ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಅತ್ಯಾಚಾರದ ಬಗ್ಗೆ ಮಾತು. ಬಹುತೇಕ ಪುರುಷರು ಇದಕ್ಕೆ ಕಾರಣ ಹೆಣ್ಣು ಮಕ್ಕಳು ತೊಡುವ ಬಟ್ಟೆಗಳೇ ಎಂಬಂತಾಗಿ ಮಾತನಾಡುತ್ತಿರುವುದು ಗಮನಕ್ಕೆ ಬಂತು. ತುಂಬಾ ಬೇಸರವೂ ಆಯಿತು. ಪುರುಷರ ಮನೋ ವಿಕೃತಿಗೆ ಹೆಣ್ಣು ಮಕ್ಕಳ ಬಟ್ಟೆಯೇ ಕಾರಣ ಎಂತಾದಲ್ಲಿ, ಹೊರದೇಶಗಳ ಹೆಣ್ಣು ಮಕ್ಕಳು ಶೇಕಡಾ 90 ರಷ್ಟು ಜನ ಅತ್ಯಾಚಾರಕ್ಕೆ ಗುರಿಯಾಗಬೇಕಿತ್ತಲ್ಲವೇ....?! ಯಾಕೆ ಹಾಗಾಗುತ್ತಿಲ್ಲ...? ಅಲ್ಲಿರುವವರೆಲ್ಲ ಪುರುಷ ಪುಂಗವರಲ್ಲವೆ...??!!
ಇಂತಹ ಕೆಟ್ಟ ಕೃತ್ಯದ ಹಿಂದೆ ಕೃತ್ಯ ಎಸಗಿದವರ ಮನಸ್ಥಿತಿಯಿರುತ್ತದೆಯೇ ವಿನಃ ಹೆಣ್ಣಿನ ಬಟ್ಟೆಯಲ್ಲ. ಇಲ್ಲಿವರೆಗೆ ಆದ ಅತ್ಯಾಚರಗಳೆಲ್ಲಾ ಕೇವಲ ತುಂಡು ಬಟ್ಟೆ ತೊಟ್ಟವರ ಮೇಲೆಯೇ ಆಗಿದ್ದರೆ ಅವರ ಮಾತಿಗೆ ಸೊಪ್ಪು ಹಾಕಬಹುದಿತ್ತು. ತುಂಡು ಬಟ್ಟೆ ತೊಡುವುದು ಸರಿ ಎಂದು ನಾನು ವಾದಿಸುತ್ತಿಲ್ಲ. ಅದು ಹುಡುಗರಿಗೆ ಪ್ರಚೋದಕಕಾರಿ ಯಾಗಿರಬಹುದು. ಆದರೆ ಅಷ್ಟು ಮಾತ್ರ ಮನೋ ನಿಗ್ರಹ ವಿಲ್ಲದೆ ಒಂದು ಹೆಣ್ಣಿನ ಮೇಲೆರಗಿ ಅಷ್ಟು ಹೀನಾಯವಾಗಿ ತೃಷೆ ತೀರಿಸಿಕೊಳ್ಳುವಷ್ಟು ಪ್ರಚೋದಿಸುತ್ತದೆ ಎಂದರೆ ಆ ಮನಸ್ಸು ಎಷ್ಟು ವಿಕೃತಿಗೆ ಹೋಗಿರಬಹುದು ಎಂಬುದನ್ನು ನೋಡಬೇಕಷ್ಟೇ...?! ಪ್ರತಿಯೊಬ್ಬರೂ ಅವರು ಬೆಳೆದ ಪರಿಸರದಿಂದ ಪ್ರಾಭಾವಿತರಗುತ್ತಾರೆ. ಅವರ ಮನಸ್ಥಿತಿ ಆ ಪರಿಸರದ ಮೇಲೆ ಅವಲಂಬಿತವಾಗಿಯೇ ಬೆಳೆದಿರುತ್ತದೆ. ಮನೆಯಲ್ಲಿ ಒಳ್ಳೆಯ ವಾತವರಣದಲ್ಲಿ ಬೆಳೆದರೂ ಕೂಡ ಹೊರಗಿನ ಗೆಳೆಯರ ಸಂಗ ವ್ಯಕ್ತಿಯನ್ನು ಕೆಟ್ಟ ಆಲೋಚನೆಗಳಿಗಿಳಿಸಿ ಅವನ ಮನಸ್ಥಿತಿಯನ್ನು ಕದಡಿ ವಿರೂಪಗೊಳಿಸಬಹುದು. ಒಟ್ಟಿನಲ್ಲಿ ಕೆಟ್ಟ ಮನಸ್ಥಿತಿಯೇ ಈ ವಿಕೃತಿಗೆ ಕಾರಣವೇ ಹೊರತು ಹೆಣ್ಣಿನ ಬಟ್ಟೆಯಲ್ಲ. ವಿಕೃತ ಮನಸ್ಸಿನ ಒಂದು ಗಂಡು ಮೈ ತುಂಬಾ ಬಟ್ಟೆ ತೊಟ್ಟು ಗೌರವಯುತವಾಗಿರುವ ಮಹಿಳೆಯನ್ನೂ ಸಹ ಬೆತ್ತಲಾಗಿ ಕಲ್ಪಿಸಿಕೊಳ್ಳಬಲ್ಲ...!! ಅದರಿಂದ ವಿಕೃತ ಆನಂದವನ್ನು ಪಡೆಯಲೂ ಬಲ್ಲ.... ಅಂತಹ ಮನಕ್ಕೆ ಯಾವ ಹೆಣ್ಣಾದರೂ ಆದೀತು. ಅವರ ಮುಂದೆ ಬಟ್ಟೆ ಎಂಬುದು ಅಡ್ಡವಾಗುವುದೇ ಇಲ್ಲ... ಆ ಸಮಯದ ಸುಖವಷ್ಟೇ ಅವರಿಗೆ ಬೇಕಾಗಿರುವುದು.... ಆ ವಿಕೃತಿಗೆ ಹೆಣ್ಣು ಬಲಿಯಾಗುತ್ತಾಳೆ ಅಷ್ಟೇ.....
4-5 ವರ್ಷದ ಹೆಣ್ಣು ಮಕ್ಕಳ ಮೇಲೆಲ್ಲಾ ಅತ್ಯಾಚಾರ ಎಸಗುವಂತ ರಕ್ಕಸ ಮನ ಅದೆಷ್ಟು ಹೊಲಸಾಗಿ, ಕೆಟ್ಟದಾಗಿ, ವಿಕೃತವಾಗಿ ಇರಬಹುದೆಂದು ಯೋಚಿಸಿ.... ಮಗು ಎಂಬ ಭಾವನೆಯೂ ಇಲ್ಲದೆ ಅದನ್ನೂ ತನ್ನ ಕೆಟ್ಟ ತೃಷೆ ತೀರಿಸಿಕೊಳ್ಳಲು ಉಪಯೋಗಿಸಿಕೊಳ್ಳುವಂಥ ಮಟ್ಟಕ್ಕೆ ಮನುಷ್ಯ ಇಂದು ಬೆಳೆದು ನಿಂತಿದ್ದಾನೆ...! ಇಂತಹ ಗಂಡಸರಿಗೆ ಬಯ್ಯಲು ಶಬ್ದ, ಕೊಡಲು ಶಿಕ್ಷೆಯುಂಟೆ ಈ ಪ್ರಪಂಚದಲ್ಲಿ....??? ಹಲವರು ಹೇಳಿದಂತೆ ಪುರುಷತ್ವ ಹರಣ ಶಿಕ್ಷೆ ಯೋಗ್ಯವಾದದ್ದೇ ಹೌದಾದರೂ ಎಲ್ಲಾ ಕಳೆದುಕೊಂಡ ಹೆಣ್ಣುಮಕ್ಕಳ, ಆ ಪುಟ್ಟ ಕಂದಮ್ಮಗಳ ಜೀವ, ಜೀವನವನ್ನು ಹಿಂದಕ್ಕೆ ತರಲಾದೀತೇ...! ನಮಗೆ ಪತ್ರಿಕೆ ಗಳಲ್ಲಿ ಆ ಬಗ್ಗೆ ಓದುವಾಗಲೇ ಅಷ್ಟು ನೋವಾಗುವಾಗ ಆ ಕಂದ ಅದೆಷ್ಟು ನೋವನುಭವಿಸಿರುತ್ತೋ...... ಆ ತಿಳಿಯದ ಸಹಿಸಲಾಗದ ವಯಸ್ಸಿನಲ್ಲಿ......
ನನಗೆ ಇಂತಹ ಘಟನೆಗಳನ್ನು ಕೇಳಿದಾಗೆಲ್ಲ ಯಾವಾಗಲೂ ಕಾಡುವ ಪ್ರಶ್ನೆ - ಅವರಿಗೆ ಅಷ್ಟು ಕೆಟ್ಟ ಮನಸ್ಥಿತಿ ಇದ್ದು, ನಿಯಂತ್ರಿಸಿಕೊಳ್ಳಲಾಗದ ರಕ್ಕಸ ಬುದ್ದಿಯಿದ್ದರೆ, ತಣಿಸಲಿಕ್ಕಾಗೇ ಇರುತ್ತಾರಲ್ಲ ಬೇಕಷ್ಟು ಮಂದಿ...ಅವರ ಬಳಿ ಹೋಗದೇ ಪಾಪಕ್ಕಿಲ್ಲದ ಹೆಣ್ಣು ಮಕ್ಕಳ ಮೇಲೆರಗಿ ಅವರನ್ನೇಕೆ ಬಲಿ ಕೊಡುತ್ತಾರೆ...?! ದುಡ್ಡಿಲ್ಲದೇ ಕೆಲಸವಾದೀತೆಂದೇ ..?!!?
.jpg)


