Monday, December 15, 2014

ಹನಿಗಥೆಗಳು........


ವಿಧಿ ವರ :     
 ಗಾಢ ಸ್ನೇಹದ ಮಧ್ಯೆ ಅರಿವಿಲ್ಲದೇ ಪ್ರೀತಿ ಇಣುಕಿತ್ತು... ಇಬ್ಬರ ಮನಸ್ಸೂ ಹೇಳಲಾರದ ಅನಿವಾರ್ಯತೆಯಿಂದ ತಳಮಳಿಸಿತ್ತು... ಅದೊಂದು ದಿನ ತಡೆಯಲಾರದ ದುಃಖ ಪ್ರೀತಿಯನ್ನು ಇಬ್ಬರಿಂದಲೂ ಏಕಕಾಲಕ್ಕೆ ಹೊರಹಾಕಿತ್ತು... ಆಗದ ಮಾತೆಂದು ತಿಳಿದ ಇಬ್ಬರಲ್ಲೂ ದುಃಖ ಭೋರ್ಗರೆದು, ಅಸಹಾಯಕತೆ ಕಣ್ಣೀರ ಕೋಡಿಯಾಗಿ ಹರಿದಿತ್ತು. ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡು ಮತ್ತದೇ ಹಳೆಯ ನಗು ಮೊಗದ ಮುಖವಾಡ ಹೊತ್ತರು... ಮೊದಲಿನಿಂದಲೂ ವಿಧಿಯ ಕರಾಳ ಮುಖದ ಅರಿವಿದ್ದಿದ್ದರಿಂದ ದಿನೇ ದಿನೇ ತಮ್ಮ ಮುಖವಾಡಕ್ಕೆ ಹೊಂದಿಕೊಂಡುಬಿಟ್ಟರು..
     ಈ ಬಾರಿ ವಿಧಿ ಕೂಡ ಅವರ ಪ್ರೀತಿಗೆ ತಲೆ ಬಾಗಿತ್ತು... ಧಿಡೀರನೆ ಮನೆಯಿಂದ "ನಿಮ್ಮಿಬ್ಬರ ಜಾತಕಗಳು ಹೊಂದುತ್ತವೆ ನಮಗೆ ಒಪ್ಪಿಗೆ... ನೀವೇನೆನ್ನುತ್ತೀರಿ..." ಎಂದು ಫೋನಾಯಿಸಿದಾಗ  ಅದಕ್ಕೇ ಉತ್ತರವನ್ನೂ ಹೇಳದೆ ಓಡಿ ಬಂದ ಅವನು ಅವಳ ಮುಂದೆ ನಿಂತು, ಪ್ರೀತಿಯಿಂದ ತಂದ ಗುಲಾಬಿಯನ್ನು ಅವಳ ಕೈಗಿಟ್ಟು ಹಣೆಗೊಂದು ಹೂಮುತ್ತನ್ನಿತ್ತಿದ್ದ.... 

*************

ಕಣ್ಣೀರು :
              ಅವನು ತಂದೆ ತಾಯಿಯನ್ನು ಕಡೆಗಣಿಸಿ ತನ್ನ ಹೆಂಡತಿ, ಮಗನೊಡನೆ ಐಷಾರಾಮಿಯಾಗಿ ಬೇರೆಡೆ ವಾಸಿಸುತ್ತಿದ್ದ, ಅದೂ ಸತ್ತು ಹೋದ ತನ್ನ ಅಣ್ಣನ ಆಸ್ತಿಯಲ್ಲಿ... ಅಗಲಿದ ಮಗನ ಆಸ್ತಿ ತನ್ನದೆಂದು ತಿಳಿದೂ ಹೆತ್ತೊಡಲು ಉಳಿದೊಬ್ಬ ಮಗನ ಸಂತೋಷವನ್ನು ಕಿತ್ತುಕೊಳ್ಳದೆ ಕಷ್ಟವನ್ನು ತುಟಿ ಕಚ್ಚಿ ಸಹಿಸಿತ್ತು... 
       ಭಯಂಕರ ಅರ್ಬುದ ರೋಗದಿಂದ ಕೆಲವೇ ದಿನಗಳಲ್ಲಿ ತಾನು ಸಾಯಲಿರುವೆನೆಂದು ತಿಳಿದ ತಂದೆ ತನ್ನೆಲ್ಲ "ಸ್ವಯಾರ್ಜಿತ ಆಸ್ತಿ", ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಹೆಂಡತಿಯ ಹೆಸರಿಗೆ ಬರೆದು, ಅವಳ ಕೊನೆಕಾಲದಲ್ಲಿ ಅದನ್ನು ತನ್ನಿಷ್ಟದವರಿಗೆ ಕೊಡಬಹುದೆಂದು ಬರೆದು ಇಹ ಲೋಕ ತ್ಯಜಿಸಿದ್ದ.. ಜೀವವಿದ್ದಾಗ ನೋಡಿಕೊಳ್ಳದ ಮಗ ವಿಷಯ ತಿಳಿದು ಓಡೋಡಿ ಬಂದು 'ಕಣ್ಣೀರು' ಸುರಿಸಿ ತಂದೆಯ ಕಾರ್ಯ ಮುಗಿಸಿ ತಾಯಿಯನ್ನು ಇನ್ನಿಲ್ಲದ ಆಸ್ಥೆಯಿಂದ 'ಇನ್ನು ಒಬ್ಬಳೇ ಇರಬೇಡ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ನಮ್ಮೊಡನೆಯೇ ಇರುವಂತೆ ಬಾ...' ಎಂದು ಕರೆದೊಯ್ದ.... 


**************


ಕೊನೆಯ ಕೊಂಡಿ :
              ಅವಳಿಗೆ ಅವನ ಪ್ರತೀ ಹೆಜ್ಜೆಯ ಮೇಲೆ ಅನುಮಾನ. ಬೇರಾವ ಹುಡುಗಿಯ ಬಳಿ ಮಾತಾಡುವಂತೆಯೇ ಇರಲಿಲ್ಲ. ಅವನ ತಂಗಿಯರ ಜೊತೆ ಆತ್ಮೀಯತೆಯಿಂದ ಮಾತಾಡಿದರೂ ಇವಳು ಅತ್ತು ರಂಪ ಮಾಡಿಬಿಡುತ್ತಿದ್ದಳು. ಅದೊಂದು ವಿಚಾರ ಬಿಟ್ಟರೆ ಇವನಿಗೆ ಅವಳು ಮೆಚ್ಚಿನ ಮಡದಿ. ಬೇರೆಲ್ಲ ವಿಷಯದಲ್ಲಿ ಒಳ್ಳೆಯವಳೇ, ಆದರೆ ವಿನಾ ಕಾರಣ ಅನುಮಾನ ಅವಳನ್ನು ಕಿತ್ತು ತಿನ್ನುತ್ತಿತ್ತು. ಅದೆಷ್ಟೋ ಬಾರಿ ಅವನು ಪ್ರೀತಿಯಿಂದ ಮತ್ತು ಬೈದು ಕೂಡ ತಿಳಿ ಹೇಳಿದ್ದ. ಸುಮ್ಮನೆ ಒಂದು ಕೌನ್ಸೆಲಿಂಗ್ ಗೆ ಹೋಗಿ ಬರೋಣ ಎಂದರೂ ನಾನೇನು ಹುಚ್ಚಿಯಲ್ಲ ಎಂದು ಕೂಗಿದ್ದಳು. ಹಾಗಂತ ಅವಳು ಎಲ್ಲರೊಡನೆಯೂ ಸಲುಗೆಯಿಂದ ಬೇರೆಯುತ್ತಿದ್ದಳು, ಹೆಣ್ಣು - ಗಂಡು ಎಂಬ ಬೇಧವಿಲ್ಲದೇ....! ಸ್ವಭಾವತಃ ಎಲ್ಲರೊಡನೆ ಖುಷಿಯಿಂದ ಹರಟುವ ಅವನು ಅದ್ಯಾವುದಕ್ಕೂ ಅವಳಂತೆ ತಲೆ ಕೆಡಿಸಿಕೊಂಡಿರಲಿಲ್ಲ. ಅವಳು ಮಾತ್ರ ಅವನನ್ನು, ಅವನ ಮೊಬೈಲ್ ಕರೆಗಳನ್ನು ಪರೀಕ್ಷಿಸುವುದು ನಡದೇ ಇತ್ತು. ದಿನಗಳೆಯುತ್ತಾ ಅವನು ತಿಳಿ ಹೇಳುವ, ಅವಳನ್ನು ಸಮಾಧಾನಿಸುವ ತಾಳ್ಮೆ ಕಳೆದುಕೊಳ್ಳುತ್ತಾ ಬಂದ.  ಇಬ್ಬರ ನಡುವಿನ ಒಂದೊಂದೇ ಕೊಂಡಿ ಕಳಚುತ್ತಾ ಬಂದ ಅನುಭವ ಅವಳಿಗಾಗುವ ಹೊತ್ತಿಗೆ ಅವನು ಕೊನೆಯ ಕೊಂಡಿಯನ್ನೂ ಕಿತ್ತೊಗೆಯಲು ಕಾತರನಾಗಿದ್ದ.....

ಕಾವ್ಯಾ :)
(ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳು) 



5 comments:

  1. ವಿಧಿ ವರ: ಇಂತಹ ಪುಣ್ಯ ಎಲ್ಲ ಜೋಡಿಗೂ ಸಿಗಲಿ. :)

    ಕಣ್ಣೀರು: ಥೂ! ಇಂತಹ ಸಂತನಾಗಳಿಗೆ ಧಿಕ್ಕಾರ...

    ಕೊನೆಯ ಕೊಂಡಿ: ಎಂತಹ ಹುಂಬ ಹುಡುಗಿ ಈಕೀ? :(

    ವಿಜಯ ವಾಣಿಗೆ ಸಲಾಮುಗಳು.

    ReplyDelete
    Replies
    1. ಬದರಿ ಸರ್.... ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಳಿಗೂ ನನ್ನ ಸಲಾಮು.... :) ಎಲ್ಲವೂ ಸತ್ಯ ಘಟನೆಗಳ ಆಧಾರಿತ ಕಥೆಗಳು ಸರ್...
      ಕಣ್ಣೀರು: ಏನ್ಮಾಡೋದು.. ಇತ್ತೀಚಿನ ದಿನಗಳಲ್ಲಿ ಸಂತಾನಗಳು ಹೆಚ್ಚಾಗುತ್ತಿವೆ :(

      Delete
  2. nice stories.. ಕೆಲ ಕುಟುಂಬಗಳು ಕಣ್ಣೆದ್ರು ಬಂದಂಗಾತು :-(

    ReplyDelete
  3. ಹಮ್.. ಎಲ್ಲಾ ಸತ್ಯ ಘಟನೆ ಆಧಾರಿತ ಕಥೆನೇಯಾ...!! :(

    ReplyDelete