Wednesday, January 25, 2012

ಹೊಸ ಬಾಳಿಗೆ ನೀ ಜೊತೆಯಾದೆ.... ಹೊಸ ಆನಂದ ನೀನಿಂದು ತಂದೆ....


ನನ್ನ ಬಾಳಿಗೆ ಬಣ್ಣ ತುಂಬಲು ಬರುತ್ತಿರುವ ನಿನಗಾಗಿ..........
       ನಿನಗಾಗಿ ಬರೆದ ಕೆಲವಾರು ಲೇಖನಗಳು ಈಗಾಗಲೇ ನನ್ನ ಬ್ಲಾಗಿನಲ್ಲಿವೆ. ನನ್ನ ಬರವಣಿಗೆಗಳು ಬ್ಲಾಗ್ ರೂಪ ಪಡೆಯಲು ಕಾರಣ ನೀನು.... ಬ್ಲಾಗ್ ಬರೆಯಲು ಶುರು ಮಾಡು ಎಂಬ ನಿನ್ನ ಒತ್ತಾಯದಿಂದ ಬರವಣಿಗೆಯತ್ತ ಮುಖ ಮಾಡಿ ಒಂದು ವರ್ಷ ಪೂರೈಸುವುದರೊಳಗೇ ನೀನೇ ನನ್ನ ಬಾಳ ಸಂಗಾತಿಯಾಗಿ ಬರುವೆ ಎಂಬುದು ಕನಸಿನಲ್ಲಿಯೂ ಅನಿಸಿರಲಿಲ್ಲ... ಅತ್ಯಂತ ಆತ್ಮೀಯ ಸ್ನೇಹಿತರಾಗಿ ಎರಡೂವರೆ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ನಮ್ಮ ಸ್ನೇಹದ ಬಗ್ಗೆ ನಾನು ಈಗಾಗಲೇ ಬರೆದಾಗಿದೆ ಮತ್ತು ಅದನ್ನು ನನ್ನ ಓದುಗರೆಲ್ಲರೂ ಓದಿಯೂ ಇದ್ದಾರೆ. ಆದರೆ ಆ ಲೇಖನದ 'ಆತ್ಮ' ನೀನೆ ಎಂದು ತಿಳಿದಿದ್ದದ್ದು ನಮ್ಮಿಬ್ಬರಿಗೆ ಮಾತ್ರ...! ಅದೆಷ್ಟು ಜನ ಓದಿ ಪ್ರಶ್ನೆ ಮಾಡಿದ್ದರೋ ಯಾರ ಬಗ್ಗೆ ಬರೆದಿದ್ದೀಯ ಎಂದು..... ಅಂತಹ ಸ್ನೇಹ ಇಂದು ನಮ್ಮ ಸಹಜೀವನಕ್ಕೆ ಬುನಾದಿಯಾಗುತ್ತದೆ ಎಂದು ಮಾತ್ರ ಇಬ್ಬರೂ ತಿಳಿದಿರಲಿಲ್ಲ ಅಲ್ಲವೇ...?! ಹುಡುಗ ಹುಡುಗಿಯ ನಡುವೆ ಬರಿದೇ ಸ್ನೇಹ ಸಾಧ್ಯವಿದೆ ಎಂಬುದನ್ನು ಸಾಧಿಸ ಹೊರಟಿದ್ದೇನೋ ನಿಜ... ಆದರೆ ನಮ್ಮ ಕಥೆಯೂ ಒಂದೇ ತರಹದ ಕೊನೆ ತಲುಪಿತಲ್ಲ ಎಂಬ ಬೇಸರವಂತೂ ಖಂಡಿತಾ ಇಲ್ಲಾ...  ನಮ್ಮ ಸ್ನೇಹವನ್ನು ಬಲ್ಲ ಅದೆಷ್ಟು ಜನ ನೀವಿಬ್ಬರೇ ಯಾಕೇ ಮದುವೆಯಾಗಬಾರದು ಎಂದು ನನ್ನ ಬಳಿ ಹೇಳಿದ್ದಾರೆ ಗೊತ್ತಾ..!! ಆಗ ನಂಗೆ ಆಶ್ಚರ್ಯ ಆಗೋದು, ಇದೇನು ಎಲ್ಲರೂ ಹೀಗಂತಾರಲ್ಲ ಅಂತ.... ಇಂತಹ ಒಳ್ಳೆಯ ಸ್ನೇಹಿತನನ್ನೇ ನನ್ನ ಬಾಳ ಸಂಗಾತಿಯಾಗಿ ಕರುಣಿಸಿದ ದೇವರಿಗೆ ನನ್ನ ಕೋಟಿ ಕೋಟಿ ನಮನಗಳು... 
       ನಿನ್ನ ಸ್ನೇಹವನ್ನು ಬಯಸಿ ಬಂದವಳು ನಾನು.... ನಿನ್ನ ನಾಚಿಕೆಯ ಸ್ವಭಾವವೇ ನನಗೆ ಮೊದಲಿಂದಲೂ ಇಷ್ಟವಾಗಿದ್ದು... ಅದಕ್ಕಾಗೆ ಮೊದಲಿಂದಲೂ ನಾನು ನಿನ್ನನ್ನು ಕುಕ್ಕಿ ಕುಕ್ಕಿ ಮಾತಾಡಿಸುತ್ತಿದ್ದೆ.. ವರ್ಷಗಟ್ಟಲೆ ಪ್ರಯತ್ನ ಪಟ್ಟ ಮೇಲೆ ಅಂತೂ ಸರಾಗವಾಗಿ ಮಾತಾಡಲು ಶುರು ಮಾಡಿದೆ ನೀನು... ನಿಜವಾಗಿಯೂ ನಿನ್ನೊಡನೆ ಸವಿದ ಸ್ನೇಹದ ಸವಿ ನನಗೆಲ್ಲೂ ಸಿಕ್ಕಿಲ್ಲ... ನೀನು ಮಾತಾಡದಿದ್ದರೂ ನಿನ್ನಲ್ಲಿ ಅಗಾಧ ಸ್ನೇಹವನ್ನು ಕಂಡಿದ್ದೆ.... ಈಗ ಅದೇ ಮೌನದಲ್ಲಿ ಅಷ್ಟೇ ಪ್ರೀತಿಯನ್ನು ಕಾಣುತ್ತಿದ್ದೇನೆ... ಅದೆಷ್ಟು ಒಬ್ಬರಿಗೊಬ್ಬರು ಅನಿವಾರ್ಯವಾಗಿದ್ದೆವೆಂದರೆ ನನ್ನ ಮದುವೆಯಾದರೆ ನಾವಿಬ್ಬರೂ ಈ ಸ್ನೇಹದಿಂದ ಹೇಗೆ ದೂರಾಗುವುದು ಎಂದು ದುಃಖ ಪಡುವಷ್ಟರ ಮಟ್ಟಿಗೆ...! ಈಗ ಅದಾವ ತೊಂದರೆಯೂ ಇಲ್ಲದೆ ಇಬ್ಬರೂ ಪೂರ್ತಿ ಜೀವನದ ಸವಿಯನ್ನು ಒಟ್ಟಿಗೆ ಸವಿಯುವತ್ತ ಹೆಜ್ಜೆ ಇಡಲು ಕಾತರಿಸುತ್ತಿದ್ದೇವೆ.... 
       ಯಾವ ಕ್ಷಣದಲ್ಲಿ ನಮ್ಮ ಭಾವನೆಗಳು ತಿರುಗಿದವೋ...! ತಿಳಿಯಲಿಲ್ಲ.... 'ಮನೆಯಲ್ಲಿ ಒಪ್ಪಿದರೆ ಮಾತ್ರ' ಎಂಬ ನಿರ್ಧಾರಕ್ಕೆ ಬಂದಾಗಲಂತೂ ಒಂದು ಕ್ಷಣ ಕಳೆಯುವುದೂ ಕಷ್ಟವಾಗಿತ್ತು. ಒಮ್ಮೆ ಬಿಟ್ಟು ಬದುಕಬಹುದು ದೊಡ್ಡದಲ್ಲ ಎನಿಸಿದರೂ.... ಕ್ಷಣ ಮಾತ್ರದಲ್ಲಿ ಹೇಗೆ ಎಂಬ ಪ್ರಶ್ನೆ ಧುತ್ತನೆ ನಿಲ್ಲುತ್ತಿತ್ತು....!! ಅಂತೂ ಅತ್ತೆ, ಮಾವ, ಅಪ್ಪ, ಅಮ್ಮ ಪ್ರೀತಿಯಿಂದ ಮದುವೆ ಮಾಡಲು ಒಪ್ಪಿದಾಗ ನಿಜವೇ ಇದು ಎಂದು ನಂಬಲು ನನಗಂತೂ ಬಹಳ ದಿನಗಳೇ ಹಿಡಿಯಿತು....

       ನಿನ್ನ ನಾಚಿಕೆ, ಸಂಕೋಚದ ಸ್ವಭಾವ ನನಗೆ ತುಂಬಾ ಇಷ್ಟ.... (ಒಬ್ಬರಿಗಾದರೂ ಇದೆಯಲ್ಲ ಸಾಕು ಬಿಡು ಎಂಬುದು ನನ್ನ ಸ್ನೇಹಿತರ ಅಂಬೋಣ...!) ವಸ್ತು ಸ್ಥಿತಿಯನ್ನು ಮುಚ್ಚಿಡದೆ ಇದ್ದ ಹಾಗೇ ಹೇಳಿ ಬಿಡುವ ನಿನ್ನ ಗುಣ ಇಷ್ಟ.... ನಿನ್ನ ನಗು ಇಷ್ಟ... ನಿನ್ನ voice ಅಂತೂ ಸೂಪರ್ ಇಷ್ಟ... ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದೇ ಇರುವಂತೆ ಒಂಥರಾ decency ಯನ್ನು ಉಳಿಸಿಕೊಳ್ಳುತ್ತೀಯಲ್ಲ ಅದು ಮಾತ್ರ ಎಲ್ಲರಿಂದ ಸಾಧ್ಯವಿಲ್ಲ...! ಅದಕ್ಕೇ ನಾನು ಕ್ಲೀನ್ ಬೋಲ್ಡ್ ಆಗಿದ್ದು.... ಅದೆಷ್ಟು ಜನ ನಿನ್ನನ್ನು ಹೊಗಳುತ್ತಾರಲ್ಲ ಆಗ ಆಗುವ ಸಂತೋಷ ಕೈಗೆ ನಿಲುಕದ್ದು.... ನನ್ನ ಭಾವನೆಯ ಮಿಡಿತ ಸ್ವಲ್ಪ ವ್ಯತ್ಯಾಸವಾದರೂ ಬಾಯಿ ಬಿಡಿಸಿ ತಿಳಿದುಕೊಂಡು ನಿನ್ನ ತುಡಿತವನ್ನು ಮಾತ್ರ ನಿನ್ನ ಮೌನದಲ್ಲೇ ನಾನು ತಿಳಿದುಕೊಳ್ಳಲೆಂಬ ಹಂಬಲ ನಿನ್ನದು... ನಿನ್ನ ಮುಂದೆ ಮಾತ್ರವೇ ನನ್ನ ಸಿಟ್ಟು ಕೊಂಚ ಕೂಡ ನಿಲ್ಲದೆ ಕರಗಿ ಹೋಗುವುದು.... ನಿನ್ನನ್ನು ನನಗೆ ಕೊಟ್ಟ ದೇವರಿಗೆ ಮತ್ತೊಮ್ಮೆ ನನ್ನ ಕೋಟಿ ಕೋಟಿ ನಮನಗಳು.....


        ನನ್ನ ಪ್ರೀತಿಯನ್ನೆಲ್ಲ ನಿನಗೆ ಧಾರೆ ಎರೆಯಬೇಕೆಂಬ ಹಂಬಲವಿದೆ..... ಕಣ್ತುಂಬಾ ನಮ್ಮ ಮುಂದಿನ ಬದುಕಿನ ಕನಸಿದೆ.... ಕೊನೆವರೆಗಿನ ಸಹಬಾಳ್ವೆಯ ವಿಶ್ವಾಸವಿದೆ... ನನ್ನನ್ನು ಜತನದಿಂದ ಕಾಪಾಡುವೆಯೆಂಬ ನಂಬಿಕೆಯಿದೆ... ಬೊಗಸೆ ತುಂಬಾ ಪ್ರೀತಿಯಿದೆ... ಮನ ತುಂಬಾ ಮಮತೆಯಿದೆ.... ಒಟ್ಟಾರೆ ಕಾಯುವಿಕೆಯಲ್ಲೂ ಏನೋ ಸುಖವಿದೆ... 


ವಿವಾಹ ಯೋಗದ
ನಾದ ನುಡಿಸಿ
ಯಜುರ್ವೇದ ಘೋಷದೊಳು
ಕರಿಮಣಿ ಕುಂಕುಮ ಸೌಭಾಗ್ಯವ ದೊರಕಿಸಲಿರುವ 
                                ನಿನಗಿದು ಅರ್ಪಣೆ........



ಕಾವ್ಯಾ :) :) 

Tuesday, November 29, 2011

ಹಿಂಗೆ ಇರ್ಲಿ ಹೇಳಿ....

     ನಮ್ಮ ಹವಿಗನ್ನಡ ಹೇಳದು ಭಾರಿ ಅದ್ಭುತ ಭಾಷೆ. ನಮ್ಮ ಎದ್ರಿಗಿದ್ದವ್ಕೆ (ಹವ್ಯಕೇತರರು) ಗೊತ್ತಾಪ್ಪಲ್ಲಾಗ ನಮ್ಮ ಸಂಭಾಷಣೆ ಅಂದ್ರೆ ಅಪ್ಪಟ ಹವಿಗನ್ನಡನ ಅದ್ಭುತವಾಗಿ ಫಾಸ್ಟ್ ಆಗಿ ಮಾತಾಡಿಬುಟ್ರೆ ಎದ್ರಿನವ್ಕೆ ಅಂತ-ಪಾರು ಹರಿತಿಲ್ಲೆ... ಅದ್ಕೆ ಆನು ಈ ಭಾಷೆ ಒಂದು best ಭಾಷೆ ಹೇಳಿ consider ಮಾಡಿಗಿದಿ. ನಿಂಗ ಏನಂಬೀssss....

ನಮ್ಮ ಹವಿಗನ್ನಡದಲ್ಲೇ ಸುಮಾರ್ ನಮ್ನಿ ಇದ್ದು. ಊರಿಗೆ ತಕ್ಕಾಂಗೆ ಭಾಷೆ ಸ್ವಲ್ಪ ವ್ಯತ್ಯಾಸ ಇರ್ತು. ಸಿದ್ದಾಪುರ, ಸಿರ್ಸಿ, ಸಾಗರ, ಗಂಟಲ ಕೆಳಗೆ (ಗಟ್ಟದ ಕೆಳಗನವ್ವು!) ಎಲ್ಲಾ ಬದಿಗೂ ಒಂದೇ ಭಾಷೆ ಅದರುವ ಮಾತಡ ಲಯ, ಶಬ್ದ ಪ್ರಯೋಗಗಳಲ್ಲಿ ಸ್ವಲ್ಪ ಬೇರೆ ನಮ್ನಿ ಇರ್ತು.  
ಉದಾ: ಸಿದ್ದಾಪುರ - ಹೋಯ್ದಿಲ್ಲೆ
          ಸಿರ್ಸಿ      - ಹೋಜಿಲ್ಲೆ
          ಸಾಗರ    - ಹೋಗಲ್ಲೆ 
 ಇನ್ನು ಉಪ್ಪು ನೀರ್ ಜನ (ಸೌತ್ ಕೆನರಾ ಮಂದಿ) ಅವರದ್ದು ಮತೊನಮ್ನಿ ಭಾಷೆ.. ಭಾಳ ಮಜಾ ಇರ್ತು ಕೇಳಲೆ... ಒಂದು ಚಂದ ಕೂಸು ಬಂದ್ರೆ ಅದರ ಹತ್ರ  'ಈಗ ಬಂದ್ರ, ಆಸರಿಗೆ ಬೇಕಾ' ಕೇಳಿ... 'ಅಪ್ಪು ಈಗ ಬಂದದ್ದು' ಅಂಬು... ಅದ್ನ ಕೇಳಿದ್ದೆ ನಮ್ ಬದಿ ಹುಡ್ರು ಚಂದಿದ್ದು ಇದೇ ಸಂದರ್ಭ ಹೇಳಿ ಅಪ್ಪಾಕ್ಯಬುಟ್ರೆ ಮುಗ್ತು ಕೆಲಸ....! ಅಪ್ಪು ಅಂದ್ರೆ ಹೌದು ಹೇಳಿ ಅವ್ರ ಭಾಷೇಲಿ.... 
ಅದೆಲ್ಲ ಇರ್ಲಿ ಒಂದ್ ಬದಿಗೆ... ನಮ್ ಬದಿಗೆ ಹವ್ಯಕರು ಮಾತಾಡ್ತಾ ಕುಂತ್ರೆ ಅದ್ನ ಸುಮ್ನೆ ಕೇಳ್ತಾ ಇಪ್ಪವ್ಕೆ ಒಳ್ಳೆ ಮಜಾ ಬತ್ತು. ಅಂಥ ಸಂಭಾಷಣೆಯ ಒಂದಷ್ಟು ತುಣುಕನ್ನ ಇಲ್ಲಿ ಕೊಡ್ತಿ...
ಮೊದಲಿಗೆ ನಮ್ ಬದಿಗೆ ಎಂತಾರು ಸಮಾರಾಧನೆ, ಶ್ರಾದ್ಧ ಎಂತದೆ ಆದ್ರುವಾ  ಖಾಯಂ ಇರ್ತಲಿ ಮಂಡಲ (ಹವ್ಯಕರ ಸಾಧನೆಯ (!) ಇಸ್ಪೀಟಿನ ಮಂಡಲ) ಅದ್ರ related discussion  ಬದಿಗೆ ನೋಡನ.... 
೧) ಅತ್ಗೆ: (ಇಸ್ಪೀಟ್ ಆಡ್ತಾ ಕುತಗಂಡ ಒಂದು ಭಾವನತ್ರೆ) ಅರೇsss ಭಾವಾsss ... 'ಎನ್ನತ್ರೆ' ಮನಕ್ಯತ್ತಿ ಹೇಳಿಕ್ಕೆ ಇನ್ನೂ ಆಡ್ತಾ ಇದ್ಯಲಾ...(!!) ನಿನ್ ನಮ್ಬ್ಕ್ಯ ಕುಂತ್ರೆ ಅಪ್ಪದಲ್ಲ ಹೋಪದಲ್ಲ ಮಾರಾಯ್ನೆ........ 

೨) ಭಾವ: (ರಾತ್ರೆ ೧೧ ಗಂಟೆ ಆದರು ಮಲ್ಗ ಸುದ್ದಿಲ್ದೆ ಕುಣಕೋತ ಗಲಾಟೆ ಮಾಡ್ತಾ ಇದ್ದ ಶಣ್ ಹುಡ್ರತ್ರ) ಅಯ್ಯ ಹುಡ್ರಾ... ಎಂತ ಗೌಜಿ ಮಾಡ್ತ್ರಾ ಬೆಳಗಾಗಿ ಯೋಳ್ತ್ರಿಲ್ಲೇ ಮನ್ಕ್ಯಳಿ ನೆಡಿರಿ ಸಾಕು ನಿಂಗಳ ಕುಣತ....
ಅಲ್ಲೇ ಇದ್ದ ಅತ್ಗೆ: ಅಯ್ಯಾ ಭಾವಾsss...'ಆನು ನೀನು' ಮನಕ್ಯನ್ಡ್ರೆಯಾ ಆ ಸುಟ್ ಹುಡ್ರೆಲ್ಲಿ ಇಷ್ಟ್ ಲಗು ಮನ್ಕ್ಯತ್ವಾ,...!!

೩) (ಬರೇ ಬುಕ್ ಹೊಡಿತಾವ ಮಕ ಜೋತು ಬಿಟ್ಗ ಕುಂತ ಭಾವನತ್ರೆ)  
ಅತ್ಗೆ: ಆಡಲೆ ಕುಂತಿದ್ದೆ ಒಂದರ ಹಿಂದೆ ಒಂದ ಆಟ ತೋರ್ಸ್ತಿ ಹೇಳದವ ಬರೀ ಫುಲ್ ಹೊಡಿತ ಬಿಜ್ಯಲ ಭಾವ...
ಭಾವ: ಥೋ ಮಾರಾಯ್ತಿ ಇವತ್ಯಾಕೋ ಭಾರಿ ಸೋಲ್ ಗೈ ಇದ್ದಕೆ ಸಾಯ್ಲಿ... ಆಟ ಬಿಟ್ಟು ಮನ್ಕ್ಯಂಬದೇ ಒಳ್ಳೆದೆನ ಕಾಣ್ತು.. ಎಳದಾಂಗು ಬರೀ ಬ್ಯಾಡದ್ದೆ  ಬತ್ತು... ಒಂದ್ ಜೋಕರ್ ಜಗ್ಗತಿಲ್ಲೇ... 

  ೪) ಒಂದು ಮದ್ವೆ ಮನೇಲಿ ಹೆಂಗಸರ ಪಂಗಡ ಒಂದು ಹಿಂದಿನ ದಿನ ಎಲ್ಲಾ ಕೆಲಸ ಮುಗ್ಸಿ ನಾಳಿಗೆ ಬೇಕಪ್ಪಂತದ್ದೆಲ್ಲ ಮಾಡಿಟ್ಟಿಕ್ಕೆ ಸ್ವಲ್ಪ ಹೊತ್ತಾರು ಹನಿ ಕಣ್ ಮುಚ್ಚನ ಹೇಳಿ ಎಲ್ಲಿ ವರ್ಗಲೆ ಜಾಗಿದ್ದು ನೋಡ್ತಾ ಹೊಂಟ ಹೇಳಾತು... ನೋಡ್ರೆ ಇಡೀ ಮನೆ ತುಂಬಾ ಎಲ್ಲಿ ನೋಡಿರು ಎಲ್ಲಾ ಮಲ್ಗಿಗಿದ... ಒಂದ್ ಗಳಿಗಾರು ನಿದ್ದೆ ತೆಕ್ಕಮ್ಮನ ನೋಡಿರೆ ಆಗ್ತಿಲ್ಯಲಿ ಹೇಳ ಬೇಜಾರಲ್ಲಿ...
ಅತ್ಗೆ ೧ : ಮಾಳಗೆ ಎಲ್ಲಾ ತುಂಬೋಜೆ.. ಎಲ್ಲೂ ಜಾಗಿಲ್ಲೇ...
ಅತ್ಗೆ ೨: ಥೋ ಜಗಲೀಲು ಜಾಗಿಲ್ಯೇ.. ಈ ಸುಟ್ ಗಂಡಸರೆಲ್ಲ ಇಲ್ಲೇ ಬಿದ್ಕಂಜ... 
ಅತ್ಗೆ ೩: ಅಂಗಳದಲ್ಲಾದ್ರು ಒಂದ್ ಗಳಿಗೆ ಅಡ್ದಾಪ್ಪನ ಅಂದ್ರೆ ಮಂಟಪ ಮಾಡವು, ಹುಡ್ರು ಎಲ್ಲಾ ಮನ್ಕ್ಯಂಡಿಗಿದ್ವಲೇ... ಎಲ್ಲೂ ಜಾಗಿಲ್ಲೇ ವಟ್ಟುವ ನಾಳೆ ನಮ್ ಮುಖ ನೋಡಂಗೆ ಇರ್ತಿಲ್ಲೆ ನಿದ್ದೆಗೆಟ್ಟು... 
ಅತ್ಗೆ ೧: ಯೇ ಅಡ್ಗೆ ಚಪ್ಪರದ ಬದಿಗೆ ಜಾಗಿದ್ದಿಕ್ಕು ನೋಡನ ಬನ್ನಿ... 
(ಅತ್ಗೇರ ದಂಡು ಅಲ್ಲಿ ಹೋಗಿ ನೋಡಿ...)
ಅತ್ಗೆ ೨: ಅಯ್ಯ ಇಲ್ಲೂ ಮನಕ್ಯಂಬ ಆಟ ಇಲ್ಯಲೇ.. ಎಲ್ಲಾ ಅಡ್ಗೆ ಭಟ್ಟಕ್ಕ ಮನ್ಕ್ಯಂಡಿಗಿದ... 
ಇನ್ನೂ ನಿದ್ದೆ ಬರದೆ ಹೊಳ್ಳತಾ ಇದ್ದ ಒಂದ್ ಕಳ್ಳ ಅಡ್ಗೆ ಭಟ್ಟ : ಮನಕ್ಯಂಬ ಆಟ ಇದ್ರೆ ಬನ್ನಿ ಬೇಗ್ನೆಯ.. ಬೆಳಗಾಗ್ತ ಬಂತು ಹೆಚ್ಚೊತ್ತಿಲ್ಲೇ...!!!!

೫) ಮದ್ವೆ ಮನೇಲಿ ಒಂದ್ ಅತ್ಗೆ "ತಡ್ಯೇ ಅಕ್ಕಯ್ಯ, ಸೀರೆ ಬಿಚಾಕಿಕ್ಕೆ ಬತ್ತಿ.. ಶೆಕೆ ಉರಿ...ದೊಡ್ಡ ಸೀರೆ ಸಾಯ್ಲಿ" 
ಅತ್ಗೆ ಒಳಗೇ ಹೋಗಿದ್ದೇ ಹೊರ ಬದಿಗೆ ಒಂದ್ ಮಾಣಿ ಕಾಯ್ತಾ ಕುಂತ ಈಗ ಸೀರೆ ಬಿಚಾಕಿಕ್ಕೆ ಬತ್ತು ಹೇಳಿ... ಪಾಪ ಅವನ್ಗೆಂತ ಗೊತಿದ್ದು ನಮ್ ಹೆಂಗಸರಿಗೆ ಬ್ಯಾರೆ ಸೀರೆ ಉಟ್ಗ ಬತ್ತಿ ಇದ್ನ ಬಿಚ್ಚಿಕ್ಕೆ ಹೇಳ ಅಭ್ಯಾಸ ಇಲ್ಲೇ ಹೇಳದು....!! 
೬) ಅಕ್ಕಯ್ಯ ೧: ಅಯ್ಯsss ಅಕ್ಕಯ್ಯ ನಿನ್ ಮನೆದು ಎಂತ ಹಿಂಗ್ ಅಗೊಜೆ.. ಪೂರ್ತಿ ಹಾಳಾಗೋಯ್ದಲೇ... ಯಂದು ಭಾರಿ ಚೊಲೋ ಆಯ್ದು... ಬುಡ ದಪ್ಪಗಾಗಿ ಎದಿದ್ದು... ಯಮ್ಮಲ್ಲಿ ಇವ್ಕಂತು ಭಾರಿ ಕುಶಿ ಅದ್ಕೆಯ.. (!!) ಇವ್ಕೆ ಹೂಗಿನ ಗಿಡ ಅಂದ್ರೆ ಭಾರಿ ಪ್ರೀತಿನಲೇ...  ನಿಮ್ಮಲ್ಲಿ ಸತ್ತೋಪ್ಲೆ ಆಗೋಯ್ದಲೇ.. ನಾ ಇಲ್ಲಿಂದನೇ  ತಗ ಹೋಗಿ ನೆಟ್ಟಿದ್ದು ಚೊಲೋ ಆಯ್ದು.. ನೀ ಬಾ ಮತೊಂದ್ ಬುಡ ತಂದ್ಕಳಕ್ಕು ಯಮ್ಮನಿಂದವ....

      ಹಿಂಗೆ ನಮ್ಮ ಹವ್ಯಕರ ಸಂಭಾಷಣೆ ಸಮ ಲಕ್ಷ ಕೊಟ್ಟು ಕೇಳ್ತಾ ಇದ್ರೆ ಹಾಸ್ಯಮಯ ಆಗಿರ್ತು... ನಮ್ ಅಜ್ಜ-ಅಜ್ಜಿದಿಕ್ಕ ಮಾತಾಡ ನಮ್ನಿ ಅಪ್ಪಟ ಹವಿಗನ್ನಡ ಈಗ ಮಾಯ ಆಗ್ತಾ ಇದ್ದು... ಎಲ್ಲರಿಗು ಆ ಹಳೆ ಶಬ್ದಗಳು ಹೊಸ ಕನ್ನಡದ ಸಂತಿಗೆ ಸೇರಿ ಹೋಗ್ತ ಇದ್ದು... ಒಟ್ನಲ್ಲಿ ಹವಿಗನ್ನಡ ಆಧುನಿಕೀಕರಣ ಆಗ್ತಾ ಇದ್ದು......



ಕಾವ್ಯಾ 

Tuesday, October 18, 2011

(ಮೇ ತಿಂಗಳಿನಲ್ಲಿ ಮಹಾಬಲಗಿರಿ ಭಟ್ಟರ ಕರಾವಳಿ ರೈಲು ಬ್ಲಾಗಿನಲ್ಲಿ (http://karavalirail.blogspot.com) ಈ ಚಿತ್ರಕ್ಕೆ ಹಲವಾರು ಕವನಗಳು ಬಂದವು... ಮೂಲ ಚಿತ್ರ ಕವಿ ಹೃದಯಿ ಪ್ರವೀಣ್ ಭಟ್ ಸಂಪ (http://nenapinasalu.blogspot.com )ಅವರದ್ದು. ಈ ಚಿತ್ರಕ್ಕೆ ನನ್ನದೊಂದು ಕವನ....)






ಒಂಟಿಯಾಗಿ ಕುಳಿತ ಆ ಮುದಿಯ ಜೀವ....
ಬಾಯ್ದೆರೆದು ನೋಡುತಿದೆ ಬಿಸಿಲ ಕಾವ...
ಪ್ರಾಯದಲ್ಲಿರಲಿಲ್ಲ ಇಷ್ಟು ಬಿಸಿಲು ಎಂಬ ಭಾವ....

ಅರಿಯದ ವಯಸಿಗೆ ಮದುವೆ-ಮಕ್ಕಳ ಜಂಜಾಟ...
ಎನಿತು ಸುಖವ ಕಂಡಿತು ಈ ಜೀವ ಪ್ರಾಯದಲಿ...
ಸಂಸಾರ ತೂಗಿಸುವ ಯೋಚನೆಯೊಂದೇ ತಲೆಯಲಿ...

ದುಡಿದು ಬಂದರೆ ಹಸಿವೆಂದು ಬಾಯ್ಬಿಡುವ ಮಕ್ಕಳು...
ಕಾಯಿಸಿದ ಒಂದಿಷ್ಟು ಅಂಬಲಿಯ, ಒಡಲ ಹಸಿವಿಲ್ಲದೆ ಬಡಿಸಿದ ಕೈಗಳು...
ಪತಿಯ ಊಟವ ಖುಷಿಯಲಿ ಕಂಡು, ನೀರು ಕುಡಿದು ನಿದ್ರಿಸಿದ್ದ ಕಂಗಳು....

ಕಷ್ಟ ಪಡುತ್ತ ಮಕ್ಕಳನು ದಡ ಹತ್ತಿಸುವ ಹಾದಿಯಲಿ...
ಪತಿಯ ಅಗಲಿಕೆಯ ನೋವನು ಮರೆಯುತ....
ಮಕ್ಕಳೊದಗಿಸುವ ಮುಂದಿನ ನೆಮ್ಮದಿಯ ಹಾದಿಯತ್ತ ದೃಷ್ಟಿ ಹರಿಸುತ....

ಕಂಡ ಕನಸುಗಳು ನನಸಾಗದಾದಾಗ...
ಮಕ್ಕಳು ಮುದಿ ಜೀವವ ತೊರೆದು ಹೋದಾಗ....
ನಮಗೆ ನಾವೇ... ಗೋಡೆಗೆ ಮಣ್ಣೇ ಎಂಬ ಭಾವದಿ....

ಬೊಚ್ಚು ಬಾಯಿ, ಗುಳಿ ಬಿದ್ದ ಕಂಗಳಿಂದ....
'ನಾ ಬೆಳೆಸಿದ ಹುಡುಗ ನೀನಾದರೂ
       ನನ್ನ ನೋಡಾಕೆ ಬಂದೆಯಾ ಮಗಾ...'
ಎಂಬ ಸಂತಸವ ಮುಖದಲಿ ಹೊತ್ತ ನಾಗಿ.....
ಇವಳು ನನ್ನ ಬೆಳವಣಿಗೆಯಲ್ಲಿ ಭಾಗಿ....


ಕಾವ್ಯಾ :)

Friday, September 30, 2011


 ಅವನು ತಂದೆ ತಾಯಿಯನ್ನು ಕಡೆಗಣಿಸಿ ತನ್ನ ಹೆಂಡತಿ, ಮಗನೊಡನೆ ಐಷಾರಾಮಿಯಾಗಿ ಬೇರೆಡೆ ವಾಸಿಸುತ್ತಿದ್ದ, ಅದೂ ಸತ್ತು ಹೋದ ತನ್ನ ಅಣ್ಣನ ಆಸ್ತಿಯಲ್ಲಿ... ಅಗಲಿದ ಮಗನ ಆಸ್ತಿ ತನ್ನದೆಂದು ತಿಳಿದೂ ಹೆತ್ತೊಡಲು ಉಳಿದೊಬ್ಬ ಮಗನ ಸಂತೋಷವನ್ನು ಕಿತ್ತುಕೊಳ್ಳದೆ ಕಷ್ಟವನ್ನು ತುಟಿ ಕಚ್ಚಿ ಸಹಿಸಿತ್ತು... 
       ಭಯಂಕರ ಅರ್ಬುದ ರೋಗದಿಂದ ಕೆಲವೇ ದಿನಗಳಲ್ಲಿ ತಾನು ಸಾಯಲಿರುವೆನೆಂದು ತಿಳಿದ ತಂದೆ ತನ್ನೆಲ್ಲ "ಸ್ವಯಾರ್ಜಿತ ಆಸ್ತಿ", ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಹೆಂಡತಿಯ ಹೆಸರಿಗೆ ಬರೆದು, ಅವಳ ಕೊನೆಕಾಲದಲ್ಲಿ ಅದನ್ನು ತನ್ನಿಷ್ಟದವರಿಗೆ ಕೊಡಬಹುದೆಂದು ಬರೆದು ಇಹ ಲೋಕ ತ್ಯಜಿಸಿದ್ದ.. ಜೀವವಿದ್ದಾಗ ನೋಡಿಕೊಳ್ಳದ ಮಗ ವಿಷಯ ತಿಳಿದು ಓಡೋಡಿ ಬಂದು 'ಕಣ್ಣೀರು' ಸುರಿಸಿ ತಂದೆಯ ಕಾರ್ಯ ಮುಗಿಸಿ ತಾಯಿಯನ್ನು ಇನ್ನಿಲ್ಲದ ಆಸ್ಥೆಯಿಂದ 'ಇನ್ನು ಒಬ್ಬಳೇ ಇರಬೇಡ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ನಮ್ಮೊಡನೆಯೇ ಇರುವಂತೆ ಬಾ...' ಎಂದು ಕರೆದೊಯ್ದ.... 

***********


  ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಏನೇ ಮಾಡಿದರೂ ಒಟ್ಟಿಗೆ ಆಗಬೇಕು. ಅವರ ಮಧ್ಯೆ ಪ್ರೀತಿ ಎಂಬುದರ ಅರಿವೇ ಇಲ್ಲದ ಒಡನಾಟ. ಅದೊಂದು ದಿನ ಅವಳಿಗೆ ಹುಡುಗ ನೋಡಲು ಬರುವುದಾಗಿ ತಿಳಿಸಿದರು. ಅವಳು ಬೇಸರದಿಂದಲೇ ಅವನಿಗೆ ಹೇಳಿದ್ದಳು. ಅವನು, ತನ್ನನ್ನು ಯಾವುದೊ ಹುಡುಗಿ ನೋಡಲು ಒತ್ತಾಯ ಮಾಡುತ್ತಿದ್ದಾರೆ ಅಮ್ಮ ಎಂದು ಹೇಳಿದ್ದ. ಇಬ್ಬರೂ ಇಷ್ಟವಿರದ ಕಾರಣ ಯಾರು ನೋಡಲು ಬರುವವರು ಯಾರೆಂದೂ ಕೇಳಿರಲಿಲ್ಲ..
     'ಆ ದಿನ' ಅನ್ಯಮಸ್ಕರಾಗಿಯೇ ತಲೆಯೆತ್ತಿ ನೋಡಿದರೆ.... ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ... ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಣದ ದೇವರಿಗೆ ಮನದಲ್ಲೇ ವಂದಿಸುತ್ತಿದ್ದಾರೆ....

**********

ಕಾವ್ಯಾ 

Monday, September 12, 2011


(ಭಾಗ ೨)

ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರಲೇಬೇಕಲ್ಲ...!

       ಮಾನಸಿಕ ತುಮುಲಗಳಿಂದ ಕೂಡಿದ ಮನಸ್ಸು ಎಷ್ಟು ದಿನ ತಾನೇ ಸ್ಫೋಟಗೊಳ್ಳದೆ ಇರಲು ಸಾಧ್ಯ.... ಆ ದಿನ ಶೀಘ್ರದಲ್ಲೇ ಬಂತು. ಮನಸ್ಸಿನ ಭಾವನೆಗಳು ಕಟ್ಟೊಡೆದ ನದಿಯ ಪ್ರವಾಹದಂತೆ ಹರಿಯಲಾರಂಭಿಸಿತು. ಭಾವನೆಗಳು ಮಾತಾದವು. ಮನಸ್ಸಿನಲ್ಲಿ ಅರಿವಿಲ್ಲದೇ ಮೊಳೆತ ಪ್ರೀತಿ ಬೆಳೆದು ಗಟ್ಟಿಯಾಗಿ ಬೇರೂರಿಯೇ ಬಿಟ್ಟಿತ್ತು. ಅಂತರಂಗದಳಲು ಬಹಿರಂಗವಾಗತೊಡಗಿತು. 
       ಇಬ್ಬರೂ ಕುಳಿತು ಚರ್ಚಿಸಿದರು. ಅದೆಲ್ಲಿ ಪ್ರೀತಿ ಮೂಡಿತು... ಅದೇಕೆ ನಮ್ಮ ಮನ ತಿರುಗಿತು.. ಅದು ಹೇಗೆ ಸ್ನೇಹ ಪ್ರೀತಿಯಾಯಿತು... ಇದು ಕೇವಲ ಸ್ನೇಹದ ಪ್ರೀತಿಯೋ ಅಥವಾ ಪ್ರೇಮದ ಪ್ರೀತಿಯೋ...! ಮನ ಗೊಂದಲದ ಗೂಡಾಯಿತು. ಮುಂದಿನ ದಾರಿ ಕಾಣದಾಯಿತು. ಹುಡುಗ-ಹುಡುಗಿಯ ಮಧ್ಯ ಸ್ನೇಹ, ಮಮತೆ, ಅವಲಂಬನೆ, ಪರಸ್ಪರ ಕಾಳಜಿ ಗಾಢವಾದಂತೆ ಅಲ್ಲಿ ಸ್ನೇಹವನ್ನು ಮಾತ್ರವೇ ಉಳಿಸಿಕೊಳ್ಳಲು ಅಸಾಧ್ಯ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಯಿತು. ಗಾಢ ಸ್ನೇಹದಲ್ಲಿ ಪ್ರೀತಿಯ ಅಂಕುರ ಸಹಜವೆಂಬುದು ಇಬ್ಬರಿಗೂ ಮನವರಿಕೆಯಾಯಿತು.
       ಮುಂದೇನು ಎಂದು ಬಹುವಾಗಿ ಯೋಚಿಸಿದರು.  ಮನೆಯವರನ್ನು ಒಪ್ಪಿಸಲು ಸಾಧ್ಯವಿಲ್ಲ ತಾವು ಬೇರೆಯಾಗುವುದೇ ಸರಿ ಎಂದುಕೊಂಡರು. ಸುಮ್ಮನೆ ಮಾನಸಿಕ ತುಮುಲಗಳಿಗೆ ಒತ್ತು ನೀಡಿದರೆ ಅವು ಬಹು ಬೇಗ ಸ್ಫೋಟಗೊಳ್ಳುತ್ತವೆ. ಗೊಂದಲದ ಗೂಡಾದ  ಮನಸ್ಸಿಗೆ ಮೊದಲಿನ ಮಾತು, ನಗು, ಹಾಸ್ಯ ಅಸಾಧ್ಯವೆನಿಸತೊಡಗಿತು. ಇಬ್ಬರಲ್ಲೂ ಮೌನವೇ ಮಾತಾಯಿತು. ಸ್ನೇಹದಲ್ಲಿದ್ದ ಖುಷಿ ಪ್ರೀತಿಯಲ್ಲಿ ಸಿಗುತ್ತಿಲ್ಲ ಎಂದುಕೊಂಡರು. ಕೊನೆಗೆ ಇಬ್ಬರೂ ಮೊದಲಿನಂತಾಗೋಣ ಎಂದು ಸಂಕಲ್ಪಿಸಿದರು.... ಆದರೆ ನಾವು ಅಂದುಕೊಂಡಂತೆಲ್ಲ ಮನಸ್ಸು ಕೇಳುತ್ತದೆಯೇ...?! ಬರ ಬರುತ್ತಾ ಇಬ್ಬರಿಗೂ ತಮ್ಮ ನಗು, ಮಾತು ಕೃತಕವೆನಿಸತೊಡಗಿತು. ಪ್ರೀತಿಯನ್ನು ಬಿಡುವುದು ಅಸಾಧ್ಯವೆನಿಸತೊಡಗಿತು. ದೂರಾಗುತ್ತಿದ್ದೇವೆ ಎನ್ನುತ್ತಲೇ ಮನಸ್ಸು ಮತ್ತಷ್ಟು ಹತ್ತಿರವಾಗುತ್ತಿತ್ತು.... 


       ಅನುರಾಗವೆಂಬುದು ಎಲ್ಲಿ, ಯಾವಾಗ, ಯಾರಲ್ಲಿ, ಹೇಗೆ ಮೂಡುತ್ತದೆ ಎಂದು ತಿಳಿಯುವುದು ಅಸಾಧ್ಯ. ಎಷ್ಟೋ ಪ್ರೇಮ ಅದೆಷ್ಟೋ ರೀತಿಯಲ್ಲಿ ಕೊನೆಯಾಗುತ್ತದೆ. ನಾವೇಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು, ಹಣೆಬರಹವನ್ನು ಬಲ್ಲವರಾರು... ಎಂದು ನಿರ್ಧರಿಸಿ, ಊರಿಗೆ ಹೋದಾಗ ಅವನು ಮನೆಯಲ್ಲಿ ಹೇಳಿಯೂ ಬಿಟ್ಟನು... ಇತ್ತ ಏನಾಗುತ್ತದೋ ಎಂದು ಉಸಿರು ಬಿಗಿ ಹಿಡಿದು ಕಾದಿದ್ದ ಅವಳಿಗೆ ಸಿಹಿ ಸುದ್ದಿ ಕಾದಿತ್ತು. ಅವಳು ಖುಷಿಯಿಂದ ಕುಣಿದೇ ಬಿಟ್ಟಿದ್ದಳು... ದಿನಗಳೆದಂತೆ ಅವಳೂ ಕೂಡ ಮನೆಯಲ್ಲಿ ಒಪ್ಪಿಸುವಲ್ಲಿ ಯಶಸ್ವಿಯಾದಳು.. 
       ಅಂತೂ ಸ್ನೇಹ ಪ್ರೀತಿಯಾಗಿ ಮುಂದುವರೆದು ನಮ್ಮ ಕಥಾನಾಯಕನಿಗೆ ಈಗ ಅವಳಿ - ಜವಳಿ ಮಕ್ಕಳು... 



ಕಾವ್ಯಾ :) 
       

Tuesday, May 24, 2011

ಅನ್ವೇಷಣೆ.....

(ಭಾಗ ೧)
      
       ಅವರಿಬ್ಬರ ನಡುವೆ ಅಗಾಧ ಸ್ನೇಹ... ಅವಳು ತುಂಬಾ ಮಾತಿನ ಹುಡುಗಿ. ಅವನದು ಮಾತು ಕಮ್ಮಿ. ಅವಳು ಮಾತ್ರ ಸದಾ ಮಾತು...ಮಾತು...ಮಾತು... ಅವನೂ ಕೂಡ ಎಂದೂ ಬೇಸರಿಸದೇ ಅವಳ ಮಾತನ್ನು ಕೇಳುತ್ತಿದ್ದ. ಅವಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದ. ಅವಳಿಗೋ ಅವನ ಮಾತೇ ಕೊನೆಯದು. ಅವನು ತನ್ನ ಅಳಲನ್ನು ಅವಳಷ್ಟು ತೋಡಿಕೊಳ್ಳದಿದ್ದರೂ, ಅವಳು ಅವನ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಿದ್ದಳು. ಮಾತನಾಡಿಸಿ ಅದೂ ಇದೂ ಪ್ರಶ್ನೆ ಕೇಳಿ ಅವನ ಮನಸಿನ ಮಾತನ್ನು ಹೊರಗೆಡವುತ್ತಿದ್ದಳು. ಅವನಿಗೂ ಅವಳ ಮಾತು, ನಗು ಎಂದರೆ ಅದೇನೋ ಸಂತೋಷ.... ಒಂದೇ ಒಂದು ದಿನ ಅವಳು ಸ್ವಲ್ಪ ಮಾತು ಕಮ್ಮಿ ಮಾಡಿದ್ದಾಳೆ ಎನಿಸಿದರೂ ಸಾಕು ಅವನಿಗೇನೋ ಕಸಿವಿಸಿ. 'ಏನಾಯ್ತೆ... ಮಾತಾಡೇ... ಸ್ವಲ್ಪ ನಗೇ... ನಿನ್ನ ನೋಡೋಕಾಗ್ತಿಲ್ಲ...' ಎನ್ನುತ್ತಿದ್ದ.


       ಬರ ಬರುತ್ತಾ ಅವನೂ ಕೂಡ ತುಂಬಾ ಮಾತನಾಡಲು ಕಲಿತ. ಅವಳೊಡನೆ ಮಾತ್ರವೇ ಎನ್ನುವಂತೆ ಮಾತನಾಡತೊಡಗಿದ. ತನ್ನ ಮನದ ನೋವನ್ನು ತೋಡಿಕೊಳ್ಳಲು ಕಲಿಯತೊಡಗಿದ. ಇಬ್ಬರೂ ಮಾತಿಗೆ ಕುಳಿತರೆ ಎಲ್ಲಾ ಆಗು-ಹೋಗುಗಳ ಬಗ್ಗೆ, ಅವಳ ಆಫೀಸಿನ ಬಗ್ಗೆ, ಅವನ ಆಫೀಸಿನ ಬಗ್ಗೆ, ರಾಜಕೀಯ, ಮನೆ ಸಮಸ್ಯೆಗಳು.... ಹೀಗೇ ಎಲ್ಲವೂ ಅವರ ಬಾಯಿಗೆ ಸಿಲುಕುತ್ತಿದ್ದವು. ಒಮ್ಮೊಮ್ಮೆ ರಾಜಕೀಯದ ವಿಷಯಕ್ಕೆ ವಾದ ಮಾಡಿ, ಜಗಳವಾಡಿ ಅತ್ತ-ಇತ್ತ ಮುಖ ಮಾಡಿ ಕುಳಿತುಬಿಡುತ್ತಿದ್ದರು. ಹೆಚ್ಚಿನ ವಿಷಯಗಳಲ್ಲಿ ಅವಳೇ 'ಹೋಗ್ಲಿ ಬಿಡೋ.. ನೀನೆ ಸರಿ.. ಖುಶೀನಾ... ಸುಮ್ಮನೆ ವಾದ ಬೇಡಾ..' ಎಂದು ರಾಜಿಯಾಗುತ್ತಿದ್ದಳು. ಅದೆಷ್ಟೋ ಸಾರಿ ನೀ ನನಗೆ ಆ ವಿಷಯ ಹೇಳಿಲ್ಲ, ಈ ವಿಷ್ಯ ಹೇಳಿಲ್ಲ ಎಂದು ಇದೊಂದು ವಿಷಯಾನ ಹೇಳೋಕೆ ಅನ್ನುವಷ್ಟು ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ಮೂತಿ ಊದಿಸಿಕೊಂಡು ಕುಳಿತು ಬಿಡುತ್ತಿದ್ದರು. ಅದೆಷ್ಟು ಬೇಗ ಬೇಗ ಜಗಳವದಿದ್ದರೋ ಅಷ್ಟೇ ಬೇಗ ರಾಜಿಯಾಗಿ ನಗುತ್ತಿದ್ದರು. ಒಬ್ಬರಿಗೊಬ್ಬರು ಒಂದು ದಿನ ಮಾತಾಡಲು ಸಿಗದಿದ್ದರೂ ದಿನ ಕಳೆಯುವುದು ಕಷ್ಟ ಎನ್ನುವಷ್ಟು ಸ್ನೇಹ.... ಬರಿದೇ ಸ್ನೇಹ... ನಿಷ್ಕಲ್ಮಷ ಸ್ನೇಹ....ಬಿಟ್ಟಿರಲಾರದ ಸ್ನೇಹ... 

      ಅವಳೇ ಎಷ್ಟೋ ಬಾರಿ ಕೇಳಿದ್ದಳು ಅವನಲ್ಲಿ... 'ಎಲ್ರೂ ಹೇಳ್ತಾರೆ, ಹುಡ್ಗಾ ಹುಡ್ಗಿ ಕೊನೆ ತನಕ ಬರೀ friends ಆಗಿರೋಕೆ ಆಗಲ್ವಂತೆ ಹೌದೇನೋ...? ನಾವು ಇದ್ದು ತೋರ್ಸೋಣ ಅಲ್ವ...'
ಅವನು 'ಹ್ಞೂ ಎಲ್ರೋ ಹೇಳ್ತಾರೆ.. ಆದ್ರೆ ಅದೆಲ್ಲ ಅವರವರ ಮನಸಿಗೆ ಸಂಬಂಧ ಪಟ್ಟಿದ್ದು ಕಣೆ... ಮನಸಲ್ಲಿ ಬೇರೆ ಆಲೋಚನೆ ಬರದೆ ಇರೋ ಥರ ಇದ್ರೆ, ಕೇವಲ friends ಅನ್ಕೊಂಡ್ರೆ, ಅದನ್ನೇ ತಲೇಲಿ ಇಟ್ಕೊಂಡ್ರೆ ಖಂಡಿತ ಇರ್ಬೋದು....'

ಅವಳು ಪದೇ ಪದೇ ಅವನ ಬಳಿ ಅದನ್ನ ಕೊಡ್ಸು, ಇದನ್ನ ಕೊಡ್ಸು, ನಂಗೆ ಅದನ್ನ ತಿನ್ನಬೇಕು ಕೊಡ್ಸು ಎಂದು ಹಠ ಮಾಡುತ್ತಿದ್ದಳು... ಅವನೂ ಎಂದೂ ಬೇಸರಿಸದೇ ಕುಶಿಯಿಂದ ಕೊಡಿಸುತ್ತಿದ್ದ. ಅವಳು ಪ್ರೀತಿಯಿಂದ ತಿನ್ನುವುದನ್ನು ನೋಡಿ ಖುಷಿ ಪಡುತ್ತಿದ್ದ. ಪ್ರತಿ ದಿನ ಅದೆಷ್ಟು ಹೊತ್ತು ಏನು ಮಾತಾಡ್ತಾರೋ ಎಂದು ಬೇರೆಯವರು ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಮಾತಾಡುತ್ತಿದ್ದರು. ಎಷ್ಟೋ ಬಾರಿ ಅವರಿಗೇ ಅನ್ನಿಸಿದ್ದುಂಟು, 'ಅದೇನೋ ಮಾತಡ್ತೀವೋ ಏನೋ.. ಈ ಹಾಳಾದ ಮಾತು ಮುಗಿಯೋದೇ ಇಲ್ಲಾ...!!' ಎಂದು. ಅಷ್ಟಾದರೂ ಒಮ್ಮೆಯೂ ಕೂಡ ಅವರ ಮಧ್ಯೆ ಸ್ನೇಹಕ್ಕೆ ಹೊರತಾದ, ಸ್ನೇಹವನ್ನು ದಾಟಿದ ಯಾವುದೇ ವಿಷಯ ಸುಳಿಯಲೇ ಇಲ್ಲಾ... ಏನೇ ಆಗಲಿ ಹೋಗಲಿ ಅವಳು ಮೊದಲು ಹೇಳುತ್ತಿದ್ದುದು ಅವನಿಗೆ....

      ಬರ ಬರುತ್ತಾ ಅದೆಷ್ಟು ಹಚ್ಚಿಕೊಂಡುಬಿಟ್ಟರೆಂದರೆ ಅವಳು ಬೇರೊಬ್ಬ ಗೆಳತಿ-ಗೆಳೆಯರೊಡನೆ ಜಾಸ್ತಿ ಮಾತಾಡಿದರೆ ಅವನಿಗೆ ಸಿಟ್ಟು, ಅವನು ಯಾರೋ ಹುಡುಗಿಯ ಬಳಿ ಹರಟಿದನೆಂದರೆ ಇವಳಿಗೆ ಸಿಟ್ಟು ಬರುವಷ್ಟರ ಮಟ್ಟಿಗೆ...! 

      ಅವಳ ಮನೆಯಲ್ಲಿ ವರಾನ್ವೇಷಣೆ ಪ್ರಾರಂಭವಾಯಿತು. ಪ್ರತೀ ಹಂತದಲ್ಲೂ ಅವಳು ಅವನಿಗೆ ತಿಳಿಸುತ್ತಿದ್ದಳು. ಅವನ ಅಭಿಪ್ರಾಯಕ್ಕೂ ಮನ್ನಣೆ ಕೊಡುತ್ತಿದ್ದಳು. ಮದುವೆಯಾದ ಮೇಲೆ ಈ ಸ್ನೇಹದ ಗಾಢತೆಯನ್ನು ಉಳಿಸಿಕೊಳ್ಳಲಾಗದಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದರು ಆಗಾಗ. 

      ಇದ್ದಕ್ಕಿದ್ದಂತೆ ಯಾರಿಗೆ ಏನಾಯಿತೋ.. ಪದೇ ಪದೇ ಜಗಳ, ಮನಸ್ತಾಪಗಳು.... possessiveness ಇಬ್ಬರಿಂದಲೂ ಹೊರ ಹೊಮ್ಮತೊಡಗಿತು.... ಮನ ಗೊಂದಲದ ಗೂಡಾಯಿತು... 'ಏಕೆ ಹೀಗಾಗ್ತಾ ಇದೀವಿ' ಅಂತ ಒಬ್ಬರಿಗೊಬ್ಬರು ಹಲವಾರು ಬಾರಿ ಪ್ರಶ್ನಿಸಿಕೊಂದರೂ 'no use'..... ಒಬ್ಬರಿಗೊಬ್ಬರು ಉತ್ತರಿಸಲು ಅಸಮರ್ಥರಾದರು, ಅಷ್ಟೇ ಏಕೆ ಅವರ ಮನಸ್ಥಿತಿ ಸ್ವತಃ  ಅವರಿಗೇ ತಿಳಿಯದಾಯಿತು... 

      ಏನಿದರ ಅರ್ಥ....? ಯಾಕೇ ಹೀಗೇ...? ಸಂಬಂಧಗಳೇ ಹೀಗಾ...? ಸಂಬಂಧಗಳೇಕೆ ಇಷ್ಟು ಕ್ಲಿಷ್ಟ....? ಇದನ್ನೆಲ್ಲಾ ನಿಭಾಯಿಸುವುದು ಹೇಗೆ...? ಏನಿದಕ್ಕೆ ಪರಿಹಾರ....? ಹೇಗೆ ಮೊದಲಿನಂತಾಗುವುದು....? ಮೊದಲಿಂತಾಗುವುದೆಂದರೆ ಈಗೇನಾಗಿದೆ...???


ಕಾವ್ಯಾ :)


Thursday, April 7, 2011

ಎಂದೋ ಕಂಡ ನಿನ್ನ ನೆನಪು.....



ನೀನಿಲ್ಲದ  ನಾನು..... ಹಸಿರಿಲ್ಲದ  ಕಾಡು.. 
ಚಂದ್ರನಿರದ ಬಾನು.... ಪಲ್ಲವಿಯಿರದ ಹಾಡು....
ನೀನಿದ್ದರೆ ನಾನು.... ಸೇರುವೆ ಪ್ರೀತಿಯ ಗೂಡು...

            ನಿನ್ನ ನೆನಪೇ  ಸಾಕು.... ನೋವ ಮರೆಯಲು...
            ನೀ ಜೊತೆಗಿದ್ದರೆ... ಅದುವೇ ಪ್ರೀತಿಯ ಹೊನಲು....
            ನಿನ್ನ ನಗುವದು.. ಆಕರ್ಷಣೆಯ ಕಡಲು....

ಓಡೋಡಿ ಬರುವೆ... ನಗೆ ಮುತ್ತುಗಳ ಆಯಲು..
ನೋಟ ನೆಟ್ಟಿವೆ ನೀ ಬರುವ ದಾರಿಯತ್ತ ನನ್ನ ಕಂಗಳು…
ಆದರೂ ಆಗುತ್ತಿಲ್ಲ ನಿನ್ನನ್ನರಸಲು…

ಗೆಳೆಯಾ, 
             ಏನೋ ಸುಖವಿದೆ ನಿನ್ನ ಆಗಮನಕ್ಕಾಗಿ ಕಾಯಲು…
             ಬಂದೆ ಬರುವೆಯೆಂಬ ನನ್ನ ನಂಬಿಕೆಯನ್ನು ಹುಸಿಯಾಗಿಸದೆ,
             ಬಂದುಬಿಡು ನನ್ನ ಬಾಳ ಹಸನಾಗಿಸಲು…
(ಚಿತ್ರ ಕೃಪೆ ಅರುಣ್ ಭಟ್)


(ನಾನೊಂದು ಸಾಲು ನನ್ನ friend ಒಂದು ಸಾಲಿನಂತೆ ಬರೆದ ಕವನ
ಬೇರೆ ಬೇರೆ ಭಾವಗಳನ್ನು ಕೂಡಿಸಿಟ್ಟ ಸಾಲುಗಳು... )

ಕಾವ್ಯಾ :)