Friday, September 30, 2011


 ಅವನು ತಂದೆ ತಾಯಿಯನ್ನು ಕಡೆಗಣಿಸಿ ತನ್ನ ಹೆಂಡತಿ, ಮಗನೊಡನೆ ಐಷಾರಾಮಿಯಾಗಿ ಬೇರೆಡೆ ವಾಸಿಸುತ್ತಿದ್ದ, ಅದೂ ಸತ್ತು ಹೋದ ತನ್ನ ಅಣ್ಣನ ಆಸ್ತಿಯಲ್ಲಿ... ಅಗಲಿದ ಮಗನ ಆಸ್ತಿ ತನ್ನದೆಂದು ತಿಳಿದೂ ಹೆತ್ತೊಡಲು ಉಳಿದೊಬ್ಬ ಮಗನ ಸಂತೋಷವನ್ನು ಕಿತ್ತುಕೊಳ್ಳದೆ ಕಷ್ಟವನ್ನು ತುಟಿ ಕಚ್ಚಿ ಸಹಿಸಿತ್ತು... 
       ಭಯಂಕರ ಅರ್ಬುದ ರೋಗದಿಂದ ಕೆಲವೇ ದಿನಗಳಲ್ಲಿ ತಾನು ಸಾಯಲಿರುವೆನೆಂದು ತಿಳಿದ ತಂದೆ ತನ್ನೆಲ್ಲ "ಸ್ವಯಾರ್ಜಿತ ಆಸ್ತಿ", ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಹೆಂಡತಿಯ ಹೆಸರಿಗೆ ಬರೆದು, ಅವಳ ಕೊನೆಕಾಲದಲ್ಲಿ ಅದನ್ನು ತನ್ನಿಷ್ಟದವರಿಗೆ ಕೊಡಬಹುದೆಂದು ಬರೆದು ಇಹ ಲೋಕ ತ್ಯಜಿಸಿದ್ದ.. ಜೀವವಿದ್ದಾಗ ನೋಡಿಕೊಳ್ಳದ ಮಗ ವಿಷಯ ತಿಳಿದು ಓಡೋಡಿ ಬಂದು 'ಕಣ್ಣೀರು' ಸುರಿಸಿ ತಂದೆಯ ಕಾರ್ಯ ಮುಗಿಸಿ ತಾಯಿಯನ್ನು ಇನ್ನಿಲ್ಲದ ಆಸ್ಥೆಯಿಂದ 'ಇನ್ನು ಒಬ್ಬಳೇ ಇರಬೇಡ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ನಮ್ಮೊಡನೆಯೇ ಇರುವಂತೆ ಬಾ...' ಎಂದು ಕರೆದೊಯ್ದ.... 

***********


  ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಏನೇ ಮಾಡಿದರೂ ಒಟ್ಟಿಗೆ ಆಗಬೇಕು. ಅವರ ಮಧ್ಯೆ ಪ್ರೀತಿ ಎಂಬುದರ ಅರಿವೇ ಇಲ್ಲದ ಒಡನಾಟ. ಅದೊಂದು ದಿನ ಅವಳಿಗೆ ಹುಡುಗ ನೋಡಲು ಬರುವುದಾಗಿ ತಿಳಿಸಿದರು. ಅವಳು ಬೇಸರದಿಂದಲೇ ಅವನಿಗೆ ಹೇಳಿದ್ದಳು. ಅವನು, ತನ್ನನ್ನು ಯಾವುದೊ ಹುಡುಗಿ ನೋಡಲು ಒತ್ತಾಯ ಮಾಡುತ್ತಿದ್ದಾರೆ ಅಮ್ಮ ಎಂದು ಹೇಳಿದ್ದ. ಇಬ್ಬರೂ ಇಷ್ಟವಿರದ ಕಾರಣ ಯಾರು ನೋಡಲು ಬರುವವರು ಯಾರೆಂದೂ ಕೇಳಿರಲಿಲ್ಲ..
     'ಆ ದಿನ' ಅನ್ಯಮಸ್ಕರಾಗಿಯೇ ತಲೆಯೆತ್ತಿ ನೋಡಿದರೆ.... ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ... ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಣದ ದೇವರಿಗೆ ಮನದಲ್ಲೇ ವಂದಿಸುತ್ತಿದ್ದಾರೆ....

**********

ಕಾವ್ಯಾ 

Monday, September 12, 2011


(ಭಾಗ ೨)

ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರಲೇಬೇಕಲ್ಲ...!

       ಮಾನಸಿಕ ತುಮುಲಗಳಿಂದ ಕೂಡಿದ ಮನಸ್ಸು ಎಷ್ಟು ದಿನ ತಾನೇ ಸ್ಫೋಟಗೊಳ್ಳದೆ ಇರಲು ಸಾಧ್ಯ.... ಆ ದಿನ ಶೀಘ್ರದಲ್ಲೇ ಬಂತು. ಮನಸ್ಸಿನ ಭಾವನೆಗಳು ಕಟ್ಟೊಡೆದ ನದಿಯ ಪ್ರವಾಹದಂತೆ ಹರಿಯಲಾರಂಭಿಸಿತು. ಭಾವನೆಗಳು ಮಾತಾದವು. ಮನಸ್ಸಿನಲ್ಲಿ ಅರಿವಿಲ್ಲದೇ ಮೊಳೆತ ಪ್ರೀತಿ ಬೆಳೆದು ಗಟ್ಟಿಯಾಗಿ ಬೇರೂರಿಯೇ ಬಿಟ್ಟಿತ್ತು. ಅಂತರಂಗದಳಲು ಬಹಿರಂಗವಾಗತೊಡಗಿತು. 
       ಇಬ್ಬರೂ ಕುಳಿತು ಚರ್ಚಿಸಿದರು. ಅದೆಲ್ಲಿ ಪ್ರೀತಿ ಮೂಡಿತು... ಅದೇಕೆ ನಮ್ಮ ಮನ ತಿರುಗಿತು.. ಅದು ಹೇಗೆ ಸ್ನೇಹ ಪ್ರೀತಿಯಾಯಿತು... ಇದು ಕೇವಲ ಸ್ನೇಹದ ಪ್ರೀತಿಯೋ ಅಥವಾ ಪ್ರೇಮದ ಪ್ರೀತಿಯೋ...! ಮನ ಗೊಂದಲದ ಗೂಡಾಯಿತು. ಮುಂದಿನ ದಾರಿ ಕಾಣದಾಯಿತು. ಹುಡುಗ-ಹುಡುಗಿಯ ಮಧ್ಯ ಸ್ನೇಹ, ಮಮತೆ, ಅವಲಂಬನೆ, ಪರಸ್ಪರ ಕಾಳಜಿ ಗಾಢವಾದಂತೆ ಅಲ್ಲಿ ಸ್ನೇಹವನ್ನು ಮಾತ್ರವೇ ಉಳಿಸಿಕೊಳ್ಳಲು ಅಸಾಧ್ಯ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಯಿತು. ಗಾಢ ಸ್ನೇಹದಲ್ಲಿ ಪ್ರೀತಿಯ ಅಂಕುರ ಸಹಜವೆಂಬುದು ಇಬ್ಬರಿಗೂ ಮನವರಿಕೆಯಾಯಿತು.
       ಮುಂದೇನು ಎಂದು ಬಹುವಾಗಿ ಯೋಚಿಸಿದರು.  ಮನೆಯವರನ್ನು ಒಪ್ಪಿಸಲು ಸಾಧ್ಯವಿಲ್ಲ ತಾವು ಬೇರೆಯಾಗುವುದೇ ಸರಿ ಎಂದುಕೊಂಡರು. ಸುಮ್ಮನೆ ಮಾನಸಿಕ ತುಮುಲಗಳಿಗೆ ಒತ್ತು ನೀಡಿದರೆ ಅವು ಬಹು ಬೇಗ ಸ್ಫೋಟಗೊಳ್ಳುತ್ತವೆ. ಗೊಂದಲದ ಗೂಡಾದ  ಮನಸ್ಸಿಗೆ ಮೊದಲಿನ ಮಾತು, ನಗು, ಹಾಸ್ಯ ಅಸಾಧ್ಯವೆನಿಸತೊಡಗಿತು. ಇಬ್ಬರಲ್ಲೂ ಮೌನವೇ ಮಾತಾಯಿತು. ಸ್ನೇಹದಲ್ಲಿದ್ದ ಖುಷಿ ಪ್ರೀತಿಯಲ್ಲಿ ಸಿಗುತ್ತಿಲ್ಲ ಎಂದುಕೊಂಡರು. ಕೊನೆಗೆ ಇಬ್ಬರೂ ಮೊದಲಿನಂತಾಗೋಣ ಎಂದು ಸಂಕಲ್ಪಿಸಿದರು.... ಆದರೆ ನಾವು ಅಂದುಕೊಂಡಂತೆಲ್ಲ ಮನಸ್ಸು ಕೇಳುತ್ತದೆಯೇ...?! ಬರ ಬರುತ್ತಾ ಇಬ್ಬರಿಗೂ ತಮ್ಮ ನಗು, ಮಾತು ಕೃತಕವೆನಿಸತೊಡಗಿತು. ಪ್ರೀತಿಯನ್ನು ಬಿಡುವುದು ಅಸಾಧ್ಯವೆನಿಸತೊಡಗಿತು. ದೂರಾಗುತ್ತಿದ್ದೇವೆ ಎನ್ನುತ್ತಲೇ ಮನಸ್ಸು ಮತ್ತಷ್ಟು ಹತ್ತಿರವಾಗುತ್ತಿತ್ತು.... 


       ಅನುರಾಗವೆಂಬುದು ಎಲ್ಲಿ, ಯಾವಾಗ, ಯಾರಲ್ಲಿ, ಹೇಗೆ ಮೂಡುತ್ತದೆ ಎಂದು ತಿಳಿಯುವುದು ಅಸಾಧ್ಯ. ಎಷ್ಟೋ ಪ್ರೇಮ ಅದೆಷ್ಟೋ ರೀತಿಯಲ್ಲಿ ಕೊನೆಯಾಗುತ್ತದೆ. ನಾವೇಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು, ಹಣೆಬರಹವನ್ನು ಬಲ್ಲವರಾರು... ಎಂದು ನಿರ್ಧರಿಸಿ, ಊರಿಗೆ ಹೋದಾಗ ಅವನು ಮನೆಯಲ್ಲಿ ಹೇಳಿಯೂ ಬಿಟ್ಟನು... ಇತ್ತ ಏನಾಗುತ್ತದೋ ಎಂದು ಉಸಿರು ಬಿಗಿ ಹಿಡಿದು ಕಾದಿದ್ದ ಅವಳಿಗೆ ಸಿಹಿ ಸುದ್ದಿ ಕಾದಿತ್ತು. ಅವಳು ಖುಷಿಯಿಂದ ಕುಣಿದೇ ಬಿಟ್ಟಿದ್ದಳು... ದಿನಗಳೆದಂತೆ ಅವಳೂ ಕೂಡ ಮನೆಯಲ್ಲಿ ಒಪ್ಪಿಸುವಲ್ಲಿ ಯಶಸ್ವಿಯಾದಳು.. 
       ಅಂತೂ ಸ್ನೇಹ ಪ್ರೀತಿಯಾಗಿ ಮುಂದುವರೆದು ನಮ್ಮ ಕಥಾನಾಯಕನಿಗೆ ಈಗ ಅವಳಿ - ಜವಳಿ ಮಕ್ಕಳು... 



ಕಾವ್ಯಾ :) 
       

Tuesday, May 24, 2011

ಅನ್ವೇಷಣೆ.....

(ಭಾಗ ೧)
      
       ಅವರಿಬ್ಬರ ನಡುವೆ ಅಗಾಧ ಸ್ನೇಹ... ಅವಳು ತುಂಬಾ ಮಾತಿನ ಹುಡುಗಿ. ಅವನದು ಮಾತು ಕಮ್ಮಿ. ಅವಳು ಮಾತ್ರ ಸದಾ ಮಾತು...ಮಾತು...ಮಾತು... ಅವನೂ ಕೂಡ ಎಂದೂ ಬೇಸರಿಸದೇ ಅವಳ ಮಾತನ್ನು ಕೇಳುತ್ತಿದ್ದ. ಅವಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದ. ಅವಳಿಗೋ ಅವನ ಮಾತೇ ಕೊನೆಯದು. ಅವನು ತನ್ನ ಅಳಲನ್ನು ಅವಳಷ್ಟು ತೋಡಿಕೊಳ್ಳದಿದ್ದರೂ, ಅವಳು ಅವನ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಿದ್ದಳು. ಮಾತನಾಡಿಸಿ ಅದೂ ಇದೂ ಪ್ರಶ್ನೆ ಕೇಳಿ ಅವನ ಮನಸಿನ ಮಾತನ್ನು ಹೊರಗೆಡವುತ್ತಿದ್ದಳು. ಅವನಿಗೂ ಅವಳ ಮಾತು, ನಗು ಎಂದರೆ ಅದೇನೋ ಸಂತೋಷ.... ಒಂದೇ ಒಂದು ದಿನ ಅವಳು ಸ್ವಲ್ಪ ಮಾತು ಕಮ್ಮಿ ಮಾಡಿದ್ದಾಳೆ ಎನಿಸಿದರೂ ಸಾಕು ಅವನಿಗೇನೋ ಕಸಿವಿಸಿ. 'ಏನಾಯ್ತೆ... ಮಾತಾಡೇ... ಸ್ವಲ್ಪ ನಗೇ... ನಿನ್ನ ನೋಡೋಕಾಗ್ತಿಲ್ಲ...' ಎನ್ನುತ್ತಿದ್ದ.


       ಬರ ಬರುತ್ತಾ ಅವನೂ ಕೂಡ ತುಂಬಾ ಮಾತನಾಡಲು ಕಲಿತ. ಅವಳೊಡನೆ ಮಾತ್ರವೇ ಎನ್ನುವಂತೆ ಮಾತನಾಡತೊಡಗಿದ. ತನ್ನ ಮನದ ನೋವನ್ನು ತೋಡಿಕೊಳ್ಳಲು ಕಲಿಯತೊಡಗಿದ. ಇಬ್ಬರೂ ಮಾತಿಗೆ ಕುಳಿತರೆ ಎಲ್ಲಾ ಆಗು-ಹೋಗುಗಳ ಬಗ್ಗೆ, ಅವಳ ಆಫೀಸಿನ ಬಗ್ಗೆ, ಅವನ ಆಫೀಸಿನ ಬಗ್ಗೆ, ರಾಜಕೀಯ, ಮನೆ ಸಮಸ್ಯೆಗಳು.... ಹೀಗೇ ಎಲ್ಲವೂ ಅವರ ಬಾಯಿಗೆ ಸಿಲುಕುತ್ತಿದ್ದವು. ಒಮ್ಮೊಮ್ಮೆ ರಾಜಕೀಯದ ವಿಷಯಕ್ಕೆ ವಾದ ಮಾಡಿ, ಜಗಳವಾಡಿ ಅತ್ತ-ಇತ್ತ ಮುಖ ಮಾಡಿ ಕುಳಿತುಬಿಡುತ್ತಿದ್ದರು. ಹೆಚ್ಚಿನ ವಿಷಯಗಳಲ್ಲಿ ಅವಳೇ 'ಹೋಗ್ಲಿ ಬಿಡೋ.. ನೀನೆ ಸರಿ.. ಖುಶೀನಾ... ಸುಮ್ಮನೆ ವಾದ ಬೇಡಾ..' ಎಂದು ರಾಜಿಯಾಗುತ್ತಿದ್ದಳು. ಅದೆಷ್ಟೋ ಸಾರಿ ನೀ ನನಗೆ ಆ ವಿಷಯ ಹೇಳಿಲ್ಲ, ಈ ವಿಷ್ಯ ಹೇಳಿಲ್ಲ ಎಂದು ಇದೊಂದು ವಿಷಯಾನ ಹೇಳೋಕೆ ಅನ್ನುವಷ್ಟು ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ಮೂತಿ ಊದಿಸಿಕೊಂಡು ಕುಳಿತು ಬಿಡುತ್ತಿದ್ದರು. ಅದೆಷ್ಟು ಬೇಗ ಬೇಗ ಜಗಳವದಿದ್ದರೋ ಅಷ್ಟೇ ಬೇಗ ರಾಜಿಯಾಗಿ ನಗುತ್ತಿದ್ದರು. ಒಬ್ಬರಿಗೊಬ್ಬರು ಒಂದು ದಿನ ಮಾತಾಡಲು ಸಿಗದಿದ್ದರೂ ದಿನ ಕಳೆಯುವುದು ಕಷ್ಟ ಎನ್ನುವಷ್ಟು ಸ್ನೇಹ.... ಬರಿದೇ ಸ್ನೇಹ... ನಿಷ್ಕಲ್ಮಷ ಸ್ನೇಹ....ಬಿಟ್ಟಿರಲಾರದ ಸ್ನೇಹ... 

      ಅವಳೇ ಎಷ್ಟೋ ಬಾರಿ ಕೇಳಿದ್ದಳು ಅವನಲ್ಲಿ... 'ಎಲ್ರೂ ಹೇಳ್ತಾರೆ, ಹುಡ್ಗಾ ಹುಡ್ಗಿ ಕೊನೆ ತನಕ ಬರೀ friends ಆಗಿರೋಕೆ ಆಗಲ್ವಂತೆ ಹೌದೇನೋ...? ನಾವು ಇದ್ದು ತೋರ್ಸೋಣ ಅಲ್ವ...'
ಅವನು 'ಹ್ಞೂ ಎಲ್ರೋ ಹೇಳ್ತಾರೆ.. ಆದ್ರೆ ಅದೆಲ್ಲ ಅವರವರ ಮನಸಿಗೆ ಸಂಬಂಧ ಪಟ್ಟಿದ್ದು ಕಣೆ... ಮನಸಲ್ಲಿ ಬೇರೆ ಆಲೋಚನೆ ಬರದೆ ಇರೋ ಥರ ಇದ್ರೆ, ಕೇವಲ friends ಅನ್ಕೊಂಡ್ರೆ, ಅದನ್ನೇ ತಲೇಲಿ ಇಟ್ಕೊಂಡ್ರೆ ಖಂಡಿತ ಇರ್ಬೋದು....'

ಅವಳು ಪದೇ ಪದೇ ಅವನ ಬಳಿ ಅದನ್ನ ಕೊಡ್ಸು, ಇದನ್ನ ಕೊಡ್ಸು, ನಂಗೆ ಅದನ್ನ ತಿನ್ನಬೇಕು ಕೊಡ್ಸು ಎಂದು ಹಠ ಮಾಡುತ್ತಿದ್ದಳು... ಅವನೂ ಎಂದೂ ಬೇಸರಿಸದೇ ಕುಶಿಯಿಂದ ಕೊಡಿಸುತ್ತಿದ್ದ. ಅವಳು ಪ್ರೀತಿಯಿಂದ ತಿನ್ನುವುದನ್ನು ನೋಡಿ ಖುಷಿ ಪಡುತ್ತಿದ್ದ. ಪ್ರತಿ ದಿನ ಅದೆಷ್ಟು ಹೊತ್ತು ಏನು ಮಾತಾಡ್ತಾರೋ ಎಂದು ಬೇರೆಯವರು ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಮಾತಾಡುತ್ತಿದ್ದರು. ಎಷ್ಟೋ ಬಾರಿ ಅವರಿಗೇ ಅನ್ನಿಸಿದ್ದುಂಟು, 'ಅದೇನೋ ಮಾತಡ್ತೀವೋ ಏನೋ.. ಈ ಹಾಳಾದ ಮಾತು ಮುಗಿಯೋದೇ ಇಲ್ಲಾ...!!' ಎಂದು. ಅಷ್ಟಾದರೂ ಒಮ್ಮೆಯೂ ಕೂಡ ಅವರ ಮಧ್ಯೆ ಸ್ನೇಹಕ್ಕೆ ಹೊರತಾದ, ಸ್ನೇಹವನ್ನು ದಾಟಿದ ಯಾವುದೇ ವಿಷಯ ಸುಳಿಯಲೇ ಇಲ್ಲಾ... ಏನೇ ಆಗಲಿ ಹೋಗಲಿ ಅವಳು ಮೊದಲು ಹೇಳುತ್ತಿದ್ದುದು ಅವನಿಗೆ....

      ಬರ ಬರುತ್ತಾ ಅದೆಷ್ಟು ಹಚ್ಚಿಕೊಂಡುಬಿಟ್ಟರೆಂದರೆ ಅವಳು ಬೇರೊಬ್ಬ ಗೆಳತಿ-ಗೆಳೆಯರೊಡನೆ ಜಾಸ್ತಿ ಮಾತಾಡಿದರೆ ಅವನಿಗೆ ಸಿಟ್ಟು, ಅವನು ಯಾರೋ ಹುಡುಗಿಯ ಬಳಿ ಹರಟಿದನೆಂದರೆ ಇವಳಿಗೆ ಸಿಟ್ಟು ಬರುವಷ್ಟರ ಮಟ್ಟಿಗೆ...! 

      ಅವಳ ಮನೆಯಲ್ಲಿ ವರಾನ್ವೇಷಣೆ ಪ್ರಾರಂಭವಾಯಿತು. ಪ್ರತೀ ಹಂತದಲ್ಲೂ ಅವಳು ಅವನಿಗೆ ತಿಳಿಸುತ್ತಿದ್ದಳು. ಅವನ ಅಭಿಪ್ರಾಯಕ್ಕೂ ಮನ್ನಣೆ ಕೊಡುತ್ತಿದ್ದಳು. ಮದುವೆಯಾದ ಮೇಲೆ ಈ ಸ್ನೇಹದ ಗಾಢತೆಯನ್ನು ಉಳಿಸಿಕೊಳ್ಳಲಾಗದಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದರು ಆಗಾಗ. 

      ಇದ್ದಕ್ಕಿದ್ದಂತೆ ಯಾರಿಗೆ ಏನಾಯಿತೋ.. ಪದೇ ಪದೇ ಜಗಳ, ಮನಸ್ತಾಪಗಳು.... possessiveness ಇಬ್ಬರಿಂದಲೂ ಹೊರ ಹೊಮ್ಮತೊಡಗಿತು.... ಮನ ಗೊಂದಲದ ಗೂಡಾಯಿತು... 'ಏಕೆ ಹೀಗಾಗ್ತಾ ಇದೀವಿ' ಅಂತ ಒಬ್ಬರಿಗೊಬ್ಬರು ಹಲವಾರು ಬಾರಿ ಪ್ರಶ್ನಿಸಿಕೊಂದರೂ 'no use'..... ಒಬ್ಬರಿಗೊಬ್ಬರು ಉತ್ತರಿಸಲು ಅಸಮರ್ಥರಾದರು, ಅಷ್ಟೇ ಏಕೆ ಅವರ ಮನಸ್ಥಿತಿ ಸ್ವತಃ  ಅವರಿಗೇ ತಿಳಿಯದಾಯಿತು... 

      ಏನಿದರ ಅರ್ಥ....? ಯಾಕೇ ಹೀಗೇ...? ಸಂಬಂಧಗಳೇ ಹೀಗಾ...? ಸಂಬಂಧಗಳೇಕೆ ಇಷ್ಟು ಕ್ಲಿಷ್ಟ....? ಇದನ್ನೆಲ್ಲಾ ನಿಭಾಯಿಸುವುದು ಹೇಗೆ...? ಏನಿದಕ್ಕೆ ಪರಿಹಾರ....? ಹೇಗೆ ಮೊದಲಿನಂತಾಗುವುದು....? ಮೊದಲಿಂತಾಗುವುದೆಂದರೆ ಈಗೇನಾಗಿದೆ...???


ಕಾವ್ಯಾ :)


Thursday, April 7, 2011

ಎಂದೋ ಕಂಡ ನಿನ್ನ ನೆನಪು.....



ನೀನಿಲ್ಲದ  ನಾನು..... ಹಸಿರಿಲ್ಲದ  ಕಾಡು.. 
ಚಂದ್ರನಿರದ ಬಾನು.... ಪಲ್ಲವಿಯಿರದ ಹಾಡು....
ನೀನಿದ್ದರೆ ನಾನು.... ಸೇರುವೆ ಪ್ರೀತಿಯ ಗೂಡು...

            ನಿನ್ನ ನೆನಪೇ  ಸಾಕು.... ನೋವ ಮರೆಯಲು...
            ನೀ ಜೊತೆಗಿದ್ದರೆ... ಅದುವೇ ಪ್ರೀತಿಯ ಹೊನಲು....
            ನಿನ್ನ ನಗುವದು.. ಆಕರ್ಷಣೆಯ ಕಡಲು....

ಓಡೋಡಿ ಬರುವೆ... ನಗೆ ಮುತ್ತುಗಳ ಆಯಲು..
ನೋಟ ನೆಟ್ಟಿವೆ ನೀ ಬರುವ ದಾರಿಯತ್ತ ನನ್ನ ಕಂಗಳು…
ಆದರೂ ಆಗುತ್ತಿಲ್ಲ ನಿನ್ನನ್ನರಸಲು…

ಗೆಳೆಯಾ, 
             ಏನೋ ಸುಖವಿದೆ ನಿನ್ನ ಆಗಮನಕ್ಕಾಗಿ ಕಾಯಲು…
             ಬಂದೆ ಬರುವೆಯೆಂಬ ನನ್ನ ನಂಬಿಕೆಯನ್ನು ಹುಸಿಯಾಗಿಸದೆ,
             ಬಂದುಬಿಡು ನನ್ನ ಬಾಳ ಹಸನಾಗಿಸಲು…
(ಚಿತ್ರ ಕೃಪೆ ಅರುಣ್ ಭಟ್)


(ನಾನೊಂದು ಸಾಲು ನನ್ನ friend ಒಂದು ಸಾಲಿನಂತೆ ಬರೆದ ಕವನ
ಬೇರೆ ಬೇರೆ ಭಾವಗಳನ್ನು ಕೂಡಿಸಿಟ್ಟ ಸಾಲುಗಳು... )

ಕಾವ್ಯಾ :)

Friday, March 25, 2011



ನಿನ್ನ ಮೊದಲಿನಂತಿನ ಪಟ ಪಟ ಮಾತು

ನನ್ನನ್ನು ಮರೆವಿನಿಂದ ನೆನಪಿನಾಳದತ್ತ ಸೆಳೆಯುತ್ತಿದೆ...

ಎಂದೋ ಹುದುಗಿ ಹೋದ ಮಧುರ ನೆನಪುಗಳು

ಮತ್ತೆ ಕೆದಕುತ್ತಿದೆ.....

ನಿನ್ನ ನಗು ಆ ಹಳೆಯ ನಗೆಯ 

ನೆನಪಿನಲ್ಲಿಗೆ ಎಳೆಯುತ್ತಿದೆ....

ದೂರಾಗುವೆ ಎಂದು ತಿಳಿದು ನೆನಪನ್ನೆಲ್ಲಾ

ಮರೆತು ಕುಳಿತರೂ......

ಮರೆಯಾಗಿಯೂ ನೆನಪಿಸುತ್ತಿರುವ 

ಮರೆತ ಆ ಹಳೆಯ ನೆನಪು....

ಮರೆತೆನೆಂದೇ ಕುಳಿತುಬಿಟ್ಟಾಗ 

ಒತ್ತರಿಸಿ ಬಂದ ಆ ನಿನ್ನ ನೆನಪು....

ಮನಸನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ !

ಇನ್ಯಾರಲ್ಲಿ ಹೇಳಲಿ ನನ್ನ ಒಡಲಾಳದ ನೋವ,

ನೀನೆ ತಿಳಿಯದಿದ್ದ ಮೇಲೆ..... 



ಕಾವ್ಯಾ 



Thursday, March 24, 2011

ನೆನಪುಗಳ ಮಾತು ಮಧುರ......


       ಕಳೆದೇ ಹೋಯಿತು ಜೀವನದ ೨೩ ವಸಂತಗಳು.... ಮೊನ್ನೆ ಮೊನ್ನೆಯಷ್ಟೇ ಆಡಿಕೊಂಡು ಸಮಯ ಕಳೆಯುತ್ತಿದ್ದ ನೆನಪು... ಆಗಲೇ ಇಷ್ಟು ದೊಡ್ಡವರಾಗಿಬಿಟ್ಟೆವೆ?! 'ಅಪ್ಪಾ ಚಾಕಲೇಟ್ ಕೊಡ್ಸಪ್ಪ please' ಎಂದು ಹಠ ಮಾಡುತ್ತಿದ್ದವರು ನಮಗೆ ಬೇಕಾದ್ದನ್ನು ನಾವೇ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದೇವೆ. ನಾವೆಷ್ಟೇ ದುಡಿದರೂ ಆಗ ಅಪ್ಪ-ಅಮ್ಮನಲ್ಲಿ ಹಠ ಮಾಡಿ ಕೊಡಿಸಿಕೊಂಡು ತಿಂದ ಚಾಕಲೇಟ್ ನ  ಆ ಸಿಹಿ ಈಗ ನಾವೇ ಕೊಂಡು ತಿಂದದ್ದರಲ್ಲಿ ಇಲ್ಲವೇ ಇಲ್ಲಾ....! ನಿನ್ನೆಯೋ ಮೊನ್ನೆಯೋ ಮಣ್ಣಿನಲ್ಲಿ ಅಡುಗೆ ಆಟವಾಡುತ್ತ ಸಂಜೆಗತ್ತಲಾದರೂ ಆಟದಲ್ಲಿ ಮಗ್ನರಾಗಿ ಆಡುತ್ತಿದ್ದಂತಿಂದೆ.... ಆಟ  ಮುಗಿಸಿ ಮನೆಗೆ ಬಂದರೆ ಮಣ್ಣು-ನೀರಿನಿಂದ ರಟ್ಟಾಗಿದ್ದ ಅಂಗಿಯನ್ನು ನೋಡಿ ಬಯ್ಯುತ್ತಿದ್ದ ಅಮ್ಮ, 'ಕತ್ತಲಾದರೂ ಮನೆಗೆ ಬರಬೇಕೆಂಬ ಬುದ್ದಿಯಿಲ್ಲವೇ ನಿಮಗೆ... ನಿಮ್ಮ ಆಟದ ಮನೆಯಲ್ಲಿಯೇ ಊಟ ಮಾಡಿ ಮಲಗಬೇಕಿತ್ತು, ಈಗೇಕೆ ಬಂದ್ರಿ' ಎಂದು ಗದರುತ್ತಿದ್ದ ಪ್ರೀತಿಯ ಕಾಕ, 'ಎಷ್ಟು ಹೇಳಿದರೂ ಕೇಳದೆ ಆ "ಭೂತನ ಕಟ್ಟೆ" ಯಲ್ಲೇ ಆಡುತ್ತೀರಲ್ಲ ಮಕ್ಕಳೇ ಅದು ಕತ್ತಲಾದ ಮೇಲೆ ಒಳ್ಳೆಯ ಜಾಗವಲ್ಲ, ನಾಳೆಯಿಂದ ಬೇಗ ಬಂದುಬಿಡಿ' ಎಂದು ಪ್ರೀತಿಯಿಂದ ಕೈ ಹಿಡಿದು ಎಲ್ಲರ ಬೈಗುಳದಿಂದ ಮುಕ್ತಗೊಳಿಸಿ ಕೈ-ಕಾಲು-ಮುಖ ತೊಳೆಸಲು ಬಚ್ಚಲಿಗೆ ಕರೆದೊಯ್ಯುತ್ತಿದ್ದ ಮುದ್ದಿನ ಅಮ್ಮೊಮ್ಮ...... ಎಲ್ಲಾ ಬರೀ ನೆನಪುಗಳೇ..... ಆ ವಯಸ್ಸೇ ಚೆನ್ನಾಗಿತ್ತು....


       'ಈ ದೊಡ್ದವರೇ ಇಷ್ಟು, ಬರೀ ಬಯ್ಯುತ್ತಾರೆ, ಪ್ರೀತಿನೆ ಮಾಡಲ್ಲ' ಎಂದು ಓರಗೆಯವರೊಟ್ಟಿಗೆ ಗೊಣಗಿಕೊಳ್ಳುವುದಲ್ಲದೆ 'ಸಾಕಪ್ಪಾ ಸಣ್ಣವರಾಗಿ ಬೈಸಿಕೊಳ್ಳುವುದು.... ಬೇಗ ದೊಡ್ಡವರಾಗಿಬಿಡಬೇಕು...!' ಎಂದು ಕಾತರಿಸುತ್ತಿದ್ದ ಆ ದಿನಗಳನ್ನು ನೆನೆಸಿಕೊಂಡರೆ ಈಗ 'ಛೆ ಹಾಗೇಕೆ ಅಂದುಕೊಳ್ಳುತ್ತಿದ್ದೆವೋ' ಎನಿಸುತ್ತದೆ.... ಸುಂದರ ರಸಮಯ ಕ್ಷಣಗಳು ಅವು... ಜವಾಬ್ದಾರಿಯಿಲ್ಲದ ಆ ವಯಸ್ಸು, ತಿಳುವಳಿಕೆಯಿಲ್ಲದ ಆ ಮನಸ್ಸು, ಸದಾ ಆಡುವ ಹುಮ್ಮಸ್ಸು.... ಸಣ್ಣ ಪುಟ್ಟ ವಿಷಯಗಳಿಗೆ ಓರಗೆಯವರೊಡನೆ ಕಿತ್ತಾಡಿ ಮುಖ ಊದಿಸಿಕೊಂಡು ಅದೇ ವೇಗದಲ್ಲಿ ರಾಜಿ ಮಾಡಿಕೊಂಡು ಮತ್ತೆ ಆಡುತ್ತಿದ್ದ ಆ ಕ್ಷಣಗಳು... ಬೇಸಿಗೆ ರಜದಲ್ಲಿ ಮಧ್ಯಾಹ್ನದ ಊಟ ಮುಗಿಸಿ ಎಲ್ಲಾ ಮಕ್ಕಳನ್ನೂ ಗದರಿಸಿ ತನ್ನ ಎರಡೂ ಪಕ್ಕಕ್ಕೆ ಸಾಲಾಗಿ ಮಲಗಿಸಿಕೊಳ್ಳುತ್ತಿದ್ದ ಕಾಕನಿಗೆ ನಿದ್ದೆ ಬರುವುದೇ ತಡ, ಅಲ್ಲಿಂದ ಸದ್ದಿಲ್ಲದೇ ಜಾಗ ಖಾಲಿ ಮಾಡುತ್ತಿದ್ದ ಆ ದಿನಗಳು... ಅಮ್ಮೊಮ್ಮ ನಮ್ಮ ಅಡುಗೆ ಆಟಕ್ಕೆಂದು ಕಟ್ಟಿಕೊಡುತ್ತಿದ್ದ ತಿಂಡಿಗಳು, ಮನೆಯ ಪಾತ್ರೆಗಳು (ಯಾರಿಗೂ ಗೊತ್ತಾಗದಂತೆ) ಎಲ್ಲವನ್ನೂ ಅಂಗಿಯಲ್ಲಿ ಮುಚ್ಚಿಕೊಂಡು ಓಡುತ್ತಿದ್ದ ಆ ವಯಸ್ಸು..... ಯಾವುದೂ ಇನ್ನು ಮರಳಿ ಬರಲಾರದಂಥ ಅನರ್ಘ್ಯ ದಿನಗಳು!!


       ಹುಟ್ಟು ಹಬ್ಬಕ್ಕೆ ಮಾವ ಹೊಸ ಅಂಗಿ ತಂದುಕೊಡುತ್ತಾನೆಂದು  ವರ್ಷ ಪೂರ್ತಿ ಆ ದಿನಕ್ಕಾಗಿ ಕಾದು ಹೊಸ ಅಂಗಿ ಹಾಕಿಕೊಂಡು ಎಲ್ಲರಿಗೂ ನಮಸ್ಕಾರ ಮಾಡಿ ನಲಿಯುತ್ತಿದ್ದಾಗಿನ ಆ ಖುಷಿ, ಈಗ ಬೇಕೆಂದಾಗ ಚೆಂದ ಕಂಡ ಅಂಗಡಿಯಲ್ಲೆಲ್ಲ ನುಗ್ಗಿ ಇಷ್ಟ ಪಟ್ಟು ತಂದು ಹಾಕಿಕೊಳ್ಳುವ ಅಂಗಿಗಳಲ್ಲಿ ಹುಡುಕಲೂ ಸಿಗುತ್ತಿಲ್ಲ....! ಹೊಸ ಅಂಗಿಗಳಿಗೆ ಆಗಿನ 'ಬೆಲೆ'ಯೇ ಇಲ್ಲ!!! ನಮ್ಮೂರಿಗೆ ಟಾರ್ ರಸ್ತೆ ಮಾಡಿ ಹೊಸದಾಗಿ ಬಸ್ ಬಿಟ್ಟಾಗ, ಬೆಳಿಗ್ಗೆ ಬರಬೇಕಾದ ಬಸ್ ಮಧ್ಯಾಹ್ನ ಬಂದರೂ ಕಾಕನ ಜೊತೆ ಬಸ್ ಪೂಜೆ ಮಾಡಿ ಬರಮಾಡಿಕೊಳ್ಳಲು ಸ್ವಲ್ಪವೂ ಬೇಸರಿಸದೆ ಕಾಯುತ್ತಲೇ ಇದ್ದೆವು.  ಆದರೆ ಈಗ ಬಸ್ಸಿಗೆ ನಿಂತರೆ ಹತ್ತೇ ನಿಮಿಷಕ್ಕೆ ನಮ್ಮ ತಾಳ್ಮೆ ಹದಗೆಡುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದ್ದೇವೆ.

       ಊರಿಗೆ ಟಾರ್ ರಸ್ತೆ ಮಾಡುತ್ತಾರೆಂಬ ಸುದ್ದಿ ಕೇಳಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಯೋಚಿಸಿದ್ದೆವು.... 'ಅಯ್ಯೋ ದೇವರೇ...! ಇನ್ನು ನಮ್ಮ ಚಿನ್ನಿದಾಂಡು ಆಡುವ ಜಾಗವನ್ನು ಹೊಂಡ ತೋಡಲಾಗದಂತೆ ಮಾಡಿ ಟಾರ್ ಹಾಕಿಬಿಡುತ್ತರಲ್ಲಾ....ಎಲ್ಲಿ ಆಡೋದು? ಏನ್ಮಾಡೋದು..??' ಹಗಲಿರುಳೂ ಎಲ್ಲರಿಗೂ ಅದೇ ಯೋಚನೆ... ಅದೆಷ್ಟು ಅಲವತ್ತುಕೊಂಡಿದ್ದೆವೋ...!! ಅಂತೂ ಇಂತೂ ಅತೀವ ಬೇಸರದೊಡನೆಯೇ ಸಂತಸ ತುಂಬಿಸಿಕೊಂಡು ಹೊಸ ರಸ್ತೆಯನ್ನೂ ಹೊಸ ಬಸ್ಸನ್ನೂ ಊರೊಳಗೆ ಬರಮಾಡಿಕೊಂಡಿದ್ದೆವು. 'ಅಬ್ಬಾ! ಹೊಸ ರಸ್ತೆಯಾಯಿತು... ಇನ್ನು ಅಪ್ಪನೊಡನೆ ಬೈಕಿನಲ್ಲಿ ಹೋಗುವಾಗ ಕೆಸರು ತುಂಬಿ ಬೈಕ್ ಓಡಿಸಲಾಗಂತ ರಸ್ತೆಯಲ್ಲಿ ಬೈಕ್ ಇಳಿದು, ಅಪ್ಪ ದಾಟಿಸಿ ತರುವವರೆಗೆ ಮುಂದೆ ಓಡಿ ಹೋಗಿ ನಿಂತು ಮತ್ತೆ ಹತ್ತುವ ಕೆಲಸವಿಲ್ಲ... ಹತ್ತಿ ಕೂತರಾಯಿತು ಸುಂಯ್ಯನೆ ಹೋದರಾಯಿತು..' ಎಂಬ ಸಂತೋಷ ಒಂದೆಡೆಯಾದರೆ.... 'ಛೆ! ನಮಗೆ ಚಿನ್ನಿದಾಂಡು ಆಡಲು ಜಾಗವಿಲ್ಲದಂತೆ ಮಾಡಿಬಿಟ್ರಲ್ಲ ಈ ಸರ್ಕಾರದೋರು...!' ಎಂಬ ಖೇದ ಇನ್ನೊಂದೆಡೆ...


       ಈ ಬೇಸರ-ಸಂತಸಗಳ ತುಮುಲ ಇನ್ನೂ ಮನಸ್ಸಿನಲ್ಲಿರುವಾಗಲೇ ಎಲ್ಲರ ಪ್ರೀತಿಯ ಕಾಕನ ಭೀಕರ ಅಗಲಿಕೆ ಊರಿಗೆ ಊರೇ ನೋವು ಪಡುವಂತೆ ಮಾಡಿತ್ತು. ಆಪ್ಪನಿಗಿಂತಲೂ ಹೆಚ್ಚು ಅವನ ಒಡನಾಟ ಜಾಸ್ತಿಯಿದ್ದ ನನ್ನನ್ನಂತೂ ಸಮಾಧಾನ ಮಾಡಲಾಗದೆ ಸೋತಿದ್ದರು....ಈ ಘಟನೆಯಿಂದ ದೇವರಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದ್ದೆ....ಯಾರು ಎಷ್ಟೇ ಹೇಳಿದರೂ ದೇವರಿಗೆ ಕೈ ಮುಗಿಯುತ್ತಿರಲಿಲ್ಲ. ಒಂದೇ ಒಂದು ದಿನ ದೇವರಿಗೆ ನಮಸ್ಕರಿಸದೆ ಬಂದು ತಿಂಡಿಗೆ ಕುಳಿತರೂ ಬೈಸಿಕೊಂಡು ಅಂಗಳದಲ್ಲಿದ್ದ ದೇವಸ್ಥಾನಕ್ಕೆ ಓಡಿ ಹೋಗುತ್ತಿದ್ದ ನೆನಪು ಬೇಡವೆಂದರೂ ಕಣ್ಣ ಮುಂದೆ ಬಂದು ಕಣ್ಣೀರಾಗುತ್ತಿದೆ. ಕೂತಲ್ಲಿ ನಿಂತಲ್ಲಿ ಅವನದೇ ನೆನಪು...ಇಬ್ಬರೂ ಅದೆಷ್ಟು ಹಚ್ಚಿಕೊಂಡಿದ್ದೆವೆಂದು ತಿಳಿದ ಎಲ್ಲರೂ ನಾನಾ ಬಗೆಯಲ್ಲಿ ಸಮಾಧಾನದ ಪ್ರಯತ್ನ ಮಾಡಿದ್ದರು. ಅವನ ಅಗಲಿಕೆಯ ನಂತರ ಯರು ಏನೇ ಬೈದರೂ ಸಮಾಧಾನ ಮಾಡಲು ಅವನಿಲ್ಲವಲ್ಲ ಎಂದು ನೆನೆ-ನೆನೆಸಿಕೊಂಡು ಕೋಣೆಗೆ ಓಡಿ ಹೋಗಿ ಬಿಕ್ಕುತ್ತಿದ್ದೆ. ತಾನು ಹೋಗುವಾಗ ತನ್ನೆಲ್ಲಾ ಸಿಟ್ಟು-ಮುಂಗೋಪವನ್ನು ಮಗಳಿಗೇ ಬಿಟ್ಟು ಹೋಗಿದ್ದಾನೆ ಎಂದು ಮನೆಯವರೆಲ್ಲ ಹಲುಬಿಕೊಳ್ಳುವಷ್ಟರ ಮಟ್ಟಿಗೆ ಸಿಟ್ಟಿನ ಖೋಡಿಯಾಗಿದ್ದೆ! ಅವನಿಲ್ಲ ಎಂಬ ಒಂದೇ ಯೋಚನೆ.. ಯಾರು ಏನೇ ಕೆಲಸ ಹೇಳಲಿ, ಬುದ್ದಿ ಹೇಳಲಿ ಬರೀ ಸಿಟ್ಟು.... ಕೇವಲ ಹನ್ನೊಂದು ವರ್ಷ ಅವನ ಜೊತೆ ಇರುವುದಕ್ಕಾಗಿ ನನ್ನನ್ನು ಈ ಭೂಮಿಗೆ ಕಳುಹಿಸಿದ ಆ ದೇವರನ್ನು ಮನಸಾರೆ ಬೈದುಕೊಂಡಿದ್ದೆ... ಅವನ ಜೊತೆ ಕಳೆದ ದಿನಗಳು, ಅವನು ನನ್ನನ್ನು ಪ್ರೀತಿಸುತ್ತಿದ್ದ ರೀತಿ, ಅವನ ಮಮತೆ, ನನ್ನ ಮೇಲಿನ ಅತೀವ ವಾತ್ಸಲ್ಯ..... ಇನ್ನು ಅವನಿಲ್ಲ, ನನಗೆ ಅವನ ಮಮಕಾರವೂ ಇಲ್ಲಾ ಎಂಬ ಕಹಿ ನೆನಪಿಂದ ಹೊರಬರಲು ಅಗಾಧ ೬ ವರ್ಷಗಳನ್ನೇ ತೆಗೆದುಕೊಂಡಿದ್ದೆ....

       ಕಳೆದ ವಾರದಿಂದ ಅದೆಕೂ ಬಾಲ್ಯದ ನೆನಪುಗಳ ಬುತ್ತಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಅದೆಷ್ಟು ಬೇಗ ವರ್ಷಗಳು ಉರುಳಿ ಹೋದವು...!! ಓರಗೆಯವರೊಟ್ಟಿಗೆ ಬೆಟ್ಟ-ಗುಡ್ಡ ತಿರುಗಿ ಬಿಳಿ ಮುಳ್ಳ ಹಣ್ಣನ್ನು ಹೊಟ್ಟೆ ಬಿರಿ ತಿಂದು ಮೈ ನಂಜೇರಿ ಮನೆಯಲ್ಲಿ ಉಗಿಸಿಕೊಳ್ಳುತ್ತಿದ್ದುದು, ತಿರುಗಿ-ಕುಣಿದು ಬಂದು ಕಾಲು ನೋವೆಂದಾಗ ಅಮ್ಮೊಮ್ಮ ಕಾಲಿಗೆ ಎಣ್ಣೆ ಹಚ್ಚಿ ತಿಕ್ಕುತ್ತಿದ್ದುದು, ತೋಟದಲ್ಲಿ ಕೋಕೋ ಹಣ್ಣನ್ನು ಕಾಕನ ಕಣ್ಣು ತಪ್ಪಿಸಿ ೮-೧೦ ತಿಂದು ತೋಟದ ತುಂಬಾ ಕಸ ಹಾಕಿ ಸಿಕ್ಕಿಕೊಳ್ಳುತ್ತಿದ್ದುದು, ಎಲ್ಲರೂ ಸೇರಿ ಅಡುಗೆ ಆಟವಾಡಲು ಚಪ್ಪರ (ಅದೇ ನಮ್ಮ ಅಡುಗೆ ಆಟದ ಮನೆ) ಕಟ್ಟಿ ಒಳಗೇ ಕೂತು ಅಡುಗೆ ಶುರು ಮಾಡುತ್ತಿದ್ದಂತೆಯೇ ಗಟ್ಟಿಯಾಗಿ ಹುಗಿದೆವೆಂದುಕೊಂಡಿದ್ದ ಕಂಬ ಸೋಗೆಯ ಭಾರ ತಾಳಲಾಗದೆ ಮೈ ಮೇಲೆಯೇ ಮುರಿದು ಬೀಳುತ್ತಿದ್ದುದು, ಮನೆಯ ಮುಂದಿನ ಹುಳಿ ಮಾವಿನ ಮರದಲ್ಲಿ ಹಣ್ಣು ಉದುರುವುದನ್ನೇ ಕಾಯುತ್ತಿದ್ದುದು, ಎಲ್ಲೇ ಇದ್ದರು ಜೋರು ಗಾಳಿ ಬಂದಿದ್ದೇ ಮರದ ಬುಡಕ್ಕೆ ಓಡಿ ಹಣ್ಣು ಹುಡುಕುತ್ತಿದ್ದುದು, ಎರಡು ಹಣ್ಣು ಸಿಕ್ಕರೆ ಭಾವಯ್ಯ ನನಗೆ ಮಾತ್ರ ಒಂದನ್ನು ಕೊಟ್ಟು ಉಳಿದವರೆದುರಿಗೆ ಗರ್ವದಿಂದ ತಿನ್ನುತ್ತಿದ್ದುದು, ಕಣ್ಣಾ ಮುಚ್ಚಾಲೆ - ಪಗಡೆ - ಚಿನ್ನಿ ದಾಂಡುಗಳಲ್ಲಿ ಹೊತ್ತು ಹೋಗಿದ್ದೇ ತಿಳಿಯದೆ ಮುಳುಗುತ್ತಿದ್ದುದು, ಆಟದ ಮನೆಯ ಎದುರು ಎರಡು ಕಲ್ಲು ನಿಲ್ಲಿಸಿ ಒಲೆ ಮಾಡಿ ಅಲ್ಲೇ ಅನ್ನ ಮಾಡಿ ಮನೆಯಿಂದ ಹುಳಿ ತಂದು ನಾವು ಅನ್ನ ಮಾಡುವುದು ಕಲಿತೆವೆಂಬ ಖುಷಿಗೆ ನಾನು ತಂಗಿ ಅಲ್ಲೇ ಊಟ ಮಾಡಿ ಮತ್ತೆ ಕೇರಿ ಮನೆಯ ತಿಥಿ ಊಟಕ್ಕೆ ಹೋಗಿ ಅಲ್ಲೂ ಸರಿಯಾಗಿ ಊಟ ಬಾರಿಸಿದ್ದು..... ಪಕ್ಕದ ಮನೆಯ ಅಕ್ಕ ಕಾಡಿಗೆ ಕಟ್ಟಿಗೆ ತರಲು ಹೋಗುವಾಗ ನಮ್ಮನ್ನೂ ಕರೆಯುತ್ತಿದ್ದುದು, ನಾವು ಕಟ್ಟಿಗೆ ತರದಿದ್ದರೂ ಅವಳೊಡನೆ ಕಾಡು ಸುತ್ತಲು ಹೋಗುತ್ತಿದ್ದುದು, ಅಲ್ಲಿ ಮರ ಹತ್ತಿ ಕುಳಿತು ಅಂತ್ಯಾಕ್ಷರಿ ಆಡುತ್ತ ಜೋರಾಗಿ ಹಾಡು ಹೇಳುತ್ತಿದ್ದುದು, ಬೀಳಲು ಬಿಟ್ಟ ಮರಗಳನ್ನು ಹುಡುಕಿ ಜೋಕಾಲಿ ಆಡುತ್ತಿದ್ದುದು, ಒಂದು ದಿನ ಅಕ್ಕ ನಮ್ಮೊಡನೆ ಆಡುತ್ತಾಕಟ್ಟಿಗೆ ಹೊರೆ ಕಟ್ಟುವಷ್ಟರಲ್ಲಿ ಕತ್ತಲಾಗಿ ರಾತ್ರಿ ಎಂಟೂವರೆ ಗಂಟೆಗೆ ಮನೆ ಸೇರಿ ಕೆಳಗಿನ ಮನೆಯಲ್ಲಿ ಪಗಡೆ ಆಡುತ್ತಾ ಹೊತ್ತಾಯಿತೆಂದು ಸುಳ್ಳು ಹೇಳಿ ಸಿಕ್ಕು ಬಿದ್ದು ಹಿಗ್ಗ ಮುಗ್ಗ ಬೈಸಿಕೊಂಡು ಕಾಡಿನ ಪಯಣಕ್ಕೆ ತಿಲಾಂಜಲಿ ಬಿಟ್ಟಿದ್ದು...


       ಚೌತಿ ಹಬ್ಬದ ದಿನಗಳಲ್ಲಿ ಬೆಟ್ಟ ತಿರುಗಿ ಬಿಕ್ಕೆ ಹಣ್ಣು ಹುಡುಕುತ್ತಿದ್ದುದು, ಹಬ್ಬಕ್ಕೆ ಫಲವಳಿಗೆ ಸಾಮಾನು ತರುತ್ತಿದ್ದುದು, ಮುರುಗಲ  ಮರದ ಎಳೆಯ ಎಲೆಗಳನ್ನು ಕೊಯ್ದು ಉಪ್ಪು-ಮೆಣಸು ಹಾಕಿ ನಾವೇ ಕಂಡುಕೊಂಡ ಪೊಟರೆಗಳಲ್ಲಿ ಕಲ್ಲು ಹೇರಿ ಬಚ್ಚಿಟ್ಟು ಮರುದಿನ ಬಾಯಿ ಚಪ್ಪರಿಸಿ ತಿನ್ನುತ್ತಿದ್ದುದು, ಯಾರದೋ ಮನೆಯ ಪನ್ನೇರಳ ಮರಕ್ಕೆ ಕರೆದುಕೊಂಡು ಹೋಗಿ ಭಾವಯ್ಯಂದಿರು ಹಣ್ಣು ಕದ್ದು ನಮಗೂ ತಿನ್ನಿಸುತ್ತಿದ್ದುದು....


       ಡಿಗ್ರಿ ಓದುತ್ತಿದ್ದಾಗ ರಜಕ್ಕೆಂದು ಊರಿಗೆ ಬಂದರೆ ತಂಗಿಯೊಡನೆ ಮಲೆನಾಡಿನ ಕುಂಭದ್ರೋಣ ಮಳೆಯಲ್ಲಿ ಛತ್ರಿ ಹಿಡಿದು ನಮ್ಮ ನೆಚ್ಚಿನ 'ಭೂತನ ಕಟ್ಟೆ'ಗೆ ಹೋಗುತ್ತಾ ಇದನ್ನೆಲ್ಲಾ ನೆನೆಸಿಕೊಳ್ಳುತ್ತಾ ಮಳೆಯ ಪರಿವೆಯೇ ಇಲ್ಲದೆ ಮಳೆಯಲ್ಲಿ ನೆಂದಿದ್ದು... ಉಫ್ ....... ಎಷ್ಟೊಂದು ಖುಷಿಯಿಂದ ಆಡಿದ್ದ, ಕುಣಿದಿದ್ದ, ನಲಿದಿದ್ದ ದಿನಗಳವು.... ನಿನ್ನೆಯೋ ಮೊನ್ನೆಯೋ ೮-೧೦ ವರ್ಷದವರಾಗಿ ಆಡುತ್ತಿರುವಂತೆ ಎಲ್ಲಾ ನೆನಪುಗಳು ಹಚ್ಚ ಹಸಿರಾಗಿವೆ....

       ಈಗ ನೋಡಿದರೆ ಜೊತೆಗೆ ಆಡುತ್ತಿದ್ದ ತಂಗಿ-ಚಿಕ್ಕಪ್ಪನ ಮಗಳು ಮದುವೆಯಾಗಿ ಚಟ-ಪಟನೆ ಅರಳು ಹುರಿದಂತೆ ಮಾತಾಡುವ ಪುಟ್ಟ ಮಗಳನ್ನು ಕಂಕುಳಲ್ಲಿ ಎತ್ತಿಕೊಂಡು 'ಕಾವ್ಯಕ್ಕಾ ಎಷ್ಟು ಮಾತಾಡ್ತಾಳೆ ನೋಡು....' ಎಂದು ನನ್ನತ್ತ ಹೇಳುತ್ತಾ...'ಪುಟ್ಟೀ ಇವಳು ನಿನ್ನ ದೊಡ್ಡಮ್ಮ...' ಎಂದು ನನ್ನ ಪರಿಚಯ ಮಗಳಿಗೆ ಮಾಡಿಸುವಂತಗಿದ್ದಾಳೆ....! ಇನ್ನು ಅತ್ತಿಗೆ ಕೂಡ ಮದುವೆಯಾಗಿ ಎರಡೆರಡು ಮಕ್ಕಳ ಆರೈಕೆಯಲ್ಲಿ ಮುಳುಗಿದ್ದಾಳೆ... ಒಂದು ಭಾವಯ್ಯ ಆಗ ರಜದಲ್ಲಿ ಮಾತ್ರ ಸಿಗುತ್ತಿದ್ದವನು  ಈಗ ಆತನ ದೊಡ್ಡ-ದೊಡ್ಡ ಓದಿನ ನಡುವೆಯೂ ಆಗಾಗ ಬಿಡುವು ಮಾಡಿಕೊಂಡು ಬಂದು ಹರಟಿ ಖುಷಿ ಪಡಿಸುತ್ತಾನೆ.... ಇನ್ನೊಂದು ಭಾವಯ್ಯ ತನ್ನ ಉದ್ಯೋಗವನ್ನು ಕಂಡುಕೊಂಡು ಉದ್ಯೋಗಸ್ಥನಾಗಿ ಮಾತನಾಡಲು ಸಮಯವಿಲ್ಲದಂತೆ ಕಳೆದು ಹೋಗಿದ್ದಾನೆ... ಮಗದೊಂದು ಭಾವಯ್ಯ ಊರಿನಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡದೆ ಉಂಡಾಡಿಯಾಗಿ ತಿರುಗಿಕೊಂಡು ಹಾಯಾಗಿದ್ದಾನೆ...!! ಪ್ರೀತಿಯ ತಮ್ಮ ಓದಿಗಾಗಿ ನನ್ನ ಬಿಟ್ಟು ದೂರದೂರಿಗೆ ತೆರಳಿದ್ದಾನೆ... ನಾನು ಮಾತ್ರ ಇವೆಲ್ಲ ಸಿಹಿ-ಕಹಿ ನೆನಪುಗಳ ಬುಟ್ಟಿಯೊಂದಿಗೆ, ಎಲ್ಲವನ್ನೂ ಮೆಲಕು ಹಾಕುತ್ತಾ ನನ್ನ ಜೀವದ ಗೆಳೆಯರಾದ ಲೇಖನಿ - ಕಾಗದದೊಂದಿಗೆ ನೆನಪುಗಳ ಬಕ್ಕಸಕ್ಕೆ ಅಕ್ಷರ ರೂಪ ಕೊಡುತ್ತಿದ್ದೇನೆ.... ಕಾಲನ ವೇಗಕ್ಕೆ-ಆವೇಗಕ್ಕೆ ಕೈಜೋಡಿಸಿ ಮುಂದಿನ ಹೆಜ್ಜೆಯತ್ತ ಗಮನ ಹರಿಸಿದ್ದೇನೆ.....



ಕಾವ್ಯಾ :) 

Thursday, March 10, 2011

ಗೆಳೆಯಾ, 
     ಅಂದಿನ ನಮ್ಮ ಮೊದಲ ಭೇಟಿ 
ಸೋನೆ ಮಳೆ ಬಂದು ನಿಂತ 
     ತಂಪಿನಂತಿತ್ತು........
ತರುಲತೆಗಳಿಂದುದುರುವ ಮಳೆ ಹನಿಗಳು 
     ನಿನ್ನ ಮುದ ನೀಡುವ ಮಂದಹಾಸವನ್ನು 
ನೆನಪಿಸುವಂತಿತ್ತು........
     ಆದರೆ, 
ಇಂದೇಕೆ ತನ್ನ ಸರ್ವಸ್ವವನ್ನೂ ಕಳೆದುಕೊಂಡ 
     ವೃಕ್ಷದಂತಾಯ್ತು  ನಮ್ಮ ಪ್ರೇಮ....?!?
ಬರಿದಾದ ಮರಗಳು ನನ್ನ ನೋಡಿ
     ಕುಹುಕದಿ ನಗುತಿವೆ.......
ವಸಂತದ ಬರುವಿಕೆಗಾಗಿ ಕಾಯುತ್ತಿರುವ 
     ಮರಗಳನ್ನು ಕಣ್ಣಂಚಿನ ನೀರಿನೊಂದಿಗೆ 
ನೋಡುತ್ತಾ ಕುಳಿತಿದ್ದೇನೆ.......
     ಮನಸು ಸಾವಿರ ಬಾರಿ ಪ್ರಶ್ನಿಸುತ್ತಿದೆ
ಮುಂದಾದರು ಬರಬಹುದೇ ನಿಮ್ಮ ಬಾಳಿನಲ್ಲಿ 
     ಈ ವಸಂತದ ಸಂಭ್ರಮ....?!!
ಮತ್ತೆ ಚಿಗುರಬಹುದೇ ನಿಮ್ಮೆಲ್ಲಾ 
     ಸುಂದರ ಕನಸು....??!


ಮಂಜಿನ ಮುಂಜಾವಿನಲಿ 
       ನೀ ಜೊತೆಗಿರಲು.....
ಬೆಳ್ಳಗಿನ ಬೆಳದಿಂಗಳಿನಿರುಳಲಿ 
       ನೀ ಬಿಗಿದಪ್ಪಲು......
ಹುಣ್ಣಿಮೆಯ ಕತ್ತಲಲಿ 
       ನಿ ಮುದ ನೀಡಲು.....
ಮಾಗಿಯ ಚಳಿ ಗಾಳಿಯಲಿ 
       ನಾವ್ ತೇಲಿ ಹೋಗಲು.....
ಭೋರ್ಗರೆವ ಸಾಗರ ಗರ್ಭದಲಿ
       ನಾವ್ ಕರಗಿ ಹೋಗಲು.....
ಸುಂದರ ಪ್ರಕೃತಿಯೊಳು
       ನಾವೈಕ್ಯವಾಗಲು.......
ಈ ಜೀವನಕ್ಕೆ ಇನ್ನೇನು ಬೇಕು ಗೆಳೆಯಾ......
ಸತ್ತು ಕಾಣುತ್ತೇವೆಂಬ  ಸ್ವರ್ಗಕ್ಕಿಂತ
ನಿನ್ನ ಒಂದು ಭಾಗವಾಗಿ ಪಡೆಯುವ ಆನಂದವೇ 
ನನಗೆ ಜನ್ಮಜನ್ಮಾಂತರದ ಸ್ವರ್ಗ......



ನನ್ನಿನಿಯ ಬಳಿ ಬಂದ
     ಪಡೆಯಲೆಂದು ಕರುಳಿನ ಕುಡಿ,
ತಕ್ಷಣವೇ ಕೂಗುತ ಸರಿದೆ - 
     'ಮುಟ್ಟಬೇಡ ನಾನಿನ್ನು ಮೂರು ದಿನ ಮಡಿ....!!!




ನಿನ್ನ ವದನದೊಳೀಗ 
     ಚಿಮ್ಮುತಿರುವ ಆ ನಗೆಗೆ,
ನಾಚಿಕೆ ಧೈರ್ಯವಾಗಿ 
     ಬದಲಾಗುತ್ತಿರುವ ಆ ಬಗೆಗೆ, 
ನೀ ನೋಡುವ ಆ ಪರಿಗೆ...
     ಉಪಮೆಯೆಲ್ಲಿದೆ...?!
ನಯನದೊಳು ನಯನ
     ಬೆರೆತಾಗಿನ ಆ ಮೂಕ 
ಭಾವನೆಗೆ ಕೊನೆಯೆಲ್ಲಿದೆ...?!
     ಅನು ದಿನವೂ ಉದ್ಭವಿಸುವ 
ಸಹಸ್ರಾರು ಪ್ರಶ್ನೆಗಳಿಗೆ 
     ಉತ್ತರವೆಲ್ಲಿದೆ...?!
ನಿ ಇದಕ್ಕೆಲ್ಲ ಉತ್ತರಿಸುವೆಯೆಂದು 
      ಕಾಯುತ್ತಿರುವ ನನ್ನ ತಾಳ್ಮೆ 
ಮುಗಿಯುವುದೆಂದಿಗೆ....?!