ್ನ ಮನೆಯವರೊಡನೆ ಕೂಡ ನೀನು ಹೊಂದಿಕೊಳ್ಳಬಲ್ಲೆ ಎಂದು ಮನಗಂಡಿದ್ದೇನೆ. ನೀ ನನಗೆ ಸಾಗರದಷ್ಟು ಪ್ರೀತಿ ಕೊಡಬಲ್ಲೆ, ಅಮ್ಮನಂಥ ಮಡಿಲು ಕೊಡಬಲ್ಲೆ, ಕಷ್ಟದಲ್ಲಿ ಅಪ್ಪನಂತೆ ಹೆಗಲು ಕೊಡಬಲ್ಲೆ, ಪ್ರೀತಿಯ ಕೈ ತುತ್ತಿನಿಂದ ನನ್ನ ಹೊಟ್ಟೆ ತುಂಬಿಸಬಲ್ಲೆ...... ನನ್ನಮ್ಮನೊಡನೆ ಮಗಳಾಗಿ ಹೊಂದಿಕೊಳ್ಳಬಲ್ಲೆ, ನನ್ನಪ್ಪನನ್ನು ಗುರುವಿನಂತೆ ಗೌರವಿಸಬಲ್ಲೆ, ನನಗೆ ಸದಾ ಪ್ರೀತಿ-ನೆಮ್ಮದಿಯ ಸೋನೆ ಸುರಿಸುವ ಸತಿಯಾಗಬಲ್ಲೆ, ನಮ್ಮ ಮನೆಯನ್ನು ಶಾಂತಿ-ಸಹನೆಯಿಂದ ನಡೆಸಬಲ್ಲೆ... ಇಷ್ಟೆಲ್ಲಾ ನಂಬಿಕೆ ನನಗಿದೆ ಕಣೇ...!! ಇನ್ನೇನು ಬೇಕು ಹುಡುಗನಾಗಿ ನಾ ನಿನ್ನ ಮೆಚ್ಚಲು ?!
ನಿನಗೆ ನಾನೂ ಸಹ ಒಳ್ಳೆಯ ಸಖನಾಗುತ್ತೇನೆ. ನನ್ನ ರೆಪ್ಪೆಯಲ್ಲಿಟ್ಟು ನಿನ್ನ ಕಾಪಾಡುತ್ತೇನೆ. ನಿನ್ನ ಪ್ರತೀ ಹೆಜ್ಜೆಗೂ ಹೆಜ್ಜೆಗೂಡಿಸುತ್ತೇನೆ. ನಿನ್ನ ಸುತ್ತಲೂ ಪ್ರೀತಿಯ ದಿಗ್ಬಂಧನ ಮಾಡಿ ಜೋಪಾನ ಮಾಡುತ್ತೇನೆ. ಮಗುವಿನಂತೆ ಮುದ್ದಿಸುತ್ತೇನೆ. ಎಂದಿಗೂ ಬತ್ತದ ಪ್ರೀತಿಯ ಕಡಲಾಗುತ್ತೇನೆ. ಅಷ್ಟೇ ಏಕೆ ಪ್ರತೀ ದಿನ ಮಲ್ಲಿಗೆಯ ಮಾಲೆಯನ್ನು ಮಾಡಿ ನಾನೇ ನಿನ್ನ ಉದ್ದದ ಜಡೆಗೆ ಮುಡಿಸಿ, ನೆಟಿಗೆ ಮುರಿದು ದೃಷ್ಟಿ ತೆಗೆಯುತ್ತೇನೆ. ಇದೆಲ್ಲ ಬರೀ ಪೊಳ್ಳು ಆಶ್ವಾಸನೆಯಲ್ಲ ಹುಡುಗೀ... ಪ್ರಾಯದ ಹಸಿ - ಬಿಸಿ ಪ್ರೇಮವಲ್ಲ ನನ್ನದು... ಪ್ರೌಢ ವಯಸ್ಸಿನ ಪಕ್ವವಾದ ಪ್ರೀತಿಯಿದು.
ನಿನಗಾಗಿ ನನ್ನ ಮನೆಯಲ್ಲಿ ಎಲ್ಲಾ ಜಾತಿಯ ಮಲ್ಲಿಗೆ ಗಿಡ ನೆಟ್ಟಿದ್ದೇನೆ. ಸೂಜಿ ಮಲ್ಲಿಗೆ, ಮಾಗಿ ಮಲ್ಲಿಗೆ, ದುಂಡು ಮಲ್ಲಿಗೆ, ಮೈಸೂರು ಮಲ್ಲಿಗೆ,ಮಂಗಳೂರು ಮಲ್ಲಿಗೆ, ಭಟ್ಕಳ ಮಲ್ಲಿಗೆ, ಚಮೇಲಿ, ಅತ್ತರ ಮಲ್ಲಿಗೆ, ಕಸ್ತೂರಿ ಮಲ್ಲಿಗೆ.... ಯಾವುದೂ ಹೂವಾಗದಾದಾಗ ಬೇಕೆಂದು ಕಾಕಡ ಕೂಡ ನೆಟ್ಟಿದ್ದೇನೆ. ಅವೆಲ್ಲಾ ಬಳ್ಳಿಯಾಗಿ ಹಬ್ಬಿ ಹೂ ಬಿಡುವುದರೊಳಗೆ ನಮ್ಮ ಮನೆಯ ಸೇರೊದ್ದು, ನನ್ನ ಮನದ ಕದ ದಬ್ಬಿ ಒಳಗೆ ಬಂದುಬಿಡು ಗೆಳತೀ. ನಿನಗಾಗಿ ಮಲ್ಲೆಗೆಯ ಮಾಲೆ ಕಟ್ಟಿ ನಿನ್ನ ಜಡೆಯನ್ನಲಂಕರಿಸಲು ಕಾತರಿಸಿ ಕಾದಿರುತ್ತೇನೆ. ಒಲ್ಲೆನೆನ್ನದೇ ಬಂದು ಬಿಡೇ ಹುಡುಗೀ .... ನನ್ನ ಪ್ರೀತಿಯ ಕೊಳಕ್ಕೆ ಕಲ್ಲೆಸೆದು ಹೋಗದಿರು... ಇಬ್ಬರ ಪ್ರೀತಿಯ ಕೊಳದಲ್ಲಿ ಜೋಡು ಮಲ್ಲಿಗೆ ತೇಲಿಬಿಡುವ ಬಂದು ಬಿಡೇ ಗೆಳತೀ....


ಸಹಸ್ರಾರು ಯುವಕರ ಮನದ ಭಾವ ನಿಮ್ಮೀ 'ಮನಸು ಕೊಡೇ ಓ ಹುಡುಗೀ... ' ಬರಹ.
ReplyDelete25 ವರ್ಷಗಳ ಹಿಂದೆ ನೀವು ನನಗೆ ನೀವು ಸಿಕ್ಕಿದ್ದರೆ ನಿಮ್ಮಿಂದಲೇ ಒಂದು ಪ್ರೇಮ ಪತ್ರ ಬರೆಸಿಕೊಂಡು ಹೋಗಿ 'ಅವಳಿಗೆ' ಕೊಟ್ಟುಬರುತ್ತಿದ್ದೇ!
ತುಂಬಾ ಧನ್ಯವಾದಗಳು ಸರ್.... :) ಈಗಲೂ ಕೊಡಿ ನಿಮ್ಮವರಿಗೆ ಪ್ರೇಮ ಪತ್ರ.... ತಪ್ಪೇನು ... ;) :) ಅವಳು - ಇವಳು ಒಬ್ಬಳೇ ತಾನೇ ..!!? :P
Deleteಟೈಟಲ್ ನೋಡಿ... "ವರವ ಕೊಡೇ..." ಹಾಡು ನೆನಪಾತು!
ReplyDeleteಹಾ ಹಾ ಹಾ .... :) ಮನಸು ಕೊಟ್ರೆ ವರ ಕೊಟ್ಟ ಹಾಂಗೆಯ ಬಿಡು
DeleteKav as usual sooper darling.... Manelli mallige balli hatra hogakaatu, ondishtu koidu dande madavu...:)
ReplyDeleteThank you sooo much darling :) ha ha ha.... :) baa naa mallige koykodti nee dande madlakku.. kadige ibroo sooodkyambana ..... ;) :)
Deleteಯಾವುದೂ ಹೂವಾಗದಾದಾಗ ಬೇಕೆಂದು ಕಾಕಡ ಕೂಡ ನೆಟ್ಟಿದ್ದೇನೆ...
ReplyDeleteಈ ಸಾಲಿನ humour ಇಷ್ಟವಾಯ್ತು ... ಚೆನ್ನಾಗಿದೆ...
ಧನ್ಯವಾದಗಳು .... :) ಆದ್ರೆ ಇದ್ರಲ್ಲಿ ನಿಮಗೆ ಏನು humorous ಅನ್ಸಿದ್ದು ಅಂತ ಗೊತ್ತಾಗಿಲ್ಲ ...! :P
Deleteಕಾವ್ಯ ಸುಂದರ ಬ ಹ ಳ ದಿನ ಆಯ್ತು
ReplyDeleteಧನ್ಯವಾದ ಆಜಾದಣ್ಣ .... :) ಬರೀಬೇಕು ಅನ್ಕೊಂಡ್ರು ಆಗ್ತಾನೆ ಇಲ್ಲಾ ...:(
Deleteಹ್ವಾಯ್.. ಬದುಕಿದ್ರಾ ಇನ್ನೂವ ;-) ಒಂದು ವರ್ಷ ಆತೇನಪ ನೀವು ಬರೀದೆ :-( ಇದೇ ಕೊನೇ ಪೋಸ್ಟಾ ನಾನೋದಿದ್ದು ಹೇಳಿ. ಸದ್ಯದಲ್ಲೇ ಹೊಸ ಪೋಸ್ಟಿನ ನಿರೀಕ್ಷೆಯಲ್ಲಿ
ReplyDeleteThis comment has been removed by the author.
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರ.
Delete