Tuesday, January 20, 2015

ಆ ದಿನ :

      ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಏನೇ ಮಾಡಿದರೂ ಒಟ್ಟಿಗೆ ಆಗಬೇಕು. ಅವರ ಮಧ್ಯೆ ಪ್ರೀತಿ ಎಂಬುದರ ಅರಿವೇ ಇಲ್ಲದ ಒಡನಾಟ. ಅದೊಂದು ದಿನ ಅವಳಿಗೆ ಹುಡುಗ ನೋಡಲು ಬರುವುದಾಗಿ ತಿಳಿಸಿದರು. ಅವಳು ಬೇಸರದಿಂದಲೇ ಅವನಿಗೆ ಹೇಳಿದ್ದಳು. ಅವನು, ತನ್ನನ್ನು ಯಾವುದೊ ಹುಡುಗಿ ನೋಡಲು ಒತ್ತಾಯ ಮಾಡುತ್ತಿದ್ದಾರೆ ಅಮ್ಮ ಎಂದು ಹೇಳಿದ್ದ. ಇಬ್ಬರೂ ಇಷ್ಟವಿರದ ಕಾರಣ ಯಾರು ನೋಡಲು ಬರುವವರು ಯಾರೆಂದೂ ಕೇಳಿರಲಿಲ್ಲ..

     'ಆ ದಿನ' ಅನ್ಯಮಸ್ಕರಾಗಿಯೇ ತಲೆಯೆತ್ತಿ ನೋಡಿದರೆ.... ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ... ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಣದ ದೇವರಿಗೆ ಮನದಲ್ಲೇ ವಂದಿಸುತ್ತಿದ್ದಾರೆ....

************
ವಿಧಿ ವರ : 

    ಗಾಢ ಸ್ನೇಹದ ಮಧ್ಯೆ ಅರಿವಿಲ್ಲದೇ ಪ್ರೀತಿ ಇಣುಕಿತ್ತು... ಇಬ್ಬರ ಮನಸ್ಸೂ ಹೇಳಲಾರದ ಅನಿವಾರ್ಯತೆಯಿಂದ ತಳಮಳಿಸಿತ್ತು... ಅದೊಂದು ದಿನ ತಡೆಯಲಾರದ ದುಃಖ ಪ್ರೀತಿಯನ್ನು ಇಬ್ಬರಿಂದಲೂ ಏಕಕಾಲಕ್ಕೆ ಹೊರಹಾಕಿತ್ತು... ಆಗದ ಮಾತೆಂದು ತಿಳಿದ ಇಬ್ಬರಲ್ಲೂ ದುಃಖ ಭೋರ್ಗರೆದು, ಅಸಹಾಯಕತೆ ಕಣ್ಣೀರ ಕೋಡಿಯಾಗಿ ಹರಿದಿತ್ತು. ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡು ಮತ್ತದೇ ಹಳೆಯ ನಗು ಮೊಗದ ಮುಖವಾಡ ಹೊತ್ತರು... ಮೊದಲಿನಿಂದಲೂ ವಿಧಿಯ ಕರಾಳ ಮುಖದ ಅರಿವಿದ್ದಿದ್ದರಿಂದ ದಿನೇ ದಿನೇ ತಮ್ಮ ಮುಖವಾಡಕ್ಕೆ ಹೊಂದಿಕೊಂಡುಬಿಟ್ಟರು..
     ಈ ಬಾರಿ ವಿಧಿ ಕೂಡ ಅವರ ಪ್ರೀತಿಗೆ ತಲೆ ಬಾಗಿತ್ತು... ಧಿಡೀರನೆ ಮನೆಯಿಂದ "ನಿಮ್ಮಿಬ್ಬರ ಜಾತಕಗಳು ಹೊಂದುತ್ತವೆ ನಮಗೆ ಒಪ್ಪಿಗೆ... ನೀವೇನೆನ್ನುತ್ತೀರಿ..." ಎಂದು ಫೋನಾಯಿಸಿದಾಗ  ಅದಕ್ಕೆ ಉತ್ತರವನ್ನೂ ಹೇಳದೆ ಓಡಿ ಬಂದ ಅವನು ಅವಳ ಮುಂದೆ ನಿಂತು, ಪ್ರೀತಿಯಿಂದ ತಂದ ಗುಲಾಬಿಯನ್ನು ಅವಳ ಕೈಗಿಟ್ಟು ಹಣೆಗೊಂದು ಹೂಮುತ್ತನ್ನಿತ್ತಿದ್ದ.... 

(ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗಥೆಗಳು)

ಕಾವ್ಯಾ :) 

Monday, December 15, 2014

ಹನಿಗಥೆಗಳು........


ವಿಧಿ ವರ :     
 ಗಾಢ ಸ್ನೇಹದ ಮಧ್ಯೆ ಅರಿವಿಲ್ಲದೇ ಪ್ರೀತಿ ಇಣುಕಿತ್ತು... ಇಬ್ಬರ ಮನಸ್ಸೂ ಹೇಳಲಾರದ ಅನಿವಾರ್ಯತೆಯಿಂದ ತಳಮಳಿಸಿತ್ತು... ಅದೊಂದು ದಿನ ತಡೆಯಲಾರದ ದುಃಖ ಪ್ರೀತಿಯನ್ನು ಇಬ್ಬರಿಂದಲೂ ಏಕಕಾಲಕ್ಕೆ ಹೊರಹಾಕಿತ್ತು... ಆಗದ ಮಾತೆಂದು ತಿಳಿದ ಇಬ್ಬರಲ್ಲೂ ದುಃಖ ಭೋರ್ಗರೆದು, ಅಸಹಾಯಕತೆ ಕಣ್ಣೀರ ಕೋಡಿಯಾಗಿ ಹರಿದಿತ್ತು. ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡು ಮತ್ತದೇ ಹಳೆಯ ನಗು ಮೊಗದ ಮುಖವಾಡ ಹೊತ್ತರು... ಮೊದಲಿನಿಂದಲೂ ವಿಧಿಯ ಕರಾಳ ಮುಖದ ಅರಿವಿದ್ದಿದ್ದರಿಂದ ದಿನೇ ದಿನೇ ತಮ್ಮ ಮುಖವಾಡಕ್ಕೆ ಹೊಂದಿಕೊಂಡುಬಿಟ್ಟರು..
     ಈ ಬಾರಿ ವಿಧಿ ಕೂಡ ಅವರ ಪ್ರೀತಿಗೆ ತಲೆ ಬಾಗಿತ್ತು... ಧಿಡೀರನೆ ಮನೆಯಿಂದ "ನಿಮ್ಮಿಬ್ಬರ ಜಾತಕಗಳು ಹೊಂದುತ್ತವೆ ನಮಗೆ ಒಪ್ಪಿಗೆ... ನೀವೇನೆನ್ನುತ್ತೀರಿ..." ಎಂದು ಫೋನಾಯಿಸಿದಾಗ  ಅದಕ್ಕೇ ಉತ್ತರವನ್ನೂ ಹೇಳದೆ ಓಡಿ ಬಂದ ಅವನು ಅವಳ ಮುಂದೆ ನಿಂತು, ಪ್ರೀತಿಯಿಂದ ತಂದ ಗುಲಾಬಿಯನ್ನು ಅವಳ ಕೈಗಿಟ್ಟು ಹಣೆಗೊಂದು ಹೂಮುತ್ತನ್ನಿತ್ತಿದ್ದ.... 

*************

ಕಣ್ಣೀರು :
              ಅವನು ತಂದೆ ತಾಯಿಯನ್ನು ಕಡೆಗಣಿಸಿ ತನ್ನ ಹೆಂಡತಿ, ಮಗನೊಡನೆ ಐಷಾರಾಮಿಯಾಗಿ ಬೇರೆಡೆ ವಾಸಿಸುತ್ತಿದ್ದ, ಅದೂ ಸತ್ತು ಹೋದ ತನ್ನ ಅಣ್ಣನ ಆಸ್ತಿಯಲ್ಲಿ... ಅಗಲಿದ ಮಗನ ಆಸ್ತಿ ತನ್ನದೆಂದು ತಿಳಿದೂ ಹೆತ್ತೊಡಲು ಉಳಿದೊಬ್ಬ ಮಗನ ಸಂತೋಷವನ್ನು ಕಿತ್ತುಕೊಳ್ಳದೆ ಕಷ್ಟವನ್ನು ತುಟಿ ಕಚ್ಚಿ ಸಹಿಸಿತ್ತು... 
       ಭಯಂಕರ ಅರ್ಬುದ ರೋಗದಿಂದ ಕೆಲವೇ ದಿನಗಳಲ್ಲಿ ತಾನು ಸಾಯಲಿರುವೆನೆಂದು ತಿಳಿದ ತಂದೆ ತನ್ನೆಲ್ಲ "ಸ್ವಯಾರ್ಜಿತ ಆಸ್ತಿ", ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಹೆಂಡತಿಯ ಹೆಸರಿಗೆ ಬರೆದು, ಅವಳ ಕೊನೆಕಾಲದಲ್ಲಿ ಅದನ್ನು ತನ್ನಿಷ್ಟದವರಿಗೆ ಕೊಡಬಹುದೆಂದು ಬರೆದು ಇಹ ಲೋಕ ತ್ಯಜಿಸಿದ್ದ.. ಜೀವವಿದ್ದಾಗ ನೋಡಿಕೊಳ್ಳದ ಮಗ ವಿಷಯ ತಿಳಿದು ಓಡೋಡಿ ಬಂದು 'ಕಣ್ಣೀರು' ಸುರಿಸಿ ತಂದೆಯ ಕಾರ್ಯ ಮುಗಿಸಿ ತಾಯಿಯನ್ನು ಇನ್ನಿಲ್ಲದ ಆಸ್ಥೆಯಿಂದ 'ಇನ್ನು ಒಬ್ಬಳೇ ಇರಬೇಡ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ನಮ್ಮೊಡನೆಯೇ ಇರುವಂತೆ ಬಾ...' ಎಂದು ಕರೆದೊಯ್ದ.... 


**************


ಕೊನೆಯ ಕೊಂಡಿ :
              ಅವಳಿಗೆ ಅವನ ಪ್ರತೀ ಹೆಜ್ಜೆಯ ಮೇಲೆ ಅನುಮಾನ. ಬೇರಾವ ಹುಡುಗಿಯ ಬಳಿ ಮಾತಾಡುವಂತೆಯೇ ಇರಲಿಲ್ಲ. ಅವನ ತಂಗಿಯರ ಜೊತೆ ಆತ್ಮೀಯತೆಯಿಂದ ಮಾತಾಡಿದರೂ ಇವಳು ಅತ್ತು ರಂಪ ಮಾಡಿಬಿಡುತ್ತಿದ್ದಳು. ಅದೊಂದು ವಿಚಾರ ಬಿಟ್ಟರೆ ಇವನಿಗೆ ಅವಳು ಮೆಚ್ಚಿನ ಮಡದಿ. ಬೇರೆಲ್ಲ ವಿಷಯದಲ್ಲಿ ಒಳ್ಳೆಯವಳೇ, ಆದರೆ ವಿನಾ ಕಾರಣ ಅನುಮಾನ ಅವಳನ್ನು ಕಿತ್ತು ತಿನ್ನುತ್ತಿತ್ತು. ಅದೆಷ್ಟೋ ಬಾರಿ ಅವನು ಪ್ರೀತಿಯಿಂದ ಮತ್ತು ಬೈದು ಕೂಡ ತಿಳಿ ಹೇಳಿದ್ದ. ಸುಮ್ಮನೆ ಒಂದು ಕೌನ್ಸೆಲಿಂಗ್ ಗೆ ಹೋಗಿ ಬರೋಣ ಎಂದರೂ ನಾನೇನು ಹುಚ್ಚಿಯಲ್ಲ ಎಂದು ಕೂಗಿದ್ದಳು. ಹಾಗಂತ ಅವಳು ಎಲ್ಲರೊಡನೆಯೂ ಸಲುಗೆಯಿಂದ ಬೇರೆಯುತ್ತಿದ್ದಳು, ಹೆಣ್ಣು - ಗಂಡು ಎಂಬ ಬೇಧವಿಲ್ಲದೇ....! ಸ್ವಭಾವತಃ ಎಲ್ಲರೊಡನೆ ಖುಷಿಯಿಂದ ಹರಟುವ ಅವನು ಅದ್ಯಾವುದಕ್ಕೂ ಅವಳಂತೆ ತಲೆ ಕೆಡಿಸಿಕೊಂಡಿರಲಿಲ್ಲ. ಅವಳು ಮಾತ್ರ ಅವನನ್ನು, ಅವನ ಮೊಬೈಲ್ ಕರೆಗಳನ್ನು ಪರೀಕ್ಷಿಸುವುದು ನಡದೇ ಇತ್ತು. ದಿನಗಳೆಯುತ್ತಾ ಅವನು ತಿಳಿ ಹೇಳುವ, ಅವಳನ್ನು ಸಮಾಧಾನಿಸುವ ತಾಳ್ಮೆ ಕಳೆದುಕೊಳ್ಳುತ್ತಾ ಬಂದ.  ಇಬ್ಬರ ನಡುವಿನ ಒಂದೊಂದೇ ಕೊಂಡಿ ಕಳಚುತ್ತಾ ಬಂದ ಅನುಭವ ಅವಳಿಗಾಗುವ ಹೊತ್ತಿಗೆ ಅವನು ಕೊನೆಯ ಕೊಂಡಿಯನ್ನೂ ಕಿತ್ತೊಗೆಯಲು ಕಾತರನಾಗಿದ್ದ.....

ಕಾವ್ಯಾ :)
(ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳು) 



Tuesday, November 18, 2014

ಯೋಚನಾಲಹರಿಯ ಬೆನ್ನತ್ತಿ......

ಇತ್ತೀಚಿನ ದಿನಗಳಲ್ಲಿ  ಒಂದು ಯೋಚನೆ ಬಹುವಾಗಿ ತಲೆ ಕೊರೆಯುತ್ತಿದೆ. ಮನುಷ್ಯನ ಅಗತ್ಯತೆಗಳು ಅದೆಷ್ಟು ಬೆಳೆಯುತ್ತ ಹೋಗುತ್ತಿದೆಯಲ್ಲ ಎಂದು ಅಚ್ಚರಿಯಾಗುತ್ತಿದೆ. ಜೀವಿಸಲು ಅತ್ಯವಶ್ಯವಾದ ಗಾಳಿ, ನೀರು, ಬಟ್ಟೆ, ಆಹಾರ, ವಸತಿಗಳಿಂದ ಹೊರಟ ಯಾನ ಇದೀಗ ಎಲ್ಲಿ ಬಂದು ನಿಂತಿದೆ....! ಆಧುನಿಕತೆಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುವ ಹೆಸರಿನಲ್ಲಿ ಮನುಷ್ಯ ಬಹುವಾಗಿ ಬದಲಾಗಿದ್ದಾನೆ. ಅಗತ್ಯತೆಗಳು ಹೆಚ್ಚುತ್ತಿವೆ ಎನ್ನುವುದಕ್ಕಿಂತ ಲೋಭಿಯಾಗುತ್ತಿದ್ದಾನೆ ಎನ್ನಬಹುದೇನೋ..... 



ಹಳ್ಳಿಗಳಲ್ಲಿ ಮೂರ್ಖರ ಪೆಟ್ಟಿಗೆ ಎಂದೇ ಕರೆಯಲ್ಪಡುತ್ತಿದ್ದ ಟಿವಿಗೆ ನಾವೆಷ್ಟು ಒಗ್ಗಿಕೊಂಡುಬಿಟ್ಟಿದ್ದೇವೆಂದರೆ ಪ್ರಸಾರ ವಾಹಿನಿಗಳ ಭೂಪರು ಮಿಲಿಯನೇರ್ ಗಳಾಗುತ್ತಿರುವ ಮಟ್ಟಿಗೆ...! ಇಂದಿನ ದಿನಗಳಲ್ಲಿ ಟಿವಿ ಇಲ್ಲ ಮನೆಯಲ್ಲಿ ಎಂದರೆ 'ಅಬ್ಬಾ! ಟಿವಿ ಇಲ್ಲದೆ ಅದು ಹೇಗೆ ಬದುಕುತ್ತಾರೋ!' ಎಂದು ಕೇಳಿದ ಜನ ಬಾಯ್ಬಿಡುತ್ತಾರೆ. ಸುದ್ದಿಗಾಗಿ ಟಿವಿ ಬೇಕೆಂದೇನು ಇಲ್ಲ. ಪತ್ರಿಕೆಗಳನ್ನು ಓದಿ ಸುದ್ದಿ ತಿಳಿಯಬಹುದು ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಮೂರ್ಖರಂತೆ ತೋರಿಸಿದ್ದನ್ನೆಲ್ಲಾ ನೋಡುವ ನಮ್ಮಂಥವರಿಂದ ವಾಹಿನಿಯವರು ದುಡ್ಡು ಸಂಪಾದಿಸಬಹುದೇ ವಿನಃ ಬೇರೇನೂ ಉಪಯೋಗವಿಲ್ಲ. ಮೂರು - ನಾಲ್ಕು ವರ್ಷದ ಹಸುಳೆಗಳ ಮೇಲೆ ಎರಗಿದ ಕಾಮಾಂಧರ ಸುದ್ದಿಗಳನ್ನೇ ವಾರಗಟ್ಟಲೆ ಬಿತ್ತರಿಸುವ ಮಾಧ್ಯಮಗಳಿಂದ ವಿಕೃತ ಮನಸ್ಸಿನವರ ಕುತೂಹಲ ಕೆರಳಿ ಅಂತಹ ಪ್ರಸಂಗಗಳು ಜಾಸ್ತಿಯಾಗುತ್ತಿವೆ ಎಂಬುದು ನನ್ನ ಅಭಿಮತ.ಇಲ್ಲದಿದ್ದರೆ ಹಸುಳೆಗಳ ಮೇಲಿನ ಇಂತಹ ಹೇಯ ಕೃತ್ಯಗಳನ್ನು ಊಹಿಸಲು ಸಾಧ್ಯವೇ..?! ಇರುವ ಕೆಲಸವನ್ನೆಲ್ಲಾ ಬಿಟ್ಟು ತನ್ನ ಮುಂದೆ ಕೂರಿಸಿಕೊಳ್ಳುವ ಈ ಟಿವಿ ಅಗತ್ಯವಲ್ಲ ನಿಜ....! 

ಇಂದಿನ ದಿನಗಳಲ್ಲಿ ನಮ್ಮ ಕೆಲಸಗಳನ್ನು ತಗ್ಗಿಸಲು ಎಲ್ಲಾ ಕೆಲಸಗಳಿಗೂ ಮಶಿನ್ ಗಳು ಬಂದಿವೆ. ರುಬ್ಬುವ ಕಲ್ಲುಗಳು ಮೂಲೆ ಸೇರಿವೆ. ಅರೆದು ಮಾಡಿದ ಅಡುಗೆ ರುಚಿಯನ್ನು ಮಿಕ್ಸರ್ / ಗ್ರೈಂಡರ್ ಗಳು ಮುಚ್ಚಿ ಹಾಕಿವೆ. ಎಲ್ಲರ ಮನೆಯಲ್ಲೂ ಬಟ್ಟೆ ತೊಳೆಯಲು ಮಶಿನ್, ನೆಲ ಒರೆಸಲು ಕೋಲುಗಳು ಬಂದಿವೆ. ಪರಿಣಾಮ ನಾವು ಮೈ ಬೆಳೆಸುತ್ತಿದ್ದೇವೆ....! ಮನೆಯಲ್ಲೇ ಮೈ ಬಗ್ಗಿಸಿ ನೆಲ ಒರೆಸಿ, ಬಟ್ಟೆ ತೊಳೆಯುವುದೇ ಮುಂತಾದ ಕೆಲಸಗಳಿಂದ ತಾನೇ ತಾನಾಗಿ ಕರಗುತ್ತಿದ್ದ ಕೊಬ್ಬನ್ನು ಕರಗಿಸಲು ಮೇಲಿಂದ ದುಡ್ಡು ಕೊಟ್ಟು ಜಿಮ್ ಸೇರುವ ಕಾಲ ಬಂದಿದೆ. 

'ಪ್ರತಿ ಮನೆಯಲ್ಲೂ ಎಷ್ಟು ಜನರಿದ್ದಾರೋ ಎಲ್ಲರಿಗೂ ಒಂದೊಂದು ಬೈಕ್ ಇರಲೇಬೇಕು. ಜೊತೆಗೆ ಸಂಬಂಧಿಕರೆಲ್ಲರೂ ಕಾರ್ ತೆಗೆದುಕೊಂಡು ಓಡಾಡುವಾಗ  ನಮ್ಮ ಬಳಿ ಇಲ್ಲದಿದ್ದರೆ ಏನು ಚಂದ...  ಅವರೆದುರು ಕೀಳಾಗುವುದಿಲ್ಲವೇ..?!' - ಇಂತಹ ಮನಸ್ಥಿತಿಗಳ ಜೊತೆ ಜೊತೆಗೆ ಟ್ರಾಫಿಕ್ ಕೂಡ ಬೆಳೆಯತೊಡಗಿತು. ಯಾವುದೇ  ವಸ್ತುವನ್ನು ಕೊಳ್ಳುವಾಗ  ಅವಶ್ಯಕವೇ ಎಂದು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲವಾಗಿದೆ. ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚುತ್ತಿದೆ. ಬೇರೊಬ್ಬರ ಮಾತಿಗೆ ತಲೆಕೆಡಿಸಿಕೊಳ್ಳದೆ ನಾವೇ ವಿವೇಚಿಸಿ ನೋಡಿದರೆ ನಮ್ಮ ಅಗತ್ಯತೆಗಳು ನಮಗೆ ತಿಳಿಯುತ್ತವೆ. 

ನಾನು ಈ ವಿಚಾರದ ಕುರಿತು ಚಿಂತಿಸುತ್ತಿರಲು ಕಾರಣವಿದೆ. ಊರಿನಲ್ಲಿ ನಮ್ಮ ಮನೆಗೆ ಒಬ್ಬರು ಪುರೋಹಿತರು ಬರುತ್ತಾರೆ. ಒಳ್ಳೆಯ ಜ್ಞಾನವಂತರು, ಸಂಸ್ಕಾರವಂತರು ಜೊತೆಗೆ ಅಪ್ಪನಿಗೆ ಆತ್ಮೀಯರು, ಹಿತೈಷಿಗಳು. ನನ್ನನ್ನೂ ಸೇರಿ ನನ್ನ ಸೋದರತ್ತೆಯರ ಗುಂಪು ಸೇರಿದರೆ ಹರಟೆ, ಹಾಸ್ಯ, ನಗು ಮುಗಿಯುವುದೇ ಇಲ್ಲ. ಇದೆ ನಮ್ಮ ಹಾಸ್ಯ ನೋಡಿದ ಆ ಪುರೋಹಿತರು ನೀವೆಲ್ಲರೂ ಕೂಡಿ ನಮ್ಮ ಮನೆಗೆ ಒಮ್ಮೆ ಬನ್ನಿ, ಒಳ್ಳೆಯ ಮಾತು-ಕಥೆ ಆಡಿ ಸಮಯ ಕಳೆದು ಬರಬಹುದು ಎಂದು ಆತ್ಮೀಯವಾಗಿ ಆಮಂತ್ರಿಸಿದರು. 'ನಾವು ಬಂದೇ ಬಿಡುತ್ತೇವೆ, ಆಮೇಲೆ ನಿಮಗೇ ತಲೆಕೆಟ್ಟು ನಮ್ಮನ್ನು ಆದಷ್ಟು ಬೇಗ ಸಾಗಹಾಕುತ್ತೀರ' ಎಂದಾಗ... ಅವರು 'ಹಾಗೇನಿಲ್ಲ ಚೆನ್ನಾಗಿರುತ್ತದೆ ಬನ್ನಿ, ಆದರೆ ನಿಮಗೇ ಬೇಜಾರಾಗಿ ಬೇಗ ಹೊರಡಬಹುದು.... ಏಕೆಂದರೆ ನಮ್ಮ ಮನೆಯಲ್ಲಿ ಒಂದೂ ಕುರ್ಚಿಯಿಲ್ಲ.. ಭಾರತೀಯ ಆಸನ ಮಾತ್ರ.... ಟಿವಿ ಕೂಡ ಇಲ್ಲ, ನಮಗೆ  ಅಗತ್ಯವಿಲ್ಲ ಎನಿಸುವ ಯಾವುದೇ ವಸ್ತುಗಳು ನಮ್ಮಲ್ಲಿಲ್ಲ' ಎಂದು ನಕ್ಕರು... ಅಗತ್ಯವೇ ಇಲ್ಲದ ವಸ್ತುಗಳಿಂದ ಏನು ಪ್ರಯೋಜನ ಎಂಬುದು ಅವರ ವಾದ. ಅವರ ವೈಚಾರಿಕತೆ ನನಗೆ ಇಷ್ಟವಾಯ್ತು. ಅವರ ಜೊತೆ ಮಡದಿ ಮತ್ತು ಮಕ್ಕಳೂ ಕೂಡ ಅವರ ವಿಚಾರಧಾರೆಗಳಿಗೆ ತಕ್ಕಂತೆಯೇ ಇರುವ ಪರಿ ಆಶ್ಚರ್ಯವನ್ನೂ ಮೂಡಿಸಿತು. ಯಾವುದೇ ಸಭೆ - ಸಮಾರಂಭಾಕ್ಕಾದರೂ ಆಡಂಬರವಿಲ್ಲದೆ ಸರಳ ಉಡುಗೆಯಲ್ಲೇ ಹೋಗುವ ಹೆಣ್ಣು ಅವರ ಮಡದಿ. ಮಕ್ಕಳು ಮನೆಯಲ್ಲೇ ಗುರುಕುಲ ಅಭ್ಯಾಸ ಮಾಡುತ್ತಿದ್ದಾರಂತೆ. ಶಾಲೆಗೆ ಹೋಗುವುದು ಜ್ಞಾನಾರ್ಜನೆಗೆ ಅಂದ ಮೇಲೆ ಮನೆಯಲ್ಲೇ ಕಲಿತರೇನು ಎಂಬುದು ಅವರ ಭಾವನೆ. ಶಾಲೆಯ ಪಠ್ಯಗಳ ಜೊತೆ ಭಾರತ, ರಾಮಾಯಣ, ಭಗವದ್ಗೀತೆಗಳೂ ಅವರಿಗೆ  ನಿರರ್ಗಳ. ಈಗಿನ ಕಾಲದಲ್ಲಿ ಇಂಥಹ ವ್ಯಕ್ತಿತ್ವದವರು ಇದ್ದಾರಲ್ಲ ಎಂಬ ವಿಷಯ ನನಗೆ ಬಹುವಾಗಿ ಕಾಡಿತು.

ಈ ಕೊಳ್ಳುಬಾಕತೆಯನ್ನು ನಾವು ಅಳವಡಿಸಿಕೊಂಡಿದ್ದಲ್ಲದೆ ನಮ್ಮ ಮಕ್ಕಳಿಗೂ ಕಲಿಸುತ್ತಿದ್ದೇವೆ. ಚಿಕ್ಕವರಿರುವಾಗಲೇ ಅವರಿಗೆ ಕೇಳಿದ್ದೆಲ್ಲ ಕೊಡಿಸುವ ಬದಲು ಅಗತ್ಯ - ಅನಗತ್ಯಗಳ ತಿಳುವಳಿಕೆ ಕೊಡುವುದು ಸೂಕ್ತವಲ್ಲವೇ?? 

ಕಾವ್ಯಾ :) 

Sunday, December 29, 2013

ಮನಸು ಕೊಡೇ ಓ ಹುಡುಗೀ...

    ಜತನದಿಂದ ನೋಡಿಕೊಳ್ಳುವೆ ನಿನ್ನನ್ನ, ನಿನ್ನ ಮನಸನ್ನ ನಾ ಸಾಯುವವರೆಗೂ.... ಅದೇಕೆ ನಾ ಅಷ್ಟು ಕಾಡಿದರೂ ನೀ ತಿರುಗಿ ನೋಡುತ್ತಿಲ್ಲ...? ಇಂದಿಗೆ ನೀ ನನ್ನ ಮನಸೂರೆಗೊಂಡು ಎರಡು ವರ್ಷಗಳು ಕಣೇ...  ನನ್ನ ಮೇಲೆ ಇನ್ನೂ ಕರುಣೆ ಬಂದಿಲ್ಲ ಅಲ್ವಾ ನಿಂಗೆ...?? ನನ್ನ ಮನಸಿನ ಮಾತು ನಿನಗೆ ಕೇಳುತ್ತಲೇ ಇಲ್ಲವಲ್ಲೇ.... ಅದೆಷ್ಟು ಬಾರಿ ನಿನ್ನ ಬಳಿ ಮನ ತೆರೆಯಬೇಕೆಂದುಕೊಂಡೆ ಗೊತ್ತಾ..? ನಿನ್ನೆದುರಲ್ಲಿ ನಿಂತು ಹೇಳಲಾಗದೇ ಹೋದ ನನ್ನೀ ಭಾವನೆಗಳನ್ನು ಓದಿ ಬಯ್ಯಬೇಡ. ನಿನಗೆ ವರಾನ್ವೇಷಣೆ ನಡೆಯುತ್ತಿರುವ ಸುದ್ದಿ ಕೇಳಿ ತಲ್ಲಣಗೊಂಡು ನನ್ನ ಭಾವನೆಗಳನ್ನು ಬಿಚ್ಚಿಡುತ್ತಿದ್ದೇನೆ. ಒಂದು ಕ್ಷಣವಾದರೂ ನೀ ನನ್ನ ಕಣ್ಣುಗಳನ್ನು ನೋಡಿದ್ದರೆ ನಿನಗೇ ನನ್ನಾಳದ ಭಾವನೆಗಳು ತಿಳಿದುಬಿಡುತ್ತಿತ್ತು. ಒಮ್ಮೆ ನಿನ್ನ ಪುಟ್ಟ ಕಂಗಳನ್ನೆತ್ತಿ ನನ್ನ ಕಣ್ಗಳಲ್ಲಿಡು...


    ಯಾವಾಗಲೂ ತಲೆ ಕೆಳಗೆ ಹಾಕಿ ನಿನ್ನಷ್ಟಕ್ಕೆ ನೀನಿದ್ದುಬಿಡುವ, ಗೆಳತಿಯರಿಲ್ಲದೇ ಒಂಟಿಯಾಗಿ ಓಡಾಡಲೇ ತಿಳಿಯದ ನಿನಗೆ ನಾನು ಹೇಗೆ ತಾನೆ ಕಣ್ಣಿಗೆ ಬೀಳಬಲ್ಲೆ ಹೇಳು ?! ನಿನ್ನ ಗೆಳತಿಯರೊಡನೆ ಹರಟುತ್ತಾ ನೀನು ನಗುವಾಗಲೆಲ್ಲಾ ನಾ ನಿನ್ನ ನೋಡುತ್ತೇನೆ. ನಿನ್ನ ಸುಂದರ ದಂತ ಪಂಕ್ತಿಗಳಲ್ಲಿ, ತುಟಿಯಂಚಿನ ಇಳಿಜಾರಿನಲ್ಲಿ ಇಳಿದು ಬಿಡುತ್ತೇನೆ. ಮಳೆಗಾಲದಲ್ಲಿ ನೀ ದಿನವೂ ಮುಡಿವ ಆ ಸೂಜಿ ಮಲ್ಲಿಗೆ ಹೂವಿನ ಘಮ, ಚಳಿಗಾಲದಲ್ಲಿ ನಿನ್ನ ಉದ್ದನೆಯ ಜಡೆಯನ್ನಲಂಕರಿಸುವ ಮಾಗಿ ಮಲ್ಲಿಗೆಯ ಕೆಂಪು-ಬಿಳುಪಿನ ಮಾಲೆ, ಬೇಸಿಗೆಯ ಬೆಳ್ಳಗಿನ ದುಂಡು ಮಲ್ಲಿಗೆ ದಂಡೆ.... ಅಬ್ಬಾ! ಮಲ್ಲಿಗೆಯೊಡನೆ ಪ್ರತಿ ದಿನ ನನ್ನ ನೀ ಹಾದು ಹೋದಾಗಲೆಲ್ಲ ನನ್ನ ನಾ ಮರೆತು ನೀನೇ ನಾನಾಗುತ್ತೇನೆ. ಆ ಹೂಮಾಲೆ ನಿನ್ನ ತಲೆಯನ್ನಲಂಕರಿಸಿದರೆ ನೀನು ನನ್ನ ಹೃದಯವನ್ನಲಂಕರಿಸುತ್ತೀಯ. ಹೂವಿನಂದ ನಿನ್ನ ಮೊಗದ ಲಕ್ಷಣಕ್ಕೆ ಮೆರಗು ನೀಡಿದರೆ, ಅದರ ಘಮ ಮತ್ತು ನಿನ್ನ ಆ ನಗು ನನ್ನ ತನು-ಮನವನ್ನು ಮುದಗೊಳಿಸಿ ನವೋಲ್ಲಾಸ ತುಂಬುತ್ತವೆ. ಒಂದು ದಿನ ನಿನ್ನ ಕಾಣದಿದ್ದರೆ ನಾನು ನಾನಾಗಿರುವುದಿಲ್ಲ ಗೊತ್ತೇನೇ... ದಿನ ಪೂರ್ತಿ ನನ್ನಲ್ಲಿ ಸ್ಮಶಾನ ಮೌನ.....ಎಂದೋ ಒಮ್ಮೊಮ್ಮೆ ನಿನ್ನ ಮಲ್ಲಿಗೆಯಿಲ್ಲದ ಜಡೆಯನ್ನು ಸಹ..!  

    ನಾ ಬರೀ ನಿನ್ನ ಚೆಂದಕ್ಕೆ ಮರುಳಾಗಿಲ್ಲ ಕಣೇ ಹುಡುಗೀ. ನಿನ್ನ ಶಾಂತ ಸ್ವಭಾವ, ಸಿಟ್ಟನ್ನು ಹತ್ತಿರವೂ ಸೇರಿಸದ ಸ್ನಿಗ್ಧ ಮಂದಹಾಸ, ಎಲ್ಲರೊಡನೆ ಹೊಂದಿಕೊಂಡು ಬೆರೆಯುವ ರೀತಿ, ಯಾರು ಏನೇ ಹೇಳಿದರೂ ನಿನ್ನ ತಣ್ಣನೆಯ ಸ್ವರದ, ನಯವಾದ ಪ್ರತಿಕ್ರಿಯೆ, ಎಲ್ಲವನ್ನೂ ನಾನು ಗಮನಿಸಿದ್ದೇನೆ. ನನಗೊಂದೇ ಅಲ್ಲ ನನ್ನ ಮನೆಯವರೊಡನೆ ಕೂಡ ನೀನು ಹೊಂದಿಕೊಳ್ಳಬಲ್ಲೆ ಎಂದು ಮನಗಂಡಿದ್ದೇನೆ. ನೀ ನನಗೆ ಸಾಗರದಷ್ಟು ಪ್ರೀತಿ ಕೊಡಬಲ್ಲೆ, ಅಮ್ಮನಂಥ ಮಡಿಲು ಕೊಡಬಲ್ಲೆ, ಕಷ್ಟದಲ್ಲಿ ಅಪ್ಪನಂತೆ ಹೆಗಲು ಕೊಡಬಲ್ಲೆ, ಪ್ರೀತಿಯ ಕೈ ತುತ್ತಿನಿಂದ ನನ್ನ ಹೊಟ್ಟೆ ತುಂಬಿಸಬಲ್ಲೆ...... ನನ್ನಮ್ಮನೊಡನೆ ಮಗಳಾಗಿ ಹೊಂದಿಕೊಳ್ಳಬಲ್ಲೆ, ನನ್ನಪ್ಪನನ್ನು ಗುರುವಿನಂತೆ  ಗೌರವಿಸಬಲ್ಲೆ, ನನಗೆ ಸದಾ ಪ್ರೀತಿ-ನೆಮ್ಮದಿಯ ಸೋನೆ ಸುರಿಸುವ ಸತಿಯಾಗಬಲ್ಲೆ, ನಮ್ಮ ಮನೆಯನ್ನು ಶಾಂತಿ-ಸಹನೆಯಿಂದ ನಡೆಸಬಲ್ಲೆ... ಇಷ್ಟೆಲ್ಲಾ ನಂಬಿಕೆ ನನಗಿದೆ ಕಣೇ...!! ಇನ್ನೇನು ಬೇಕು  ಹುಡುಗನಾಗಿ ನಾ ನಿನ್ನ ಮೆಚ್ಚಲು ?!

    ನಿನಗೆ ನಾನೂ ಸಹ ಒಳ್ಳೆಯ ಸಖನಾಗುತ್ತೇನೆ. ನನ್ನ ರೆಪ್ಪೆಯಲ್ಲಿಟ್ಟು ನಿನ್ನ ಕಾಪಾಡುತ್ತೇನೆ. ನಿನ್ನ ಪ್ರತೀ ಹೆಜ್ಜೆಗೂ ಹೆಜ್ಜೆಗೂಡಿಸುತ್ತೇನೆ. ನಿನ್ನ ಸುತ್ತಲೂ ಪ್ರೀತಿಯ ದಿಗ್ಬಂಧನ ಮಾಡಿ ಜೋಪಾನ ಮಾಡುತ್ತೇನೆ. ಮಗುವಿನಂತೆ ಮುದ್ದಿಸುತ್ತೇನೆ. ಎಂದಿಗೂ ಬತ್ತದ ಪ್ರೀತಿಯ ಕಡಲಾಗುತ್ತೇನೆ. ಅಷ್ಟೇ ಏಕೆ ಪ್ರತೀ ದಿನ ಮಲ್ಲಿಗೆಯ ಮಾಲೆಯನ್ನು ಮಾಡಿ ನಾನೇ ನಿನ್ನ ಉದ್ದದ ಜಡೆಗೆ ಮುಡಿಸಿ, ನೆಟಿಗೆ ಮುರಿದು ದೃಷ್ಟಿ ತೆಗೆಯುತ್ತೇನೆ. ಇದೆಲ್ಲ ಬರೀ ಪೊಳ್ಳು ಆಶ್ವಾಸನೆಯಲ್ಲ ಹುಡುಗೀ... ಪ್ರಾಯದ ಹಸಿ - ಬಿಸಿ ಪ್ರೇಮವಲ್ಲ ನನ್ನದು... ಪ್ರೌಢ ವಯಸ್ಸಿನ ಪಕ್ವವಾದ ಪ್ರೀತಿಯಿದು. 


    ನಿನಗಾಗಿ ನನ್ನ ಮನೆಯಲ್ಲಿ ಎಲ್ಲಾ ಜಾತಿಯ ಮಲ್ಲಿಗೆ ಗಿಡ ನೆಟ್ಟಿದ್ದೇನೆ. ಸೂಜಿ ಮಲ್ಲಿಗೆ, ಮಾಗಿ ಮಲ್ಲಿಗೆ, ದುಂಡು ಮಲ್ಲಿಗೆ, ಮೈಸೂರು ಮಲ್ಲಿಗೆ,ಮಂಗಳೂರು ಮಲ್ಲಿಗೆ, ಭಟ್ಕಳ ಮಲ್ಲಿಗೆ, ಚಮೇಲಿ, ಅತ್ತರ ಮಲ್ಲಿಗೆ, ಕಸ್ತೂರಿ ಮಲ್ಲಿಗೆ.... ಯಾವುದೂ ಹೂವಾಗದಾದಾಗ ಬೇಕೆಂದು ಕಾಕಡ ಕೂಡ ನೆಟ್ಟಿದ್ದೇನೆ. ಅವೆಲ್ಲಾ ಬಳ್ಳಿಯಾಗಿ ಹಬ್ಬಿ ಹೂ ಬಿಡುವುದರೊಳಗೆ ನಮ್ಮ ಮನೆಯ ಸೇರೊದ್ದು, ನನ್ನ ಮನದ ಕದ ದಬ್ಬಿ ಒಳಗೆ ಬಂದುಬಿಡು ಗೆಳತೀ. ನಿನಗಾಗಿ ಮಲ್ಲೆಗೆಯ ಮಾಲೆ ಕಟ್ಟಿ ನಿನ್ನ ಜಡೆಯನ್ನಲಂಕರಿಸಲು ಕಾತರಿಸಿ ಕಾದಿರುತ್ತೇನೆ. ಒಲ್ಲೆನೆನ್ನದೇ ಬಂದು ಬಿಡೇ ಹುಡುಗೀ .... ನನ್ನ ಪ್ರೀತಿಯ ಕೊಳಕ್ಕೆ ಕಲ್ಲೆಸೆದು ಹೋಗದಿರು... ಇಬ್ಬರ ಪ್ರೀತಿಯ ಕೊಳದಲ್ಲಿ ಜೋಡು ಮಲ್ಲಿಗೆ ತೇಲಿಬಿಡುವ ಬಂದು ಬಿಡೇ ಗೆಳತೀ.... 

Monday, August 5, 2013

ನೀ ಹಾಡಿ ಎನ್ನ ಲಾಲಿಸಿದಾ ಕ್ಷಣ .... 
ನಿನ್ನ ತೋಳಲ್ಲಿ ಜಾರಿದಾ ಮನ .... 
          
           ತನ್ಮಯತೆಯಿತ್ತು ನಿನ್ನ ಸ್ವರದಲ್ಲಿ...... 
           ಪ್ರೀತಿಯುಕ್ಕಿತ್ತು ನನ್ನ ನಯನದಲ್ಲಿ ...... 

ನಿನ್ನಾಳದ ಪ್ರೀತಿ ಮಾಡಿತೆನಗೆ ಮೋಡಿ ..... 
ಅನುನಯಿಸಿದೆ ನೀ ಎನ್ನ ಹಾಡಿ, ಹಾಡಿ ...... 

            ನನ್ನ ನೀ ಬಿಟ್ಟಿರಲಾರೆಯೆಂದು ನಾ ಬಲ್ಲೆ .... 
            ಆದರೆ ಮನ ಬಿಚ್ಚಿ ಹೇಳಲು ನೀ ಒಲ್ಲೆ ..... 

ಈ ಅಕ್ಷರಗಳಿಗೆಂದೂ ನೀನೆ ಸ್ಪೂರ್ತಿ.... 
ಜೀವದ ಪ್ರೀತಿ ಕೊಡುವೆ ನಾ ಮನಸ್ಪೂರ್ತಿ.... 

             ಮುದ್ದಿಸು ಬಾ ನನ್ನ ತೋಳಲ್ಲಿ ತಬ್ಬಿ.... 
             ಓ ನನ್ನ ಮುದ್ದು ಗುಬ್ಬಿ ........... 

ಚಿತ್ರ: ಅಂತರ್ಜಾಲ 

ಕಾವ್ಯಾ :) 

Friday, April 12, 2013

       ಅವಳಿಗಾಗ 21 ವರ್ಷ. ಅದೆಷ್ಟೋ ಹುಡುಗರು ಅವಳನ್ನು ಕದ್ದು ನೋಡುವುದು ಅವಳಿಗೆ ತಿಳಿದೇ ಇತ್ತು... ಅಷ್ಟೇ ಏಕೆ 2-3 ಪ್ರಪೋಸಲ್ ಗಳು ಬಂದು ಅವುಗಳನ್ನು ತಿರಸ್ಕರಿಸಿಯೂ ಆಗಿತ್ತು. ಅವಳೇನು ಅಷ್ಟೊಂದು ಸುಂದರಿಯಲ್ಲ... ಆದರೂ ಹುಡುಗರೇಕೆ ಅವಳ ಹಿಂದೆ ಬೀಳುತ್ತಿದ್ದರೆಂಬುದು ಅವಳಿಗೂ ತಿಳಿಯದ ವಿಷಯ. ಪ್ರೀತಿ ಪ್ರೇಮವೆಂದರೆ ಮಾರು ದೂರವಿದ್ದವಳು ಅವಳು. ಅದೊಂದು ಕೆಟ್ಟ ದಿನ ಒಬ್ಬ ನಿನ್ನನ್ನು ತುಂಬಾ ಪ್ರೀತಿಸುತ್ತೇನೆಂದ. ಮೊದಲು ತಮಾಷೆ ಮಾಡುತ್ತಿದ್ದನೆಂದುಕೊಂಡಳು. ಆಮೇಲೆ ನಿಜವೆಂದು ಗೊತ್ತಾದ ಮೇಲೆ ಎಲ್ಲರಿಗೂ ತಿಳಿ ಹೇಳಿ ನಯವಾಗಿ ತಿರಸ್ಕರಿಸಿದಂತೆ ಅವನಿಗೂ ಹೇಳಿ ಬೇಡವೆಂದಳು. ಅವನು ಆದರೂ ತುಂಬಾ ಪ್ರೀತಿ ನಿವೇದಿಸಿಕೊಂಡ. ಎರಡು ದಿನ ಸುಮ್ಮನಿದ್ದವಳಿಗೆ ಅವನ ನಯ-ವಿನಯ ನಿಧಾನವಾಗಿ ಇಷ್ಟವಾಗತೊಡಗಿತು.... ಒಪ್ಪಿಕೊಂಡೇಬಿಟ್ಟಳು..... ಮನೆಯಲ್ಲಿ ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಗೊಂದಲದ ನಡುವೆಯೇ ಪ್ರೀತಿ ಮೊಳೆತು, ಬೆಳೆಯಿತು. ಇಬ್ಬರೂ ಬೇರೆ ಬೇರೆ ಊರಿನಲ್ಲಿದ್ದರು. ಅದೊಂದು ದಿನ ಅವನು ಅವಳಿದ್ದ ಊರಿಗೆ ಬಂದು ನಾವಿಬ್ಬರೂ ದೂರಾಗೋಣ ಎಂದುಬಿಟ್ಟ. ಇವಳು ತಬ್ಬಿಬ್ಬಾದಳು. ಏಕೆ, ಏನು ಎಂದು ಕೇಳಿದರೆ ಸರಿಯಾದ ಉತ್ತರ ಕೊಡಲಿಲ್ಲ. ಒಮ್ಮೊಮ್ಮೆ ಕೇಳಿದಾಗ ಒಂದೊಂದು ಹಾರಿಕೆಯ ಉತ್ತರ ಕೊಟ್ಟ. ಅವನಾಗೇ ಅವಳ ಜೀವನದಲ್ಲಿ ಬಂದು, ಅವನಾಗೇ ಅವಳ ಕಡೆ ಬೆನ್ನು ಹಾಕಿ ಹೊರಟುಬಿಟ್ಟ..... ಜೀವನದಲ್ಲಿ ಮಾಡಿದ ದೊಡ್ಡ ತಪ್ಪಿನ ಬಗ್ಗೆ ಪಶ್ಚಾತ್ತಾಪ ಪಡಬೇಕೋ, ಮನಸ್ಸಿನಲ್ಲಿನ ಪ್ರೀತಿಯನ್ನು ತೆಗೆದೊಗೆಯಬೇಕೋ ಎಂಬ ಗೊಂದಲ.... ಅವನನ್ನು ಮರೆಯಲು ಅವಳು ತೀರಾ ಕಷ್ಟ ಪಟ್ಟಳು... ಒಳ್ಳೆಯ ಹುಡುಗ ಅದೇಕೆ ಹೀಗೆ ಮಾಡಿದನೋ ಎಂಬುದು ಅವಳಿಗೆ ತಿಳಿಯಲೇ ಇಲ್ಲ... 
       ಅಂತಹ ದುರ್ಬಲ ಮನಸ್ಸಿನಲ್ಲಿರುವಾಗಲೇ ಇನ್ನೊಬ್ಬನ ಆಗಮನ .....! ಪ್ರೀತಿಸುತ್ತೇನೆಂದ... ಇವಳು ಬೇಡವೆಂದಳು... ಅವನು ಬಿಡಲಿಲ್ಲ.. ನಾನೀಗ ಅದನ್ನೆಲ್ಲ ವಿಚಾರ ಮಾಡುವುದಾಗಲೀ, ನಿರ್ಧಾರ ತೆಗೆದುಕೊಳ್ಳುವುದಾಗಲೀ ಮಾಡುವ ಪರಿಸ್ಥಿತಿಯಲ್ಲಿಲ್ಲ ದಯವಿಟ್ಟೂ ಬಿಟ್ಟು ಬಿಡೆಂದಳು. ಅವನು ಬಿಡಲಿಲ್ಲ .... ತನ್ನ ಟೈಮ್ ಚೆನ್ನಾಗಿಲ್ಲ ನನಗೆ ಪ್ರೀತಿ ಪ್ರೇಮದಲ್ಲಿ ಆಸಕ್ತಿಯಿಲ್ಲ ಬಿಡು ಎಂದಳು... 'ಏನೆಂದರು ಮಗ ಹರಿಯೆಂಬುದ ಬಿಡ' ಎಂಬಂತಾದ ಅವ .... ಕೊನೆಗೊಂದು ಅತೀ ಕೆಟ್ಟ ಘಳಿಗೆಯಲ್ಲಿ 'ನೋಡೋಣ ಮನೆಯಲ್ಲಿ ವಿಷಯ ತಿಳಿಸುತ್ತೇನೆ, ಒಪ್ಪಿದರೆ ವಿಚಾರ ಮಾಡುತ್ತೇನೆ'ಎಂದಳು. ಅವಳ ಅಷ್ಟು ಮಾತ್ರ ಉತ್ತರಕ್ಕೆಂದೇ ಕಾಯುತ್ತಿದ್ದಂತೆ ಅವನು ಪ್ರೀತಿ ಪ್ರೇಮವೆಂದು ಅವನು ತುಂಬಾ ಮಾತಾಡತೊಡಗಿದ. ಅವಳಿಗೆ ಒಳಗೊಳಗೇ ಕಸಿವಿಸಿಯಾಗತೊಡಗಿತು.. ಇದೆಲ್ಲದಕ್ಕೂ ಮುಂದೆ ಸಮಯವಿದೆ ದಯವಿಟ್ಟೂ ಸುಮ್ಮನಿದ್ದುಬಿಡು, ಹೀಗೆಲ್ಲ ಮಾತನಾಡಬೇಡ, ಕೆಲವು ದಿನಗಳಲ್ಲಿ ಅಪ್ಪನೊಡನೆ ಮಾತನಾಡುವೆ ಎಂದಳು'... ಅದೆಷ್ಟೇ ಹೇಳಿದರೂ ಅವನು ಸುಮ್ಮನಾಗಲಿಲ್ಲ... ಇವಳಿಗೆ ಮಾತ್ರ ಮನಸ್ಸೇಕೋ ಅವನನ್ನು ಒಪ್ಪುತ್ತಲೇ ಇರಲಿಲ್ಲ. ಉಡಲೂ ಆರದ, ತೊಡಲೂ ಆರದ ಕಷ್ಟದಲ್ಲಿದ್ದಳು. ಕೊನೆಗೂ ಮನೆಯವರೊಡನೆ ಮಾತಾಡಿ ಅವರು ಈ ಮದುವೆಗೆ ಸುತಾರಾಂ ಒಪ್ಪುವುದಿಲ್ಲವೆಂದಾಗ, ಅವಳಿಗಿದ್ದ ಅರ್ಧ ಮನಸ್ಸೂ ಸಹ ಅವನೆಡೆಗೆ ಬೆನ್ನು ಹಾಕಿತು. ಆದರೂ ಅವನನ್ನು ಸಂತೈಸಲು ಯತ್ನಿಸಿದ್ದಳು. ಏನೇ ಮಾಡಿದರೂ ಅವಳ ಜೀವನದ ಅತೀ ಕೆಟ್ಟ ದಿನಗಳು ಆಗಲೇ ಶುರುವಾಗಿದ್ದವು ಅವಳಿಗೆ...! 
       ಅವಳಿಗೆ ತನ್ನ ಮದುವೆಯಲ್ಲಿ ಮನೆಯವರೆಲ್ಲಾ ನಗು-ನಗುತ್ತಾ ಸಂಭ್ರಮದಲ್ಲಿ ಓಡಾಡಬೇಕು, ತಾನದನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಬುದ್ದಿ ಬಂದಾಗಿನಿಂದ ಬೆಳೆಯುತ್ತಾ ಬಂದ ಮಹಾದಾಸೆಯಗಿತ್ತು. ಮನೆಗೊಬ್ಬಳೇ ಮಗಳು... ಎಲ್ಲರಿಗೂ ಅವಳನ್ನು ಕಂಡರೆ ತುಂಬಾ ಅಕ್ಕರೆ, ಪ್ರೀತಿ... ಅದೆಷ್ಟು ಕಾಡಿ ಬೇಡಿದರೂ , ಬೈದರೂ ಅವನು ತೊಂದರೆ ಕೊಡುವುದನ್ನು ಬಿಡಲಿಲ್ಲ. ಕೇವಲ 1 - 2 ಸಲ ಸಿಕ್ಕಿ ಕೆಲವೇ ನಿಮಿಷಗಳ ಕಾಲ ಸುಮ್ಮನೆ ಮಾತಾಡಿದ್ದನ್ನು ಅವನು ತನ್ನ ಗೆಳೆಯರೊಡಗೂಡಿ ಏನೇನೋ ಕಾಲು ಬಾಲ ಸೇರಿಸಿ ಕಂಡವರಿಗೆಲ್ಲಾ ಹೇಳತೊಡಗಿದ. ಇವಳು ತೀರ ಮಾನಸಿಕ ವೇದನೆ ಅನುಭವಿಸಬೇಕಾಯಿತು. ತಪ್ಪಲ್ಲದ ತಪ್ಪಿಗೆ ಬಹು ದೊಡ್ಡ ಮೊತ್ತದ ನೋವನ್ನು ಅನುಭವಿಸಬೇಕಾಯ್ತು. ಏನೂ ನಡೆಯದೆಯೇ ಜನರಿಂದ ಕಪ್ಪು ಚುಕ್ಕಿ ಪಡೆಯಬೇಕಾಯ್ತು. ಪಾಪ... ದಿನಂಪ್ರತಿ ಅಳುವುದನ್ನು ಬಿಟ್ಟರೆ, ನನ್ನೊಡನೆ 'ನೀನು ಮಾತ್ರ ಈ ತಪ್ಪು ಮಾಡಬೇಡ, ಅದ್ಯಾರೆ ಬಂದು ಪ್ರೀತಿಸುತ್ತೇನೆಂದರೂ ಒಪ್ಪಿಕೊಳ್ಳಬೇಡ ... ಅನುಕಂಪ ಪಡಬೇಡ.. ಈ ಹಾಳು ಅನುಕಂಪದಿಂದಲೇ ನಾನು ಹೀಗಾಗಿದ್ದು... ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸು ಅವರ ಪ್ರೀತಿಯನ್ನ...' ಎನ್ನುತ್ತಿದ್ದಳು. ಅವಳ ರೋಧನೆಯನ್ನು ನನ್ನಿಂದ ನೋಡಲಾಗದೆ ಅದೆಷ್ಟು ಸಂತೈಸಿದ್ದೇನೋ.... ನೆನಪಾದಾಗಲೆಲ್ಲ ನನ್ನ ಮಡಿಲಲ್ಲಿ ಮಲಗಿ ರೋಧಿಸುತ್ತಿದ್ದಳು... ಅವಳು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಆ ಹುಡುಗನಿಂದ ಬ್ಲಾಕ್ ಮೇಲ್ ಕರೆಗಳು....!ಯಾವುದಕ್ಕೂ ತುಟಿ-ಪಿಟಿಕ್ಕೆನದೇ ಹಲ್ಲು ಕಚ್ಚಿಕೊಂಡಳು...'ಅಬ್ಬಾ ಇವಳ ಹಣೆಬರವೇ' ಎನ್ನುತ್ತಾ ಅವಳನ್ನು ತಬ್ಬಿ ಸಂತೈಸುತ್ತಿದ್ದೆ. ಬರ ಬರುತ್ತಾ ಅವಳು ತೀರ ಕೃಶವಾಗುತ್ತಿದ್ದಳು. ನೋಡಿದವರೆಲ್ಲ ಯಾಕೆ ಹೀಗಾಗಿದ್ದೀಯ ಎಂದು ಕೇಳುವವರೇ.... 'ಇವಳ ಬಾಳ  ದೀಪ ಎಲ್ಲಿದೆಯಪ್ಪ'ಎಂದು ದೇವರಲ್ಲಿ ಕೇಳುತ್ತಿದ್ದೆ....ಅವನಿಗೆ ಇವಳ ಕೆಲವು ವೈಯಕ್ತಿಕ ವಿಷಯಗಳನ್ನು ಇವಳ ತೀರ ಹತ್ತಿರದವರಾರೋ ಹೇಳುತ್ತಿದ್ದರಂತೆ. ಅದನ್ನು ಅವನೇ ಹೇಳಿದ್ದನಂತೆ. ಅದು ಯಾರೆಂದು ನಮಗೆ ಕೊನೆಗೂ ತಿಳಿಯಲೇ ಇಲ್ಲ. ಆದರೆ ಅವರು ಮಾತ್ರ ಚೆನ್ನಾಗಿರಲಾರು. ಇವಳು ಕಂಡ ನೋವು, ಇವಳ ಆ ಕ್ಷಣದ ಬಿಸಿಯುಸಿರು ಅವರನ್ನು ಮಾತ್ರ ಚೆನ್ನಾಗಿರಲು ಬಿಡಲಾರದು...! 
       ಅಂತೂ ಇಂತೂ ದೇವರು ಕಣ್ಣು ತೆರೆದ ಎನಿಸುತ್ತದೆ. ಕ್ರಮೇಣ ಆ ಹುಡುಗನ ಕರೆಗಳು ಕಮ್ಮಿಯಾದವು. ಇವಳೂ ಅದರಿಂದ ಹೊರಗೆ ಬರತೊಡಗಿದಳು. ಅಷ್ಟರಲ್ಲಿ ನನ್ನ ಮದುವೆ ನಿಶ್ಚಯವಾಗಿ ನಾನವಳನ್ನು ಬಿಟ್ಟು ಬರುವ ಕಾಲ ಬಂದಿತ್ತು.. ಇಬ್ಬರೂ ಬೇರೆಯಗುವಾಗ ಅದೆಷ್ಟು ಬೇಸರಿಸಿಕೊಂಡಿದ್ದೆವೋ. ಆದರೆ ಸ್ನೇಹ ಸಾಗರದಿಂದ ಪ್ರೀತಿ ಸಾಗರಕ್ಕೆ ಇಳಿಯಲೇ ಬೇಕಿತ್ತಲ್ಲ... ಆದರೆ ಅವಳೀಗ ಸಂತೋಷವಗಿದ್ದಾಳಲ್ಲ ಎಂಬ ಖುಷಿ ಅವಳನ್ನು ಬಿಡುವ ಬೇಸರಕ್ಕಿಂತ ಹೆಚ್ಚಿತ್ತು. ಅದರೂ ಕೆಲವೊಮ್ಮೆ ನೆನಪಾದಾಗಲೆಲ್ಲ 'ಹಿಂಗಾಯ್ತಲ್ಲೇ ನನ್ನ ಬಾಳಲ್ಲಿ, ಏನೂ ಮಾಡದೆ ಎಲ್ಲರಿಂದ ಮಾತು ಕೇಳಬೇಕಾಯ್ತಲ್ಲೇ' ಎನ್ನುತ್ತಿರುತ್ತಿದ್ದಳು. 
ನಾನು ಮದುವೆಯಾಗಿ ಇತ್ತ ಬಂದಮೇಲೆ ಅವಳಿಗೂ ಅನುರೂಪನಾದ ಹುಡುಗ ಸಿಕ್ಕಿದ. ಅವನಲ್ಲಿ ತನ್ನೆಲ್ಲ ಕಥೆಯನ್ನು ಹೇಳಿಕೊಂಡು, 'ಇದೆಲ್ಲಾ ತಿಳಿದೂ ನನ್ನ ತಪ್ಪಿಲ್ಲ ಎಂಬ ನಂಬಿಕೆಯಿದ್ದರೆ, ಕೊನೆಗೊಂದು ದಿನ ನಮ್ಮ ಜೀವನದಲ್ಲಿ ಅನುಮಾನದ ಅಲೆ ಸುಳಿಯದಿದ್ದರೆ ಮಾತ್ರ'......... ಎಂದಳಂತೆ..... ಅವನು ತುಂಬಾ ಒಳ್ಳೆಯ ಹುಡುಗ. ಇವಳ ಗುಣವನ್ನು ಮೆಚ್ಚಿ ಮದುವೆಯಾದ. 
       ಈಗ ಗಂಡ ಹೆಂಡತಿ ತುಂಬಾ ಚೆನ್ನಾಗಿದ್ದಾರೆ. ಅವನಿಗೆ ಇವಳ ನಗು ಇಷ್ಟವಂತೆ, ಇವಳ ಕಣ್ಣು ಚೆಂದವಂತೆ. ಅವಳ ಬಾಯಲ್ಲಿ ನೆಮ್ಮದಿಯ ನುಡಿಗಳು, ತುಟಿಯಲ್ಲಿ ನಗು ಕಂಡಾಗ ಅದೇನೋ ನೆಮ್ಮದಿ ನನಗೂ.. ಅವರಿಬ್ಬರೂ ನೂರ್ಕಾಲ ಹೀಗೆಯೇ ಬದುಕಿ ಬಾಳಲಿ.. ಹೊಸ ಸಂವತ್ಸರ ಅವರಿಗೆ ಮತ್ತಷ್ಟು ಸಂತಸ ತರಲಿ..... ಲವ್ ಯು ಕಣೆ...... 



ಕಾವ್ಯಾ :)

Thursday, February 14, 2013


ಎನ್ನ ಮನದೊಡೆಯ ನೀನು....
   ನೀ ಬಲ್ಲದಿರೆಯಾ ಮನದಾಳವನ್ನು...
ನಿನಗೆ ತಿಳಿಯದುದೆನ್ನೊಳೇನಿದೆ ಗೆಳೆಯಾ ...
   ಮತ್ತೊಮ್ಮೆ ಹೇಳುತಿರುವೆ ನೀನೆನ್ನ ಇನಿಯ...

ಪ್ರತಿ ಜನ್ಮದಲೂ ನೀನೆನ್ನ ವರಿಸು...
   ಪ್ರೀತಿಯ ಸುಧೆಯ ಹೀಗೆಯೇ ಹರಿಸು...
ಪ್ರತಿ ದಿನ ಎನ್ನ ಹೀಗೆಯೇ ರಮಿಸು...
   ಮಾಡಿದ ತಪ್ಪಿಗೆಲ್ಲ ನೀ ಎನ್ನ ಕ್ಷಮಿಸು...

ಮುತ್ತುಗರೆದೆಬ್ಬಿಸಿ ನೀ, ಎನ್ನ ಮತ್ತೇರಿಸಿ...
   ಮತ್ಯಾಕೆ ಓಡುತಿಹೆ ನೀ, ಮನವ ಹೀಗೆ ಕಾಡಿಸಿ...
ನೋಡಿಲ್ಲಿ, ಹಾಗೆಯೇ ಇದೆ ನಿನ್ನಧರದ ಬಿಸಿ....
   ಎಲ್ಲಿ ಮರೆಯಾದೆ ನೀ, ನನ್ನ ಗಲ್ಲವ ರಂಗೇರಿಸಿ...

ಕಾಡುವೆಯೇಕೆ ಹೀಗೆ ಕನಸಲೂ,
                ಮನಸಲೂ, ನನಸಲೂ....
ಕಾದಿರುವೆ ನಾ, ನಿನ್ನ ಮೋಡಿಗೊಳಗಾಗಲು....
    ಓಡಿ ಬಾ ನೀ, ಎನ್ನ ಮುದ್ದಿಸಲು.... 

ನೀ ಎನ್ನ ಪ್ರಿಯತಮನೆನ್ನಲು,
   ಎನಗೀ ದಿನವೇ ಬೇಕಿಲ್ಲ....
ಪ್ರೀತಿಯ ಸಣ್ಣ ನಿವೇದನೆಗೆ 
   ಇದೊಂದು ನೆಪ ಸಾಕಲ್ಲ... 


Tuesday, January 8, 2013

ಅತ್ಯಾಚಾರದ್ದೆಂಥ ಮನಸ್ಥಿತಿ...?!

        ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಅತ್ಯಾಚಾರದ ಬಗ್ಗೆ ಮಾತು. ಬಹುತೇಕ ಪುರುಷರು ಇದಕ್ಕೆ ಕಾರಣ ಹೆಣ್ಣು ಮಕ್ಕಳು ತೊಡುವ ಬಟ್ಟೆಗಳೇ ಎಂಬಂತಾಗಿ ಮಾತನಾಡುತ್ತಿರುವುದು ಗಮನಕ್ಕೆ ಬಂತು. ತುಂಬಾ ಬೇಸರವೂ ಆಯಿತು. ಪುರುಷರ ಮನೋ ವಿಕೃತಿಗೆ ಹೆಣ್ಣು ಮಕ್ಕಳ ಬಟ್ಟೆಯೇ ಕಾರಣ ಎಂತಾದಲ್ಲಿ, ಹೊರದೇಶಗಳ ಹೆಣ್ಣು ಮಕ್ಕಳು ಶೇಕಡಾ 90 ರಷ್ಟು ಜನ ಅತ್ಯಾಚಾರಕ್ಕೆ ಗುರಿಯಾಗಬೇಕಿತ್ತಲ್ಲವೇ....?!  ಯಾಕೆ ಹಾಗಾಗುತ್ತಿಲ್ಲ...? ಅಲ್ಲಿರುವವರೆಲ್ಲ ಪುರುಷ ಪುಂಗವರಲ್ಲವೆ...??!!
        ಇಂತಹ ಕೆಟ್ಟ ಕೃತ್ಯದ ಹಿಂದೆ ಕೃತ್ಯ ಎಸಗಿದವರ ಮನಸ್ಥಿತಿಯಿರುತ್ತದೆಯೇ ವಿನಃ ಹೆಣ್ಣಿನ ಬಟ್ಟೆಯಲ್ಲ. ಇಲ್ಲಿವರೆಗೆ ಆದ ಅತ್ಯಾಚರಗಳೆಲ್ಲಾ ಕೇವಲ ತುಂಡು ಬಟ್ಟೆ ತೊಟ್ಟವರ ಮೇಲೆಯೇ ಆಗಿದ್ದರೆ ಅವರ ಮಾತಿಗೆ ಸೊಪ್ಪು ಹಾಕಬಹುದಿತ್ತು. ತುಂಡು ಬಟ್ಟೆ ತೊಡುವುದು ಸರಿ ಎಂದು ನಾನು ವಾದಿಸುತ್ತಿಲ್ಲ. ಅದು ಹುಡುಗರಿಗೆ ಪ್ರಚೋದಕಕಾರಿ ಯಾಗಿರಬಹುದು. ಆದರೆ ಅಷ್ಟು ಮಾತ್ರ ಮನೋ ನಿಗ್ರಹ ವಿಲ್ಲದೆ ಒಂದು ಹೆಣ್ಣಿನ ಮೇಲೆರಗಿ ಅಷ್ಟು ಹೀನಾಯವಾಗಿ ತೃಷೆ ತೀರಿಸಿಕೊಳ್ಳುವಷ್ಟು ಪ್ರಚೋದಿಸುತ್ತದೆ ಎಂದರೆ ಆ ಮನಸ್ಸು ಎಷ್ಟು ವಿಕೃತಿಗೆ ಹೋಗಿರಬಹುದು ಎಂಬುದನ್ನು ನೋಡಬೇಕಷ್ಟೇ...?! ಪ್ರತಿಯೊಬ್ಬರೂ ಅವರು ಬೆಳೆದ ಪರಿಸರದಿಂದ ಪ್ರಾಭಾವಿತರಗುತ್ತಾರೆ. ಅವರ ಮನಸ್ಥಿತಿ ಆ ಪರಿಸರದ ಮೇಲೆ ಅವಲಂಬಿತವಾಗಿಯೇ ಬೆಳೆದಿರುತ್ತದೆ. ಮನೆಯಲ್ಲಿ ಒಳ್ಳೆಯ ವಾತವರಣದಲ್ಲಿ ಬೆಳೆದರೂ ಕೂಡ ಹೊರಗಿನ ಗೆಳೆಯರ ಸಂಗ ವ್ಯಕ್ತಿಯನ್ನು ಕೆಟ್ಟ ಆಲೋಚನೆಗಳಿಗಿಳಿಸಿ ಅವನ ಮನಸ್ಥಿತಿಯನ್ನು ಕದಡಿ ವಿರೂಪಗೊಳಿಸಬಹುದು. ಒಟ್ಟಿನಲ್ಲಿ ಕೆಟ್ಟ ಮನಸ್ಥಿತಿಯೇ ಈ ವಿಕೃತಿಗೆ ಕಾರಣವೇ ಹೊರತು ಹೆಣ್ಣಿನ ಬಟ್ಟೆಯಲ್ಲ. ವಿಕೃತ ಮನಸ್ಸಿನ ಒಂದು ಗಂಡು ಮೈ ತುಂಬಾ ಬಟ್ಟೆ ತೊಟ್ಟು ಗೌರವಯುತವಾಗಿರುವ ಮಹಿಳೆಯನ್ನೂ ಸಹ ಬೆತ್ತಲಾಗಿ ಕಲ್ಪಿಸಿಕೊಳ್ಳಬಲ್ಲ...!! ಅದರಿಂದ ವಿಕೃತ ಆನಂದವನ್ನು ಪಡೆಯಲೂ ಬಲ್ಲ.... ಅಂತಹ ಮನಕ್ಕೆ ಯಾವ ಹೆಣ್ಣಾದರೂ ಆದೀತು. ಅವರ ಮುಂದೆ ಬಟ್ಟೆ ಎಂಬುದು ಅಡ್ಡವಾಗುವುದೇ ಇಲ್ಲ... ಆ ಸಮಯದ ಸುಖವಷ್ಟೇ ಅವರಿಗೆ ಬೇಕಾಗಿರುವುದು.... ಆ ವಿಕೃತಿಗೆ ಹೆಣ್ಣು ಬಲಿಯಾಗುತ್ತಾಳೆ ಅಷ್ಟೇ.....
        4-5 ವರ್ಷದ ಹೆಣ್ಣು ಮಕ್ಕಳ ಮೇಲೆಲ್ಲಾ ಅತ್ಯಾಚಾರ ಎಸಗುವಂತ ರಕ್ಕಸ ಮನ ಅದೆಷ್ಟು ಹೊಲಸಾಗಿ, ಕೆಟ್ಟದಾಗಿ, ವಿಕೃತವಾಗಿ ಇರಬಹುದೆಂದು ಯೋಚಿಸಿ.... ಮಗು ಎಂಬ ಭಾವನೆಯೂ ಇಲ್ಲದೆ ಅದನ್ನೂ ತನ್ನ ಕೆಟ್ಟ ತೃಷೆ ತೀರಿಸಿಕೊಳ್ಳಲು ಉಪಯೋಗಿಸಿಕೊಳ್ಳುವಂಥ ಮಟ್ಟಕ್ಕೆ ಮನುಷ್ಯ ಇಂದು ಬೆಳೆದು ನಿಂತಿದ್ದಾನೆ...! ಇಂತಹ ಗಂಡಸರಿಗೆ  ಬಯ್ಯಲು ಶಬ್ದ, ಕೊಡಲು ಶಿಕ್ಷೆಯುಂಟೆ ಈ ಪ್ರಪಂಚದಲ್ಲಿ....??? ಹಲವರು ಹೇಳಿದಂತೆ ಪುರುಷತ್ವ ಹರಣ ಶಿಕ್ಷೆ ಯೋಗ್ಯವಾದದ್ದೇ ಹೌದಾದರೂ ಎಲ್ಲಾ ಕಳೆದುಕೊಂಡ ಹೆಣ್ಣುಮಕ್ಕಳ, ಆ ಪುಟ್ಟ ಕಂದಮ್ಮಗಳ ಜೀವ, ಜೀವನವನ್ನು ಹಿಂದಕ್ಕೆ ತರಲಾದೀತೇ...! ನಮಗೆ ಪತ್ರಿಕೆ ಗಳಲ್ಲಿ ಆ ಬಗ್ಗೆ ಓದುವಾಗಲೇ ಅಷ್ಟು ನೋವಾಗುವಾಗ ಆ ಕಂದ ಅದೆಷ್ಟು ನೋವನುಭವಿಸಿರುತ್ತೋ...... ಆ ತಿಳಿಯದ ಸಹಿಸಲಾಗದ ವಯಸ್ಸಿನಲ್ಲಿ......
         ನನಗೆ ಇಂತಹ ಘಟನೆಗಳನ್ನು ಕೇಳಿದಾಗೆಲ್ಲ ಯಾವಾಗಲೂ ಕಾಡುವ ಪ್ರಶ್ನೆ - ಅವರಿಗೆ ಅಷ್ಟು ಕೆಟ್ಟ ಮನಸ್ಥಿತಿ ಇದ್ದು, ನಿಯಂತ್ರಿಸಿಕೊಳ್ಳಲಾಗದ  ರಕ್ಕಸ ಬುದ್ದಿಯಿದ್ದರೆ, ತಣಿಸಲಿಕ್ಕಾಗೇ  ಇರುತ್ತಾರಲ್ಲ ಬೇಕಷ್ಟು ಮಂದಿ...ಅವರ ಬಳಿ ಹೋಗದೇ ಪಾಪಕ್ಕಿಲ್ಲದ ಹೆಣ್ಣು ಮಕ್ಕಳ ಮೇಲೆರಗಿ ಅವರನ್ನೇಕೆ ಬಲಿ ಕೊಡುತ್ತಾರೆ...?! ದುಡ್ಡಿಲ್ಲದೇ ಕೆಲಸವಾದೀತೆಂದೇ ..?!!? 

       

Tuesday, December 4, 2012

ಪ್ರೀತಿಯ ನನ್ನವರಿಗೆ.......

       ನೀವಿರದ ಒಂದೊಂದು ಕ್ಷಣದಲ್ಲೂ ನನ್ನ ಮನದ ಪರದೆಯಲ್ಲೆಲ್ಲ ಬರೀ ನಿಮ್ಮ ರೂಪ... ಬೆಳಗ್ಗೆ ನಿಮ್ಮನ್ನು ರಮಿಸಿ ಎಬ್ಬಿಸಿ ಆಫೀಸಿಗೆ ಹೊರಟಾಗಿನಿಂದ ನಿಮ್ಮ ಧ್ಯಾನ ಶುರು ಆದರೆ  ಮತ್ತೆ ಸಂಜೆ ಮನೆಗೆ ಬಂದರೂ ನಿಮ್ಮದೇ ಗುಂಗು.... ಮನೆಗೆ ಬಂದು ಅಡುಗೆ  ಮಾಡುವಾಗಲೂ ನಿಮ್ಮ  ಮುದ್ದು ಮುಖ ಕಣ್ಣೆದುರೇ.... ಸ್ವಲ್ಪ ಹೊತ್ತೂ ಕೂಡ ನಿಮ್ಮನ್ನು ನನ್ನ ಸ್ಮೃತಿಯಿಂದ ಪಕ್ಕಕ್ಕಿರಿಸಲು ನನ್ನಿಂದಾಗದು.... ಅದೆಷ್ಟು ಸಲ ಗಡಿಯಾರ ನೋಡಿರುತ್ತೇನೆ ಗೊತ್ತಾ...? ನೀವು ಬರುವ ಸಮಯ ಮೀರಿ ಗಡಿಯಾರದ ದೊಡ್ಡ ಮುಳ್ಳು ಒಂದಂಕೆ ಮುಂದೆ ಹೋದರೂ ಅದೇನೋ ಅಸಹನೆ.... ಅಡುಗೆ ಮುಗಿಸಿ ಕುಳಿತವಳಿಗೆ ದಿನ ಪತ್ರಿಕೆ ಓದಲೂ ಸಾಧ್ಯವಾಗದೆ ಹೋಗುತ್ತದೆ.... ಕಂಗಳು ಕ್ಷಣಕ್ಕೊಮ್ಮೆ ಗಡಿಯಾರ ನೋಡುವುದ ಬಿಟ್ಟರೆ ತಾನೇ ಮತ್ತೇನಾದರೂ ಮಾಡಲಾಗುವುದು...! ಏಕೆ ಬರಲಿಲ್ಲವೋ, ಏನಾಯಿತೋ ಎಂಬ ಕಳವಳವಲ್ಲ ಅದು... ಈ ಸಮಯದೊಳಗೆ ಬರುತ್ತೀರೆಂದು ಮನಸ್ಸಿಗೆ ಗೊತ್ತಲ್ಲಾ, ಆ ಸಮಯವಾದೊಡನೆ ಮನ ನಿಮ್ಮ ಮುದ್ದು ಮುಖ ನೋಡಲು ತವಕಿಸುತ್ತದೆ... ಕುಳಿತಲ್ಲಿ ಕುಳಿತಿರಲಾಗದೆ ಬಂದ ಬೈಕ್ ಸದ್ದನ್ನೆಲ್ಲ ಆಲಿಸುತ್ತವೆ ಕಿವಿಗಳು...
 
       ಅದು ಹೇಗೆ ಒಂದು ಕ್ಷಣವೂ ಮನಸ್ಸಿನಿಂದ ಹೊರ ಹೋಗದೆ ಕುಳಿತಿರುತ್ತೀರೋ, ನಾ ಕಾಣೆ... ಗಂಡ-ಹೆಂಡತಿ ಎಂಬ ಅವಿನಾಭಾವ ಸಂಬಂಧ ನಿಜಕ್ಕೂ ಅದ್ಭುತ... ಬಂದ ಮುನಿಸು ತಣ್ಣಗಾಗಿ ಕಣ್ಣಂಚಿನಲ್ಲಿ ನೀರಾಡುತ್ತಲ್ಲಾ ಅದರಲ್ಲೆಲ್ಲಾ ನಿಮಗೆ ಪ್ರೀತಿಯ ಧಾರೆಯಿರುತ್ತೆ... ಆ ಕ್ಷಣದಲ್ಲಿ ಮೂಡುವ ಪ್ರೀತಿಯಿದೆಯಲ್ಲಾ........ಅದನ್ನು ಹೇಗೆ ಹೇಳಲಿ ನಿಮಗೆ.... !! ವರ್ಣಿಸಲಾಗದ, ಜಗತ್ತಿನ ಅತ್ಯಂತ ಅದ್ಭುತ ಭಾವನೆ ಅದು... ಹೊಟ್ಟೆಯಾಳದಿಂದ ಏನೋ ಪ್ರೀತಿಯ ಝಳಕು ಬಂದು ಮೈಯೆಲ್ಲಾ ಕಂಪನವೋ, ರೋಮಾಂಚನವೋ.... ಅದೇನೋ ಹೇಳಲಾಗದು.... ಅನುಭವಿಸಿಯೇ ತಿಳಿಯಬೇಕು...! ಅದಕ್ಕೇ ಏನೋ ನನ್ನ ಮನ ನನ್ನರಿವಿಗೆ ಬಾರದಂತೆಯೇ ಆಗಾಗ ಮುನಿಸಿಕೊಳ್ಳುವುದು, ಕಣ್ಣಾಲಿಗಳು ನೀರಾಗುವುದು.......

       ನಿಮ್ಮೊಡನೆ ಸಪ್ತಪದಿಯಿಟ್ಟು ಸಪ್ತ ಮಾಸಗಳು ಅದೆಷ್ಟು ಬೇಗ ಜಾರಿದವೋ...... ಸಪ್ತ ಜನ್ಮದಲ್ಲೂ ನನ್ನ ಪ್ರೀತಿಗೆ ನೀವೇ ಪ್ರತಿ ಪ್ರೀತಿ ಕೊಡುವಂತಾಗಲಿ, ನಮ್ಮಿಬ್ಬರ ನಡುವೆ ಪ್ರೀತಿಯ ಪ್ರವಾಹ ಎಂದೆಂದೂ ಹೀಗೆಯೇ ಪ್ರವಹಿಸುತ್ತಿರಲೆಂದು ಕಾಣದ ದೇವರಲ್ಲಿ ನನ್ನ ಭಕ್ತಿಪೂರ್ವಕ ಬಿನ್ನಹ....


ನಿಮ್ಮ ಕೆನ್ನೆಯ ಕೆಂಪಿನಲ್ಲಿದೆ 
                 ನನ್ನ ಪ್ರೀತಿ......
ನಿಮ್ಮ ಮೀಸೆಯಂಚಿನ ನಸು ನಗುವಿನಲ್ಲಿದೆ 
                 ನನ್ನ ಪ್ರೀತಿ......
ನಿಮಗೆ ಮುದ್ದಿನಿಂದ ಗದರುವಲ್ಲಿದೆ 
                 ನನ್ನ ಪ್ರೀತಿ.......
ನಿಮ್ಮ ಮುಂಜಾನೆಯ ಕನವರಿಕೆಯಲ್ಲಿದೆ 
                 ನನ್ನ ಪ್ರೀತಿ....... 
ನಿಮ್ಮ ಪ್ರತೀ ಹೆಜ್ಜೆ ಹೆಜ್ಜೆಯಲ್ಲೂ ಇದೆ 
                 ನನ್ನ ಪ್ರೀತಿ........


ಕಾವ್ಯಾ :) 

Tuesday, June 5, 2012

ಸುಮ್-ಸುಮ್ನೆ ಯಾಕೋ....

















ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮುತ್ತುಗರೆದವನೆಬ್ಬಿಸುವಾಗ, ಮತ್ತಿನ
ಮುಗುಳುನಗೆಯ ಸುಂದರಾಂಗನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮುಸ್ಸಂಜೆಯ ದೇವರ ನಾಮದೊಳಿರೆ,
ಹಿಂದಿನಿಂದಪ್ಪಿದ ಮುದ್ದು ಕೃಷ್ಣನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಹಸಿದೊಡಲಿಗುಣಬಡಿಸುವಾಗಲೊಮ್ಮೆ,
ಮೆಚ್ಚುಗೆಯಿಂದ ನೋಡುವ ಪತಿ ದೇವನ
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಸಿಟ್ಟಿನಲಿ ರಚ್ಚೆ ಹಿಡಿದವಳ, ಪ್ರೀತಿಯಿಂ-
ದೋಲೈಸುವ ಚಿಗುರು ಬೆರಳವನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಸಹಚಾರಿಣಿಯ ಹುಡುಗಾಟವ ಸಹಿಸಿ,
ಗದರದೇ ನಗುವ ಮುಗ್ಧನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಮಡಿಲಲ್ಲಿ ಮಗುವಂತೆ ಮಲಗಿ, ನಿದ್ದೆಯಲಿ
ಕನವರಿಸಿ ಮುದ್ದಿಸುವ ಸುಕುಮಾರನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....

ಬದುಕಿನ ಸೌಧ ಕಟ್ಟಲು, ಪ್ರೀತಿಯ
ನೌಕೆ ಹೊತ್ತು ತಂದ ಸರದಾರನ 
ಯಾಕೋ ಸುಮ್ಮನೆ, ನಾ ಮೆಚ್ಚಿಕೊಂಡೆನೆ....


























ಕಾವ್ಯಾ :) 

Wednesday, March 21, 2012

ಕಲೆ - ಕಲಿ...


















ಮನ ತುಡಿಯಬೇಕು...
   ಹೃದಯ ಮಿಡಿಯಬೇಕು.....
ಅನುರಾಗ ಅರಳಬೇಕು
    ಓ ಮನವೇ....
Learn to FEEL......

ಮನಕೆ ಮನ ಜೊತೆಯಾಗಿ  
    ಪ್ರೀತಿಯು ಒರತೆಯಾಗಿ....
ಭಾವ ಚಿಮ್ಮಬೇಕು...
    ಓ ಮನವೇ....
Learn to EXPRESS.....

ಹಂಚಿಕೋ ಮನವೇ ನಿನ್ನ ಸಂತಸ....
    ಹೊಮ್ಮುವುದಾಗ ಉಲ್ಲಾಸ...
ಅರಿತುಕೋ ನಿನ್ನೊಲವಿನ ಮನಸ.... 
    ಓ ಮನವೇ....
Learn to share the JOY.....

ಮನವೆಂಬ ತ್ರಿಜ್ಯಗಳೆರಡು ಬೆಸೆದಾಗ...
    ಪ್ರೀತಿಯ ವ್ಯಾಸವದು ವಿಶಾಲ...
ಹಂಚಿಕೋ ನಿನ್ನಾಳದ ಒಲವ....
    ಓ ಮನವೇ....
Learn to ENJOY....



ಕಾವ್ಯಾ :)


Wednesday, January 25, 2012

ಹೊಸ ಬಾಳಿಗೆ ನೀ ಜೊತೆಯಾದೆ.... ಹೊಸ ಆನಂದ ನೀನಿಂದು ತಂದೆ....


ನನ್ನ ಬಾಳಿಗೆ ಬಣ್ಣ ತುಂಬಲು ಬರುತ್ತಿರುವ ನಿನಗಾಗಿ..........
       ನಿನಗಾಗಿ ಬರೆದ ಕೆಲವಾರು ಲೇಖನಗಳು ಈಗಾಗಲೇ ನನ್ನ ಬ್ಲಾಗಿನಲ್ಲಿವೆ. ನನ್ನ ಬರವಣಿಗೆಗಳು ಬ್ಲಾಗ್ ರೂಪ ಪಡೆಯಲು ಕಾರಣ ನೀನು.... ಬ್ಲಾಗ್ ಬರೆಯಲು ಶುರು ಮಾಡು ಎಂಬ ನಿನ್ನ ಒತ್ತಾಯದಿಂದ ಬರವಣಿಗೆಯತ್ತ ಮುಖ ಮಾಡಿ ಒಂದು ವರ್ಷ ಪೂರೈಸುವುದರೊಳಗೇ ನೀನೇ ನನ್ನ ಬಾಳ ಸಂಗಾತಿಯಾಗಿ ಬರುವೆ ಎಂಬುದು ಕನಸಿನಲ್ಲಿಯೂ ಅನಿಸಿರಲಿಲ್ಲ... ಅತ್ಯಂತ ಆತ್ಮೀಯ ಸ್ನೇಹಿತರಾಗಿ ಎರಡೂವರೆ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ನಮ್ಮ ಸ್ನೇಹದ ಬಗ್ಗೆ ನಾನು ಈಗಾಗಲೇ ಬರೆದಾಗಿದೆ ಮತ್ತು ಅದನ್ನು ನನ್ನ ಓದುಗರೆಲ್ಲರೂ ಓದಿಯೂ ಇದ್ದಾರೆ. ಆದರೆ ಆ ಲೇಖನದ 'ಆತ್ಮ' ನೀನೆ ಎಂದು ತಿಳಿದಿದ್ದದ್ದು ನಮ್ಮಿಬ್ಬರಿಗೆ ಮಾತ್ರ...! ಅದೆಷ್ಟು ಜನ ಓದಿ ಪ್ರಶ್ನೆ ಮಾಡಿದ್ದರೋ ಯಾರ ಬಗ್ಗೆ ಬರೆದಿದ್ದೀಯ ಎಂದು..... ಅಂತಹ ಸ್ನೇಹ ಇಂದು ನಮ್ಮ ಸಹಜೀವನಕ್ಕೆ ಬುನಾದಿಯಾಗುತ್ತದೆ ಎಂದು ಮಾತ್ರ ಇಬ್ಬರೂ ತಿಳಿದಿರಲಿಲ್ಲ ಅಲ್ಲವೇ...?! ಹುಡುಗ ಹುಡುಗಿಯ ನಡುವೆ ಬರಿದೇ ಸ್ನೇಹ ಸಾಧ್ಯವಿದೆ ಎಂಬುದನ್ನು ಸಾಧಿಸ ಹೊರಟಿದ್ದೇನೋ ನಿಜ... ಆದರೆ ನಮ್ಮ ಕಥೆಯೂ ಒಂದೇ ತರಹದ ಕೊನೆ ತಲುಪಿತಲ್ಲ ಎಂಬ ಬೇಸರವಂತೂ ಖಂಡಿತಾ ಇಲ್ಲಾ...  ನಮ್ಮ ಸ್ನೇಹವನ್ನು ಬಲ್ಲ ಅದೆಷ್ಟು ಜನ ನೀವಿಬ್ಬರೇ ಯಾಕೇ ಮದುವೆಯಾಗಬಾರದು ಎಂದು ನನ್ನ ಬಳಿ ಹೇಳಿದ್ದಾರೆ ಗೊತ್ತಾ..!! ಆಗ ನಂಗೆ ಆಶ್ಚರ್ಯ ಆಗೋದು, ಇದೇನು ಎಲ್ಲರೂ ಹೀಗಂತಾರಲ್ಲ ಅಂತ.... ಇಂತಹ ಒಳ್ಳೆಯ ಸ್ನೇಹಿತನನ್ನೇ ನನ್ನ ಬಾಳ ಸಂಗಾತಿಯಾಗಿ ಕರುಣಿಸಿದ ದೇವರಿಗೆ ನನ್ನ ಕೋಟಿ ಕೋಟಿ ನಮನಗಳು... 
       ನಿನ್ನ ಸ್ನೇಹವನ್ನು ಬಯಸಿ ಬಂದವಳು ನಾನು.... ನಿನ್ನ ನಾಚಿಕೆಯ ಸ್ವಭಾವವೇ ನನಗೆ ಮೊದಲಿಂದಲೂ ಇಷ್ಟವಾಗಿದ್ದು... ಅದಕ್ಕಾಗೆ ಮೊದಲಿಂದಲೂ ನಾನು ನಿನ್ನನ್ನು ಕುಕ್ಕಿ ಕುಕ್ಕಿ ಮಾತಾಡಿಸುತ್ತಿದ್ದೆ.. ವರ್ಷಗಟ್ಟಲೆ ಪ್ರಯತ್ನ ಪಟ್ಟ ಮೇಲೆ ಅಂತೂ ಸರಾಗವಾಗಿ ಮಾತಾಡಲು ಶುರು ಮಾಡಿದೆ ನೀನು... ನಿಜವಾಗಿಯೂ ನಿನ್ನೊಡನೆ ಸವಿದ ಸ್ನೇಹದ ಸವಿ ನನಗೆಲ್ಲೂ ಸಿಕ್ಕಿಲ್ಲ... ನೀನು ಮಾತಾಡದಿದ್ದರೂ ನಿನ್ನಲ್ಲಿ ಅಗಾಧ ಸ್ನೇಹವನ್ನು ಕಂಡಿದ್ದೆ.... ಈಗ ಅದೇ ಮೌನದಲ್ಲಿ ಅಷ್ಟೇ ಪ್ರೀತಿಯನ್ನು ಕಾಣುತ್ತಿದ್ದೇನೆ... ಅದೆಷ್ಟು ಒಬ್ಬರಿಗೊಬ್ಬರು ಅನಿವಾರ್ಯವಾಗಿದ್ದೆವೆಂದರೆ ನನ್ನ ಮದುವೆಯಾದರೆ ನಾವಿಬ್ಬರೂ ಈ ಸ್ನೇಹದಿಂದ ಹೇಗೆ ದೂರಾಗುವುದು ಎಂದು ದುಃಖ ಪಡುವಷ್ಟರ ಮಟ್ಟಿಗೆ...! ಈಗ ಅದಾವ ತೊಂದರೆಯೂ ಇಲ್ಲದೆ ಇಬ್ಬರೂ ಪೂರ್ತಿ ಜೀವನದ ಸವಿಯನ್ನು ಒಟ್ಟಿಗೆ ಸವಿಯುವತ್ತ ಹೆಜ್ಜೆ ಇಡಲು ಕಾತರಿಸುತ್ತಿದ್ದೇವೆ.... 
       ಯಾವ ಕ್ಷಣದಲ್ಲಿ ನಮ್ಮ ಭಾವನೆಗಳು ತಿರುಗಿದವೋ...! ತಿಳಿಯಲಿಲ್ಲ.... 'ಮನೆಯಲ್ಲಿ ಒಪ್ಪಿದರೆ ಮಾತ್ರ' ಎಂಬ ನಿರ್ಧಾರಕ್ಕೆ ಬಂದಾಗಲಂತೂ ಒಂದು ಕ್ಷಣ ಕಳೆಯುವುದೂ ಕಷ್ಟವಾಗಿತ್ತು. ಒಮ್ಮೆ ಬಿಟ್ಟು ಬದುಕಬಹುದು ದೊಡ್ಡದಲ್ಲ ಎನಿಸಿದರೂ.... ಕ್ಷಣ ಮಾತ್ರದಲ್ಲಿ ಹೇಗೆ ಎಂಬ ಪ್ರಶ್ನೆ ಧುತ್ತನೆ ನಿಲ್ಲುತ್ತಿತ್ತು....!! ಅಂತೂ ಅತ್ತೆ, ಮಾವ, ಅಪ್ಪ, ಅಮ್ಮ ಪ್ರೀತಿಯಿಂದ ಮದುವೆ ಮಾಡಲು ಒಪ್ಪಿದಾಗ ನಿಜವೇ ಇದು ಎಂದು ನಂಬಲು ನನಗಂತೂ ಬಹಳ ದಿನಗಳೇ ಹಿಡಿಯಿತು....

       ನಿನ್ನ ನಾಚಿಕೆ, ಸಂಕೋಚದ ಸ್ವಭಾವ ನನಗೆ ತುಂಬಾ ಇಷ್ಟ.... (ಒಬ್ಬರಿಗಾದರೂ ಇದೆಯಲ್ಲ ಸಾಕು ಬಿಡು ಎಂಬುದು ನನ್ನ ಸ್ನೇಹಿತರ ಅಂಬೋಣ...!) ವಸ್ತು ಸ್ಥಿತಿಯನ್ನು ಮುಚ್ಚಿಡದೆ ಇದ್ದ ಹಾಗೇ ಹೇಳಿ ಬಿಡುವ ನಿನ್ನ ಗುಣ ಇಷ್ಟ.... ನಿನ್ನ ನಗು ಇಷ್ಟ... ನಿನ್ನ voice ಅಂತೂ ಸೂಪರ್ ಇಷ್ಟ... ಎಲ್ಲಾ ಗೊತ್ತಿದ್ದೂ ಏನೂ ಗೊತ್ತಿಲ್ಲದೇ ಇರುವಂತೆ ಒಂಥರಾ decency ಯನ್ನು ಉಳಿಸಿಕೊಳ್ಳುತ್ತೀಯಲ್ಲ ಅದು ಮಾತ್ರ ಎಲ್ಲರಿಂದ ಸಾಧ್ಯವಿಲ್ಲ...! ಅದಕ್ಕೇ ನಾನು ಕ್ಲೀನ್ ಬೋಲ್ಡ್ ಆಗಿದ್ದು.... ಅದೆಷ್ಟು ಜನ ನಿನ್ನನ್ನು ಹೊಗಳುತ್ತಾರಲ್ಲ ಆಗ ಆಗುವ ಸಂತೋಷ ಕೈಗೆ ನಿಲುಕದ್ದು.... ನನ್ನ ಭಾವನೆಯ ಮಿಡಿತ ಸ್ವಲ್ಪ ವ್ಯತ್ಯಾಸವಾದರೂ ಬಾಯಿ ಬಿಡಿಸಿ ತಿಳಿದುಕೊಂಡು ನಿನ್ನ ತುಡಿತವನ್ನು ಮಾತ್ರ ನಿನ್ನ ಮೌನದಲ್ಲೇ ನಾನು ತಿಳಿದುಕೊಳ್ಳಲೆಂಬ ಹಂಬಲ ನಿನ್ನದು... ನಿನ್ನ ಮುಂದೆ ಮಾತ್ರವೇ ನನ್ನ ಸಿಟ್ಟು ಕೊಂಚ ಕೂಡ ನಿಲ್ಲದೆ ಕರಗಿ ಹೋಗುವುದು.... ನಿನ್ನನ್ನು ನನಗೆ ಕೊಟ್ಟ ದೇವರಿಗೆ ಮತ್ತೊಮ್ಮೆ ನನ್ನ ಕೋಟಿ ಕೋಟಿ ನಮನಗಳು.....


        ನನ್ನ ಪ್ರೀತಿಯನ್ನೆಲ್ಲ ನಿನಗೆ ಧಾರೆ ಎರೆಯಬೇಕೆಂಬ ಹಂಬಲವಿದೆ..... ಕಣ್ತುಂಬಾ ನಮ್ಮ ಮುಂದಿನ ಬದುಕಿನ ಕನಸಿದೆ.... ಕೊನೆವರೆಗಿನ ಸಹಬಾಳ್ವೆಯ ವಿಶ್ವಾಸವಿದೆ... ನನ್ನನ್ನು ಜತನದಿಂದ ಕಾಪಾಡುವೆಯೆಂಬ ನಂಬಿಕೆಯಿದೆ... ಬೊಗಸೆ ತುಂಬಾ ಪ್ರೀತಿಯಿದೆ... ಮನ ತುಂಬಾ ಮಮತೆಯಿದೆ.... ಒಟ್ಟಾರೆ ಕಾಯುವಿಕೆಯಲ್ಲೂ ಏನೋ ಸುಖವಿದೆ... 


ವಿವಾಹ ಯೋಗದ
ನಾದ ನುಡಿಸಿ
ಯಜುರ್ವೇದ ಘೋಷದೊಳು
ಕರಿಮಣಿ ಕುಂಕುಮ ಸೌಭಾಗ್ಯವ ದೊರಕಿಸಲಿರುವ 
                                ನಿನಗಿದು ಅರ್ಪಣೆ........



ಕಾವ್ಯಾ :) :) 

Tuesday, November 29, 2011

ಹಿಂಗೆ ಇರ್ಲಿ ಹೇಳಿ....

     ನಮ್ಮ ಹವಿಗನ್ನಡ ಹೇಳದು ಭಾರಿ ಅದ್ಭುತ ಭಾಷೆ. ನಮ್ಮ ಎದ್ರಿಗಿದ್ದವ್ಕೆ (ಹವ್ಯಕೇತರರು) ಗೊತ್ತಾಪ್ಪಲ್ಲಾಗ ನಮ್ಮ ಸಂಭಾಷಣೆ ಅಂದ್ರೆ ಅಪ್ಪಟ ಹವಿಗನ್ನಡನ ಅದ್ಭುತವಾಗಿ ಫಾಸ್ಟ್ ಆಗಿ ಮಾತಾಡಿಬುಟ್ರೆ ಎದ್ರಿನವ್ಕೆ ಅಂತ-ಪಾರು ಹರಿತಿಲ್ಲೆ... ಅದ್ಕೆ ಆನು ಈ ಭಾಷೆ ಒಂದು best ಭಾಷೆ ಹೇಳಿ consider ಮಾಡಿಗಿದಿ. ನಿಂಗ ಏನಂಬೀssss....

ನಮ್ಮ ಹವಿಗನ್ನಡದಲ್ಲೇ ಸುಮಾರ್ ನಮ್ನಿ ಇದ್ದು. ಊರಿಗೆ ತಕ್ಕಾಂಗೆ ಭಾಷೆ ಸ್ವಲ್ಪ ವ್ಯತ್ಯಾಸ ಇರ್ತು. ಸಿದ್ದಾಪುರ, ಸಿರ್ಸಿ, ಸಾಗರ, ಗಂಟಲ ಕೆಳಗೆ (ಗಟ್ಟದ ಕೆಳಗನವ್ವು!) ಎಲ್ಲಾ ಬದಿಗೂ ಒಂದೇ ಭಾಷೆ ಅದರುವ ಮಾತಡ ಲಯ, ಶಬ್ದ ಪ್ರಯೋಗಗಳಲ್ಲಿ ಸ್ವಲ್ಪ ಬೇರೆ ನಮ್ನಿ ಇರ್ತು.  
ಉದಾ: ಸಿದ್ದಾಪುರ - ಹೋಯ್ದಿಲ್ಲೆ
          ಸಿರ್ಸಿ      - ಹೋಜಿಲ್ಲೆ
          ಸಾಗರ    - ಹೋಗಲ್ಲೆ 
 ಇನ್ನು ಉಪ್ಪು ನೀರ್ ಜನ (ಸೌತ್ ಕೆನರಾ ಮಂದಿ) ಅವರದ್ದು ಮತೊನಮ್ನಿ ಭಾಷೆ.. ಭಾಳ ಮಜಾ ಇರ್ತು ಕೇಳಲೆ... ಒಂದು ಚಂದ ಕೂಸು ಬಂದ್ರೆ ಅದರ ಹತ್ರ  'ಈಗ ಬಂದ್ರ, ಆಸರಿಗೆ ಬೇಕಾ' ಕೇಳಿ... 'ಅಪ್ಪು ಈಗ ಬಂದದ್ದು' ಅಂಬು... ಅದ್ನ ಕೇಳಿದ್ದೆ ನಮ್ ಬದಿ ಹುಡ್ರು ಚಂದಿದ್ದು ಇದೇ ಸಂದರ್ಭ ಹೇಳಿ ಅಪ್ಪಾಕ್ಯಬುಟ್ರೆ ಮುಗ್ತು ಕೆಲಸ....! ಅಪ್ಪು ಅಂದ್ರೆ ಹೌದು ಹೇಳಿ ಅವ್ರ ಭಾಷೇಲಿ.... 
ಅದೆಲ್ಲ ಇರ್ಲಿ ಒಂದ್ ಬದಿಗೆ... ನಮ್ ಬದಿಗೆ ಹವ್ಯಕರು ಮಾತಾಡ್ತಾ ಕುಂತ್ರೆ ಅದ್ನ ಸುಮ್ನೆ ಕೇಳ್ತಾ ಇಪ್ಪವ್ಕೆ ಒಳ್ಳೆ ಮಜಾ ಬತ್ತು. ಅಂಥ ಸಂಭಾಷಣೆಯ ಒಂದಷ್ಟು ತುಣುಕನ್ನ ಇಲ್ಲಿ ಕೊಡ್ತಿ...
ಮೊದಲಿಗೆ ನಮ್ ಬದಿಗೆ ಎಂತಾರು ಸಮಾರಾಧನೆ, ಶ್ರಾದ್ಧ ಎಂತದೆ ಆದ್ರುವಾ  ಖಾಯಂ ಇರ್ತಲಿ ಮಂಡಲ (ಹವ್ಯಕರ ಸಾಧನೆಯ (!) ಇಸ್ಪೀಟಿನ ಮಂಡಲ) ಅದ್ರ related discussion  ಬದಿಗೆ ನೋಡನ.... 
೧) ಅತ್ಗೆ: (ಇಸ್ಪೀಟ್ ಆಡ್ತಾ ಕುತಗಂಡ ಒಂದು ಭಾವನತ್ರೆ) ಅರೇsss ಭಾವಾsss ... 'ಎನ್ನತ್ರೆ' ಮನಕ್ಯತ್ತಿ ಹೇಳಿಕ್ಕೆ ಇನ್ನೂ ಆಡ್ತಾ ಇದ್ಯಲಾ...(!!) ನಿನ್ ನಮ್ಬ್ಕ್ಯ ಕುಂತ್ರೆ ಅಪ್ಪದಲ್ಲ ಹೋಪದಲ್ಲ ಮಾರಾಯ್ನೆ........ 

೨) ಭಾವ: (ರಾತ್ರೆ ೧೧ ಗಂಟೆ ಆದರು ಮಲ್ಗ ಸುದ್ದಿಲ್ದೆ ಕುಣಕೋತ ಗಲಾಟೆ ಮಾಡ್ತಾ ಇದ್ದ ಶಣ್ ಹುಡ್ರತ್ರ) ಅಯ್ಯ ಹುಡ್ರಾ... ಎಂತ ಗೌಜಿ ಮಾಡ್ತ್ರಾ ಬೆಳಗಾಗಿ ಯೋಳ್ತ್ರಿಲ್ಲೇ ಮನ್ಕ್ಯಳಿ ನೆಡಿರಿ ಸಾಕು ನಿಂಗಳ ಕುಣತ....
ಅಲ್ಲೇ ಇದ್ದ ಅತ್ಗೆ: ಅಯ್ಯಾ ಭಾವಾsss...'ಆನು ನೀನು' ಮನಕ್ಯನ್ಡ್ರೆಯಾ ಆ ಸುಟ್ ಹುಡ್ರೆಲ್ಲಿ ಇಷ್ಟ್ ಲಗು ಮನ್ಕ್ಯತ್ವಾ,...!!

೩) (ಬರೇ ಬುಕ್ ಹೊಡಿತಾವ ಮಕ ಜೋತು ಬಿಟ್ಗ ಕುಂತ ಭಾವನತ್ರೆ)  
ಅತ್ಗೆ: ಆಡಲೆ ಕುಂತಿದ್ದೆ ಒಂದರ ಹಿಂದೆ ಒಂದ ಆಟ ತೋರ್ಸ್ತಿ ಹೇಳದವ ಬರೀ ಫುಲ್ ಹೊಡಿತ ಬಿಜ್ಯಲ ಭಾವ...
ಭಾವ: ಥೋ ಮಾರಾಯ್ತಿ ಇವತ್ಯಾಕೋ ಭಾರಿ ಸೋಲ್ ಗೈ ಇದ್ದಕೆ ಸಾಯ್ಲಿ... ಆಟ ಬಿಟ್ಟು ಮನ್ಕ್ಯಂಬದೇ ಒಳ್ಳೆದೆನ ಕಾಣ್ತು.. ಎಳದಾಂಗು ಬರೀ ಬ್ಯಾಡದ್ದೆ  ಬತ್ತು... ಒಂದ್ ಜೋಕರ್ ಜಗ್ಗತಿಲ್ಲೇ... 

  ೪) ಒಂದು ಮದ್ವೆ ಮನೇಲಿ ಹೆಂಗಸರ ಪಂಗಡ ಒಂದು ಹಿಂದಿನ ದಿನ ಎಲ್ಲಾ ಕೆಲಸ ಮುಗ್ಸಿ ನಾಳಿಗೆ ಬೇಕಪ್ಪಂತದ್ದೆಲ್ಲ ಮಾಡಿಟ್ಟಿಕ್ಕೆ ಸ್ವಲ್ಪ ಹೊತ್ತಾರು ಹನಿ ಕಣ್ ಮುಚ್ಚನ ಹೇಳಿ ಎಲ್ಲಿ ವರ್ಗಲೆ ಜಾಗಿದ್ದು ನೋಡ್ತಾ ಹೊಂಟ ಹೇಳಾತು... ನೋಡ್ರೆ ಇಡೀ ಮನೆ ತುಂಬಾ ಎಲ್ಲಿ ನೋಡಿರು ಎಲ್ಲಾ ಮಲ್ಗಿಗಿದ... ಒಂದ್ ಗಳಿಗಾರು ನಿದ್ದೆ ತೆಕ್ಕಮ್ಮನ ನೋಡಿರೆ ಆಗ್ತಿಲ್ಯಲಿ ಹೇಳ ಬೇಜಾರಲ್ಲಿ...
ಅತ್ಗೆ ೧ : ಮಾಳಗೆ ಎಲ್ಲಾ ತುಂಬೋಜೆ.. ಎಲ್ಲೂ ಜಾಗಿಲ್ಲೇ...
ಅತ್ಗೆ ೨: ಥೋ ಜಗಲೀಲು ಜಾಗಿಲ್ಯೇ.. ಈ ಸುಟ್ ಗಂಡಸರೆಲ್ಲ ಇಲ್ಲೇ ಬಿದ್ಕಂಜ... 
ಅತ್ಗೆ ೩: ಅಂಗಳದಲ್ಲಾದ್ರು ಒಂದ್ ಗಳಿಗೆ ಅಡ್ದಾಪ್ಪನ ಅಂದ್ರೆ ಮಂಟಪ ಮಾಡವು, ಹುಡ್ರು ಎಲ್ಲಾ ಮನ್ಕ್ಯಂಡಿಗಿದ್ವಲೇ... ಎಲ್ಲೂ ಜಾಗಿಲ್ಲೇ ವಟ್ಟುವ ನಾಳೆ ನಮ್ ಮುಖ ನೋಡಂಗೆ ಇರ್ತಿಲ್ಲೆ ನಿದ್ದೆಗೆಟ್ಟು... 
ಅತ್ಗೆ ೧: ಯೇ ಅಡ್ಗೆ ಚಪ್ಪರದ ಬದಿಗೆ ಜಾಗಿದ್ದಿಕ್ಕು ನೋಡನ ಬನ್ನಿ... 
(ಅತ್ಗೇರ ದಂಡು ಅಲ್ಲಿ ಹೋಗಿ ನೋಡಿ...)
ಅತ್ಗೆ ೨: ಅಯ್ಯ ಇಲ್ಲೂ ಮನಕ್ಯಂಬ ಆಟ ಇಲ್ಯಲೇ.. ಎಲ್ಲಾ ಅಡ್ಗೆ ಭಟ್ಟಕ್ಕ ಮನ್ಕ್ಯಂಡಿಗಿದ... 
ಇನ್ನೂ ನಿದ್ದೆ ಬರದೆ ಹೊಳ್ಳತಾ ಇದ್ದ ಒಂದ್ ಕಳ್ಳ ಅಡ್ಗೆ ಭಟ್ಟ : ಮನಕ್ಯಂಬ ಆಟ ಇದ್ರೆ ಬನ್ನಿ ಬೇಗ್ನೆಯ.. ಬೆಳಗಾಗ್ತ ಬಂತು ಹೆಚ್ಚೊತ್ತಿಲ್ಲೇ...!!!!

೫) ಮದ್ವೆ ಮನೇಲಿ ಒಂದ್ ಅತ್ಗೆ "ತಡ್ಯೇ ಅಕ್ಕಯ್ಯ, ಸೀರೆ ಬಿಚಾಕಿಕ್ಕೆ ಬತ್ತಿ.. ಶೆಕೆ ಉರಿ...ದೊಡ್ಡ ಸೀರೆ ಸಾಯ್ಲಿ" 
ಅತ್ಗೆ ಒಳಗೇ ಹೋಗಿದ್ದೇ ಹೊರ ಬದಿಗೆ ಒಂದ್ ಮಾಣಿ ಕಾಯ್ತಾ ಕುಂತ ಈಗ ಸೀರೆ ಬಿಚಾಕಿಕ್ಕೆ ಬತ್ತು ಹೇಳಿ... ಪಾಪ ಅವನ್ಗೆಂತ ಗೊತಿದ್ದು ನಮ್ ಹೆಂಗಸರಿಗೆ ಬ್ಯಾರೆ ಸೀರೆ ಉಟ್ಗ ಬತ್ತಿ ಇದ್ನ ಬಿಚ್ಚಿಕ್ಕೆ ಹೇಳ ಅಭ್ಯಾಸ ಇಲ್ಲೇ ಹೇಳದು....!! 
೬) ಅಕ್ಕಯ್ಯ ೧: ಅಯ್ಯsss ಅಕ್ಕಯ್ಯ ನಿನ್ ಮನೆದು ಎಂತ ಹಿಂಗ್ ಅಗೊಜೆ.. ಪೂರ್ತಿ ಹಾಳಾಗೋಯ್ದಲೇ... ಯಂದು ಭಾರಿ ಚೊಲೋ ಆಯ್ದು... ಬುಡ ದಪ್ಪಗಾಗಿ ಎದಿದ್ದು... ಯಮ್ಮಲ್ಲಿ ಇವ್ಕಂತು ಭಾರಿ ಕುಶಿ ಅದ್ಕೆಯ.. (!!) ಇವ್ಕೆ ಹೂಗಿನ ಗಿಡ ಅಂದ್ರೆ ಭಾರಿ ಪ್ರೀತಿನಲೇ...  ನಿಮ್ಮಲ್ಲಿ ಸತ್ತೋಪ್ಲೆ ಆಗೋಯ್ದಲೇ.. ನಾ ಇಲ್ಲಿಂದನೇ  ತಗ ಹೋಗಿ ನೆಟ್ಟಿದ್ದು ಚೊಲೋ ಆಯ್ದು.. ನೀ ಬಾ ಮತೊಂದ್ ಬುಡ ತಂದ್ಕಳಕ್ಕು ಯಮ್ಮನಿಂದವ....

      ಹಿಂಗೆ ನಮ್ಮ ಹವ್ಯಕರ ಸಂಭಾಷಣೆ ಸಮ ಲಕ್ಷ ಕೊಟ್ಟು ಕೇಳ್ತಾ ಇದ್ರೆ ಹಾಸ್ಯಮಯ ಆಗಿರ್ತು... ನಮ್ ಅಜ್ಜ-ಅಜ್ಜಿದಿಕ್ಕ ಮಾತಾಡ ನಮ್ನಿ ಅಪ್ಪಟ ಹವಿಗನ್ನಡ ಈಗ ಮಾಯ ಆಗ್ತಾ ಇದ್ದು... ಎಲ್ಲರಿಗು ಆ ಹಳೆ ಶಬ್ದಗಳು ಹೊಸ ಕನ್ನಡದ ಸಂತಿಗೆ ಸೇರಿ ಹೋಗ್ತ ಇದ್ದು... ಒಟ್ನಲ್ಲಿ ಹವಿಗನ್ನಡ ಆಧುನಿಕೀಕರಣ ಆಗ್ತಾ ಇದ್ದು......



ಕಾವ್ಯಾ 

Tuesday, October 18, 2011

(ಮೇ ತಿಂಗಳಿನಲ್ಲಿ ಮಹಾಬಲಗಿರಿ ಭಟ್ಟರ ಕರಾವಳಿ ರೈಲು ಬ್ಲಾಗಿನಲ್ಲಿ (http://karavalirail.blogspot.com) ಈ ಚಿತ್ರಕ್ಕೆ ಹಲವಾರು ಕವನಗಳು ಬಂದವು... ಮೂಲ ಚಿತ್ರ ಕವಿ ಹೃದಯಿ ಪ್ರವೀಣ್ ಭಟ್ ಸಂಪ (http://nenapinasalu.blogspot.com )ಅವರದ್ದು. ಈ ಚಿತ್ರಕ್ಕೆ ನನ್ನದೊಂದು ಕವನ....)






ಒಂಟಿಯಾಗಿ ಕುಳಿತ ಆ ಮುದಿಯ ಜೀವ....
ಬಾಯ್ದೆರೆದು ನೋಡುತಿದೆ ಬಿಸಿಲ ಕಾವ...
ಪ್ರಾಯದಲ್ಲಿರಲಿಲ್ಲ ಇಷ್ಟು ಬಿಸಿಲು ಎಂಬ ಭಾವ....

ಅರಿಯದ ವಯಸಿಗೆ ಮದುವೆ-ಮಕ್ಕಳ ಜಂಜಾಟ...
ಎನಿತು ಸುಖವ ಕಂಡಿತು ಈ ಜೀವ ಪ್ರಾಯದಲಿ...
ಸಂಸಾರ ತೂಗಿಸುವ ಯೋಚನೆಯೊಂದೇ ತಲೆಯಲಿ...

ದುಡಿದು ಬಂದರೆ ಹಸಿವೆಂದು ಬಾಯ್ಬಿಡುವ ಮಕ್ಕಳು...
ಕಾಯಿಸಿದ ಒಂದಿಷ್ಟು ಅಂಬಲಿಯ, ಒಡಲ ಹಸಿವಿಲ್ಲದೆ ಬಡಿಸಿದ ಕೈಗಳು...
ಪತಿಯ ಊಟವ ಖುಷಿಯಲಿ ಕಂಡು, ನೀರು ಕುಡಿದು ನಿದ್ರಿಸಿದ್ದ ಕಂಗಳು....

ಕಷ್ಟ ಪಡುತ್ತ ಮಕ್ಕಳನು ದಡ ಹತ್ತಿಸುವ ಹಾದಿಯಲಿ...
ಪತಿಯ ಅಗಲಿಕೆಯ ನೋವನು ಮರೆಯುತ....
ಮಕ್ಕಳೊದಗಿಸುವ ಮುಂದಿನ ನೆಮ್ಮದಿಯ ಹಾದಿಯತ್ತ ದೃಷ್ಟಿ ಹರಿಸುತ....

ಕಂಡ ಕನಸುಗಳು ನನಸಾಗದಾದಾಗ...
ಮಕ್ಕಳು ಮುದಿ ಜೀವವ ತೊರೆದು ಹೋದಾಗ....
ನಮಗೆ ನಾವೇ... ಗೋಡೆಗೆ ಮಣ್ಣೇ ಎಂಬ ಭಾವದಿ....

ಬೊಚ್ಚು ಬಾಯಿ, ಗುಳಿ ಬಿದ್ದ ಕಂಗಳಿಂದ....
'ನಾ ಬೆಳೆಸಿದ ಹುಡುಗ ನೀನಾದರೂ
       ನನ್ನ ನೋಡಾಕೆ ಬಂದೆಯಾ ಮಗಾ...'
ಎಂಬ ಸಂತಸವ ಮುಖದಲಿ ಹೊತ್ತ ನಾಗಿ.....
ಇವಳು ನನ್ನ ಬೆಳವಣಿಗೆಯಲ್ಲಿ ಭಾಗಿ....


ಕಾವ್ಯಾ :)

Friday, September 30, 2011


 ಅವನು ತಂದೆ ತಾಯಿಯನ್ನು ಕಡೆಗಣಿಸಿ ತನ್ನ ಹೆಂಡತಿ, ಮಗನೊಡನೆ ಐಷಾರಾಮಿಯಾಗಿ ಬೇರೆಡೆ ವಾಸಿಸುತ್ತಿದ್ದ, ಅದೂ ಸತ್ತು ಹೋದ ತನ್ನ ಅಣ್ಣನ ಆಸ್ತಿಯಲ್ಲಿ... ಅಗಲಿದ ಮಗನ ಆಸ್ತಿ ತನ್ನದೆಂದು ತಿಳಿದೂ ಹೆತ್ತೊಡಲು ಉಳಿದೊಬ್ಬ ಮಗನ ಸಂತೋಷವನ್ನು ಕಿತ್ತುಕೊಳ್ಳದೆ ಕಷ್ಟವನ್ನು ತುಟಿ ಕಚ್ಚಿ ಸಹಿಸಿತ್ತು... 
       ಭಯಂಕರ ಅರ್ಬುದ ರೋಗದಿಂದ ಕೆಲವೇ ದಿನಗಳಲ್ಲಿ ತಾನು ಸಾಯಲಿರುವೆನೆಂದು ತಿಳಿದ ತಂದೆ ತನ್ನೆಲ್ಲ "ಸ್ವಯಾರ್ಜಿತ ಆಸ್ತಿ", ಬ್ಯಾಂಕ್ ಬ್ಯಾಲೆನ್ಸ್ ಗಳನ್ನು ಹೆಂಡತಿಯ ಹೆಸರಿಗೆ ಬರೆದು, ಅವಳ ಕೊನೆಕಾಲದಲ್ಲಿ ಅದನ್ನು ತನ್ನಿಷ್ಟದವರಿಗೆ ಕೊಡಬಹುದೆಂದು ಬರೆದು ಇಹ ಲೋಕ ತ್ಯಜಿಸಿದ್ದ.. ಜೀವವಿದ್ದಾಗ ನೋಡಿಕೊಳ್ಳದ ಮಗ ವಿಷಯ ತಿಳಿದು ಓಡೋಡಿ ಬಂದು 'ಕಣ್ಣೀರು' ಸುರಿಸಿ ತಂದೆಯ ಕಾರ್ಯ ಮುಗಿಸಿ ತಾಯಿಯನ್ನು ಇನ್ನಿಲ್ಲದ ಆಸ್ಥೆಯಿಂದ 'ಇನ್ನು ಒಬ್ಬಳೇ ಇರಬೇಡ.. ನಮಗೆ ನೀನಲ್ಲದೆ ಇನ್ಯಾರಿದ್ದಾರೆ ನಮ್ಮೊಡನೆಯೇ ಇರುವಂತೆ ಬಾ...' ಎಂದು ಕರೆದೊಯ್ದ.... 

***********


  ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರುತ್ತಿರಲಿಲ್ಲ. ಏನೇ ಮಾಡಿದರೂ ಒಟ್ಟಿಗೆ ಆಗಬೇಕು. ಅವರ ಮಧ್ಯೆ ಪ್ರೀತಿ ಎಂಬುದರ ಅರಿವೇ ಇಲ್ಲದ ಒಡನಾಟ. ಅದೊಂದು ದಿನ ಅವಳಿಗೆ ಹುಡುಗ ನೋಡಲು ಬರುವುದಾಗಿ ತಿಳಿಸಿದರು. ಅವಳು ಬೇಸರದಿಂದಲೇ ಅವನಿಗೆ ಹೇಳಿದ್ದಳು. ಅವನು, ತನ್ನನ್ನು ಯಾವುದೊ ಹುಡುಗಿ ನೋಡಲು ಒತ್ತಾಯ ಮಾಡುತ್ತಿದ್ದಾರೆ ಅಮ್ಮ ಎಂದು ಹೇಳಿದ್ದ. ಇಬ್ಬರೂ ಇಷ್ಟವಿರದ ಕಾರಣ ಯಾರು ನೋಡಲು ಬರುವವರು ಯಾರೆಂದೂ ಕೇಳಿರಲಿಲ್ಲ..
     'ಆ ದಿನ' ಅನ್ಯಮಸ್ಕರಾಗಿಯೇ ತಲೆಯೆತ್ತಿ ನೋಡಿದರೆ.... ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ... ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಣದ ದೇವರಿಗೆ ಮನದಲ್ಲೇ ವಂದಿಸುತ್ತಿದ್ದಾರೆ....

**********

ಕಾವ್ಯಾ 

Monday, September 12, 2011


(ಭಾಗ ೨)

ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರಲೇಬೇಕಲ್ಲ...!

       ಮಾನಸಿಕ ತುಮುಲಗಳಿಂದ ಕೂಡಿದ ಮನಸ್ಸು ಎಷ್ಟು ದಿನ ತಾನೇ ಸ್ಫೋಟಗೊಳ್ಳದೆ ಇರಲು ಸಾಧ್ಯ.... ಆ ದಿನ ಶೀಘ್ರದಲ್ಲೇ ಬಂತು. ಮನಸ್ಸಿನ ಭಾವನೆಗಳು ಕಟ್ಟೊಡೆದ ನದಿಯ ಪ್ರವಾಹದಂತೆ ಹರಿಯಲಾರಂಭಿಸಿತು. ಭಾವನೆಗಳು ಮಾತಾದವು. ಮನಸ್ಸಿನಲ್ಲಿ ಅರಿವಿಲ್ಲದೇ ಮೊಳೆತ ಪ್ರೀತಿ ಬೆಳೆದು ಗಟ್ಟಿಯಾಗಿ ಬೇರೂರಿಯೇ ಬಿಟ್ಟಿತ್ತು. ಅಂತರಂಗದಳಲು ಬಹಿರಂಗವಾಗತೊಡಗಿತು. 
       ಇಬ್ಬರೂ ಕುಳಿತು ಚರ್ಚಿಸಿದರು. ಅದೆಲ್ಲಿ ಪ್ರೀತಿ ಮೂಡಿತು... ಅದೇಕೆ ನಮ್ಮ ಮನ ತಿರುಗಿತು.. ಅದು ಹೇಗೆ ಸ್ನೇಹ ಪ್ರೀತಿಯಾಯಿತು... ಇದು ಕೇವಲ ಸ್ನೇಹದ ಪ್ರೀತಿಯೋ ಅಥವಾ ಪ್ರೇಮದ ಪ್ರೀತಿಯೋ...! ಮನ ಗೊಂದಲದ ಗೂಡಾಯಿತು. ಮುಂದಿನ ದಾರಿ ಕಾಣದಾಯಿತು. ಹುಡುಗ-ಹುಡುಗಿಯ ಮಧ್ಯ ಸ್ನೇಹ, ಮಮತೆ, ಅವಲಂಬನೆ, ಪರಸ್ಪರ ಕಾಳಜಿ ಗಾಢವಾದಂತೆ ಅಲ್ಲಿ ಸ್ನೇಹವನ್ನು ಮಾತ್ರವೇ ಉಳಿಸಿಕೊಳ್ಳಲು ಅಸಾಧ್ಯ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಯಿತು. ಗಾಢ ಸ್ನೇಹದಲ್ಲಿ ಪ್ರೀತಿಯ ಅಂಕುರ ಸಹಜವೆಂಬುದು ಇಬ್ಬರಿಗೂ ಮನವರಿಕೆಯಾಯಿತು.
       ಮುಂದೇನು ಎಂದು ಬಹುವಾಗಿ ಯೋಚಿಸಿದರು.  ಮನೆಯವರನ್ನು ಒಪ್ಪಿಸಲು ಸಾಧ್ಯವಿಲ್ಲ ತಾವು ಬೇರೆಯಾಗುವುದೇ ಸರಿ ಎಂದುಕೊಂಡರು. ಸುಮ್ಮನೆ ಮಾನಸಿಕ ತುಮುಲಗಳಿಗೆ ಒತ್ತು ನೀಡಿದರೆ ಅವು ಬಹು ಬೇಗ ಸ್ಫೋಟಗೊಳ್ಳುತ್ತವೆ. ಗೊಂದಲದ ಗೂಡಾದ  ಮನಸ್ಸಿಗೆ ಮೊದಲಿನ ಮಾತು, ನಗು, ಹಾಸ್ಯ ಅಸಾಧ್ಯವೆನಿಸತೊಡಗಿತು. ಇಬ್ಬರಲ್ಲೂ ಮೌನವೇ ಮಾತಾಯಿತು. ಸ್ನೇಹದಲ್ಲಿದ್ದ ಖುಷಿ ಪ್ರೀತಿಯಲ್ಲಿ ಸಿಗುತ್ತಿಲ್ಲ ಎಂದುಕೊಂಡರು. ಕೊನೆಗೆ ಇಬ್ಬರೂ ಮೊದಲಿನಂತಾಗೋಣ ಎಂದು ಸಂಕಲ್ಪಿಸಿದರು.... ಆದರೆ ನಾವು ಅಂದುಕೊಂಡಂತೆಲ್ಲ ಮನಸ್ಸು ಕೇಳುತ್ತದೆಯೇ...?! ಬರ ಬರುತ್ತಾ ಇಬ್ಬರಿಗೂ ತಮ್ಮ ನಗು, ಮಾತು ಕೃತಕವೆನಿಸತೊಡಗಿತು. ಪ್ರೀತಿಯನ್ನು ಬಿಡುವುದು ಅಸಾಧ್ಯವೆನಿಸತೊಡಗಿತು. ದೂರಾಗುತ್ತಿದ್ದೇವೆ ಎನ್ನುತ್ತಲೇ ಮನಸ್ಸು ಮತ್ತಷ್ಟು ಹತ್ತಿರವಾಗುತ್ತಿತ್ತು.... 


       ಅನುರಾಗವೆಂಬುದು ಎಲ್ಲಿ, ಯಾವಾಗ, ಯಾರಲ್ಲಿ, ಹೇಗೆ ಮೂಡುತ್ತದೆ ಎಂದು ತಿಳಿಯುವುದು ಅಸಾಧ್ಯ. ಎಷ್ಟೋ ಪ್ರೇಮ ಅದೆಷ್ಟೋ ರೀತಿಯಲ್ಲಿ ಕೊನೆಯಾಗುತ್ತದೆ. ನಾವೇಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು, ಹಣೆಬರಹವನ್ನು ಬಲ್ಲವರಾರು... ಎಂದು ನಿರ್ಧರಿಸಿ, ಊರಿಗೆ ಹೋದಾಗ ಅವನು ಮನೆಯಲ್ಲಿ ಹೇಳಿಯೂ ಬಿಟ್ಟನು... ಇತ್ತ ಏನಾಗುತ್ತದೋ ಎಂದು ಉಸಿರು ಬಿಗಿ ಹಿಡಿದು ಕಾದಿದ್ದ ಅವಳಿಗೆ ಸಿಹಿ ಸುದ್ದಿ ಕಾದಿತ್ತು. ಅವಳು ಖುಷಿಯಿಂದ ಕುಣಿದೇ ಬಿಟ್ಟಿದ್ದಳು... ದಿನಗಳೆದಂತೆ ಅವಳೂ ಕೂಡ ಮನೆಯಲ್ಲಿ ಒಪ್ಪಿಸುವಲ್ಲಿ ಯಶಸ್ವಿಯಾದಳು.. 
       ಅಂತೂ ಸ್ನೇಹ ಪ್ರೀತಿಯಾಗಿ ಮುಂದುವರೆದು ನಮ್ಮ ಕಥಾನಾಯಕನಿಗೆ ಈಗ ಅವಳಿ - ಜವಳಿ ಮಕ್ಕಳು... 



ಕಾವ್ಯಾ :) 
       

Tuesday, May 24, 2011

ಅನ್ವೇಷಣೆ.....

(ಭಾಗ ೧)
      
       ಅವರಿಬ್ಬರ ನಡುವೆ ಅಗಾಧ ಸ್ನೇಹ... ಅವಳು ತುಂಬಾ ಮಾತಿನ ಹುಡುಗಿ. ಅವನದು ಮಾತು ಕಮ್ಮಿ. ಅವಳು ಮಾತ್ರ ಸದಾ ಮಾತು...ಮಾತು...ಮಾತು... ಅವನೂ ಕೂಡ ಎಂದೂ ಬೇಸರಿಸದೇ ಅವಳ ಮಾತನ್ನು ಕೇಳುತ್ತಿದ್ದ. ಅವಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದ. ಅವಳಿಗೋ ಅವನ ಮಾತೇ ಕೊನೆಯದು. ಅವನು ತನ್ನ ಅಳಲನ್ನು ಅವಳಷ್ಟು ತೋಡಿಕೊಳ್ಳದಿದ್ದರೂ, ಅವಳು ಅವನ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಿದ್ದಳು. ಮಾತನಾಡಿಸಿ ಅದೂ ಇದೂ ಪ್ರಶ್ನೆ ಕೇಳಿ ಅವನ ಮನಸಿನ ಮಾತನ್ನು ಹೊರಗೆಡವುತ್ತಿದ್ದಳು. ಅವನಿಗೂ ಅವಳ ಮಾತು, ನಗು ಎಂದರೆ ಅದೇನೋ ಸಂತೋಷ.... ಒಂದೇ ಒಂದು ದಿನ ಅವಳು ಸ್ವಲ್ಪ ಮಾತು ಕಮ್ಮಿ ಮಾಡಿದ್ದಾಳೆ ಎನಿಸಿದರೂ ಸಾಕು ಅವನಿಗೇನೋ ಕಸಿವಿಸಿ. 'ಏನಾಯ್ತೆ... ಮಾತಾಡೇ... ಸ್ವಲ್ಪ ನಗೇ... ನಿನ್ನ ನೋಡೋಕಾಗ್ತಿಲ್ಲ...' ಎನ್ನುತ್ತಿದ್ದ.


       ಬರ ಬರುತ್ತಾ ಅವನೂ ಕೂಡ ತುಂಬಾ ಮಾತನಾಡಲು ಕಲಿತ. ಅವಳೊಡನೆ ಮಾತ್ರವೇ ಎನ್ನುವಂತೆ ಮಾತನಾಡತೊಡಗಿದ. ತನ್ನ ಮನದ ನೋವನ್ನು ತೋಡಿಕೊಳ್ಳಲು ಕಲಿಯತೊಡಗಿದ. ಇಬ್ಬರೂ ಮಾತಿಗೆ ಕುಳಿತರೆ ಎಲ್ಲಾ ಆಗು-ಹೋಗುಗಳ ಬಗ್ಗೆ, ಅವಳ ಆಫೀಸಿನ ಬಗ್ಗೆ, ಅವನ ಆಫೀಸಿನ ಬಗ್ಗೆ, ರಾಜಕೀಯ, ಮನೆ ಸಮಸ್ಯೆಗಳು.... ಹೀಗೇ ಎಲ್ಲವೂ ಅವರ ಬಾಯಿಗೆ ಸಿಲುಕುತ್ತಿದ್ದವು. ಒಮ್ಮೊಮ್ಮೆ ರಾಜಕೀಯದ ವಿಷಯಕ್ಕೆ ವಾದ ಮಾಡಿ, ಜಗಳವಾಡಿ ಅತ್ತ-ಇತ್ತ ಮುಖ ಮಾಡಿ ಕುಳಿತುಬಿಡುತ್ತಿದ್ದರು. ಹೆಚ್ಚಿನ ವಿಷಯಗಳಲ್ಲಿ ಅವಳೇ 'ಹೋಗ್ಲಿ ಬಿಡೋ.. ನೀನೆ ಸರಿ.. ಖುಶೀನಾ... ಸುಮ್ಮನೆ ವಾದ ಬೇಡಾ..' ಎಂದು ರಾಜಿಯಾಗುತ್ತಿದ್ದಳು. ಅದೆಷ್ಟೋ ಸಾರಿ ನೀ ನನಗೆ ಆ ವಿಷಯ ಹೇಳಿಲ್ಲ, ಈ ವಿಷ್ಯ ಹೇಳಿಲ್ಲ ಎಂದು ಇದೊಂದು ವಿಷಯಾನ ಹೇಳೋಕೆ ಅನ್ನುವಷ್ಟು ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ಮೂತಿ ಊದಿಸಿಕೊಂಡು ಕುಳಿತು ಬಿಡುತ್ತಿದ್ದರು. ಅದೆಷ್ಟು ಬೇಗ ಬೇಗ ಜಗಳವದಿದ್ದರೋ ಅಷ್ಟೇ ಬೇಗ ರಾಜಿಯಾಗಿ ನಗುತ್ತಿದ್ದರು. ಒಬ್ಬರಿಗೊಬ್ಬರು ಒಂದು ದಿನ ಮಾತಾಡಲು ಸಿಗದಿದ್ದರೂ ದಿನ ಕಳೆಯುವುದು ಕಷ್ಟ ಎನ್ನುವಷ್ಟು ಸ್ನೇಹ.... ಬರಿದೇ ಸ್ನೇಹ... ನಿಷ್ಕಲ್ಮಷ ಸ್ನೇಹ....ಬಿಟ್ಟಿರಲಾರದ ಸ್ನೇಹ... 

      ಅವಳೇ ಎಷ್ಟೋ ಬಾರಿ ಕೇಳಿದ್ದಳು ಅವನಲ್ಲಿ... 'ಎಲ್ರೂ ಹೇಳ್ತಾರೆ, ಹುಡ್ಗಾ ಹುಡ್ಗಿ ಕೊನೆ ತನಕ ಬರೀ friends ಆಗಿರೋಕೆ ಆಗಲ್ವಂತೆ ಹೌದೇನೋ...? ನಾವು ಇದ್ದು ತೋರ್ಸೋಣ ಅಲ್ವ...'
ಅವನು 'ಹ್ಞೂ ಎಲ್ರೋ ಹೇಳ್ತಾರೆ.. ಆದ್ರೆ ಅದೆಲ್ಲ ಅವರವರ ಮನಸಿಗೆ ಸಂಬಂಧ ಪಟ್ಟಿದ್ದು ಕಣೆ... ಮನಸಲ್ಲಿ ಬೇರೆ ಆಲೋಚನೆ ಬರದೆ ಇರೋ ಥರ ಇದ್ರೆ, ಕೇವಲ friends ಅನ್ಕೊಂಡ್ರೆ, ಅದನ್ನೇ ತಲೇಲಿ ಇಟ್ಕೊಂಡ್ರೆ ಖಂಡಿತ ಇರ್ಬೋದು....'

ಅವಳು ಪದೇ ಪದೇ ಅವನ ಬಳಿ ಅದನ್ನ ಕೊಡ್ಸು, ಇದನ್ನ ಕೊಡ್ಸು, ನಂಗೆ ಅದನ್ನ ತಿನ್ನಬೇಕು ಕೊಡ್ಸು ಎಂದು ಹಠ ಮಾಡುತ್ತಿದ್ದಳು... ಅವನೂ ಎಂದೂ ಬೇಸರಿಸದೇ ಕುಶಿಯಿಂದ ಕೊಡಿಸುತ್ತಿದ್ದ. ಅವಳು ಪ್ರೀತಿಯಿಂದ ತಿನ್ನುವುದನ್ನು ನೋಡಿ ಖುಷಿ ಪಡುತ್ತಿದ್ದ. ಪ್ರತಿ ದಿನ ಅದೆಷ್ಟು ಹೊತ್ತು ಏನು ಮಾತಾಡ್ತಾರೋ ಎಂದು ಬೇರೆಯವರು ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಮಾತಾಡುತ್ತಿದ್ದರು. ಎಷ್ಟೋ ಬಾರಿ ಅವರಿಗೇ ಅನ್ನಿಸಿದ್ದುಂಟು, 'ಅದೇನೋ ಮಾತಡ್ತೀವೋ ಏನೋ.. ಈ ಹಾಳಾದ ಮಾತು ಮುಗಿಯೋದೇ ಇಲ್ಲಾ...!!' ಎಂದು. ಅಷ್ಟಾದರೂ ಒಮ್ಮೆಯೂ ಕೂಡ ಅವರ ಮಧ್ಯೆ ಸ್ನೇಹಕ್ಕೆ ಹೊರತಾದ, ಸ್ನೇಹವನ್ನು ದಾಟಿದ ಯಾವುದೇ ವಿಷಯ ಸುಳಿಯಲೇ ಇಲ್ಲಾ... ಏನೇ ಆಗಲಿ ಹೋಗಲಿ ಅವಳು ಮೊದಲು ಹೇಳುತ್ತಿದ್ದುದು ಅವನಿಗೆ....

      ಬರ ಬರುತ್ತಾ ಅದೆಷ್ಟು ಹಚ್ಚಿಕೊಂಡುಬಿಟ್ಟರೆಂದರೆ ಅವಳು ಬೇರೊಬ್ಬ ಗೆಳತಿ-ಗೆಳೆಯರೊಡನೆ ಜಾಸ್ತಿ ಮಾತಾಡಿದರೆ ಅವನಿಗೆ ಸಿಟ್ಟು, ಅವನು ಯಾರೋ ಹುಡುಗಿಯ ಬಳಿ ಹರಟಿದನೆಂದರೆ ಇವಳಿಗೆ ಸಿಟ್ಟು ಬರುವಷ್ಟರ ಮಟ್ಟಿಗೆ...! 

      ಅವಳ ಮನೆಯಲ್ಲಿ ವರಾನ್ವೇಷಣೆ ಪ್ರಾರಂಭವಾಯಿತು. ಪ್ರತೀ ಹಂತದಲ್ಲೂ ಅವಳು ಅವನಿಗೆ ತಿಳಿಸುತ್ತಿದ್ದಳು. ಅವನ ಅಭಿಪ್ರಾಯಕ್ಕೂ ಮನ್ನಣೆ ಕೊಡುತ್ತಿದ್ದಳು. ಮದುವೆಯಾದ ಮೇಲೆ ಈ ಸ್ನೇಹದ ಗಾಢತೆಯನ್ನು ಉಳಿಸಿಕೊಳ್ಳಲಾಗದಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದರು ಆಗಾಗ. 

      ಇದ್ದಕ್ಕಿದ್ದಂತೆ ಯಾರಿಗೆ ಏನಾಯಿತೋ.. ಪದೇ ಪದೇ ಜಗಳ, ಮನಸ್ತಾಪಗಳು.... possessiveness ಇಬ್ಬರಿಂದಲೂ ಹೊರ ಹೊಮ್ಮತೊಡಗಿತು.... ಮನ ಗೊಂದಲದ ಗೂಡಾಯಿತು... 'ಏಕೆ ಹೀಗಾಗ್ತಾ ಇದೀವಿ' ಅಂತ ಒಬ್ಬರಿಗೊಬ್ಬರು ಹಲವಾರು ಬಾರಿ ಪ್ರಶ್ನಿಸಿಕೊಂದರೂ 'no use'..... ಒಬ್ಬರಿಗೊಬ್ಬರು ಉತ್ತರಿಸಲು ಅಸಮರ್ಥರಾದರು, ಅಷ್ಟೇ ಏಕೆ ಅವರ ಮನಸ್ಥಿತಿ ಸ್ವತಃ  ಅವರಿಗೇ ತಿಳಿಯದಾಯಿತು... 

      ಏನಿದರ ಅರ್ಥ....? ಯಾಕೇ ಹೀಗೇ...? ಸಂಬಂಧಗಳೇ ಹೀಗಾ...? ಸಂಬಂಧಗಳೇಕೆ ಇಷ್ಟು ಕ್ಲಿಷ್ಟ....? ಇದನ್ನೆಲ್ಲಾ ನಿಭಾಯಿಸುವುದು ಹೇಗೆ...? ಏನಿದಕ್ಕೆ ಪರಿಹಾರ....? ಹೇಗೆ ಮೊದಲಿನಂತಾಗುವುದು....? ಮೊದಲಿಂತಾಗುವುದೆಂದರೆ ಈಗೇನಾಗಿದೆ...???


ಕಾವ್ಯಾ :)